ಬಹುಶಃ ಈ ಪ್ರಶ್ನೆಯನ್ನು ಯಾವುದೇ ಧರ್ಮದ ಅನುಯಾಯಿಗಳಿಗೆ ಕೇಳಿದರೆ ತಕ್ಷಣ ಅವರು ಅವರವರ ಧರ್ಮ ಗ್ರಂಥಗಳ ಕಡೆಗೆ ಮತ್ತು ಆ ಧರ್ಮಗಳ ಪ್ರತಿಪಾದಕರ ಕಡೆಗೆ ತೋರಿಸಿ, ನಾವು ನಂಬುವುದು ನಮ್ಮ ಧರ್ಮ ಸ್ಥಾಪಕನನ್ನು ಮತ್ತು ನಾವು ಪಾಲಿಸುವುದು ನಮ್ಮ ಧರ್ಮ ಸ್ಥಾಪಕರು ಬೋಧಿಸಿರುವುದನ್ನು, ಹಾಗೆಯೇ ನಾವು ದಿನನಿತ್ಯ ಸಾಧ್ಯವಾದಷ್ಟು ಆ ಮೌಲ್ಯಗಳನ್ನು ಪಾಲಿಸುತ್ತೇವೆ ಎಂದು ಬಹಳ ಸರಳವಾಗಿ ಉತ್ತರಿಸುತ್ತಾರೆ. ಹೌದು ನಿಜ ಯಾವುದೇ ಒಬ್ಬ ನಿಷ್ಠಾವಂತ ಅನುಯಾಯಿ ಅವನು ನಂಬಿಕೆ ಇಟ್ಟಿರುವ ಧರ್ಮವನ್ನು ಅದರ ಸ್ಥಾಪಕರನ್ನು ನಂಬುವುದು ಮತ್ತು ಪಾಲಿಸುವುದು ರೂಢಿಯಾಗಿದೆ. ಆದರೆ ವಾಸ್ತವದಲ್ಲಿ ಇದು ಎಷ್ಟರಮಟ್ಟಿಗೆ ಸಫಲವಾಗಿದೆ? ಎಂಬ ಪ್ರಶ್ನೆಯೊಂದಿಗೆ ಶೋಧಿಸಿದರೆ ನಮಗೆ ಆಘಾತವಾಗುತ್ತದೆ. ಏಕೆಂದರೆ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಧರ್ಮಗಳು ಇನ್ನೂ ಪರಿಪೂರ್ಣವಾಗಿ ಆ ಧರ್ಮಗಳ ಮೌಲ್ಯಗಳನ್ನು ಆಚರಣೆಗೆ ತರಲು ಸಾಧ್ಯವಾಗಿಲ್ಲ. ಮನುಷ್ಯರು ಇನ್ನೂ ಅನಾಗರಿಕರಂತೆ, ಧರ್ಮಾಂಧರಂತೆ ವರ್ತಿಸುತ್ತಿರುವುದನ್ನು ನೋಡಿದರೆ ನಾವು ಏನನ್ನ ನಂಬಿ ಪಾಲಿಸುತ್ತಿದ್ದೇವೆ ಎಂಬ ಜಿಜ್ಞಾಸೆ ಖಂಡಿತ ಮೂಡುತ್ತದೆ.
ಇನ್ನೂ ಧರ್ಮ ಧರ್ಮಗಳ ನಡುವೆ ಒಂದು ಸಹೋದರತೆಯ ಸಹಬಾಳ್ವೆಯ ಸಮನ್ವಯತೆ ಸಾಧಿಸಲು ಸಾಧ್ಯವಾಗಿಲ್ಲ. ಎಲ್ಲರೂ ನಮ್ಮ ಧರ್ಮವೇ ಶ್ರೇಷ್ಠ ನಾವೇ ಶ್ರೇಷ್ಠ ಪಾಲಕರು ಎಂಬ ಮೊಂಡು ವಾದಗಳಲ್ಲಿ ತೊಡಗಿದ್ದಾರೆ. ಧರ್ಮಕ್ಕೋಸ್ಕರ ಯುದ್ಧಗಳನ್ನು ಮಾಡಲು ಸಿದ್ಧರಿದ್ದಾರೆ. ಸಾಯಲು ಸಿದ್ಧರಿದ್ದಾರೆ, ಸಾಯಿಸಲು ಸಿದ್ಧರಿದ್ದಾರೆ. ಮಾನವನಾಗಿ ಮಾಡಬಾರದ ಎಲ್ಲಾ ರೀತಿಯ ಅನಾಚಾರಗಳನ್ನು ಮಾಡುತ್ತಿದ್ದಾರೆ. ಹಾಗಾದರೆ ಧರ್ಮಗಳು ನಮಗೆ ಏನನ್ನ ಬೋಧಿಸಿವೆ? ನಾವು ಏನನ್ನು ಪಾಲಿಸುತ್ತಿದ್ದೇವೆ? ಈ ಗಂಭೀರ ಪ್ರಶ್ನೆಗಳಿಗೆ ಉತ್ತರ ಖಂಡಿತ ಹುಡುಕಬೇಕಾಗಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನ ಖಂಡಿತ ಕ್ಷಮಿಸುವುದಿಲ್ಲ.
