ದಸರಾ, ಬಾನು ಮುಷ್ತಾಕ್ ಮತ್ತು ನಾಡ ಸಂಸ್ಕೃತಿ‌

Most read

ಬಾನು ಮುಷ್ತಾಕ್ ಕನ್ನಡ ರಾಷ್ಟ್ರೀಯತೆಯನ್ನು ಸಂಕೇತಿಸುವ  ಭುವನೇಶ್ವರಿ ಪ್ರತಿಮೆಯ ಬಗ್ಗೆ ಎತ್ತಿದ್ದ ಒಂದೆರಡು ಮುಖ್ಯ ಪ್ರಶ್ನೆಗಳು ಮತ್ತು ಅವುಗಳ ಸುತ್ತ ನಡೆದ ಅಪಪ್ರಚಾರವನ್ನು ಸಂಸ್ಕೃತಿ ಅಧ್ಯಯನದ ದೃಷ್ಟಿಕೋನದಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಸಹಾಯಕ ಪ್ರಾಧ್ಯಾಪಕರಾದ ಸಿ.ಬಿ.ಐನಳ್ಳಿ  ಈ  ಲೇಖನದಲ್ಲಿ ಮಾಡಿದ್ದಾರೆ. ಲೇಖನದ ಮೊದಲ ಭಾಗ ಇಲ್ಲಿದೆ.

ಬಾನು ಮುಷ್ತಾಕ್ ಅವರನ್ನು ದಸರಾ  ಉದ್ಘಾಟನೆಗೆ ಅಹ್ವಾನಿಸಿರುವ ಸರ್ಕಾರದ ನಡೆಯ ಕುರಿತು  ಪಾರ್ಕಲ್ಲಿ ಹಿರಿಯರ ಗುಂಪೊಂದು ಚರ್ಚಿಸುತ್ತಿತ್ತು. ಸರ್ಕಾರದ ಈ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಒಬ್ಬರು ಉಳಿದವರ  ವಿರೋಧ ಅತಿಯಾದಾಗ ಜಾರಿಕೊಳ್ಳುವವರಂತೆ   ‘ಸರಿನೋ  ತಪ್ಪೋ ಹೋಗ್ಲಿ ಬಿಡ್ರಿ, ಅವರನ್ನೇನು ಮುಖ್ಯಮಂತ್ರಿ ಮಾಡಕ ಹೊಂಟಿಲ್ಲ’ ಎನ್ನುತ್ತಾ  ಅಲ್ಲಿಂದ ಹಾಗೇ  ಹೊರಟು ಹೋದರು.

ಸರ್ಕಾರದ ನಡೆಗೆ  ವಿರೋಧ ವ್ಯಕ್ತವಾಗುವಂತಹ ಪರಿಸ್ಥಿತಿಯನ್ನು ಬೇಕಂತಲೇ ಒಂದು ವರ್ಗದ ಜನ ಸೃಷ್ಟಿಸುತ್ತಿದ್ದಾರೆ. ಹಿಂದೊಮ್ಮೆ ಅವರು ಕನ್ನಡ ರಾಷ್ಟ್ರೀಯತೆಯನ್ನು ಸಂಕೇತಿಸುವ  ಭುವನೇಶ್ವರಿ ಪ್ರತಿಮೆಯ ಬಗ್ಗೆ ಎತ್ತಿದ್ದ ತಕರಾರನ್ನು ಈಗ ಮುನ್ನೆಲೆಗೆ ತರುತ್ತಿದ್ದಾರೆ. ಅದನ್ನಿಟ್ಟುಕೊಂಡು  ಕನ್ನಡವನ್ನು ತಾಯಿ ಎಂದು ಒಪ್ಪಿಕೊಳ್ಳದವರೆಂಬಂತೆ  ಚಿತ್ರಿಸುತ್ತಿದ್ದಾರೆ. ಹೀಗೆ ವಿರೋಧಿಸುವವರ ಗುಂಪಿನಲ್ಲಿ  ಮಹಿಳಾ ಬರಹಗಾರ್ತಿಯರಿದ್ದಾರೆ. ನಾನು ತುಂಬಾ ಇಷ್ಟ ಪಡುವ ಕವಯತ್ರಿಯೂ ಒಬ್ಬರಿದ್ದಾರೆ. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಾಗ ತಾವು ಕೂಡ ಸಂಭ್ರಮಿಸಿದ್ದರು ಎಂದು ಹೇಳುತ್ತಲೇ ಈಗ ವಿರೋಧಿಸುವವರಿದ್ದಾರೆ.  ಒಬ್ಬ ಬರಹಗಾರ್ತಿಯಂತೂ ‘ಇವರಿಗೆ ಕನ್ನಡ ಇನ್ನೂ  ಹೆಚ್ಚಿನದೇನು ಕೊಡಬೇಕು?’ ಎಂದು  ದಾರ್ಷ್ಟ್ಯದಿಂದ ಕೇಳುತ್ತಾರೆ. ಕೊನೆಗೆ ಬೂಕರ್ ಪ್ರಶಸ್ತಿ ನಿಜಕ್ಕೂ ದಕ್ಕಿದ್ದು ಅನುವಾದಕಿಗೆ ಹೊರತು ಬಾನು ಮುಷ್ತಾಕ್ ಅವರಿಗಲ್ಲ  ಎಂಬಲ್ಲಿಗೆ ಇಂಥವರ ಚರ್ಚೆ ಬಂದು ನಿಂತಿದೆ. 

ಇವನಾರವ ಎನ್ನುವವರ  ಧಾರ್ಮಿಕತೆಯಾದರೂ  ಎಂಥದ್ದು?:

