ನಜ್ಮಾ ನಜೀರ್, ಚಿಕ್ಕನೇರಳೆ
ಮುಸ್ಲಿಮ್ ಮಹಿಳೆಯರನ್ನು ಅಂದಿನಿಂದ ಇಂದಿನವರೆಗು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಎಷ್ಟೇ ಪ್ರಯತ್ನಿಸಿದರು, ಕುಗ್ಗಿಸಲು ಯತ್ನಿಸಿದರು, ಗಂಡಾಳ್ವಿಕೆ ಮತ್ತು ಮನುವಾದಿಗಳು ಒಟ್ಟೊಟ್ಟಿಗೆ ಕಟ್ಟಿದ ನಾಲ್ಕು ಗೋಡೆ, ಹತ್ತು ಮಕ್ಕಳು ಎಂಬ ಆಖ್ಯಾನಗಳನ್ನು ಅವರು ಪದೇ ಪದೇ ಮುರಿಯುತ್ತಲೇ ಬಂದಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳಾದ ನಾವು ಸಹಿಸಿದ ನೋವುಗಳಿಗೆ ಫಲವಾಗಿ ಸಿಕ್ಕಿದ ಬೂಕರ್, ಆಪರೇಷನ್ ಸಿಂಧೂರದ ನಾಯಕತ್ವ ನಮ್ಮೊಳಗಿನ ಶಕ್ತಿಯನ್ನು ಮತ್ತಷ್ಟು ಇಂಬುಗೊಳಿಸಿದೆ – ನಜ್ಮಾ ನಝೀರ್ ಚಿಕ್ಕನೇರಳೆ, ಹೋರಾಟಗಾರ್ತಿ.
ಕಳೆದ ತಿಂಗಳೊಂದರಿಂದ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಚರ್ಚೆಗಳು, ಮುಸ್ಲಿಂ ಮಹಿಳೆಯರ ಬಗೆಗಿನ ಭಾಷಾ ಪ್ರಯೋಗಗಳು ಎಷ್ಟರ ಮಟ್ಟಿಗೆ ಕಿರಿಕಿರಿಯುಂಟು ಮಾಡಿವೆಯೆಂದರೆ ದಿನಗಳು ಕಳೆಯುತ್ತಿವೆಯಾದರು ನಮ್ಮೊಳಗಿದ್ದೂ ನಮ್ಮವರಾಗದವರು ಬರೆದ ಸಾಲುಗಳು ಮನಸಿನಿಂದ ಮಾಸುತ್ತಲೆ ಇಲ್ಲ. ಕೆಲವರು ನುಡಿದ ಪ್ರತಿಯೊಂದು ಪದವು ನನ್ನ ಕಿವಿಯೊಳಗೆ ಪದೇ-ಪದೇ ಅಪ್ಪಳಿಸುತ್ತಲೆ ಇದೆ. ಸ್ಕ್ರಾಲ್ ಮಾಡುತ್ತ ಸಿಕ್ಕ ಅದೊಂದು ಬರಹ ಸ್ವೈಪ್ ಮಾಡಿ ಅಳಿಸಿ ಹಾಕುವಷ್ಟು ಸುಲಭದ್ದಾಗಿರಲಿಲ್ಲ !
ಮುಸ್ಲಿಂ ಮಹಿಳೆಯರ ಸಾಧನೆ ನಗಣ್ಯ ಎಂಬಂತೆ ಠರಾವು ಹೊರಡಿಸಿದ್ದ ಮಾತುಗಳು ಪದೇ ಪದೇ ಕಿವಿಗೆ ಅಪ್ಪಳಿಸಿದಾಗೆಲ್ಲ ಚಿಂತನಾ ಲಹರಿ ನನ್ನನ್ನು ಎಲ್ಲೆಲ್ಲಿಗೋ ಕೊಂಡೊಯ್ಯುತ್ತದೆ. ಪ್ರತಿ ಬಾರಿ ಈ ಅಪ್ಪಳಿಸುವಿಕೆಯ ಸದ್ದು ಹೆಚ್ಚಾಗುತ್ತಲೇ ಹೋಗುತ್ತಿದೆಯೇ ವಿನಃ ಕಡಿಮೆಯಾಗುವ ಯಾವ ಇರಾದೆಯು, ಅಲ್ಪ ಕರುಣೆಯು ಆ ಪದಗಳು ನನ್ನ ಮೇಲೆ ತೋರುತ್ತಲೆ ಇಲ್ಲ.