ಧರ್ಮಗಳು ಪ್ರತಿನಿತ್ಯ ಇಲ್ಲವೇ ವಾರದ ಪ್ರಮುಖ ದಿನಗಳಲ್ಲಿ ಅವರ ಅನುಯಾಯಿಗಳಿಗೆ ಧರ್ಮ ಬೋಧನೆಗಳನ್ನು ಮಾಡುತ್ತವೆ. ಜನರೂ ಕೂಡ ಬಹಳ ಶ್ರದ್ಧೆಯಿಂದ, ನಿಷ್ಠೆಯಿಂದ ಮತ್ತು ಭಕ್ತಿಯಿಂದ ಆ ಧರ್ಮ ಸಭೆಗಳಲ್ಲಿ ಭಾಗವಹಿಸುತ್ತಾರೆ. ಆದರೆ ಅಲ್ಲಿಂದ ಹೊರಗೆ ಬಂದ ನಂತರ ಮನುಷ್ಯ ಮನುಷ್ಯರ ನಡುವಿನ ಸಂಬಂಧದಲ್ಲಿ ಮಾತುಗಳಲ್ಲಿ, ನಡವಳಿಕೆಗಳಲ್ಲಿ, ಯೋಚನೆಯಲ್ಲಿ ಆ ಬೋಧನೆಗಳ ಪರಿಣಾಮಗಳು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಾಣುವುದಿಲ್ಲ. ಈ ಬೋಧನೆಗಳನ್ನು ಆಚರಣೆಗೆ ತರುವಲ್ಲಿ ಸಾಮಾನ್ಯ ಜನರು ಸೋತಿದ್ದಾರೆ, ಇಲ್ಲವೇ ಈ ತತ್ವಗಳನ್ನು ಬೋಧಿಸುವ ಧರ್ಮಗಳು ಸೋತಿದ್ದಾರೆ. ಇವೆರಡರಲ್ಲಿ ಯಾವುದು ಸರಿ ಎಂದು ತೀರ್ಮಾನ ಮಾಡಲು ಕೆಲವು ಮಾನದಂಡಗಳನ್ನು ನಾವು ಇಟ್ಟುಕೊಂಡು ಚರ್ಚಿಸಬೇಕಿದೆ.
ಮೂರು ಮಾನದಂಡಗಳು
ಆಯಾಯ ಧರ್ಮಗಳನ್ನು ಸ್ಥಾಪಿಸಿ ಬೋಧಿಸಿರುವಂತಹ ಧರ್ಮ ಪ್ರವರ್ತಕರ ಸಮಯದಲ್ಲಿಯೂ ಕೂಡ ನೂರಕ್ಕೆ ನೂರರಷ್ಟು ಎಲ್ಲಾ ಜನರನ್ನು ಪರಿವರ್ತಿಸಲು ಯಾವ ಪ್ರವರ್ತಕರಿಗೂ ಸಾಧ್ಯವಾಗಿಲ್ಲ. ಅವರ ನಂತರ ಹುಟ್ಟಿಕೊಂಡು ಬಂದಂತಹ ಧರ್ಮಗುರುಗಳು ಕೂಡ ಯಾವ ಕಾಲಘಟ್ಟದಲ್ಲಿಯೂ, ಯಾವ ಭೂಭಾಗದಲ್ಲಿಯೂ ನೂರಕ್ಕೆ ನೂರರಷ್ಟು ಆಯಾಯ ಧರ್ಮಗಳ ತತ್ವಗಳನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸಲು ಸಾಧ್ಯವಾಗಿಲ್ಲ. ಇದು ಮುಂದೆಯೂ ಸಾಧ್ಯವಾಗುವುದಿಲ್ಲ ಎಂಬ ಕಟು ಸತ್ಯವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕೆಂಬುದು ಮೊದಲ ಮಾನದಂಡವಾಗಿದೆ.
ಯಾವುದೇ ಜನ ಸಮುದಾಯ ಧರ್ಮ ಗ್ರಂಥಗಳಲ್ಲಿರುವಂತೆ ಯಥಾವತ್ತಾಗಿ ಸಂಪೂರ್ಣವಾಗಿ ಅದರಂತೆ ನಡೆಯಲು, ಜೀವನ ಸಾಗಿಸಲು ಸಾಧ್ಯವಿಲ್ಲ. ಅವರವರ ಬುದ್ಧಿಶಕ್ತಿಗನುಗುಣವಾಗಿ ಅವರವರ ಅನುಕೂಲಕ್ಕನುಗುಣವಾಗಿ ಆಯಾಯ ಧರ್ಮದ ತಿರುಳನ್ನು ಪಾಲಿಸಲು ಪ್ರಯತ್ನಿಸುತ್ತಾರೆ ಎಂಬುದು ಎರಡನೆಯ ಮಾನದಂಡ ವಾಗಿದೆ.