ಬೂಕರ್‌ ವಿಜೇತೆ ಬಾನು ಮುಷ್ತಾಕ್

ಹಿಂದೂ ಹಬ್ಬದ ಉದ್ಘಾಟನೆಗೆ ಮುಸ್ಲಿಂ ವ್ಯಕ್ತಿಯೊಬ್ಬರನ್ನ ಆಹ್ವಾನಿಸಿದ್ದು ಸೂಕ್ತವಲ್ಲವೆಂಬ ವಾದದಲ್ಲಿ ಹುರುಳಿಲ್ಲ. ನಾಲ್ವಡಿಯವರ ಜೊತೆ ಮಿರ್ಜಾ ಇಸ್ಮಾಯಿಲ್ಲರೂ ಈ ಹಬ್ಬದ ಭಾಗವಾಗಿಯೇ ಇರುತ್ತಿದ್ದರೆಂಬುದು ಇತಿಹಾಸ. ಈಗ ಸರ್ಕಾರ ಈ ಹಬ್ಬವನ್ನು ನಾಡಹಬ್ಬವೆಂದು ಆಚರಿಸುತ್ತಿದೆ. ನಾಡಹಬ್ಬ ನಾಡಸಂಸ್ಕೃತಿ ಎಂಬುದರಲ್ಲಿ ನಾಡಿನ ಎಲ್ಲಾ ಜನರ ಪಾಲುದಾರಿಕೆ ಮತ್ತು ಹಿತವಿರಬೇಕು.      ಇಲ್ಲವಾದರೆ ಸರ್ಕಾರದ ಪ್ರಾಯೋಜಕತ್ವದಲ್ಲಿ ಈ ಹಬ್ಬವನ್ನು ಆಚರಿಸುವುದನ್ನು ಬಿಡಬೇಕು.  ಯಾವುದೋ ಒಂದು ನಿರ್ದಿಷ್ಟ ಧರ್ಮ ಅಥವಾ ಜಾತಿಯ ಹಬ್ಬವನ್ನು ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಸುವುದು ಅಸಾಂವಿಧಾನಿಕವಾಗುವುದಿಲ್ಲವೇ? ಇದು ಒಂದು ನಿರ್ದಿಷ್ಟ ಧರ್ಮದ ಹಬ್ಬವೆಂದಾದರೆ, ನಾಳೆ ಇನ್ನೊಂದು ಧರ್ಮದವರು ಸರ್ಕಾರದ ನೇತೃತ್ವದಲ್ಲಿ ತಮ್ಮ ಹಬ್ಬವು ಆಚರಿಸಲ್ಪಡಬೇಕು ಎನ್ನುವುದಿಲ್ಲವೇ?  ಈ ಹಿನ್ನಲೆಯಲ್ಲಿ, ತಾಂತ್ರಿಕವಾಗಿ ಹಾಗೂ ಕಾನೂನಾತ್ಮಕವಾಗಿ ಅದು ಎಲ್ಲರ ಹಬ್ಬವೇ.  ನಾಡಹಬ್ಬವೊಂದನ್ನು  ಸೆಕ್ಯುಲರಾದ ರೀತಿನೀತಿಗಳಲ್ಲಿ  ಆಚರಿಸಲು ಎಲ್ಲಾ ಸರ್ಕಾರಗಳೂ ಸೋತಿರುವುದು ಇಂಥ ಗೊಂದಲಗಳನ್ನು ಸೃಷ್ಟಿಸಲು ಕೆಲವರಿಗೆ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರ ನಡೆಸುವ ಕಾರ್ಯಕ್ರಮವೊಂದಕ್ಕೆ, ಜಾತಿ ಮತ್ತು ಧರ್ಮಾಧಾರಿತವಾಗಿ ವ್ಯಕ್ತಿಗಳನ್ನು ಹೊರಗಿಡಬೇಕೆಂಬುದು  ಸಂವಿಧಾನವಿರೋಧಿಯಾದ  ಮಾತು.   ಇವನಾರವ ಇವನಾರವ ಎನ್ನುವವರ ಧಾರ್ಮಿಕತೆಯಾದರೂ  ಎಂಥದ್ದು?  ಒಬ್ಬ ನೇತಾರರಂತೂ ಮುಸ್ಲಿಮರಷ್ಟೇ ಅಲ್ಲ ,  ದಲಿತ ಮಹಿಳೆಯರೂ ಅಲ್ಲಿ ಪೂಜೆ ಸಲ್ಲಿಸಲು ಅನರ್ಹರು ಎಂದಿದ್ದಾರೆ. ಆ ಮೂಲಕ ಇದು ಬ್ರಾಹ್ಮಣಶಾಹಿ ಹೂಡಿರುವ ಆಟವೆಂಬುದನ್ನು   ಸ್ಪಷ್ಟಪಡಿಸಿದ್ದಾರೆ.   

ಪ್ರತಿಮಾತ್ಮಕವಾಗಿ ಮತ್ತು ವಾಸ್ತವಿಕವಾಗಿ ಯಾಜಮಾನ್ಯದ  ಮಾತು :

ಎರಡು ವರ್ಷಗಳ ಹಿಂದೆ ಜನಸಾಹಿತ್ಯ ಸಮ್ಮೇಳನದಲ್ಲಿ ಬಾನು ಮುಷ್ತಾಕರು  ಆಡಿದ್ದ   ಮಾತುಗಳ ತುಣುಕುಗಳನ್ನು ಸಂದರ್ಭದಿಂದ ಬೇರ್ಪಡಿಸಿ ಅಪಪ್ರಚಾರಕ್ಕಾಗಿ ವೈರಲ್ ಮಾಡಲಾಗಿದೆ.  ಅಂದಿನ ಅಖಿಲಭಾರತ ಕನ್ನಡ ಸಾಹಿತ್ಯಸಮ್ಮೇಳನಕ್ಕೆ ಮುಸ್ಲಿಂ ಬರಹಗಾರರನ್ನು ಕಡೆಗಣಿಸಲಾಗಿತ್ತು.   ಪರಿಷತ್ತಿನ ಅಂಥ ಹಲವು  ಪ್ರತಿಗಾಮಿತನದ ನಡೆಗಳನ್ನು ವಿರೋಧಿಸಿ ಆಯೋಜಿಸಲಾದ ಪರ್ಯಾಯ ಸಮ್ಮೇಳನದಲ್ಲಿ ಅವರು ಆಡಿರುವ ಮಾತುಗಳವು. ನಾಡಿನ ಸಾಂಸ್ಕೃತಿಕ ರಾಜಕಾರಣವನ್ನು ನೇರವಾಗಿ ಮುಖಾಮುಖಿಯಾಗುವಂಥ ಪ್ರಶ್ನೆಗಳನ್ನು ಅಲ್ಲಿ ಅವರು ಎತ್ತಿದ್ದಾರೆ.   ಆ ಪ್ರಶ್ನೆಗಳನ್ನಿಟ್ಟುಕೊಂಡೇ  ಮುಖ್ಯವಾದ ಕೆಲವು ವಿದ್ಯಮಾನಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನ ನಾನಿಲ್ಲಿ  ಮಾಡಿದ್ದೇನೆ. ಭುವನೇಶ್ವರಿ ಪ್ರತಿಮೆಯಲ್ಲಿರುವ ಸಾಂಸ್ಕೃತಿಕ ಏಕಸ್ವಾಮ್ಯವನ್ನು  ವಿಮರ್ಶಿಸುತ್ತಾ  ‘ಈಗ ನಾನೆಲ್ಲಿ ನಿಲ್ಲಬೇಕು?’ ಎಂದು   ಬಾನು ಮುಷ್ತಾಕ್ ಕೇಳಿದ್ದಾರೆ. ಅಲ್ಲಿ   ನಾಡಿನ ಅಸ್ಮಿತೆಯ ಸಂಕೇತವಾದ ಪ್ರತಿಮೆ  ತನ್ನ ಸಮುದಾಯವನ್ನು ಒಳಗೊಳ್ಳದಿರುವ ನೋವಿದೆ.   ಇತಿಹಾಸದುದ್ದಕ್ಕೂ  ಇಂಥ ಹೊರಗಿಟ್ಟಿರುವಿಕೆಯನ್ನ ಸಾಂಕೇತಿಕವಾಗಿ ಆ ಪ್ರತಿಮೆ ಸೂಚಿಸುತ್ತಿದೆ.  ಮೇಲ್ಜಾತಿ ಮೇಲ್ವರ್ಗಗಳ ಅಸ್ಮಿತೆಯನ್ನು ಪ್ರತಿನಿಧಿಸುವ ಈ ಪ್ರತಿಮೆ ಅಲ್ಪಸಂಖ್ಯಾತರನ್ನಷ್ಟೇ ಅಲ್ಲ, ಇನ್ನೂ ಅನೇಕ ಅಂಚಿನ ಸಮುದಾಯಗಳನ್ನೂ ಹೊರಗಿಡುತ್ತದೆ. ಅಂದರೆ, ಸಾಂಸ್ಕೃತಿಕವಾಗಿ ಅವರನ್ನು ಪ್ರತಿನಿಧಿಸುವುದಿಲ್ಲ. 