ಕರುಣೆ ! ಕರುಣೆ ಯಾಕಾದರು, ಯಾರಾದರು ತೋರುತ್ತಾರೆ ಅಥವಾ ತೋರಬೇಕು ನಮ್ಮ ಮೇಲೆ? ನಾವು ಯಾರಿಂದಲೋ, ಯಾವುದರಿಂದಲೋ ಕರುಣೆಯ ನಿರೀಕ್ಷೆಯನ್ನು ಯಾಕಾದರೂ ಮಾಡುತ್ತಿದ್ದೇವೆ?.
ಅಮ್ಮ ಹೇಳುತ್ತಿದ್ದಳು ನೀನು ಯಾವುದಾದರೊಂದು ವಿಷಯದಿಂದ ಬಸವಳಿದು ಸಾಕಾದ ಹೊತ್ತಲ್ಲಷ್ಟೆ, ಎಷ್ಟೆ ಪ್ರಯತ್ನ ಪಟ್ಟರೂ, ನೂರರ ಜಾಗದಲಿ ಸಾವಿರದ ಪ್ರಯತ್ನ ಮಾಡಿದರೂ ಜಗತ್ತನ್ನು ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಗಳಿಗೆ ಬಂದೊದಗಿದಾಗ ಮಾತ್ರ, ಬೆಟ್ಟದ ತುತ್ತ ತುದಿಯಿಂದ ಇನ್ನೇನು ಸದ್ದಿಲ್ಲದೆ ಬಿದ್ದೇ ಬಿಟ್ಟೆ ಎನ್ನುವಾಗ ಮಾತ್ರ, ನೀನು ನಿನ್ನನ್ನೆ ಕಾಪಾಡಿಕೊಳ್ಳಲು ‘ಕರುಣೆ’ಯೆಂಬ ಊರುಗೋಲನ್ನು ಹುಡುಕುತ್ತಿರುತ್ತೀಯ. ಅದಕ್ಕಾಗಿಯೇ ಅಮ್ಮ ಸಣ್ಣ-ಪುಟ್ಟ ನೋವುಗಳಿಗೆ ಆಕೆಯೇ ಖುದ್ದು ಬಂದು ಮುಲಾಮು ಸವರಲೇ ಇಲ್ಲ.
ಅಂದಹಾಗೆ ಮುಸ್ಲಿಂ ಮಹಿಳೆಯರಾದ ನಮಗೆ ನೋವು ಹೊಸದೆ?
ಊಹುಂ, ನೋವು ಮುಸ್ಲಿಂ ಹೆಣ್ಣುಗಳ ಆಪ್ತ ಸಂಗಾತಿ. ಬೇರೆಲ್ಲ ಮಹಿಳೆಯರಿಗಿಂತ ನೋವು, ಅವಮಾನ, ಸಂಕಟಗಳನ್ನು ಅನುಭವಿಸುವುದರಲ್ಲಿ ನಮ್ಮದೇ ಮೊದಲ ಸ್ಥಾನ.
ಭಾರತೀಯ ಮುಸ್ಲಿಂ ಮಹಿಳೆಯರಾದ ನಾವು ಜನರು ಊಹಿಸುವುದಕ್ಕಿಂತ ಹೆಚ್ಚಿನ ಹೊರೆಯನ್ನು ಹೊತ್ತಿದ್ದೇವೆ. ನಾವೆ ಕಟ್ಟಿದ ಈ ನೆಲದ ಗೂಡಲ್ಲಿ “ಇತರರು” ಎಂಬ ಪೂರ್ವಾಗ್ರಹದ ಹೆಚ್ಚುವರಿ ಭಾರವನ್ನು ನಾವು ಹೆಗಲ ಮೇಲೆ, ಕೆಲವೊಮ್ಮೆ ಕಂಕುಳಲ್ಲಿ, ಮತ್ತೊಮ್ಮೆ ಮಡಿಲಲ್ಲಿ ಹೊತ್ತು-ಹೊತ್ತು ನಿತ್ರಾಣ ಗೊಳ್ಳುತ್ತಿದ್ದೇವೆ.