ಬಹುತೇಕ ಧರ್ಮಗಳು ಉದಯವಾದಾಗ ಇದ್ದ ಪರಿಸ್ಥಿತಿಗಳಿಗೂ, ಈಗಿರುವ ಪರಿಸ್ಥಿತಿಗಳಿಗೂ ಅಜಗಜಾಂತರ ವ್ಯತ್ಯಾಸವಿದೆ ಮತ್ತು ಅವು ಭಿನ್ನ-ಭಿನ್ನವಾಗಿವೆ. ಮೂಲ ಬೋಧನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಕಾಲಕಾಲಕ್ಕೆ ಮನುಷ್ಯರ ಅನುಕೂಲಕ್ಕಾಗಿ, ಸಮಾಜ ಸುಧಾರಣೆಗಾಗಿ ಬದಲಾವಣೆಗಳನ್ನು ತಂದುಕೊಂಡು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಎಲ್ಲಾ ಧರ್ಮಗಳು ಚಿಂತಿಸಿ ಒಪ್ಪಿಕೊಳ್ಳಬೇಕಾಗಿರುವುದು ಮೂರನೇ ಮಾನದಂಡವಾಗಿದೆ.
ಎಲ್ಲರೂ ಅನುಸರಿಸಲು ಯೋಗ್ಯವಾದ ಮಾನದಂಡಗಳು ಯಾವುವು?
ಪ್ರಪಂಚದಲ್ಲಿ ಒಳ್ಳೆಯದು ನೆಲೆಗೊಳ್ಳಬೇಕಾದರೆ, ಮಾನವೀಯ ಮೌಲ್ಯಗಳು ಉಳಿಯಬೇಕಾದರೆ ಸರಳವಾದ ಎಲ್ಲರೂ ಅನುಸರಿಸಲು ಯೋಗ್ಯವಾದ ಮಾನದಂಡಗಳು ಯಾವುವು? ಎಲ್ಲಾ ಧರ್ಮದ ಅನುಯಾಯಿಗಳು ಪಾಲಿಸಬಹುದಾದ ನೈತಿಕ ಮೌಲ್ಯಗಳು ಯಾವುವು? ಎಂಬ ಜಿಜ್ಞಾಸೆ ಎಲ್ಲರಲ್ಲೂ ಮೂಡಬೇಕಿದೆ. ಮೂಲ ಬೋಧನೆಗಳ ಸಾರದ ಭಾಗವೇ ಆಗಿರುವಂತಹ ಎಲ್ಲೂ ಮೂಲ ಬೋಧನೆಗಳಿಗೆ ಧಕ್ಕೆಯಾಗದಂತಹ ಧರ್ಮ ತತ್ವಗಳು ಯಾವುವು? ಎಂಬುದರ ಕಡೆಗೆ ನೋಡಿದರೆ ಕೆಲವೊಂದು ಮುಖ್ಯವಾದ, ವೈಜ್ಞಾನಿಕವಾದ ಅಂಧಶ್ರದ್ಧೆ ಇಲ್ಲದ ಕೆಲವು ನಿಯಮಗಳನ್ನು ಎಲ್ಲರೂ ಪಾಲಿಸಬಹುದು ಎಂಬುದನ್ನು ಪಟ್ಟಿ ಮಾಡಬಹುದು ಅವುಗಳೆಂದರೆ:
ಜ್ಞಾನ _ ನ್ಯಾಯ _ ಒಳ್ಳೆಯವರ ಸಂಘ:
ಮಾನವ ಸದಾ ಜ್ಞಾನಿ ಆಗಿರಬೇಕು ನ್ಯಾಯವಂತನಾಗಿರಬೇಕು ಮತ್ತು ಒಳ್ಳೆಯವರ ಸಂಘವನ್ನು ಆಯ್ಕೆ ಮಾಡಿಕೊಳ್ಳಬೇಕು. ಇದು ನಿಜವಾದ ಸರಳವಾದ ಜೀವನ ಮಾರ್ಗವಾಗಿದೆ. ಒಬ್ಬ ಮನುಷ್ಯನಿಗೆ ಯಾವುದರಿಂದ ದೂರವಿರಬೇಕು ಎಂಬ ಬುದ್ಧಿವಾದವನ್ನು ಹೇಳುವಂತಹ ಮತ್ತು ನಿನ್ನೊಳಗಿನ ಅಗಣಿತವಾದ ಜ್ಞಾನ ಸಂಪತ್ತನ್ನು ಎತ್ತಿ ತೋರಿಸುವ ಜ್ಞಾನಿಯನ್ನು ನೀನು ಹಿಂಬಾಲಿಸಬೇಕು ಹಾಗೂ ಅಂತವರನ್ನು ಹಿಂಬಾಲಿಸು. ಅಂತಹ ವ್ಯಕ್ತಿಗೆ ಯಾವುದೇ ರೀತಿಯ ಕೆಡುಕಾಗದು. ಅಂತಹ ಜ್ಞಾನಿಗೆ ನಿನ್ನನ್ನು