ಬಸವಣ್ಣನವರ ವಚನ ಸಂಸ್ಕೃತಿಯ ಮೂಲ ಆಶಯವಾಗಲಿ, ಬಾಬಾ ಸಾಹೇಬರ ಸಂವಿಧಾನಾತ್ಮಕ ಉದ್ದೇಶಗಳಾಗಲಿ, ಈ ಜಾತಿ ಜನಗಣತಿಯ ಫಲಿತಾಂಶವಾಗಿ ಹೊರಹೊಮ್ಮುತ್ತದೆ ಎಂದು ಭಾವಿಸಲು ಸಾಧ್ಯವಾಗುತ್ತಿಲ್ಲ. ಜಾತಿ, ಉಪಜಾತಿ, ಕುಲ ಗೋತ್ರಗಳು ಹೇಗೆ ಸಮಾಜದ ಮುಖ್ಯವಾಹಿನಿಯ ನಾಯಕರುಗಳಿಂದ ಹೊರಬರುತ್ತಿದೆ ಎಂದರೆ ಅವರಾಡುವ ಜಾತಿ ಶ್ರೇಷ್ಠತೆಯ, ತಮ್ಮ ಸಮುದಾಯ ಶ್ರೇಷ್ಠತೆಯ ಪ್ರತಿ ಮಾತು ಬಸವಣ್ಣ ಮತ್ತು ಅಂಬೇಡ್ಕರ್ ಅವರ ಹೃದಯಕ್ಕೆ, ಬೆನ್ನಿಗೆ ಇರಿದಂತೆ ಭಾಸವಾಗುತ್ತಿದೆ – ವಿವೇಕಾನಂದ ಎಚ್ ಕೆ
ಜಾತಿ ಆಧಾರಿತ ಮರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಜನಗಣತಿಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಸಮಾಜದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ ಒಂದು ರೀತಿಯ ಆತಂಕ, ಉದ್ವೇಗ, ಕುತೂಹಲ, ಅಸಹನೆ, ತಲ್ಲಣಗಳನ್ನು ಅದು ಸೃಷ್ಟಿಸಿದೆ. ಮುಖ್ಯವಾಗಿ ಒಂದಷ್ಟು ಜಾತಿಗಳ ಜನನಾಯಕರಿಗೆ, ರಾಜಕೀಯ ಹಿತಾಸಕ್ತಿ ಹೊಂದಿರುವವರಿಗೆ ಇದೊಂದು ಬಹುದೊಡ್ಡ ಸವಾಲನ್ನು ಒಡ್ಡಿದೆ ಎಂಬ ರೀತಿಯ ಕ್ರಿಯೆ ಪ್ರತಿಕ್ರಿಯೆಗಳು ಮೂಡಿಬರುತ್ತಿವೆ.
ಸಾಮಾಜಿಕ ನ್ಯಾಯಕ್ಕಾಗಿ ಆರ್ಥಿಕ ಮತ್ತು ಶೈಕ್ಷಣಿಕ ಸಮತೋಲನಕ್ಕಾಗಿ ಈ ಮರು ಜಾತಿ ಗಣತಿಯನ್ನು ಮಾಡಲಾಗುತ್ತಿದೆ ಎಂಬುದು ಮುಖ್ಯಮಂತ್ರಿಗಳ ವಿವರಣೆ. ಹಿಂದೆ ನಡೆದ ಕಾಂತರಾಜು ವರದಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದವು, ಅದು ಅವೈಜ್ಞಾನಿಕವಾಗಿತ್ತು ಎಂದು ಕೆಲವು ಪ್ರಬಲ ವರ್ಗಗಳ ಟೀಕೆಗೆ, ಆರೋಪಗಳಿಗೆ, ಆಕ್ರೋಶಗಳಿಗೆ ಮಣಿದ ದೆಹಲಿಯ ಹೈಕಮಾಂಡ್ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಪೂರ್ವಕವಾಗಿ ಮರುಗಣತಿ ಮಾಡಲು ಸೂಚನೆ ನೀಡಿತು. ಆ ಒತ್ತಡದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ ಎಂದೂ ಹೇಳಲಾಗುತ್ತದೆ. ಏನೇ ಆಗಲಿ ಶ್ರೀ ಮಧುಸೂದನ ನಾಯಕ್ ನೇತೃತ್ವದಲ್ಲಿ ಮರು ಗಣತಿ ಪ್ರಾರಂಭವಾಗುತ್ತಿದೆ.