ಶಾರದಾ ಪೂಜೆ

ಭುವನೇಶ್ವರಿ ಎಂಬ ಸಂಸ್ಕೃತಮಯ ಹೆಸರಿಗೂ, ಆ ಪ್ರತಿಮೆ ಪ್ರತಿಬಿಂಬಿಸುತ್ತಿರುವ  ಒಂದು ನಿರ್ದಿಷ್ಟ ವರ್ಗದ ಮಹಿಳೆಯ ಚಿತ್ರಣಕ್ಕೂ, ಸಾಮಾಜಿಕವಾಗಿ ಪ್ರಬಲವಾಗಿರುವ ಸಮುದಾಯಗಳ ಸಂಸ್ಕೃತಿಗೂ ಒಳ ಸಂಬಂಧವಿದೆ. ಆ ಪ್ರತಿಮೆ ಮೂರ್ತೀಕರಿಸಬೇಕಾಗಿರುವುದು ಬಹು ಸಂಸ್ಕೃತಿಗಳ ಕರ್ನಾಟಕತ್ವವನ್ನ. ಈ ನೆಲದ  ಬದುಕಿನ ಸಾವಯವ ಸಂಪರ್ಕವಿರದ ಕೃತಕವಾಗಿ ರೂಪುಗೊಂಡ ಶುದ್ಧ ಭಾಷೆಯನ್ನಾಡುವ ಮೇಲ್ಜಾತಿ ಮೇಲ್ವರ್ಗದ ಜನರನ್ನಷ್ಟೇ ಅಲ್ಲ. ಶುದ್ಧ ಕನ್ನಡವೆಂಬುದೇ ಒಂದು ಕೃತಕ ನಿರ್ಮಿತಿ. ಬಾಳಿಗಾಗಿ ಬಡಿದಾಡಲೇಬೇಕಾದ ಅನಿವಾರ್ಯತೆ ಇಲ್ಲದ ವಿದ್ವಾಂಸರು ಸೇರಿ ನಿರ್ಮಿಸಿಕೊಂಡ ನಿರ್ಮಿತಿ. ಹೇರಿಕೆಯಿಂದಲೋ  ಅಕಾಡೆಮಿಕ್ ಅನಿವಾರ್ಯತೆಗಳಿಂದಲೋ  ರೂಪುಗೊಂಡಿರುವ ಈ ಭಾಷೆಯನ್ನು ಒಪ್ಪಿಕೊಳ್ಳೋಣ. ಆದರೆ, ನಾಡಿನ ಸಾಮಾನ್ಯ ಜನರಲ್ಲಿ ಸಾವಯವವಾಗಿ ರೂಪುದಾಳಿ ನೆಲೆಗೊಂಡಿರುವ ಕನ್ನಡವನ್ನು ಪ್ರತಿನಿಧಿಸಬೇಕಿರುವುದು ಅಗತ್ಯ. ನಾಡಿನ ರೈತರನ್ನು  ಕಾರ್ಮಿಕರನ್ನು ದಲಿತ ಆದಿವಾಸಿಗಳನ್ನು ಕೆಳಜಾತಿಗಳನ್ನು ಒಳಗೊಂಡು ಪ್ರತಿನಿಧಿಸುವಂತೆ ಆ ಪ್ರತಿಮೆ ಇರಬೇಕೆಂಬುದು ಅವರ ಮಾತಿನ ಹಿಂದಿನ ಆಶಯ. ಕಳೆದೊಂದು ದಶಕದಲ್ಲಿ ಈ ನಾಡು  ಅಲ್ಪಸಂಖ್ಯಾತರ ಬದುಕಿನಲ್ಲಿ ಹುಟ್ಟಿಸಿದ ಅಸುರಕ್ಷತೆ ಮತ್ತು  ಪರಕೀಯತೆಯನ್ನೂ ವಾಸ್ತವವಾಗಿ ಅವರ ಮಾತುಗಳು ಆ ಪ್ರಶ್ನೆಯ ಮೂಲಕ  ಅನುರಣಿಸಿವೆ. 

ಸೃಜನಶೀಲ ಬರಹಗಾರ್ತಿಯಾಗಿ ಅವರ ಈ ಪ್ರಶ್ನೆ ಕೇವಲ ಪ್ರತಿಮೆಯ ಕುರಿತದ್ದಲ್ಲ.  ಈ ನಾಡಿನ ಅಂಚಿನಲ್ಲಿರುವ ಜನರ ಸಾಮಾಜಿಕ ಆರ್ಥಿಕ ಪ್ರಾತಿನಿಧ್ಯಕ್ಕೆ ಹಕ್ಕೊತ್ತಾಯದ ರೂಪಕವೆಂದೂ ಗಮನಿಸಬೇಕು. ಸಂಸ್ಕೃತಿ ಅಧ್ಯಯನದ ಪರಿಪ್ರೇಕ್ಷೆಯಲ್ಲಿಟ್ಟು  ನೋಡಿದಾಗ, ಬಾನು ಮುಷ್ತಾಕರ  ಪ್ರಶ್ನೆಗಳಲ್ಲಿ  ಗಂಭೀರವಾದ ಕಾಳಜಿಗಳಿರುವುದು ಕಾಣುತ್ತದೆ.  ಅಂಕಿಅಂಶಗಳ ಪ್ರಕಾರ,  2022ನೇ ಇಸ್ವಿಯಲ್ಲಿ ಕರ್ನಾಟಕದಲ್ಲಿ ಒಟ್ಟು 17,813 ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು  ದಾಖಲಾಗಿವೆ ; ಅದರಲ್ಲಿ 165 ವರದಕ್ಷಿಣೆಯ ಸಾವುಗಳು, 8 ರೇಪ್ ಅಂಡ್ ಮರ್ಡರ್, 595 ರೇಪ್, 1812 ಮಹಿಳೆಯರ ಅಪಹರಣಗಳ ಪ್ರಕರಣಗಳಿವೆ. ಇದೆಲ್ಲದರ ಅರಿವಿರುವ ಸಂವೇದನಾಶೀಲ ಮಹಿಳೆಯಾಗಿ ಮಾರನೇ ವರ್ಷದ ತಮ್ಮ ಮಾತಿನಲ್ಲಿ ಬಾನು ಅವರು ಬೇಸರದಿಂದ ಹೇಳುತ್ತಾರೆ – ‘ಹೆಣ್ಣನ್ನು ದೇವತೆಯನ್ನಾಗಿ ಪೂಜಿಸಿ ಕೂಡಿಸಿ ಬಿಡುತ್ತೀರಿ!’.  ವ್ಯಕ್ತಿಸ್ವಾತಂತ್ರ್ಯ ಮತ್ತು  ಘನತೆಯುಳ್ಳ ಮನುಷ್ಯಳೆಂದು ಆಕೆಯನ್ನು ನೋಡುತ್ತಿಲ್ಲವೇಕೆ ಎಂಬ   ಬೇಸರ ಅಲ್ಲಿದೆ.  ಅವರ  ಮಾತನ್ನು  ಮೇಲೆ ನೀಡಿದ ಮಹಿಳೆಯರ ವಿರುದ್ಧದ  ಅಪರಾಧದ ಅಂಕಿ ಅಂಶಗಳ  ಹಿನ್ನಲೆಯಲ್ಲಿ ಗ್ರಹಿಸಿದರೆ,  ಮಹಿಳೆಯಾಗಿ ಅವರ ವೇದನೆ ಏನೆಂದು ಅರ್ಥವಾಗುತ್ತದೆ.  