ಎಚ್ಚರಿಸಲು, ನಿನ್ನ ದೋಷಗಳನ್ನು ಎತ್ತಿ ತೋರಿಸಲು, ನಿನಗೆ ಉಪದೇಶ ಮಾಡಲು ಮತ್ತು ಅನುಚಿತವಾದ ಕೃತ್ಯಗಳನ್ನು ಮಾಡದಂತೆ ತಡೆಯಲು ಅವಕಾಶವನ್ನು ಕಲ್ಪಿಸು. ಅವನು ಒಳ್ಳೆಯವರ ಪಾಲಿಗೆ ಪ್ರೀತಿ ಪಾತ್ರನಾಗಿರುತ್ತಾನೆ. ಆದರೆ ಕೆಟ್ಟವರು ಅವನನ್ನ ದ್ವೇಷಿಸುತ್ತಾರೆ. ಕೆಟ್ಟ ಕೃತ್ಯಗಳನ್ನು ಎಸಗುವಂತವರ ಗೆಳೆತನ ಬೇಡ. ಕೀಳು ಪ್ರವೃತ್ತಿಯ ಜನರ ಗೆಳೆತನ ಬೇಡ. ಒಳ್ಳೆಯವರನ್ನು ಸ್ನೇಹಿತರನ್ನಾಗಿ ಮಾಡಿಕೋ. ಉತ್ತಮ ನಡತೆ ಉಳ್ಳವರ ಸ್ನೇಹವನ್ನ ಸಂಪಾದಿಸು. ಬಾವಿಯನ್ನು ನಿರ್ಮಿಸುವವರು ತಮಗೆ ಬೇಕಾದ ಕಡೆಗೆ ನೀರು ಹರಿಸಬಲ್ಲರು, ಬಿಲ್ಲುಗಾರರು ಬಾಣವನ್ನು ಬಗ್ಗಿಸಬಲ್ಲರು, ಬಡಗಿಗಳು ಮರದ ದಿಮ್ಮಿಯನ್ನ ಬಗ್ಗಿಸಬಲ್ಲರು ಇದೇ ರೀತಿ ಜ್ಞಾನಿಗಳು ಪ್ರಜ್ಞಾವಂತರು ತಮ್ಮನ್ನು ತಾವೇ ರೂಪಿಸಿಕೊಳ್ಳ ಬಲ್ಲವರಾಗಿದ್ದಾರೆ.
ಒಂದು ಗಟ್ಟಿಯಾದ ಬಂಡೆಯೂ ಗಾಳಿಗೆ ಅಲುಗಾಡದಿರುವಂತೆ ಪ್ರಜ್ಞಾವಂತರು ಹೊಗಳಿಕೆ ಅಥವಾ ತೆಗಳಿಕೆಯ ಪ್ರಭಾವಕ್ಕೆ ಒಳಗಾಗುವುದಿಲ್ಲ. ಸಾಮಾನ್ಯವಾಗಿ ಒಳ್ಳೆಯ ಮನುಷ್ಯರು ಎಲ್ಲಾ ಸಂದರ್ಭಗಳಲ್ಲಿಯೂ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಭೋಗದ ಆಸೆಯಿಂದ ಅವರು ಮಾತನಾಡುವುದಿಲ್ಲ. ಸದಾ ಅವರು ಸ್ಥಿತಪ್ರಜ್ಞರಾಗಿರುತ್ತಾರೆ. ತನ್ನ ವಿವೇಕವನ್ನು ಅರಿತುಕೊಳ್ಳುವ ಮೂರ್ಖನು ಸ್ವಲ್ಪಮಟ್ಟಿಗೆ ವಿವೇಕಿ ಎನಿಸುತ್ತಾನೆ. ಆದರೆ ತಾನು ಜ್ಞಾನಿ ಎಂದು ಭ್ರಮಿಸುವ ಮೂರ್ಖನು ವಾಸ್ತವವಾಗಿ ಅಜ್ಞಾನಿ ಎಂದು ಕರೆಯಲ್ಪಡುತ್ತಾನೆ. ಅಜ್ಞಾನಿಗಳು ತಮಗೆ ತಾವೇ ವೈರಿಗಳಾಗಿರುತ್ತಾರೆ. ಏಕೆಂದರೆ ಕಹಿ ಫಲಗಳನ್ನು ನೀಡುವಂತಹ ಪಾಪ ಕೃತ್ಯಗಳನ್ನು ಅವರು ಮಾಡುತ್ತಿರುತ್ತಾರೆ. ಯಾವ ವ್ಯಕ್ತಿಯಲ್ಲಿ ಸತ್ಯ, ಒಳ್ಳೆಯ ಗುಣಗಳು, ಕರುಣೆ, ಸಂಯಮ ವಿನಯವಂತಿಕೆ ಇರುತ್ತೋ ಮತ್ತು ಯಾವ ವ್ಯಕ್ತಿ ಮನಸ್ಸಿನ ಕಲ್ಮಶಗಳಿಂದ ಮುಕ್ತನಾಗಿರುತ್ತಾನೋ ಅಂತವರನ್ನು ಹಿರಿಯ ವ್ಯಕ್ತಿ ಎಂದು ಕರೆಯಲಾಗುತ್ತದೆ.
ಇವೆಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುವ ವ್ಯಕ್ತಿಯು ನ್ಯಾಯವಾದ ಬದುಕನ್ನ, ಸರಳವಾದ ಬದುಕನ್ನ, ಸತ್ಯವಾದ ಬದುಕನ್ನ ನಡೆಸಲು ಇಚ್ಚಿಸುತ್ತಾನೆ. ನ್ಯಾಯಕ್ಕಾಗಿ ಸಕಲವನ್ನು ತ್ಯಾಗ ಮಾಡಲು ಸಿದ್ಧನಿರುತ್ತಾನೆ. ಜ್ಞಾನಿಗಳು ನ್ಯಾಯಪರರು ಯಾವಾಗಲೂ ಒಳ್ಳೆಯವರ ಸಂಘದಲ್ಲಿ ಇರುತ್ತಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ. ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. “ಒಳ್ಳೆಯವರ ಸಂಗ ಹೆಜ್ಜೇನ ಸವಿದಂತೆ” ಎಂಬ ನಾಣ್ಣುಡಿಯಂತೆ ಬದುಕುತ್ತಾರೆ.
ಆಲೋಚನಾಶೀಲತೆ :
ಮನುಷ್ಯ ಪ್ರತಿಯೊಂದು ವಿಷಯದಲ್ಲಿ ಆಲೋಚನಾ ಪ್ರವೃತ್ತಿಯವ ನಾಗಿರಬೇಕು. ಎಲ್ಲಾ ವಿಷಯಗಳಲ್ಲೂ ಪ್ರಾಮಾಣಿಕನಾಗಿರಬೇಕು ಮತ್ತು ಧೈರ್ಯವಂತನಾಗಿರಬೇಕು. ಇದು ನಿಜವಾದ ಸರಳವಾದ ಜೀವನ ಮಾರ್ಗವಾಗಿದೆ. ನಾವು ಈ ರೀತಿಯಲ್ಲಿರುವುದು ನಮ್ಮ ನಮ್ಮ ಆಲೋಚನೆಯ ಫಲವಾಗಿರುತ್ತದೆ. ನಮ್ಮೆಲ್ಲರ ಬದುಕು ನಮ್ಮ ಆಲೋಚನೆಗಳ ಮೂಲಕ ಸ್ಥಾಪಿತವಾಗಿದೆ. ನಮ್ಮ ನಿಮ್ಮೆಲ್ಲರ ಬದುಕು ನಮ್ಮ ನಿಮ್ಮ ಆಲೋಚನೆಗಳ ಮೇಲೆ ನಿರ್ಮಾಣಗೊಂಡಿವೆ. ಒಬ್ಬ ವ್ಯಕ್ತಿಯು ಕೆಟ್ಟ ಆಲೋಚನೆಗಳಿಂದ ಮಾತನಾಡಿದರೆ ಅಥವಾ ಕಾರ್ಯವನ್ನು ಮಾಡಿದರೆ ನೋವು ಅವನನ್ನು ಹಿಂಬಾಲಿಸುತ್ತದೆ. ಅದೇ ರೀತಿಯಾಗಿ ಒಬ್ಬ ವ್ಯಕ್ತಿ ಶುದ್ಧ ಮನಸ್ಸಿನಿಂದ ಒಳ್ಳೆಯ ಆಲೋಚನೆಗಳ ಮೂಲಕ ಮಾತನಾಡಿದರೆ ಅಥವಾ ಕಾರ್ಯವನ್ನು ಮಾಡಿದರೆ ಸಂತೋಷವೂ ಅವನನ್ನ ಹಿಂಬಾಲಿಸುತ್ತದೆ. ಆದ್ದರಿಂದ ಯಾವಾಗಲೂ ಶುದ್ಧ ಆಲೋಚನೆಗಳು ಮನುಷ್ಯನಿಗೆ ಮುಖ್ಯವಾಗಿರುತ್ತದೆ. ಅವು ಅವನಿಗೆ ಸಂತೋಷ ತರುತ್ತವೆ.
