ಬೆಂಗಳೂರು: ಭಾರತೀಯರನ್ನು ಭಾರತೀಯರು ಎಂದು ನೋಡದೆ, ಜಾತಿ ಹೆಸರಿನಲ್ಲಿ ಗುರುತಿಸುತ್ತಿರುವುದೇ ಇಂದಿನ ಸಮಸ್ಯೆಯ ಮೂಲವಾಗಿದೆ ಎಂದು ಹೈಕೋರ್ಟ್ ಆತಂಕ ವ್ಯಕ್ತಪಡಿಸಿದೆ.
ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಯತ್ನಾಳ ಪರ ವಾದಿಸಿದ ವಕೀಲ ವೆಂಕಟೇಶ್ ಪಿ.ದಳವಾಯಿ, ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿ ಮಾತ್ರ ದಸರಾ ಉದ್ಘಾಟಿಸಬೇಕು. ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ದಸರಾ ಉದ್ಘಾಟಿಸುವಂತಿಲ್ಲ ಎಂದು ಅರ್ಜಿದಾರ ಯತ್ನಾಳ ಹೇಳಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದೇ ವೇಳೆ ಯತ್ನಾಳ ಅವರು ನೀಡಿದ್ದ ಹೇಳಿಕೆಯ ಪೆನ್ ಡ್ರೈವ್ ಅನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಪ್ರಾಸಿಕ್ಯೂಷನ್ ಪರ ವಕೀಲ ಬಿ.ಎ.ಬೆಳ್ಳಿಯಪ್ಪ ಮತ್ತು ಹೆಚ್ಚುವರಿ ರಾಜ್ಯ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್, ವಿಶ್ವವೇ ಇಂದು ಜಾಗತಿಕ ಗ್ರಾಮವಾಗಿ ಬದಲಾಗಿದೆ. ಮನುಷ್ಯರನ್ನು ಮನುಷ್ಯರು ಎಂದು ಪರಿಗಣಿಸುವುದನ್ನು ಅರ್ಜಿದಾರರು ಕಲಿಯಬೇಕಿದೆ ಎಂದರು.
ವಾದಪ್ರತಿವಾದ ಆಲಿಸಿದ ನ್ಯಾಯಪೀಠ ಮೌಖಿಕವಾಗಿ ತನ್ನ ಆತಂಕ ವ್ಯಕ್ತಪಡಿಸಿತು. ನಂತರ ಪೊಲೀಸರು ಯತ್ನಾಳ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು. ಯತ್ನಾಳ ಅವರೂ ತನಿಖೆಗೆ ಸಹಕರಿಸಬೇಕು ಎಂದು ಆದೇಶಿಸಿತು.
ಇತ್ತೀಚೆಗೆ ಯತ್ನಾಳ ಅವರು ದಸರಾದಲ್ಲಿ ಸನಾತನ ಧರ್ಮದವರು ಮಾತ್ರ ಚಾಮುಂಡಿ ದೇವಿಗೆ ಹೂ ಮುಡಿಸಬೇಕು. ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯ್ದೆ–1989ರ ಕಲಂ 1 (ಎಸ್) ಮತ್ತು ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 352ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.