ಅಹಿಂಸಾ ತತ್ತ್ವ- ಬುದ್ಧರ ನಿಲುವೇನು?

Most read

ಈ ದೇಶದಲ್ಲಿ ಹಿಂಸೆಗೆ ದೊಡ್ಡ ಇತಿಹಾಸ ಇದೆ. ಇಂದಿಗೂ ಹಿಂಸೆ ಜನಮಾನಸದಲ್ಲಿದೆ. ಜಾತಿಯ ಹೆಸರಲ್ಲಿ ನಡೆಯುತ್ತಿರುವ ಹಿಂಸೆ ಅದು ಭಯೋತ್ಪಾದನೆಗೆ ಸಮವಾಗಿದೆ. ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ನಡೆಸುವ ಹಿಂಸೆಯೂ ಕೂಡ ಮಾನವ ವಿರೋಧಿ ನಡೆಯಾಗಿದೆ. ಹಾಗಾಗಿ ಇಂದು ಬುದ್ಧರ ಅಹಿಂಸಾ ತತ್ವ ಪ್ರಪಂಚಕ್ಕೆ ಅನಿವಾರ್ಯವಾಗಿದೆ. ಯುದ್ಧ ಬೇಡ ಬುದ್ಧ ಬೇಕು ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತಿವೆ ಡಾ. ನಾಗೇಶ್‌ ಮೌರ್ಯ, ಬೌದ್ಧ ಚಿಂತಕರು.

ಇಂದು ಪ್ರಪಂಚದಲ್ಲಿ ಅಶಾಂತಿ ತಲೆದೋರಿದೆ. ಅಹಿಂಸೆಯನ್ನು ಜೀವನದ ಒಂದು ಭಾಗವಾಗಿ ಮಾಡಿದ್ದಾರೆ. ಇದಕ್ಕೆಲ್ಲ ಕಾರಣ ಜನರ ಅಜ್ಞಾನ, ಮೌಢ್ಯಗಳು, ಮತಾಂಧತೆ ಒಂದು ಕಡೆಯಾದರೆ ಇದಕ್ಕೆ ಇನ್ನೊಂದು ಮುಖವೂ ಇದೆ. ಅದೇ ಶ್ರೇಷ್ಠತೆಯ ವ್ಯಸನ, ನಾಯಕತ್ವದ ವ್ಯಸನ, ಜನಾಂಗೀಯ ವ್ಯಸನ. ಎಲ್ಲಾ ಧರ್ಮಗಳು ಅಹಿಂಸೆಯನ್ನು ಬೋಧಿಸಿವೆ. ಆದರೆ ವಾಸ್ತವದಲ್ಲಿ ಅನುಸರಣೆ ಮಾಡುತ್ತಿಲ್ಲ. ಅಹಿಂಸಾ ತತ್ವದಲ್ಲಿ ಬುದ್ಧರ ನಿಲುವು ಏನಾಗಿತ್ತು? ಬುದ್ಧರು ನೇರವಾಗಿ ಅಹಿಂಸೆಯನ್ನು ಎಲ್ಲಿಯೂ ವ್ಯಾಖ್ಯಾನಿಸಿಲ್ಲ. ಆದರೆ ಅವರ ಕೆಲವು ಬೋಧನೆಯ ಸಾಂದರ್ಭಿಕ ಸಾಕ್ಷಿಯಲ್ಲಿ ಇದನ್ನು ನಾವು ನೋಡಬಹುದು. ಬಾಬಾಸಾಹೇಬರ ಬುದ್ಧ ಮತ್ತು ಆತನ ಧಮ್ಮ ಕೃತಿಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಚರ್ಚೆಯನ್ನು ಮಾಡಿದ್ದಾರೆ. ಅದೇನು ಅಂತ ನೋಡೊಣ.