2002 ರ ಗುಜರಾತ್ ಹತ್ಯಾಕಾಂಡದ ಸಂದರ್ಭ ಸಾವಿರಕ್ಕೂ ಹೆಚ್ಚು ಮುಸ್ಲಿಮರ ಹತ್ಯೆಯಾಯಿತು, ಮಹಿಳೆಯರು ಮತ್ತು ಎಳೆಯ ಹುಡುಗಿಯರನ್ನು ಎಳೆದೆಳೆದು ತಂದು ಅತ್ಯಾಚಾರ ಮಾಡಿದರು, ಅಂಗವಿಕಲಗೊಳಿಸಿದರು, ಕೆಲವರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು.
ತನ್ನ ಕುಟುಂಬವನ್ನು ಕ್ರೂರವಾಗಿ ಕೊಲ್ಲುವುದನ್ನು ನೋಡುತ್ತಾ ನಿಂತ ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಹೆಂಗಸನ್ನು ಅತ್ಯಾಚಾರ ಮಾಡಲಾಯಿತು, ಅತ್ಯಾಚಾರಿಗಳಿಗೆ ಶಿಕ್ಷೆಯಾಯಿತಾದರು 2022 ರಲ್ಲಿ ಅವಳನ್ನು ಅತ್ಯಾಚಾರ ಮಾಡಿದವರು ಮುಕ್ತವಾಗಿ ಓಡಾಡಲು ಈ ವ್ಯವಸ್ಥೆ ಅವಕಾಶ ಮಾಡಿಕೊಟ್ಟಿತು. ಅತ್ಯಾಚಾರಿಗಳಿಗೆ ಹೂಹಾಸಿ ಸ್ವಾಗತ ಕೋರಿತು!
ಮುಸ್ಲಿಂ ಹೆಣ್ಣು ಮಕ್ಕಳ ಘನತೆಯನ್ನು ನಾಶ ಪಡಿಸುವುದಕ್ಕಾಗಿಯೇ ಲೈಂಗಿಕ ಹಿಂಸೆಗೊಳಪಡಿಸುವ ಸ್ಪಷ್ಟ ಉದ್ದೇಶದೊಂದಿಗೆಯೆ 2013 ರ ಮುಜಫರ್‌ನಗರ ಗಲಭೆ ನಡೆಯಿತು!
ಕಾಶ್ಮೀರದಲ್ಲಿ ಆರ್ಟಿಕಲ್ 370 ಜಾರಿಯಾದರೆ ಕಾಶ್ಮೀರಿ ಸೇಬಿನೊಂದಿಗೆ ಸೇಬಿನಂತ ಮುಸ್ಲಿಂ ಹೆಣ್ಣು ಮಕ್ಕಳು ನಮಗೆ ಉಚಿತವಾಗಿ ಸಿಗಲಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಮುಲಾಜಿಲ್ಲದೆ ನಮ್ಮನ್ನು ಭೋಗದ ವಸ್ತುವಾಗಿ ಕಾಣಲಾಯಿತು!
ಬುಲ್ಲಿ ಬಾಯ್ ಆಪ್ ನಲ್ಲಿ ನನ್ನಂತಹ ನೂರಾರು ಮುಸ್ಲಿಂ ಸಾಮಾಜಿಕ ಕಾರ್ಯಕರ್ತೆಯರ ಫೋಟೋಗಳನ್ನು ಹಾಕಿ ನಮ್ಮನ್ನೆ ಮಾರಾಟಕ್ಕಿಟ್ಟರು!
ನಮ್ಮ ನಂಬಿಕೆ, ನಮ್ರತೆ, ಸಾಂಸ್ಕೃತಿಕತೆಯನ್ನು ರಾಷ್ಟ್ರೀಯ ಚರ್ಚೆಯನ್ನಾಗಿ ಪರಿವರ್ತಿಸಿ ನಮ್ಮ ತಲೆ ಮೇಲಿನ ಈ ಬಟ್ಟೆ ಹಿಜಾಬಿನ ಹಕ್ಕನ್ನು ಕಿತ್ತುಕೊಳ್ಳಲು ಕೋರ್ಟಿನ ಮೆಟ್ಟಿಲೇರಿದರು!