ವಿಚಾರ ಶೂನ್ಯ ವ್ಯಕ್ತಿ ಆಗಿರಬೇಡ. ನಿನ್ನ ಆಲೋಚನೆಯ ಮೇಲೆ ಸದಾ ನಿನ್ನ ಗಮನವಿರಲಿ. ಕೆಸರಿನಲ್ಲಿ ಸಿಲುಕಿರುವ ಆನೆಯು ಅದರಿಂದ ಹೊರಬರುವ ಹಾಗೆ, ಕೆಟ್ಟ ಮಾರ್ಗಗಳಿಂದ ಬಿಡುಗಡೆಯಾಗು.
ದೂರ ದೂರ ಚಲಿಸುವಂತಹ ಮನಸ್ಸಿಗೆ ಕಡಿವಾಣ ಹಾಕುವವರು ಮನಸ್ಸಿನ ಪ್ರಲೋಭನೆಯ ಬಂಧನಗಳಿಂದ ಮುಕ್ತರಾಗುತ್ತಾರೆ. ವ್ಯಕ್ತಿಯೊಬ್ಬನ ನಂಬಿಕೆಯು ಅಸ್ಥಿರವಾಗಿದ್ದರೆ ಅವನಿಗೆ ನಿಜವಾದ ಧರ್ಮದ ತಿರುಳು ಗೊತ್ತಿಲ್ಲದಿದ್ದರೆ ಅವನ ಮನ ಶಾಂತಿಗೆ ಧಕ್ಕೆ ಉಂಟಾಗಿದ್ದರೆ ಅಂತಹ ವ್ಯಕ್ತಿಯ ಜ್ಞಾನವು ಪರಿಪೂರ್ಣ ಎನಿಸುವುದಿಲ್ಲ.
ಜಾಗರೂಕತೆ ಶ್ರದ್ಧೆ ಮತ್ತು ನೇರವಂತಿಕೆ :
ಸದಾ ಜಾಗರೂಕನಾಗಿರು. ಸೋಮಾರಿತನವನ್ನು ಬಿಡು. ನಿಜವಾದ ಮಾರ್ಗದಲ್ಲಿ ನಡೆಯುತ್ತಿರುವ ವ್ಯಕ್ತಿ ಈ ಜಗತ್ತಿನಲ್ಲಿ ಸುಖವಾಗಿರುತ್ತಾನೆ. ಇದೇ ನಿಜವಾದ ಸರಳವಾದ ಜೀವನ ಮಾರ್ಗ.
ಶ್ರದ್ಧೆ ಮತ್ತು ನಿಷ್ಠೆಯಿಂದಿರುವ ವ್ಯಕ್ತಿಯು ಜಾಗೃತನಾಗಿದ್ದರೆ, ಅವನು ಮರೆಗುಳಿಯಾಗದಿದ್ದರೆ, ಅವನ ಕೆಲಸ ಕಾರ್ಯಗಳು ಸತ್ಯವಾಗಿದ್ದರೆ, ಅವನು ಪ್ರಜ್ಞಾವಂತನಾಗಿ ವರ್ತಿಸಿದರೆ, ಸಂಯಮಿಯಾಗಿದ್ದುಕೊಂಡು ತನ್ನ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಧರ್ಮಕ್ಕನುಗುಣವಾಗಿ ಜೀವಿಸಿದರೆ ಅವನ ಖ್ಯಾತಿ ಎಲ್ಲೆಡೆ ಹರಡುತ್ತದೆ. ಯಾವುದೇ ಒಂದು ಉದ್ದೇಶಕ್ಕಾಗಿ ಅದು ಎಷ್ಟೇ ಮಹತ್ವದ್ದಾಗಿರಲಿ ನಿನ್ನ ಮೂಲ ಉದ್ದೇಶದಿಂದ ವಿಮುಖನಾಗಬೇಡ. ನೀನು ಒಮ್ಮೆ ನಿನ್ನ ಗುರಿಯನ್ನು ಗುರುತಿಸಿಕೊಂಡ ನಂತರ ಅದನ್ನು ಆದಷ್ಟು ಶೀಘ್ರವಾಗಿ ಹಾಗೂ ಬಿಗಿಯಾಗಿ ಹಿಡಿದುಕೊಂಡು ನೇರವಂತಿಕೆಯ ಮಾರ್ಗದಲ್ಲಿ ಸಾಗು. ಈ ರೀತಿಯ ಜೀವನ ಮಾರ್ಗವೂ ಒಬ್ಬ ಮನುಷ್ಯನನ್ನ ಸಂತೋಷವಾಗಿ ಇರುವಂತೆ ಮಾಡುತ್ತದೆ.