ಪ್ರಪಂಚದ ಬೇರೆ ಬೇರೆ ದೇಶಗಳು ಅಹಿಂಸೆಯನ್ನು ತಪ್ಪು ತಪ್ಪಾಗಿ ಅರ್ಥಮಾಡಿಕೊಂಡಿವೆ ಉದಾ: ಸಿಲೋನ್ ನಲ್ಲಿ ಬಿಕ್ಕುಗಳು ವಿದೇಶೀಯರ ಆಕ್ರಮಣದ ವಿರುದ್ಧ, ದಾಳಿಗಳ ವಿರುದ್ಧ ಹೋರಾಡಬೇಕು ಮತ್ತು ಜನರು ಈ ಹೋರಾಟಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ. ಬರ್ಮದಲ್ಲಿ ಬಿಕ್ಕುಗಳು ವಿದೇಶೀಯರ ಆಕ್ರಮಣ / ದಾಳಿಗಳ ವಿರುದ್ಧ ಹೋರಾಟ ಮಾಡದಿರಲು ಮತ್ತು ಜನರು ಹೋರಾಟವನ್ನು ಮಾಡದಿರಲು ಕರೆ ನೀಡಿದ್ದಾರೆ. ಬರ್ಮದವರು ಮೊಟ್ಟೆ ತಿನ್ನುತ್ತಾರೆ ಆದರೆ ಮೀನು ತಿನ್ನುವುದಿಲ್ಲ. ಜರ್ಮನಿಯ ಬೌದ್ಧರು ಪಂಚಶೀಲಗಳನ್ನು ಸ್ವೀಕರಿಸುವಾಗ ಮೊದಲನೇ ಶೀಲವಾದ ಪ್ರಾಣಿ ಹತ್ಯೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಶೀಲಗಳನ್ನು ಪಾಲಿಸುವಂತೆ ಒಂದು ಕಾನೂನನ್ನೆ ಮಾಡಿದ್ದಾರೆ. ಇದು ಅಹಿಂಸಾ ತತ್ವವನ್ನು ಅರ್ಥಮಾಡಿಕೊಂಡಿರುವ ರೀತಿ ಮತ್ತು ಅದರ ಪರಿಸ್ಥಿತಿ. ಹಾಗಾದರೆ ಅಹಿಂಸೆಯ ನಿಜವಾದ ಅರ್ಥ ಏನು? ಎಂಬುದನ್ನು ಬುದ್ಧರ ಪ್ರವಚನಗಳಲ್ಲಿ ಉಲ್ಲೇಖಿಸಿರುವ ಘಟನೆಗಳನ್ನು ನೋಡೋಣ.

ಮೊದಲನೆಯದಾಗಿ ಬಿಕ್ಕುಗಳು ಬಿಕ್ಷಾ ರೂಪದಲ್ಲಿ ಪಡೆದ ಮಾಂಸವನ್ನು ಸ್ವೀಕರಿಸುವುದನ್ನು, ತಿನ್ನುವುದನ್ನು ಬುದ್ಧರು ವಿರೋಧಿಸಲಿಲ್ಲ. ಏಕೆಂದರೆ ಬಿಕ್ಕು ಹತ್ಯೆಯಲ್ಲಿ ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಪಾಲ್ಗೊಂಡಿಲ್ಲ. ಒಮ್ಮೆ ದೇವದತ್ತರ “ಬಿಕ್ಕುಗಳು ಬಿಕ್ಷಾ ರೂಪದಲ್ಲಿ ಮಾಂಸವನ್ನು ಸ್ವೀಕರಿಸುವುದನ್ನು ಮತ್ತು ತಿನ್ನುವುದನ್ನು ಮಾಡಬಾರದು” ಎಂಬ ಸಲಹೆಯನ್ನು ಬುದ್ಧರು ನೇರವಾಗಿ ವಿರೋಧಿಸುತ್ತಾರೆ, ಅಲ್ಲದೆ ಅದನ್ನು ಅನುಮೋದನೆ ಸಹ ಮಾಡುವುದಿಲ್ಲ.