ಇಂದಿಗೂ ಗುಲ್ಫಿಶಾ ಫಾತಿಮಾ ತರಹದ ಹೆಣ್ಣುಮಕ್ಕಳು NRC, CAA ವಿರೋಧಿಸಿ ಸಮುದಾಯದ ಹಕ್ಕಿನ ಪರವಾಗಿ ಸಾಂವಿಧಾನಿಕವಾಗಿ ಧ್ವನಿ ಎತ್ತಿದ್ದಕ್ಕಾಗಿ ಇನ್ನೂ ಜೈಲಿನಲ್ಲಿದ್ದಾರೆ!
ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ನೆನ್ನೆ ಮೊನ್ನೆಯಷ್ಟೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಕೋರ್ಟ್ ಮೆಟ್ಟಿಲೇರುವವರೆಗು ನಮ್ಮ ಸ್ವಾಭಿಮಾನ, ದೇಶಾಭಿಮಾನ,ನಾಡಾಭಿಮಾನ, ಭಾಷಾಭಿಮಾನಗಳನ್ನು ಅನುಮಾನಿಸಿ ಪದೇ ಪದೇ ಕಟಕಟೆಯಲ್ಲಿ ನಿಲ್ಲಿಸುತ್ತಲೆ ಇದ್ದಾರೆ!
ಹೇಳುತ್ತಾ ಹೋದರೆ ನಮ್ಮನ್ನು ಒಳಗು-ಹೊರಗು ಇತರರನ್ನಾಗಿಸಿ ನೋಡಿ ಹಿಂಸಿಸಿದ ಇಂತಹ ನಿದರ್ಶನಗಳು ಹೆಜ್ಜೆಗೊಂದು ಸಿಗುತ್ತವೆ.
ಆದಾಗ್ಯೂ, ನಾವು ಪ್ರತಿಕೂಲ ಪರಿಸ್ಥಿತಿಯ ಮುಂದೆ ಎಂದಿಗೂ ಹಿಂಜರಿಯುವ ಅಥವಾ ಮಣಿಯುವ ಮನಸ್ಥಿತಿಯನ್ನು ಹೊಂದಿದವರೆ ಅಲ್ಲ. ಅನೇಕ ಸಂದರ್ಭಗಳಲ್ಲಿ ನಾವೆಷ್ಟರ ಮಟ್ಟಿಗೆ ಬಲಿಪಶುಗಳಾದೆವೋ ಅದಕ್ಕಿಂತ ಹೆಚ್ಚಾಗಿ ಯಾರಿಗು ಮಣಿಯದ ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಂಡಿದ್ದೇವೆ. ಈ ನೀತಿಯು ಇಸ್ಲಾಮಿಕ್ ಇತಿಹಾಸದಲ್ಲಿ ಬೇರೂರಿದ್ದರೂ, ಇದು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಆಳವಾದ ಅಭಿವ್ಯಕ್ತಿಯನ್ನು ಕಂಡುಕೊಂಡಿತು, ಅಲ್ಲಿ ಮುಸ್ಲಿಂ ಮಹಿಳೆಯರು ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ನಂಬಿಕೆಚಾಲಿತ ನ್ಯಾಯದ ತತ್ವಗಳನ್ನು ರಾಷ್ಟ್ರೀಯತಾವಾದಿ ಉತ್ಸಾಹದೊಂದಿಗೆ ಬೆರೆಸಿದರು. ಅವರ ಕೊಡುಗೆಗಳು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಮಾತ್ರವಲ್ಲದೆ ಸಮಾಜದೊಳಗಿನ ಪಿತೃಪ್ರಭುತ್ವದ ರೂಢಿಗಳನ್ನು ಸಹ ಪ್ರಶ್ನಿಸಿದ್ದವು, ಸ್ವಾತಂತ್ರ್ಯ ಹೋರಾಟದಲ್ಲಿ ಲಿಂಗ ಸಮಾನತೆಗೆ ದಾರಿ ಮಾಡಿಕೊಟ್ಟವು.