ಸುಖ – ದುಃಖ, ದಾನ – ದಯೆ :
ಬಡತನವು ದುಃಖವನ್ನು ಹೆಚ್ಚು ಮಾಡುತ್ತದೆ. ಆದರೆ ಬಡತನವನ್ನ ನಿರ್ಮೂಲನೆ ಮಾಡಿದರೆ ಅದು ಸುಖವನ್ನ ನೀಡಲಾರದು. ಐಷಾರಾಮಿ ಜೀವನ ಶೈಲಿಯಿಂದ ಬದುಕಿಗೆ ಸಂತೋಷವೂ ಸಿಗಲಾರದು, ಆದರೆ ಉನ್ನತ ಮಟ್ಟದ ಜೀವನ ಶೈಲಿಯಿಂದ ಮಾತ್ರ ಸಂತೋಷವಾಗಿ ಜೀವನ ಮಾಡಬಹುದು. ಇದು ನಿಜವಾದ ಸರಳವಾದ ಜೀವನ ಮಾರ್ಗ.
ನಮ್ಮನ್ನ ದ್ವೇಷಿಸುವವರನ್ನು ದ್ವೇಷಿಸದೆ, ಸುಖವಾಗಿ ಪ್ರೀತಿಯಿಂದ ಬದುಕುವುದನ್ನು ನಾವು ಕಲಿಯಬೇಕು. ದುರಾಸೆ ಉಳ್ಳವರ ನಡುವೆ ದುರಾಸೆಯಿಂದ ಮುಕ್ತರಾಗಿ ಸುಖವಾಗಿ ಬದುಕುವುದನ್ನು ನಾವು ಕಲಿಯಬೇಕು. ಹೊಲಗಳು ಕಳೆಗಳಿಂದ ಹಾನಿಗೊಳಗಾಗುವಂತೆ, ದುರಭಿಮಾನದಿಂದ ಧರ್ಮಾಂಧತೆಯಿಂದ ಮಾನವೀಯ ಗುಣಗಳು ಹಾಳಾಗುತ್ತವೆ. ಆದರೆ ದುರಭಿಮಾನ ಮತ್ತು ಧರ್ಮಾಂಧತೆಯಿಂದ ಮುಕ್ತರಾದ ಸಜ್ಜನರಿಗೆ ನೀಡುವ ದಾನವು ಶ್ರೇಷ್ಠ ಪ್ರತಿಫಲವನ್ನು ಕೊಡುತ್ತದೆ. ಸೋತವನು ದುಃಖಿಯಾಗಿರುವುದರಿಂದ ಜಯವೂ ದ್ವೇಷವನ್ನು ಬೆಳೆಸುತ್ತದೆ. ಜಯಾಪಜಯಗಳೆರಡನ್ನು ತೊರೆದವನು ಜೀವನದಲ್ಲಿ ಸಂತೃಪ್ತನು. ಅವನು ಸಂತೋಷದಿಂದಿರುತ್ತಾನೆ. ಭಾವೋದ್ರೇಕಕ್ಕೆ ಸಮನಾದ ಬೆಂಕಿ ಬೇರೊಂದು ಇಲ್ಲ, ದ್ವೇಷಕ್ಕೆ ಸಮನಾದ ಬಾಣ ಮತ್ತೊಂದಿಲ್ಲ ಎಂಬ ತತ್ವವನ್ನ ಅರಿತುಕೊಳ್ಳುತ್ತಾನೆ.
ಮಾನವನ ಕಲ್ಯಾಣಕ್ಕೆ ಉದಾರವಾಗಿ ದಾನ ಮಾಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇನ್ನೊಬ್ಬರಿಗೆ ಸೇರಿದ ಸಂಪತ್ತನ್ನು ಅವನ ಅನುಮತಿ ಇಲ್ಲದೆ ತೆಗೆದುಕೊಳ್ಳಬಾರದು. ಸಕಲ ಜೀವರಾಶಿಗಳ ಮೇಲೂ ದಯೆಯನ್ನು ತೋರಿಸಬೇಕು. ಯಾರೊಂದಿಗೂ ನಿರ್ದಯೆಯಿಂದ ವರ್ತಿಸಬಾರದು.
ಇದು ಸರಳವಾಗಿರುವ, ಎಲ್ಲರು ಒಪ್ಪಿ ಪಾಲಿಸಬಹುದಾದ ಕೆಲವು ನಿಯಮಗಳು.