ಕೆಲವರಂತೂ  ಭುವನೇಶ್ವರಿ ಪ್ರತಿಮೆಯ ಹಿಂದೆ ಅವರನ್ನು ಹೊರಗಿಡುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟೀಕರಣ ನೀಡಬಯಸುತ್ತಾರೆ. ಹಿಂದಿನಿಂದ ಒಪ್ಪಿಕೊಂಡು ಬಂದಿರುವುದರಿಂದ ಅದು ನಿಮ್ಮನ್ನು ಪ್ರತಿನಿಧಿಸದಿದ್ದರೂ ಒಪ್ಪಿಕೊಂಡು ಹೋಗಬೇಕೆಂಬ ಉಪದೇಶವಿದು.  ತುಂಬಾ ಜನ ಇದೇ ಅಭಿಪ್ರಾಯದವರಿದ್ದಾರೆ. ಅವರ ಪ್ರಕಾರ ಸಂಸ್ಕೃತಿ ಎಂಬುದು ಹಿಂದಿನಿಂದ ನಡೆದುಕೊಂಡು ಬಂದ ಒಂದು ಪದ್ಧತಿ ಮತ್ತು ಅದು ತನಗೆ ತಾನೇ ಸ್ವಯಂಪೂರ್ಣ. ಕೆಲವರು ದುರುದ್ದೇಶದಿಂದ ಜನಸಾಮಾನ್ಯರಲ್ಲಿ ಇಂತಹ  ಅಪತಿಳುವಳಿಕೆಯನ್ನು ಮೂಡಿಸಿದ್ದಾರೆ. ಪರಿಣಾಮವಾಗಿ ಬಲಿಪಶುಗಳಾಗಿರುವ ಜನ ತಮ್ಮ ಶೋಷಣೆಗೆ ತಾವೇ ಸಮ್ಮತಿಸುತ್ತಾರೆ. ಸ್ವಯಂಪೂರ್ಣ ಎಂದು ಹೇಳುವಷ್ಟು ಆದರ್ಶಮಯ ಸಂಬಂಧಗಳ ವಿನ್ಯಾಸವನ್ನು ಈ ನಾಡಸಂಸ್ಕೃತಿಯು ಹೊಂದಿಲ್ಲ. ಹಾಗಾಗಿ ಸಂಸ್ಕೃತಿ ಎಂಬುದು ಅಧಿಕಾರ ಸಂಬಂಧಗಳ ವಿನ್ಯಾಸ. ಇದರ ಪೂರ್ಣ ಅರಿವಿದ್ದರೂ, ಕೆಲ ಬಲಾಢ್ಯರು ವೈದಿಕಪ್ರಣೀತ  ತಾರತಮ್ಯದ ಸಂಸ್ಕೃತಿಯನ್ನೇ ನಾಡಸಂಸ್ಕೃತಿಯೆಂದು ಒತ್ತಿ ಹೇಳುತ್ತಾರೆ.  ಅಂಥವರು ತುಂಬಾ ಜಾಣರು. ಪ್ರಭುತ್ವ ಒಪ್ಪಿಕೊಳ್ಳುವ ಸಂಸ್ಕೃತಿಯ ದೃಷ್ಟಿಕೋನಗಳು ಜ್ಞಾನ ಕಲೆ ಆರ್ಥಿಕ ವಲಯಗಳನ್ನೆಲ್ಲಾ ಪ್ರಭಾವಿಸಿ ಅಧಿಕೃತಗೊಳಿಸುತ್ತವೆಂದು ಮತ್ತು ಅದೇ ಅಧಿಕಾರದ ಮೂಲವಾಗುತ್ತದೆಂದು  ತಿಳಿದವರು. ಹಾಗಾಗಿ ಸಂಸ್ಕೃತಿ ಎಂಬುದು ಜನಪರವಾಗಿರುವುದನ್ನು ಅವರು ಬಯಸುವುದಿಲ್ಲ.

ನಾಡಸಂಸ್ಕೃತಿಯೆಂಬ  ಕಣ್ಕಟ್ಟು: 

ಮಹಿಳಾ ದೌರ್ಜನ್ಯ- ಸಾಂದರ್ಭಿಕ ಚಿತ್ರ

ಸರ್ಕಾರ  ಬಡವರಿಗೆ  ಉಚಿತವಾಗಿ ನೀಡುವ ಅಕ್ಕಿ, ಧನಸಹಾಯಗಳನ್ನ ಕೆಲ ಮೇಲ್ಜಾತಿಯ ಮಠಾಧೀಶರು ಅಸಹನೆಯಿಂದ ಟೀಕಿಸುತ್ತಾರೆ; ಶಾಲೆಗಳಲ್ಲಿ ಬಡ ಮಕ್ಕಳ   ಪೌಷ್ಟಿಕತೆಗಾಗಿ ಮೊಟ್ಟೆ ನೀಡುವುದನ್ನು  ಇಂಥ ಮಠಾಧೀಶರು ಸಭೆ ಸೇರಿ ಉಗ್ರವಾಗಿ ವಿರೋಧಿಸುತ್ತಾರೆ. ನಾಡಿನ ಸಂಪತ್ತನ್ನು ಕೊಳ್ಳೆ ಹೊಡೆವ,  ಭೂಕಬಳಿಕೆ  ಭ್ರಷ್ಟಾಚಾರ ಕೊಲೆ ಅತ್ಯಾಚಾರಗಳ ಆರೋಪವಿರುವ ಬಲಾಢ್ಯರ  ವಿರುದ್ಧ ಎಂದೂ ಧ್ವನಿ ಎತ್ತುವುದಿಲ್ಲ; ಅವಶ್ಯವಿದ್ದಾಗ  ಅವರನ್ನು ಬೆಂಬಲಿಸುತ್ತಾರೆ. ಅಸಮಾನತೆಯನ್ನೇ ಉಸಿರಾಡುವ ಸಂಸ್ಕೃತಿಯನ್ನು ಕರ್ನಾಟಕದ ಇಂದಿನ ಆಳುವ ವರ್ಗಗಳು ಹೊತ್ತು ಮೆರೆಸುತ್ತಿವೆ ; ಶರಣರು ಸೂಫಿಗಳು ತತ್ವಪದಕಾರರು ಪ್ರತಿಪಾದಿಸುವ ಸಂಸ್ಕೃತಿ ಸಮಾಜದ ಮುಖ್ಯ ವಾಹಿನಿಗೆ ಯಾವತ್ತೂ ಬಾರದಂತೆ ನೋಡಿಕೊಳ್ಳುತ್ತಿವೆ.