ಈ ಹೋರಾಟದ ಮನೋಭಾವದ ಮೊದಲ ತಂತುಗಳು ಆರಂಭಿಕ ಇಸ್ಲಾಮಿಕ್ ವ್ಯಕ್ತಿಗಳಲ್ಲಿತ್ತು ಅವರು ತೋರಿದ ಧೈರ್ಯ ಮತ್ತು ಸ್ವತಂತ್ರ ಚಿಂತನೆ ನಂತರದ ಪೀಳಿಗೆಗೆ ಅಡಿಪಾಯದ ಮಾದರಿಯನ್ನು ಒದಗಿಸಿಕೊಟ್ಟಿತು. ಅಂದಿನ ಕಾಲದ ಖ್ಯಾತ ಉದ್ಯಮಿ ಮತ್ತು ಇಸ್ಲಾಂಗೆ ಮತಾಂತರಗೊಂಡ ಮೊದಲಿಗರಲ್ಲೊಬ್ಬರಾದ ಖದೀಜಾರವರು ಪ್ರವಾದಿ ಮುಹಮ್ಮದರಿಗೆ ಅಚಲ ಬೆಂಬಲವನ್ನು ನೀಡಿದರು. ಆರ್ಥಿಕ ಸ್ವಾತಂತ್ರ್ಯ ಮತ್ತು ನೈತಿಕ ಧೈರ್ಯವನ್ನು ಸಾಕಾರಗೊಳಿಸಿದರು. ವಿದ್ವಾಂಸ ಮತ್ತು ಮಿಲಿಟರಿ ನಾಯಕಿ ಆಯಿಷಾ ಯುದ್ಧಗಳಲ್ಲಿ ಭಾಗವಹಿಸಿದರು ಮತ್ತು ಇಸ್ಲಾಮಿಕ್ ನ್ಯಾಯಶಾಸ್ತ್ರವನ್ನು ರೂಪಿಸುವ ಅಡಿಗಲ್ಲನ್ನು ಹಾಕಿದರು.
ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ, ಮುಸ್ಲಿಂ ಮಹಿಳೆಯರು ಪ್ರತಿರೋಧದ ಪ್ರಮುಖ ವಾಸ್ತುಶಿಲ್ಪಿಗಳಾಗಿ ಹೊರಹೊಮ್ಮಿದರು, ಆಗಾಗ್ಗೆ ಪ್ರತಿಭಟನೆಗಳು, ರಾಜಕೀಯ ಸಜ್ಜುಗೊಳಿಸುವಿಕೆ ಮತ್ತು ಸಶಸ್ತ್ರ ದಂಗೆಗಳ ಮುಂಚೂಣಿಯಲ್ಲಿದ್ದರು.
ಅವಧ್‌ನ ರಾಣಿ ಬೇಗಂ ಹಜರತ್ ಮಹಲ್, 1857 ರ ದಂಗೆಯ ಸಮಯದಲ್ಲಿ ಪ್ರತಿಭಟನೆಯ ಅತ್ಯುತ್ತಮ ಸಂಕೇತವಾಗಿದ್ದರು. ಬ್ರಿಟಿಷರು ತನ್ನ ರಾಜ್ಯವನ್ನು ವಶಪಡಿಸಿಕೊಂಡ ನಂತರ ಸಾಮಾನ್ಯಳಂತೆ ವೇಷ ಧರಿಸಿ, ವೈವಿಧ್ಯಮಯ ಹಿನ್ನೆಲೆಗಳಿಂದ ಬಂದ ಸೈನ್ಯವನ್ನು ಒಟ್ಟುಗೂಡಿಸಿ, ತನ್ನ ಮಗ ಬಿರ್ಜಿಸ್ ಖದರನನ್ನು ಆಡಳಿತಗಾರನೆಂದು ಘೋಷಿಸಿ, ವಸಾಹತುಶಾಹಿ ಪಡೆಗಳ ವಿರುದ್ಧ ಗೆರಿಲ್ಲಾ ಯುದ್ಧವನ್ನು ನಡೆಸಿದ ಅವರ ನಾಯಕತ್ವವು ಲಕ್ನೋವನ್ನು ದಂಗೆಯ ಭದ್ರಕೋಟೆಯನ್ನಾಗಿ ಪರಿವರ್ತಿಸಿತು ಮತ್ತು ಸೋಲಿನ ನಂತರವೂ ಗಡಿಪಾರು ನಿಯಮಗಳನ್ನು ನಿರಾಕರಿಸಿ, ತನ್ನ ಪ್ರತಿರೋಧವನ್ನು ಮುಂದುವರಿಸಲು ನೇಪಾಳಕ್ಕೆ ಪಲಾಯನ ಮಾಡಿದರು. ಹಜ಼ರತ್ ಮಹಲ್ ಅವರ ನಡೆ ಮುಸ್ಲಿಂ ಹೆಣ್ಣು ಮಕ್ಕಳ ದೇಶ ಪ್ರೇಮಕ್ಕೆ ಹಿಡಿದ ಕೈಗನ್ನಡಿ ಮತ್ತು ಈ ಹೊತ್ತಿನ ರಾಜಕೀಯ ಪ್ರಜ್ಞೆಗಳಿಗೆ ಸ್ಫೂರ್ತಿ ತುಂಬಿದರೆ 20 ನೇ ಶತಮಾನದ ಆರಂಭದಲ್ಲಿ ಚಳುವಳಿಗಳು ವಿಕಸನಗೊಂಡ ಸಂದರ್ಭದಲ್ಲಿ ರಾಜಕೀಯದಲ್ಲಿ ಸಾರ್ವಜನಿಕವಾಗಿ ತೊಡಗಿಸಿಕೊಂಡ ಮೊದಲ ಮುಸ್ಲಿಂ ಮಹಿಳೆಯರಲ್ಲಿ ಒಬ್ಬರಾಗಿದ್ದ ಪ್ರೀತಿಯಿಂದ ಬಿ ಅಮ್ಮ ಎಂದು ಕರೆಯಲ್ಪಡುವ ಅಬಾದಿ ಬಾನೋ ಬೇಗಂ ಅವರಂತಹ ವ್ಯಕ್ತಿಗಳು ನೆಲ ಪರವಾದ ಹೋರಾಟಗಳನ್ನು ಕಟ್ಟಲು ಆಶಾದಾಯಕ ಮನಸ್ಥಿತಿಯನ್ನು ತುಂಬಿದವರು.
1850 ರ ದಶಕದಲ್ಲಿ ಜನಿಸಿದ ಬಿ ಅಮ್ಮ, ಖಿಲಾಫತ್ ಮತ್ತು ಅಸಹಕಾರ ಚಳುವಳಿಗಳ ಸಮಯದಲ್ಲಿ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಾ, ಅವರು ಮುಸ್ಲಿಮರನ್ನು ಗಾಂಧಿಯವರ ಅಡಿಯಲ್ಲಿ ಹಿಂದೂಗಳೊಂದಿಗೆ ಒಂದಾಗುವಂತೆ ಪ್ರೋತ್ಸಾಹಿಸಿದರು. ಬ್ರಿಟಿಷ್ ಸರಕುಗಳ ಬಹಿಷ್ಕಾರಗಳನ್ನು ಒತ್ತಿ ಹೇಳಿದರು. 1921 ರಲ್ಲಿ, ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಾದ ಮೌಲಾನಾ ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿಯವರ ತಾಯಿಯಾದ ಅಮ್ಮಾ ಬೀರವರು ತಮ್ಮ ಮಕ್ಕಳು ಜೈಲಿನಲ್ಲಿದ್ದ ಸಂದರ್ಭದಲ್ಲಿಯು ಖಿಲಾಫತ್ ಸಮ್ಮೇಳನದಲ್ಲಿ ರೋಮಾಂಚಕಾರಿ ಭಾಷಣ ಮಾಡಿದರು. ಸಾವಿರಾರು ಜನರನ್ನು ಸಜ್ಜುಗೊಳಿಸಿದರು ಮತ್ತು ಗಾಂಧಿಯವರಿಂದಲೇ ಪ್ರಶಂಸೆಗೆ ಪಾತ್ರರಾದರು. ಬಿ ಅಮ್ಮಾ ಅವರ ಕ್ರಿಯಾಶೀಲತೆಯು ಇಸ್ಲಾಮಿಕ್ ಮೌಲ್ಯಗಳು ಭಾರತೀಯ ರಾಷ್ಟ್ರೀಯತೆಯೊಂದಿಗೆ ಹೇಗೆ ಒಟ್ಟೊಟ್ಟಾಗಿ ನಿಲ್ಲುತ್ತವೆ ಎಂದು ಎತ್ತಿ ತೋರಿಸಿತು. ಮುಸುಕು ಧರಿಸಿದ ಮಹಿಳೆಯರ ಧ್ವನಿಯು ಕ್ರಾಂತಿ ಮಾಡಬಲ್ಲದ್ದು ಎನ್ನುವುದಕ್ಕೆ ಸಾಕ್ಷಿಯೇ ಬೀ ಅಮ್ಮಾ.