ಈ ರೀತಿಯ ನಿಯಮಗಳನ್ನು ಯಾವುದೇ ಧರ್ಮದ ಅನುಯಾಯಿ ಆಗಿರಲಿ, ಪಾಲಿಸಲು ಮತ್ತು ಇದನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಯಾವುದೇ ಸಮಸ್ಯೆ ಆಗಲಾರದು. ಎಲ್ಲಾ ಧರ್ಮಗಳಲ್ಲಿ ಈ ರೀತಿಯ ಒಳ್ಳೆಯ ಅಂಶಗಳಿದ್ದರೆ ಅದನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಂಡು ಅಳವಡಿಸಿಕೊಳ್ಳಬೇಕು. ಪದೇ ಪದೇ ಅವುಗಳನ್ನ ಮನನ ಮಾಡಿಕೊಳ್ಳಬೇಕು. ಆಗ ಯಾವುದೇ ವ್ಯಕ್ತಿ ತಪ್ಪು ಮಾಡುವಾಗ ಈ ಅಂಶಗಳು ಅವನ ಸ್ಮೃತಿಪಟಲದೊಳಗೆ ಬಂದು ವ್ಯಕ್ತಿಯೊಬ್ಬನು ತಪ್ಪು ಮಾಡದೆ ಸರಿಯಾದದ್ದನ್ನೇ ಮಾಡುವಂತಹ ಮನಸ್ಥಿತಿ ಗಳಿಸಿಕೊಳ್ಳುತ್ತಾನೆ. ಧರ್ಮಗಳ ಮೂಲ ಉದ್ದೇಶ ಮನುಷ್ಯನ ಮನಸ್ಸಿನ ಬೆಳವಣಿಗೆಯೇ ಆಗಿರಬೇಕು. ಮನಸ್ಸಿಗೆ ಸರಿಯಾದ ತರಬೇತಿ ಮಾಡುತ್ತಾ ಹೋದಂತೆ ಅವನ ಬೌದ್ಧಿಕ ಚಿಂತನೆಗಳು, ಪ್ರಬುದ್ಧವಾಗುತ್ತವೆ. ಇದರಿಂದ ಸಾಮಾಜಿಕ ನಡವಳಿಕೆ ನೈತಿಕವಾಗಿ ಸರಿಯಾಗುತ್ತ ಹೋಗಿ ಒಂದು ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಅಲ್ಲಿ ಯಾವುದೇ ತಾರತಮ್ಯವಿಲ್ಲದೆ ಕೇವಲ ವಿಚಾರ ತತ್ವಗಳಿಗಷ್ಟೇ ಮಾನ್ಯತೆ ನೀಡಬೇಕಾಗುತ್ತದೆ. ಜನರು ಸತ್ಯವನ್ನು ನಂಬಬೇಕು ಮತ್ತು ನ್ಯಾಯವನ್ನ ಪಾಲಿಸಬೇಕು. ಆಗ ಮಾತ್ರ ಸಮಾಜದಲ್ಲಿ ನೈತಿಕ ವ್ಯವಸ್ಥೆಯನ್ನು ಸದೃಢವಾಗಿ ಸ್ಥಾಪಿಸಬಹುದು.
ಆರ್ಥಿಕ ಸಾಮಾಜಿಕ ಸಮೀಕ್ಷೆ ನಡೆಯುತ್ತಿರುವ ಈ ಸಮಯದಲ್ಲಿ ದಲಿತರು, ಬುದ್ಧಿಜೀವಿಗಳು ಪ್ರಗತಿಪರರು ನಾಸ್ತಿಕರು ಹಿಂದುಳಿದ ವರ್ಗಗಳು ಒಂದು ಗಟ್ಟಿ ನಿರ್ಧಾರ ಮಾಡಬೇಕು. ನಾವೆಲ್ಲರೂ ಮನುಷ್ಯ ಮನುಷ್ಯರನ್ನು ಪ್ರೀತಿಸುವ ಪರಸ್ಪರ ಗೌರವಿಸುವ ಬುದ್ಧರ ಧಮ್ಮದಲ್ಲಿ ನಂಬಿಕೆಯಿಟ್ಟು ಬೌದ್ಧ ಅಂತ ಇಲ್ಲವೇ ಲಿಂಗಾಯತ ಅಂತ ಧರ್ಮದ ಕಲಂನಲ್ಲಿ ಬರೆಸುತ್ತೇವೆ. ಈ ಮೂಲಕ ನಾವೆಲ್ಲರೂ ಒಂದು ಸ್ಪಷ್ಟ ಸಂದೇಶ ಸಮಾಜಕ್ಕೆ ಕೊಡುತ್ತೇವೆ ಎಂಬ ಒಕ್ಕೊರಲಿನ ನಿರ್ಧಾರ ಮಾಡಬೇಕಿದೆ. ಇದು ಬಾಬಾಸಾಹೇಬರಿಗೆ ನಾವು ಸಲ್ಲಿಸುವ, ಬಸವಾದಿ ಶರಣರಿಗೆ ತೋರುವ ಗೌರವದ ಪ್ರತೀಕವಾಗುತ್ತದೆ. ಈ ಸಂದೇಶದಿಂದ ಈ ದೇಶದಲ್ಲಿ ಬಹು ಸಂಸ್ಕೃತಿ ಜಾತ್ಯತೀತತೆ ಮೌಲ್ಯಗಳು ಉಳಿದು ಮಾನವೀಯತೆ ಬೆಳೆಯಲು ಸಾಧ್ಯವಾಗುತ್ತದೆ.
ಡಾ ನಾಗೇಶ್ ಮೌರ್ಯ
ಬೌದ್ಧ ಚಿಂತಕರು.
ಇದನ್ನೂ ಓದಿ – ಅಹಿಂಸಾ ತತ್ತ್ವ- ಬುದ್ಧರ ನಿಲುವೇನು?