ಕೆಲ ಜಾತಿ ನಾಯಕರ ಪತ್ರಿಕಾ ಹೇಳಿಕೆಗಳು, ಟೆಲಿವಿಜನ್ ಸುದ್ದಿ ಮಾಧ್ಯಮಗಳ ಚರ್ಚೆಗಳು, ಸಾಮಾಜಿಕ ಜಾಲತಾಣಗಳ ಅಭಿಪ್ರಾಯ, ಅನಿಸಿಕೆಗಳನ್ನು ಗಮನಿಸಿದಾಗ ಅನಿಸಿದ್ದು ಈ ದೇಶದ ಜಾತಿ ವ್ಯವಸ್ಥೆ ತುಂಬಾ ತುಂಬಾ ಆಳವಾಗಿ ಬೇರೂರಿದೆ. ಅದು ಬಹುತೇಕ ಪ್ರತಿ ವ್ಯಕ್ತಿಯ ರಕ್ತ, ಮಾಂಸ, ನರಮಂಡಲ, ಉಸಿರಾಟ, ಮೆದುಳಿನ ಯೋಚನಾ ಕ್ರಿಯೆ ಎಲ್ಲದರಲ್ಲೂ ಸೇರಿ ಹೋಗಿದೆ. ಜಾತಿಯನ್ನು ಹೊರತುಪಡಿಸಿ ವ್ಯಕ್ತಿಯನ್ನು ಪ್ರತ್ಯೇಕಗೊಳಿಸುವುದು ಸಾಧ್ಯವೇ ಇಲ್ಲವೇನೋ ? ಎನ್ನುವಂಥದ್ದಾಗಿದೆ. ಜಾತಿ ಸೂಚಕ ನಮ್ಮ ವಂಶದ ಶ್ರೇಷ್ಠತೆಯ ಬಳುವಳಿ ಎಂಬುದಾಗಿ ಕೆಲ ಸಮುದಾಯಗಳ ಜನರು ಭಾವಿಸುತ್ತಿರುವುದು ವಿಪರ್ಯಾಸ.
ಮೇಲ್ವರ್ಗದವರಿಗೆ ಜಾತಿಯಿಂದಾಗಿ ಸಾಮಾಜಿಕ ಸ್ಥಾನಮಾನ ದೊರೆಯುತ್ತಿದೆ ಅವರಿಗೆ ಆ ಬಗ್ಗೆ ಹೆಮ್ಮೆಯೂ ಇದೆ. ಹಾಗೆಯೇ ತಳಸಮುದಾಯಗಳಿಗೆ ಒಂದಷ್ಟು ಸರ್ಕಾರಿ ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಯ ಕಾರಣದಿಂದ ಅನಿವಾರ್ಯವಾಗಿ ತಮ್ಮ ಜಾತಿಯ ಸಂಘಟನೆ ಮಾಡುವುದರಲ್ಲಿ ತೃಪ್ತಿಯೂ ಇದೆ. ಆದರೆ ಇದೆಲ್ಲವನ್ನು ಮೀರಿ ಸಮ ಸಮಾಜದ ಸಾಮಾಜಿಕ ನ್ಯಾಯ ಮಾತ್ರ ದಿನೇ ದಿನೇ ಕಗ್ಗಂಟಾಗುತ್ತಿದೆ.
ಇದೀಗ ಪ್ರಬಲ ಸಮುದಾಯಗಳ ಒಳಗಿನ ಮುಖವಾಡಗಳು ಕಳಚಿ ಬೀಳುತ್ತಿವೆ. ಹಾಗೆಯೇ ತಳ ಸಮುದಾಯಗಳ ಅಜ್ಞಾನವೂ, ಒಗ್ಗಟ್ಟಿನ ಹುಳುಕುತನವೂ ಬಟಾ ಬಯಲಾಗುತ್ತಿದೆ. ಈ ಮಾತು ಏಕೆ ಹೇಳಬೇಕಾಯಿತೆಂದರೆ ಸಾಮಾಜಿಕ ನ್ಯಾಯದ ಆಶಯ ಈಡೇರಲು ಜಾತಿ ಜನಗಣತಿ ಎಷ್ಟು ಮುಖ್ಯವೋ, ಅದೇ ಸಮಯದಲ್ಲಿ ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಅಷ್ಟೇ ಪ್ರಬಲವಾದ ಸಮಾಜವಾದಿ ಹೋರಾಟಗಳು ಆ ದಿಕ್ಕಿನಲ್ಲಿ ನಡೆಯಬೇಕಿದೆ. ಅದು ಮೇಲ್ವರ್ಗ ಅಥವಾ ತಳ ಸಮುದಾಯ ಇಬ್ಬರಲ್ಲೂ ಕಾಣುತ್ತಿಲ್ಲ.