ಹೈದರಾಬಾದ್‌ನ ಗಾಂಧಿವಾದಿ ಬೀಬಿ ಅಮ್ತುಸ್ ಸಲಾಮ್ 1930 ರಲ್ಲಿ ಉಪ್ಪಿನ ಸತ್ಯಾಗ್ರಹ ಸೇರಿದರು. ಬಂಧನಕ್ಕೊಳಗಾದರೂ ಅವರ ದೇಶಪ್ರೇಮ ಕುಗ್ಗಲೆ ಇಲ್ಲ. 1942 ರ ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ, ಕೋಮು ವಿಭಜನೆಗಳ ವಿರುದ್ಧ ಪ್ರತಿಭಟಿಸಲು, ಹಿಂದೂ-ಮುಸ್ಲಿಂ ಐಕ್ಯತೆಯನ್ನು ಪ್ರತಿಪಾದಿಸಲು 21 ದಿನಗಳ ಕಾಲ ಜೈಲಿನಲ್ಲಿ ಉಪವಾಸ ಮಾಡಿದರು. ಸಲಾಂ ಮಹಿಳೆಯರ ಉನ್ನತಿಯತ್ತ ಗಮನ ಹರಿಸಿದರು, ಶಾಲೆಗಳನ್ನು ಸ್ಥಾಪಿಸಿದರು ಮತ್ತು ಖಾದಿಯನ್ನು ಆರ್ಥಿಕ ಸ್ವಾತಂತ್ರ್ಯದ ಸಂಕೇತವಾಗಿ ಪ್ರಚಾರ ಮಾಡಿದರು. ವಿಭಜನೆಯ ನಂತರ ನಿರಾಶ್ರಿತರ ಶಿಬಿರಗಳಲ್ಲಿ ಅವರ ಪ್ರಯತ್ನಗಳು ಅವ್ಯವಸ್ಥೆಯ ನಡುವೆಯೂ ಮಾನವೀಯತೆಯ ಕಡೆಗಿನ ಅವರ ಬದ್ಧತೆಯನ್ನು ಒತ್ತಿ ಹೇಳುತ್ತವೆ. ಇದು ಅವರನ್ನು ನಂಬಿಕೆ ಆಧಾರಿತ ಸೇವೆ ಮತ್ತು ರಾಷ್ಟ್ರೀಯ ಪುನರ್ನಿರ್ಮಾಣದ ನಡುವಿನ ಸೇತುವೆಯನ್ನಾಗಿ ಮಾಡಿತು.
ಇವು ಕೆಲ ಉದಾಹರಣೆಗಳಷ್ಟೆ. ಇಂತಹ ಸಾವಿರಾರು ಸಮಾಜ ಸುಧಾರಕಿಯರ, ಹೋರಾಟಗಾರ್ತಿಯರ ಇತಿಹಾಸವಿದ್ದರು ಮುಸ್ಲಿಂ ಹೆಣ್ಣುಗಳ ಕುರಿತಾದ ಪೂರ್ವಾಗ್ರಹ ಇಪ್ಪತ್ತೊಂದನೇ ಶತಮಾನದಲ್ಲಿಯು ಇನ್ನೂ ಆಳವಾಗಿ ಬೇರೂರಿರುವುದು ಆತಂಕಕಾರಿ ಬೆಳವಣಿಗೆ. ಈ ಪೂರ್ವಾಗ್ರಹ ಮತ್ತು ಪುರುಷ ಪ್ರಾಧಾನ್ಯ ವ್ಯವಸ್ಥೆ ಮುಸ್ಲಿಂ ಹೆಣ್ಣುಗಳ ಪ್ರತಿರೋಧದ ಇತಿಹಾಸಕ್ಕೆ ಮಾನ್ಯತೆ ನೀಡದಿದ್ದದ್ದು ‘ಇತರರು’ ಎಂದು ಒಳಗು ಹೊರಗು ನೋಡಲ್ಪಡುವ ವಾರೆನೋಟಕ್ಕೆ ಪ್ರಮುಖ ಕಾರಣವೆಂದರು ತಪ್ಪಾಗಲಾರದು.