ವಾಸ್ತವವೆಂದರೆ ಈ  ನಾಡಲ್ಲಿ ಹಲವಾರು ಸಂಸ್ಕೃತಿಗಳಿವೆ. ಅವೆಲ್ಲಾ ತಮ್ಮದೇ ಆದ ನಡೆ ನುಡಿ ನಂಬಿಕೆ  ಜ್ಞಾನ ಮೌಲ್ಯವ್ಯವಸ್ಥೆ ಇತ್ಯಾದಿಗಳನ್ನು ಹೊಂದಿವೆ. ಆದರೆ ಇತಿಹಾಸ ಮತ್ತು ಸಾಂಸ್ಕೃತಿಕ ಪಠ್ಯಗಳಲ್ಲಿ ಬಲಾಢ್ಯರ  ಹಿತ ಕಾಯುವ ಸಂಸ್ಕೃತಿ ಮಾತ್ರ ನಾಡಸಂಸ್ಕೃತಿಯೆಂದು ದಾಖಲಾಗಿವೆ. ಉಳಿದವು  ಮರೆಗೆ  ಸರಿಸಲ್ಪಟ್ಟಿವೆ. ಅಧಿಕೃತವಾಗಿ ನಾಡು ನುಡಿಯ ಕುರಿತು ಮಾತನಾಡ ಬೇಕಾದಾಗಲೆಲ್ಲ,  ಆಳುವ ವರ್ಗಗಳು ತಮ್ಮ ನರೇಟಿವನ್ನೇ ಎತ್ತಿ ಹಿಡಿಯುತ್ತಾ ಸಂಸ್ಕೃತಿ ವಲಯದ ಮೇಲೆ ತಮ್ಮ ಅಧಿಕಾರವನ್ನು ಭದ್ರಗೊಳಿಸಿಕೊಳ್ಳುತ್ತವೆ. ನಾಡಸಂಸ್ಕೃತಿ ಎಂಬುದು ಮೇಲ್ಜಾತಿ ಮೇಲ್ವರ್ಗಗಳು ಕಟ್ಟಿಕೊಡುವ ತಮ್ಮದೇ ನಂಬಿಕೆ ಮೌಲ್ಯಗಳು ಮತ್ತು ಲೋಕದೃಷ್ಟಿಗಳನ್ನೊಳಗೊಂಡ ಸಂಕಥನಗಳ ಜಾಲ. ಈ ಜಾಲದ  ಚೌಕಟ್ಟಿನಲ್ಲೇ ಅರ್ಥಗಳನ್ನ ವಿವರಿಸುವ ಕ್ರಮ ರೀತಿ ನೀತಿಗಳು ರೂಪುದಾಳುತ್ತವೆ. ಇದೊಂದು ಆಟ. ಆದರೆ ಇದು ಆಟವೆಂಬುದನ್ನು ಮರೆಮಾಚಿ ಪವಿತ್ರೀಕರಿಸಲಾಗುತ್ತದೆ. ಸಂಪ್ರದಾಯ ಶ್ರದ್ಧೆ ನಂಬಿಕೆಗಳ ಹೆಸರಲ್ಲಿ ಈ ಆಟ  ಪ್ರಶ್ನಾತೀತವಾಗುತ್ತದೆ. ಆಟದ ನಿಯಮಗಳನ್ನು ಮಾನ್ಯಮಾಡಿರುವ ರೀತಿಯಲ್ಲಿಯೇ ಕೆಲವರ ಸೋಲನ್ನು ನಿರ್ಣಯಿಸಲಾಗಿರುತ್ತದೆ. ಯಾಜಮಾನ್ಯ  ವರ್ಗಗಳು ತಮ್ಮ ಹಿತಾಸಕ್ತಿಗಳನ್ನು ಗಟ್ಟಿಗೊಳಿಸಿಕೊಳ್ಳುವ, ತಮ್ಮ ಶೋಷಕ ಗುಣಕ್ಕೆ ಸಮ್ಮತಿ ಪಡೆದುಕೊಳ್ಳುವ ಮಾರ್ಗವೂ ಅವರು ಮಾನ್ಯಗೊಳಿಸುವ ಸಂಸ್ಕೃತಿಯಲ್ಲಿರುತ್ತದೆ. 

ಹೀಗಾಗಿ, ಗತ ಮತ್ತು ವರ್ತಮಾನ ಎರಡರಲ್ಲೂ ಸಂಸ್ಕೃತಿಯೆಂಬುದು ನಾಡಿನ ವಿವಿಧ ಸಮುದಾಯಗಳ ನಡುವಿನ  ಸಾಮಾಜಿಕ ಆರ್ಥಿಕ ರಾಜಕೀಯ ಸಂಬಂಧಗಳ ಪ್ರತಿಬಿಂಬವಾಗಿದೆ.   ಸಂಸ್ಕೃತಿ  ಜ್ಞಾನ ಅಧಿಕಾರ ಮತ್ತು ರಾಜಕೀಯ ಪರಸ್ಪರ ಹೆಣೆದುಕೊಂಡಿರುವ  ಪರಿಕಲ್ಪನೆಗಳು. ಬ್ರಾಹ್ಮಣ್ಯ ಮತ್ತು ವೈದಿಕಶಾಹಿ ಸದ್ಯದ ಸಂಸ್ಕೃತಿಯನ್ನು ರೂಪಿಸಿರುವ ಮುಖ್ಯ ವಿಚಾರಧಾರೆ ಆದ್ದರಿಂದ, ಅದು ಸಾಮಾಜಿಕ ಆರ್ಥಿಕ ಅಸಮಾನತೆಯನ್ನು  ಸಹಜೀಕರಿಸುತ್ತದೆ.  ಇದನ್ನೇ ಸಂಸ್ಕೃತಿಯೆಂದು ಒಪ್ಪಿಕೊಂಡ  ನಾಡಿನ ಶಿಕ್ಷಣ ಅನ್ಯಾಯ ಮತ್ತು ಅವೈಚಾರಿಕತೆಗಳನ್ನು ಗುರುತಿಸುವಲ್ಲಿ ಸೋಲುತ್ತದೆ. ಇಂಥ ಸಾಂಸ್ಕೃತಿಕ  ಪ್ರತಿಮೆಗಳು ಸಂಕೇತಗಳಿಂದ ರೂಪಿತವಾದ    ಭುವನೇಶ್ವರಿಯ ಕಲ್ಪನೆಯನ್ನು ಬಾನು ಮುಷ್ತಾಕ್‌ ವಿಮರ್ಶಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ.       