ಜಾತಿ ವ್ಯವಸ್ಥೆ ನಿರ್ಮೂಲನೆಗೆ ನಿಜಕ್ಕೂ ಹೆಚ್ಚು ಆಸಕ್ತಿ ವಹಿಸಬೇಕಾಗಿದ್ದ ಮೇಲ್ವರ್ಗದವರಾಗಲಿ ಅಥವಾ ಸರ್ಕಾರದಿಂದ ಒಂದಷ್ಟು ಸೌಕರ್ಯಗಳನ್ನು ಪಡೆದ ತಳಸಮುದಾಯದ ನಾಯಕರುಗಳಾಗಲಿ ದಿವ್ಯ ನಿರ್ಲಕ್ಷ ಹೊಂದಿರುವುದನ್ನು ಗಮನಿಸುತಿದ್ದೇವೆ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಸರ್ಕಾರಿ ಸವಲತ್ತುಗಳ ಮೀಸಲಾತಿ ಕೇವಲ ಒಂದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಅಸ್ಪೃಶ್ಯತೆ ಅಥವಾ ಕೀಳು ಜಾತಿ ಎಂದು ಪ್ರಬಲ ಸಮುದಾಯಗಳು ಭಾವಿಸುವ ಮನಸ್ಥಿತಿಗೆ ಕೇವಲ ಶಿಕ್ಷಣ, ಉದ್ಯೋಗ ಅಥವಾ ಕೆಲವು ಆರ್ಥಿಕ ಸಹಾಯಗಳು ಯಾವ ಲೆಕ್ಕಕ್ಕೂ ಇಲ್ಲ. ಅದು ಕೇವಲ ಸಣ್ಣ ಪರಿಹಾರ ಮಾತ್ರ. ನಿಜಕ್ಕೂ ಮುಖ್ಯವಾಗಿ ಬೇಕಿರುವುದು ಜಾತಿ ವ್ಯವಸ್ಥೆಯ ನಿರ್ಮೂಲನೆ.
ತಳ ಸಮುದಾಯಗಳು ಪ್ರಬಲವಾಗಿ ಅಭಿವೃದ್ಧಿ ಹೊಂದಿದಾಗ ಸಹಜವಾಗಿಯೇ ಜಾತಿ ವ್ಯವಸ್ಥೆ ನಿರ್ಮೂಲನವಾಗಬಹುದು ಎಂಬ ತತ್ವವು ವಿಫಲವಾಗಿದೆ. ಹಾಗೆಯೇ ಮೇಲ್ವರ್ಗದವರು ಹೆಚ್ಚು ಶಿಕ್ಷಿತರಾದಂತೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ, ನಗರೀಕರಣ ಹೆಚ್ಚಾದಂತೆ ಜಾತಿ ವ್ಯವಸ್ಥೆ ಇಲ್ಲವಾಗಬಹುದು ಎಂಬ ಅಂಶಗಳು ಸಹ ವಿಫಲವಾಗಿವೆ. ಅದಕ್ಕೆ ಬದಲಾಗಿ ಜಾತಿ ವ್ಯವಸ್ಥೆ ತೀವ್ರ ಆಳಕ್ಕೆ ಇಳಿಯುತ್ತಿದೆ. ತಳಸಮುದಾಯಗಳ ಸರ್ಕಾರಿ ಸೌಲಭ್ಯಗಳ ಬಗ್ಗೆ ಅಸಹನೆ, ಅಸೂಯೆ ಹೊಂದಿರುವ ಮೇಲ್ವರ್ಗದವರು ತಳಸಮುದಾಯಗಳನ್ನು ಒಡೆಯುವ ಪ್ರಕ್ರಿಯೆಯನ್ನು ಬಹಳ ಚಾಣಾಕ್ಷತೆಯಿಂದ ಮಾಡುತ್ತಿದ್ದಾರೆ. ಹಾಗೆಯೇ ಕೆಲ ಸಮುದಾಯಗಳು ಅಜ್ಞಾನದಿಂದ ತಮ್ಮ ವಿರುದ್ಧದ ಈ ಶಕ್ತಿಗಳ ಮಾನಸಿಕತೆಯನ್ನೇ ಅರ್ಥ ಮಾಡಿಕೊಳ್ಳುತ್ತಿಲ್ಲ. ಇದರ ಸಂಪೂರ್ಣ ಲಾಭ ಕಾರ್ಪೊರೇಟ್ ಸಂಸ್ಕೃತಿಗೆ ಪೂರಕವಾಗಿದೆ. ಕಾರ್ಪೊರೇಟ್ ಸಂಸ್ಕೃತಿ ಮತ್ತೊಂದು ರೀತಿಯ ಅಸ್ಪೃಶ್ಯತಾ ವರ್ಗವನ್ನು, ಗುಲಾಮರನ್ನು, ಸಾಮಾಜಿಕ ಅಸಮಾನತೆಯನ್ನು ಸೃಷ್ಟಿ ಮಾಡುತ್ತಿದೆ.