ಆದರೆ ಮುಸ್ಲಿಮ್ ಮಹಿಳೆಯರನ್ನು ಅಂದಿನಿಂದ ಇಂದಿನವರೆಗು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಎಷ್ಟೆ ಪ್ರಯತ್ನಿಸಿದರು, ಕುಗ್ಗಿಸಲು ಯತ್ನಿಸಿದರು, ಗಂಡಾಳ್ವಿಕೆ ಮತ್ತು ಮನುವಾದಿಗಳು ಒಟ್ಟೊಟ್ಟಿಗೆ ಕಟ್ಟಿದ ನಾಲ್ಕು ಗೋಡೆ, ಹತ್ತು ಮಕ್ಕಳು ಎಂಬ ಆಖ್ಯಾನಗಳನ್ನು ಪದೇ ಪದೇ ಮುರಿಯುತ್ತಲೇ ಬಂದಿದ್ದಾರೆ. “ನಾವು ನಿಮ್ಮನ್ನು ಭಯ, ಹಸಿವು, ಆಸ್ತಿಯ ನಷ್ಟ, ಜೀವನ ಮತ್ತು ಫಲಗಳಿಂದ ಪರೀಕ್ಷಿಸುತ್ತೇವೆ. ಆದರೆ ತಾಳ್ಮೆಯಿಂದಿರುವವರಿಗೆ ಶುಭ ಸುದ್ದಿ ಕೊಡುತ್ತೇವೆ” ಎಂದು ಖುರಾನಿನಲ್ಲಿ ಹೇಳಿರುವಂತೆ ಮುಸ್ಲಿಂ ಹೆಣ್ಣು ಮಕ್ಕಳಾದ ನಾವು ಸಹಿಸಿದ ನೋವುಗಳಿಗೆ ಫಲವಾಗಿ ಬೂಕರ್, ಆಪರೇಷನ್ ಸಿಂಧೂರದ ನಾಯಕತ್ವ ನಮ್ಮೊಳಗಿನ ಶಕ್ತಿಯನ್ನು ಮತ್ತಷ್ಟು ಇಂಬುಗೊಳಿಸಿದೆ.
ನಮ್ಮನ್ನು ಮಣಿಸಲೆಂದೆ ಹೊಸ ಹೊಸ ಕಾಯ್ದೆ ಕಾನೂನು ರೂಪಿಸಿ ನಮ್ಮನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಆಳುವ ವರ್ಗ ಒಂದೆಡೆಯಿಂದಾದರೆ , ಇನ್ನೊಂದೆಡೆ ಮುಸ್ಲಿಂ ವಿರೋಧಿ ಮನಸ್ಥಿತಿಗಳು, ಮತ್ತೊಂದೆಡೆ ನಮ್ಮೊಳಗಿನ ಮಹಿಳಾ ವಿರೋಧಿ ಆಲೋಚನೆಗಳು ಎಲ್ಲಾ ಬಾಣಗಳು ಒಮ್ಮೆಲೆ ನಮ್ಮ ಮೇಲೆರಗಿ ತೀಕ್ಷ್ಣವಾಗಿ ತಿವಿಯುತ್ತಿರುವ ಈ ಹೊತ್ತಿನಲ್ಲಿ ಕರುಣೆಯನ್ನು ನಿರೀಕ್ಷಿಸಿದರೆ ಕುಗ್ಗಿ ಹೋಗುತ್ತೇವೆ. ಯಾರಿಂದಲೂ, ಯಾವುದರಿಂದಲೂ ಏನನ್ನೂ ನಿರೀಕ್ಷಿಸದೆ ಮುಳ್ಳುಗಳ ಹಾದಿಯನ್ನು ದಾಟಿ ನಡೆಯಬೇಕಿದೆ. ಲಂಕೇಶರು ಹೇಳಿದಂತೆ “ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು”.
ನಜ್ಮಾ ನಜೀರ್, ಚಿಕ್ಕನೇರಳೆ
ಹೋರಾಟಗಾರ್ತಿ, ಕವಯಿತ್ರಿ. ರಾಜಕಾರಣಿ.
ಇದನ್ನೂ ಓದಿ- ಫಾತಿಮಾ ಶೇಖ್ | ದೇಶ ಮರೆಯಬಾರದ ಅನರ್ಘ್ಯ ರತ್ನ