ಕೇವಲ ಅಲ್ಪಸಂಖ್ಯಾತರ ಪ್ರಶ್ನೆಯಷ್ಟೇ ಅಲ್ಲ. ಬಹುತೇಕ  ದಮನಿತ ಸಮುದಾಯಗಳ ಬದುಕಿನ ಕ್ರಮಗಳನ್ನು ನಾಡಸಂಸ್ಕೃತಿ, ನಾಡಹಬ್ಬಗಳಿಂದ ಹೊರಗಿಡಲಾಗಿರುತ್ತದೆ.  ಸಂಸ್ಕೃತಿಯು ಹಿಂದಿನಿಂದ ನಡೆದುಕೊಂಡು ಬಂದ ಮತ್ತು ಆ ಕಾರಣಕ್ಕಾಗಿಯೇ ಒಪ್ಪಬೇಕಾದ ದೇವನಿಯಮವೆಂಬಂತೆ  ಒಪ್ಪಿಸಲಾಗಿದೆ. ಇದನ್ನು ನಾವು ಒಪ್ಪಬಾರದು. ಸಂಸ್ಕೃತಿಯು ನಿರಂತರವಾಗಿ ಆಗುವಿಕೆಯಲ್ಲಿರುತ್ತದೆ. ಸಂಸ್ಕೃತಿ ನಮ್ಮನ್ನು ರೂಪಿಸಿದಂತೆ ನಾವೂ ಅದನ್ನು ರೂಪಿಸುತ್ತಿರುತ್ತೇವೆ. ನಾವು ನಮ್ಮ ನಾಡಸಂಸ್ಕೃತಿಯ ನಿರ್ಮಾತೃಗಳು ಕೂಡ. ಹಾಗಾಗಿ ನಾಡ ಸಂಸ್ಕೃತಿ ಎಂಬುದು ವಿವಿಧ ಸಮುದಾಯಗಳು ತಮ್ಮ ಲೋಕದೃಷ್ಟಿಯನ್ನು  ನೆಲೆಗೊಳಿಸಲು ಸೆಣಸಾಡುವ  ಒಂದು  ಕ್ಷೇತ್ರ.   ಈ ಸೆಣಸಾಟದ ಭಾಗವಾಗಿ ಅಲಕ್ಷಿತ ಸಮುದಾಯಗಳ ಒಬ್ಬ ಪ್ರಬುದ್ಧ ಮಹಿಳೆ ತಮ್ಮಂಥವರ ಆತಂಕವನ್ನು ವ್ಯಕ್ತಪಡಿಸಿದ್ದಾರೆ.  ಈ ಆತಂಕ  ನಾಡ ಸಂಸ್ಕೃತಿ, ನಾಡಹಬ್ಬ, ನಾಡಭಾಷೆ ಎಲ್ಲರನ್ನೂ ಒಳಗೊಳ್ಳುವಂತೆ ಪರಿಷ್ಕರಿಸಿಕೊಳ್ಳುವ  ಅಗತ್ಯವನ್ನು ಒತ್ತಿ ಹೇಳುತ್ತದೆ.  ನಾಡಸಂಸ್ಕೃತಿ ಎಂಬುದು  ಇಲ್ಲಿ ಬದುಕುತ್ತಿರುವ ಎಲ್ಲರ ಅಸ್ಮಿತೆಯ ಘನತೆಯನ್ನು ಪ್ರತಿನಿಧಿಸುತ್ತಿಲ್ಲವೆಂದರೆ, ಪ್ರಜಾಪ್ರಭುತ್ವ ನೈಜವಾಗಿ  ನೆಲೆಗೊಂಡಿಲ್ಲವೆಂದರ್ಥ.      

ದೈನಂದಿನ ಬದುಕು ಮತ್ತು ಯಾಜಮಾನ್ಯದ ಸಹಜೀಕರಣ :  