ನಾವೀಗ ಮರು ಗಣತಿಯ ಬಗ್ಗೆ, ಅದರ ಲಾಭ ನಷ್ಟಗಳ ಬಗ್ಗೆ ಹೆಚ್ಚು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿದ್ದೇವೆ. ಆದರೆ ಎಲ್ಲಾ ಜಾತಿಯ ರಾಜಕೀಯ ನಾಯಕರು, ಮಠಾಧೀಶರು, ಹೋರಾಟಗಾರರು, ಪತ್ರಕರ್ತರು, ಪುಡಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮರುಗಣತಿಯ ಎಲ್ಲಾ ಆಯಾಮಗಳನ್ನು ದುರುಪಯೋಗಪಡಿಸಿಕೊಳ್ಳಲು ಸಂಘಟಿತರಾಗುತ್ತಿರುವುದು ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಹಿನ್ನಡೆ ಎಂದೇ ಭಾವಿಸಬೇಕಾಗುತ್ತದೆ. ಯಾವ ಗಣತಿ ಆಧಾರದ ಮೇಲೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸರ್ಕಾರದ ಆಶಯವಾಗಿದೆಯೋ ಅದು ಕೇವಲ ಅನುಕೂಲ ಸಿಂಧು ರಾಜಕೀಯಕ್ಕೆ ಮಾತ್ರ ಸೀಮಿತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಏಕೆಂದರೆ ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನವಾಗಿ ಜಾತಿಯೇ ಇಲ್ಲದ ಆರ್ಥಿಕ ಮೀಸಲಾತಿ ಜಾರಿಯಾಗಬೇಕಾಗಿತ್ತು. ಆದರೆ ಮೇಲ್ವರ್ಗದವರ ಅನಾಗರಿಕ ವರ್ತನೆಯಿಂದ ಪುರೋಹಿತಶಾಹಿಗಳ ಬ್ರಾಹ್ಮಣ್ಯ ಮನೋಭಾವದಿಂದ ಈ ಕ್ಷಣಕ್ಕೂ ಈ ದೇಶ ಜಾತಿಯ ಮೇಲುಕೀಳಿನ ತಾರತಮ್ಯದಿಂದ ನರಳುತ್ತಿದೆ, ಸಾಮಾಜಿಕ ವ್ಯವಸ್ಥೆ ಶಾಪಗ್ರಸ್ತವಾಗಿದೆ, ರೋಗಗ್ರಸ್ತವಾಗಿದೆ. ಎಲ್ಲಾ ಭ್ರಷ್ಟಾಚಾರದ ಮೂಲಗಳಿಗೆ ಈ ಜಾತಿ ವ್ಯವಸ್ಥೆಯೇ ಕಾರಣವಾಗಿದೆ. ಅದಕ್ಕಾಗಿ ಮೇಲ್ವರ್ಗದವರತ್ತಲೇ ಬೆರಳನ್ನು ತೋರಿಸಬೇಕಾಗುತ್ತದೆ.
