ಬಿಹಾರದಿಂದಲೇ ಪ್ರಧಾನಿ ಮೋದಿ ಪತನ ಆರಂಭ: ಎಐಸಿಸಿ ಅಧಿವೇಶನದಲ್ಲಿ ಮಲ್ಲಿಕಾರ್ಜುನ ಖರ್ಗೆ

Most read

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ರಾಜತಾಂತ್ರಿಕ ವೈಫಲ್ಯದಿಂದಾಗಿ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಇಂದು ಇಲ್ಲಿ ಆರಂಭವಾದ  ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆ (ಸಿಡಬ್ಲ್ಯೂಸಿ) ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಭಾರತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಇಲ್ಲಿ ಸೇರಿದ್ದೇವೆ. ನಮ್ಮ ಪ್ರಧಾನಿ ಮೋದಿ ಅವರ ಆತ್ಮೀಯ ಸ್ನೇಹಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವಿಕೆ ಮತ್ತು ಎಚ್‌–1ಬಿ ವೀಸಾ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದ್ದಾರೆ. ಮೋದಿ ಅವರು ಯಾರನ್ನು ನನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಳ್ಳುತ್ತಾರೋ ಅವರೇ ಭಾರತಕ್ಕೆ ಸಮಸ್ಯೆಗಳನ್ನು ತಂದೊಡ್ಡುತ್ತಿದ್ದಾರೆ ಎಂದರು.

ನಂತರ ಅವರು ಚುನಾವಣಾ ಆಯೋಗವನ್ನು ತರಾಟೆಗೆ ತಗೆದುಕೊಂಡರು. ಪ್ರಜಾಪ್ರಭುತ್ವದ ಮೂಲ ಉದ್ದೇಶವೇ ಪಾರದರ್ಶಕ ಚುನಾವಣೆಗಳನ್ನು ನಡೆಸುವುದೇ ಆಗಿದೆ. ಆದರೆ ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಕುರಿತು ಅನುಮಾನಗಳು ಉಂಟಾಗಿವೆ ಎಂದರು. ಇಡೀ ದೇಶಾದ್ಯಂತ ಮತ ಕಳ್ಳತನ ಕುರಿತು ಆರೋಪಗಳು ಕೇಳಿ ಬರುತ್ತಿವೆ. ಪ್ರಶ್ನಿಸಿದರೆ ನಮ್ಮಿಂದಲೇ ಅಫಿಡವಿಟ್‌ ಕೇಳಲಾಗುತ್ತಿದೆ. ಇದು ಪ್ರಶ್ನಿಸುವವರ ಬಾಯಿ ಮುಚ್ಚಿಸುವ ತಂತ್ರವಾಗಿದೆ ಎಂದರು.

ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಭ್ರಷ್ಟ ಮತ್ತು ಅಸಮರ್ಥ ಆಡಳಿತದ ಅಂತ್ಯಕ್ಕೆ ನಾಂದಿ ಹಾಡಲಿದೆ. ಎನ್ ಡಿಎ ಸರ್ಕಾರದಲ್ಲಿ ಬಿರುಕುಗಳು ಮೂಡುತ್ತಿವೆ. ಆಂತರಿಕ ಕಲಹ ಈಗಾಗಲೇ ಬಹಿರಂಗವಾಗಿದೆ. ಬಿಹಾರದ ಜನತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ, ಅಭಿವೃದ್ಧಿ ಪರ ಚಿಂತಿಸುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದ ಪರವಾಗಿ ಮತ ಚಲಾಯಿಸಲಿದ್ದಾರೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

More articles

Latest article