ಸೆಕ್ಯುಲರ್ ಮೌಲ್ಯಗಳನ್ನು ಬಿತ್ತಬೇಕಾದ  ಶಾಲಾ ಕಾಲೇಜುಗಳು ಒಂದು ವರ್ಗದ ಸಾಂಸ್ಕೃತಿಕ ಮೌಲ್ಯ ಮತ್ತು ನಂಬಿಕೆಗಳನ್ನಷ್ಟೇ ಏಕೆ ಮುನ್ನೆಲೆಗೆ ತರುತ್ತವೆ ?  ಶಾರದಾ ಸರಸ್ವತಿ ಪೂಜೆ ಗಣೇಶನ ಹಬ್ಬ ಏನನ್ನು ಸೂಚಿಸುತ್ತವೆ? ಹಿಂದುಳಿದ ಮತ್ತು ದಲಿತ ಸಮುದಾಯಗಳ ಉತ್ಪಾದನಾ ಕಾರ್ಯಗಳ ಜೊತೆ ಸಾಂಸ್ಕೃತಿಕವಾಗಿ ಲಗತ್ತಾಗಿರುವ ದೈವಗಳನ್ನು ಎಂದಾದರೂ ಶಾಲಾ ಕಾಲೇಜುಗಳಲ್ಲಿ  ಸ್ಮರಿಸಲಾಗಿದೆಯೇ? ಸರ್ಕಾರಿ ಕಚೇರಿಗಳಲ್ಲಿ ಆಗಾಗ  ಅನಧಿಕೃತವಾಗಿ ನಡೆಯುವ ಪೂಜೆ ಪುನಸ್ಕಾರಗಳು ಯಾರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ? ಕೋರ್ಟ್‌ಗಳಲ್ಲಿ  ಆರೋಪಿ  ಭಗವದ್ಗೀತೆ  ಮುಟ್ಟಿ ಪ್ರಮಾಣ ಮಾಡಬೇಕೆಂಬ ಯಾವುದೇ ನಿಯಮವಿಲ್ಲದಿದ್ದರೂ, ಜನಪ್ರಿಯ ಸಿನಿಮಾಗಳು ಇದನ್ನು ಸತ್ಯವೆಂಬಂತೆ ತೋರಿಸಲು ಕಾರಣಗಳೇನು?  ಕೆಲ ಪ್ರತಿಷ್ಠಿತ ಖಾಸಗಿ  ಶಾಲೆಗಳಲ್ಲಿ ವಾರಕ್ಕೊಂದು ಅವಧಿ ವೈದಿಕ ಧಾರ್ಮಿಕ ಪಠ್ಯದ ಬೋಧನೆಗೂ ನಿಗದಿಯಾಗಿದೆಯಂತೆ.  ತೊಂಭತ್ತರ ದಶಕದ ನನ್ನ ಹಳ್ಳಿಯಲ್ಲಿ ಬಸವದಳ ಹೆಸರಿನ ಸಂಘಟನೆ ಸಕ್ರಿಯವಾಗಿತ್ತು . ಅಲ್ಲಿ  ಶರಣರ ವಚನಗಳ ಪಠಣ ಮತ್ತು ಚರ್ಚೆ ನಡೆಯುತ್ತಿತ್ತು. ಅದನ್ನೇ  ದೇಶವಿರೋಧಿ ಚಟುವಟಿಕೆ ಎಂಬಂತೆ  ಜಾತಿವಾದಿ ಮನಸುಗಳು ಅಪಪ್ರಚಾರ ಮಾಡುತ್ತಿದ್ದವು. ಜಾತಿವಾದಿಗಳ ಡಾಂಭಿಕತನವನ್ನು ದಿಟ್ಟವಾಗಿ ವಚನಗಳ ಮೂಲಕ ವಿಡಂಬಿಸುತ್ತಿದ್ದ ಹಿರಿಯರೊಬ್ಬರಿದ್ದರು. ಅವರ ದೊಡ್ಡ ಮೇವಿನ ಬಣವಿಗೆ ಹಬ್ಬದ ದಿನವೇ ಪಟ್ಟಭದ್ರರು ಬೆಂಕಿ ಹಚ್ಚಿಸಿದರು. ಎಪ್ಪತ್ತರ ದಶಕದಲ್ಲಿ ಬಸವಣ್ಣನನ್ನು ವಿಶ್ವಗುರು ಎಂದವರಿಗೆ ಆ ಪ್ರದೇಶದ ಮೇಲ್ಜಾತಿಗಳ ಸ್ವಾಮಿಗಳೇ ಬಹಿಷ್ಕಾರದ ಬೆದರಿಕೆ ಹಾಕಿದ್ದರೆಂದು ಹಿರಿಯರು ಹೇಳುತ್ತಾರೆ. ಈಗಲಾದರೂ ಶರಣತತ್ವಗಳು ಮುಖ್ಯಧಾರೆಯ ಧ್ವನಿಯಾಗಿ ಕಾಣಿಸುತ್ತಿವೆಯೇ? ಇಲ್ಲ.  ಇಂದಿಗೂ  ಬಹುತೇಕ ಉನ್ನತ ಶಿಕ್ಷಣದ ವೈಚಾರಿಕ ಪ್ರಧಾನವಾದ ಕಾರ್ಯಕ್ರಮಗಳು ಕೂಡ ಅಪ್ರಜ್ಞಾಪೂರ್ವಕವಾಗಿ ಮತ್ತು ವೈರುಧ್ಯವೆಂಬಂತೆ ಯಾವುದೋ ಸಂಬಂಧವೇ ಇರದ ಪ್ರಾರ್ಥನಾಗೀತೆಯ ಮೂಲಕ  ಶುರುವಾಗುತ್ತವೆ. ಯಾಕೆ ಹೀಗೆ? ಸಂಬಂಧ ಸ್ಪಷ್ಟವಾಗಿದೆ. ನಮಗಲ್ಲ; ಅವರಿಗೆ ಸ್ಪಷ್ಟವಾಗಿದೆ. ಹಾಗೆಂದೇ ಎಂಥದ್ದೇ ದೊಡ್ಡ ವಿಚಾರಗಳನ್ನೂ ಅವರು ಆಪೋಶನ ಮಾಡಬಲ್ಲರು. ಮೇಲ್ಜಾತಿ ಮತ್ತು ಮೇಲ್ವರ್ಗಗಳ ಯಾಜಮಾನ್ಯದ ಮೌಲ್ಯಗಳನ್ನು ಸ್ಥಿರೀಕರಿಸುವ ಹಬ್ಬ  ನಂಬಿಕೆ ಆಚರಣೆಗಳನ್ನು ಸಾರ್ವತ್ರಿಕವಾಗಿ ಒಪ್ಪಿತವೆಂಬತೆ ಸಾರ್ವಜನಿಕ ಆಚರಣೆಗಳೆಂಬಂತೆ ನಂಬಿಸಬಲ್ಲರು. ಶೋಷಿತರ ಪುರೋಗಾಮಿಯಾದ ಸಾಂಸ್ಕೃತಿಕ ಆಚರಣೆಗಳು ಸಾರ್ವಜನಿಕ ಕ್ಷೇತ್ರಕ್ಕೆ ಬಂದ ಕೂಡಲೇ  ಆಪೋಷನವನ್ನೂ  ಮಾಡಬಲ್ಲರು.  ಬಹುತೇಕ ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಸ್ಥಳೀಯ ರಜೆಗಳನ್ನು ನೀಡುವುದು ಬ್ರಾಹ್ಮಣ್ಯ ಮತ್ತು ಉಳಿಗಮಾನ್ಯದ ಮೌಲ್ಯಗಳನ್ನು ಬಿತ್ತುವಂತಹ ಹಬ್ಬ ಆಚರಣೆಗಳಿಗೇ ಹೊರತು ಕೆಳಜಾತಿಗಳ ಸಂಸ್ಕೃತಿ ಸ್ಮರಣಾರ್ಥವಾದ ಸಂದರ್ಭಗಳಿಗಲ್ಲ.

ಸರಸ್ವತಿ ಪೂಜೆ

ಸಾರ್ವಜನಿಕ  ಎಂಬ ಪದವೇ  ಅನುಮಾನ ಹುಟ್ಟಿಸುವಷ್ಟು ಮಟ್ಟಿಗೆ ಬಲಾಢ್ಯರ  ಆಪೋಷನಕ್ಕೆ  ಒಳಗಾಗಿದೆ.  ಈ ಮೇಲಿನ ಘಟನೆಗಳಲ್ಲಿ ಕಾಣುವ ಸಂಕೇತಗಳು – ದೇವಿಯ ಒಂದು ಚಿತ್ರಪಟ , ಪ್ರಾರ್ಥನೆಗೀತೆ, ಸ್ಥಳೀಯ ರಜೆ ಮೂಲಕ ಆಚರಿಸುವ ಹಬ್ಬ ಇತ್ಯಾದಿ – ಬಲಾಢ್ಯರ ಹಿತಕಾಯುವ ಮೌಲ್ಯಗಳನ್ನ ಸಹಜೀಕರಿಸುವ ದಾರಿಗಳಷ್ಟೆ . ಇವುಗಳ ಪುನರಾವರ್ತನೆ ಬಲಾಢ್ಯರ ಮೌಲ್ಯಗಳಿಗೆ ಸಾರ್ವಜನಿಕ ಸಮ್ಮತಿಯನ್ನು ಅಪ್ರಜ್ಞಾಪೂರ್ವಕವಾಗಿ ಗಳಿಸಿಕೊಡುತ್ತದೆ. ವೈದಿಕ ಸಂಸ್ಕೃತಿ ಭಾರತೀಯ ಬದುಕಿನಲ್ಲಿ ಇಂಥ ಪ್ರತಿ ಅವಕಾಶವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದೆ. ಆ ಮೂಲಕ ಬೇರೆಲ್ಲ ಜಾತಿ ಧರ್ಮ ಪ್ರದೇಶಗಳ ಬದುಕಿನ ಕ್ರಮಗಳನ್ನ  ಮೂಲೆಗೊತ್ತಿದೆ.  ಬಲಾಢ್ಯರ ಹಿತ ಕಾಯುವ ಮೌಲ್ಯಗಳು  ಮತ್ತು ನಂಬಿಕೆಗಳನ್ನು ಸಾರ್ವತ್ರಿಕವೆಂಬಂತೆ ಕುಟುಂಬ ಶಿಕ್ಷಣ ಇತರ ಸಾಮಾಜಿಕ ಆಚರಣೆಗಳ ಮೂಲಕ ನಾಜೂಕಾಗಿ ಹೇರಲಾಗುತ್ತದೆ.  