ಅದಕ್ಕೆ ಪರಿಹಾರ ರೂಪದ ಈ ಜಾತಿಯ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆ ನಿಟ್ಟಿನಲ್ಲಿ ಯಶಸ್ವಿಯಾಗಲಿ ಎಂದು ಆಶಿಸೋಣ. ಆದರೆ ಈ ಅಜ್ಞಾನಿಗಳ ಮಾನಸಿಕ ಪರಿಸ್ಥಿತಿಯಲ್ಲಿ ಅದು ಅಸಾಧ್ಯವೆಂದೇ ಕಾಣುತ್ತದೆ. ನಿಜಕ್ಕೂ ನಮ್ಮ ಹೋರಾಟಗಳು ನಡೆಯಬೇಕಾಗಿರುವುದು ಪ್ರಾರಂಭಿಕ ಹಂತದಲ್ಲಿ ನಮ್ಮ ಅನುಕೂಲಕರ ಮೀಸಲಾತಿಯ ಬಗ್ಗೆಯೇ ಎಂಬುದು ವಾಸ್ತವ. ಹಾಗೆಯೇ ಅದೇ ಸಂದರ್ಭದಲ್ಲಿ ಸ್ವಾಭಿಮಾನ, ಸ್ವಾವಲಂಬನೆಯ ಸಮ ಸಮಾಜದ ನಿಟ್ಟಿನಲ್ಲಿಯೂ ನಾವು ಕೆಲಸ ಮಾಡಬೇಕಾಗುತ್ತದೆ. ಮೀಸಲಾತಿ ಎಂಬುದು ಒಂದು ತಾತ್ಕಾಲಿಕ ಮತ್ತು ಸಣ್ಣ ಪರಿಹಾರ.
ದುರಂತವೆಂದರೆ ಮೇಲ್ವರ್ಗದವರು ಸಹ ಈ ತಾತ್ಕಾಲಿಕ ಸಣ್ಣ ಪರಿಹಾರದ ಮೇಲೆಯೇ ತಮ್ಮ ಗಮನ ಕೇಂದ್ರೀಕರಿಸಿ ಜಾತಿ ವ್ಯವಸ್ಥೆ ಈ ಸಮಾಜದಲ್ಲಿ ಶಾಶ್ವತವಾಗಿ ನೆಲೆಯೂರಲು ಕಾರಣರಾಗಿದ್ದಾರೆ. ಮೀಸಲಾತಿಯ ಅವಶ್ಯಕತೆಯ ಸಮಗ್ರ ಚಿಂತನೆ, ವಿಶಾಲ ಮನೋಭಾವ ಅವರಿಗೆ ಅರ್ಥವೇ ಆಗುತ್ತಿಲ್ಲ. ಅವರು ಅದನ್ನು ಪ್ರದರ್ಶಿಸುತ್ತಲೂ ಇಲ್ಲ. ನಮ್ಮದೇ ಜನರು ಮೀಸಲಾತಿಗಾಗಿ ಇಷ್ಟೆಲ್ಲ ಹೋರಾಟ ಮಾಡಲು ಅವರ ಜಾತಿ ವ್ಯವಸ್ಥೆಯ ಅಜ್ಞಾನವೆಂಬ ರಾಕ್ಷಸ ಗುಣವೇ ಕಾರಣ ಎಂದು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಮೇಲ್ವರ್ಗದವರು ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಕಟಿಬದ್ಧರಾದರೆ ಈ ಜಾತಿಗಣತಿಯ ಅವಶ್ಯಕತೆಯೇ ಇರುವುದಿಲ್ಲ. ಕನಿಷ್ಠ ಮುಂದಿನ ದಶಕಗಳಲ್ಲಾದರೂ ಜಾತಿ ಮುಕ್ತ ಸಮಾಜ ನಿರ್ಮಾಣವಾಗಲಿ, ಕೇವಲ ಮನುಷ್ಯ ಗಣತಿ ಮಾತ್ರ ಇರಲಿ ಎಂದು ಆಶಿಸುತ್ತಾ…..
ವಿವೇಕಾನಂದ. ಎಚ್. ಕೆ.
(ಮನಸುಗಳ ಅಂತರಂಗದ ಚಳುವಳಿ….)
ಇದನ್ನೂ ಓದಿ- ಯುಜಿಸಿ ಎಂಬ ಆನೆಯ ಕಾಲಿಗೆ ಸಿಕ್ಕ ಅತಿಥಿ ಉಪನ್ಯಾಸಕರು