ಭಾಷೆ, ಬ್ರಾಹ್ಮಣ್ಯ ಮತ್ತು ಪ್ರಾದೇಶಿಕ ತಾರತಮ್ಯ :

ಕನ್ನಡತಾಯಿಯನ್ನು ಬಾನು ಮುಷ್ತಾಕ್ ಅಪಮಾನಿಸಿದ್ದಾರೆಂದು ಗೋಳಾಡುತ್ತಿರುವವರಲ್ಲಿ ಎಷ್ಟು ಜನ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ? ಹಿಂದಿ ಹೇರಿಕೆ ಮತ್ತು ಸಂಸ್ಕೃತ ಯಜಮಾನ್ಯಗಳ ಕುರಿತಾದ ಇವರ ನಿಲುವೇನು? ಹೀಗೆ ಗೋಳಾಡುತ್ತಿರುವ ಬಹುತೇಕರು ಕನ್ನಡದ ಬಹುಸಂಖ್ಯಾತರ ಬಹುತ್ವದ ಸಂಸ್ಕೃತಿಯ ಪ್ರತಿನಿಧಿಗಳೇ ಅಲ್ಲ. ಇವರಾರೂ  ಬಾಳಿನ ಭಾಗವಾಗಿ ರೂಪುಗೊಂಡ ಕನ್ನಡದ ಭಾಷೆಗೆ ಮತ್ತು ಸಂಸ್ಕೃತಿಗೆ  ಪರಿಚಿತರಾದವಲ್ಲ. ಈ ನಿಸರ್ಗದ ಭಾಗವಾಗಿ ಬಾಳನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ನಿಜಾರ್ಥದ ಭಾಷೆ ಮತ್ತು ಸಂಸ್ಕೃತಿ ಮೂಡುತ್ತದೆ. ಕನ್ನಡ ನುಡಿ ಬಳಕೆಯ ಸ್ವೀಕರಣದ ರೀತಿಯನ್ನು ಗಮನಿಸಿದರೆ ಬಡವರ ಅನಕ್ಷರಸ್ಥರ ಆದಿವಾಸಿಗಳ ದಲಿತರ ರೈತರ ನುಡಿ  ಅವಗಣನೆಗೆ ಒಳಗಾಗಿದೆ. ಹೈದರಾಬಾದ್ ಕರ್ನಾಟಕ ಅಥವಾ  ಉತ್ತರ ಕರ್ನಾಟಕದ ವಿದ್ಯಾರ್ಥಿ ವೇದಿಕೆಯ ಮೇಲೆ ಮಾತನಾಡುವಾಗ ತನ್ನ ಭಾಷಾಶೈಲಿಯ ಕಾರಣಕ್ಕಾಗಿಯೇ  ದುಗುಡಗೊಂಡಂತೆ ಕಾಣುತ್ತಾನೆ. ಕಾರಣ ಸ್ಟ್ಯಾಂಡರ್ಡ್ ಎಂದು ಒಪ್ಪಿಕೊಂಡಿರುವ ಕನ್ನಡ ನುಡಿ ಬಳಕೆಯ ಪ್ರತಿನಿಧೀಕರಣದಲ್ಲಿ ಒಂದು ನಿರ್ದಿಷ್ಟ  ವರ್ಗ ಜಾತಿ ಮತ್ತು ಪ್ರದೇಶದ ಪ್ರಾಬಲ್ಯವಿದೆ. ಪುಸ್ತಕೀಯ ಭಾಷೆ ಮತ್ತು ದೃಶ್ಯಮಾಧ್ಯಮಗಳ ಭಾಷೆಯ ಮೂಲಕ ಏಕರೂಪೀಕರಣಗೊಂಡ ಕನ್ನಡದ ನುಡಿ ಹೈದರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ ಮತ್ತು ಇತರೆ ಪ್ರಾದೇಶಿಕವೆನಿಸುವ ಸ್ಥಳೀಯ ಭಾಷೆಯನ್ನು ಪರಕೀಯಗೊಳಿಸಿದೆ. ಮಾತಿನಲ್ಲಿರುವ ವೈಚಾರಿಕತೆ ಮುಖ್ಯವಾಗುವುದಕ್ಕೆ ಬದಲಾಗಿ ಮಾತಿನ ಶೈಲಿ ಭಾವ ಆಂಗಿಕತೆ ಮುಖ್ಯವಾಗಿದೆ.  ವೈದಿಕಪ್ರಣೀತ ವೈಯಾರದ ಕನ್ನಡವನ್ನಾಡುವ ಬಹುತೇಕ  ಸುದ್ದಿ ಮಾಧ್ಯಮಗಳ ಸುದ್ದಿ ಶೂರರಿಗೆ ಕನ್ನಡ ನಾಡು ಮತ್ತು ನುಡಿ ಎರಡರ ಪೂರ್ಣ  ಪರಿಚಯವೂ ಇಲ್ಲ.  ಆದರೂ ಅಲ್ಲಿ ನೌಕರಿಗಳು ಸಿಗುವುದು ಅಂಥವರಿಗೆ ಮಾತ್ರ. ಅವರು ನಿರಂತರ ಬಿತ್ತರಿಸುವ ಸುದ್ದಿ ಕಾರ್ಯಕ್ರಮಗಳು ಅವರ ವರ್ಗ ಹಿತಾಸಕ್ತಿಗಳನ್ನು  ಕಾಯುವಂತವೇ ಇರುತ್ತವೆ. ಆದರೂ ಅವರ ಧ್ವನಿ ಇಡೀ ನಾಡಿನ ಧ್ವನಿ ಎಂಬಂತೆ ಬಿಂಬಿತವಾಗುತ್ತದೆ. ಮಾಧ್ಯಮದ ಇಂತಹ ಆಯಕಟ್ಟಿನ ಜಾಗಗಳನ್ನು ಬಳಸಿಕೊಂಡು ಕನ್ನಡ ನಾಡು ನುಡಿ ಎಂದ ತಕ್ಷಣ ಒಂದಷ್ಟು ಜನಪ್ರಿಯ ಗ್ರಹಿಕೆಗಳನ್ನ ಹರಡಿ ವಾಸ್ತವವನ್ನು ಮರೆಮಾಚಲಾಗಿದೆ.

(ಮುಂದಿನ ಭಾಗ ನಿರೀಕ್ಷಿಸಿ..)

ಡಾ. ಸಿ.ಬಿ.ಐನಳ್ಳಿ, 

ಸಹಾಯಕ ಪ್ರಾಧ್ಯಾಪಕರು,

ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ,  ಧಾರವಾಡ

ಇದನ್ನೂ ಓದಿ – ಧರ್ಮ ಮತ್ತು ಸಂಸ್ಕೃತಿಯ ನಡುವೆ ಮಹಿಳಾ ಅಸ್ಮಿತೆ-

More articles

Latest article