ಸಾಂದರ್ಭಿಕ ಚಿತ್ರ

ಎರಡನೆಯದಾಗಿ ಬುದ್ಧರು ಯಜ್ಞ ಯಾಗಾದಿಗಳಲ್ಲಿ ಪ್ರಾಣಿಬಲಿ ನೀಡುವುದನ್ನು ವಿರೋಧಿಸುತ್ತಾರೆ. ಇದನ್ನು ಸ್ವತಃ ಬುದ್ಧರೆ ಒಂದು ಸುತ್ತದಲ್ಲಿ ಸ್ಪಷ್ಟ ಪಡಿಸಿದ್ದಾರೆ. “ಅಹಿಂಸಾ ಪರಮ ಧರ್ಮ” ಎಂಬುದು ಒಂದು ವಿಪರೀತವಾದ ಬೋಧನೆ. ಇದು ಜೈನ ಧರ್ಮದ ಬೋಧನೆಯೆ ಹೊರತು ಬೌದ್ಧ ಧಮ್ಮದಲ್ಲ. ಇದಲ್ಲದೆ ಇನ್ನೊಂದು ನೇರವಾದ ಸಾಕ್ಷಿಯನ್ನು ಬುದ್ಧರೆ ನೀಡಿದ್ದಾರೆ ಅದು ” ಎಲ್ಲರನ್ನೂ ಪ್ರೀತಿಸಿ, ಇದರಿಂದ ಬೇರೆಯವರನ್ನು ಕೊಲ್ಲುವ ಉದ್ದೇಶವೇ ಇರುವುದಿಲ್ಲ” ಇದೊಂದು ನಿಜವಾದ ಅಹಿಂಸೆಯ ಬಗೆಗಿನ ಸಕಾರಾತ್ಮಕವಾದ ವ್ಯಾಖ್ಯಾನ. ಇದರಿಂದ ತಿಳಿಯುವುದೇನೆಂದರೆ “ಎಲ್ಲರನ್ನೂ ಪ್ರೀತಿಸು, ಕೊಲ್ಲುವುದು ಬೇಡ”. ಹಾಗೆಂದು ಕೊಲ್ಲಲೇ ಬಾರದು ಎಂಬ ನಿಯಮವನ್ನು ಬುದ್ಧರು ಮಾಡಲಿಲ್ಲ, ಬದಲಾಗಿ ಅವಶ್ಯಕತೆ ಇರುವ ಕಡೆ ಅಂದರೆ ಒಬ್ಬ ಮನುಷ್ಯನ ಪ್ರಾಣಕ್ಕೆ ಅಪಾಯವಿದ್ದಾಗ, ಒಂದು ದೇಶ ಇನ್ನೊಂದು ದೇಶದ ಮೇಲೆ ವಿನಾಕಾರಣ ಯುದ್ಧ ಮಾಡುವ ಅನಿವಾರ್ಯತೆ ಉಂಟಾದಾಗ, ಕೊಲ್ಲುವುದರಿಂದ ಈ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದ್ದರೆ ಕೊಲ್ಲಬಹುದು ಎಂದಿದ್ದಾರೆ. ಇದನ್ನು  ಬುದ್ಧರು ಮನುಷ್ಯನ ಬುದ್ಧಿಮತ್ತೆಗೆ ಬಿಡುತ್ತಾರೆ. ಇಲ್ಲಿ ಅಹಿಂಸಾ ತತ್ವ ಒಬ್ಬ ಮನುಷ್ಯನ ಯೋಚನೆಯ ಮೇಲೆ, ನಡತೆಯ ಮೇಲೆ  ನಿಂತಿದೆ ಎಂಬುದನ್ನು ಸೂಚಿಸುತ್ತದೆ.

ದ್ವೇಷದಿಂದ, ದುರುದ್ದೇಶದಿಂದ ಕೊಲ್ಲುವುದನ್ನು ಮತ್ತು ಕೊಲ್ಲಲು ಪ್ರಚೋದಿಸುವುದನ್ನು ಧರ್ಮವೆಂದು ಬಾಬಾಸಾಹೇಬರು ಒಪ್ಪುವುದಿಲ್ಲ. ಒಬ್ಬರನ್ನು ಕೊಂದು ಧರ್ಮವನ್ನು ಉಳಿಸುವುದು/ ರಕ್ಷಿಸುವುದು ನಮ್ಮ ಮುರ್ಖತನವಲ್ಲದೆ ಅದು ಧರ್ಮವಾಗಲು ಸಾಧ್ಯವಿಲ್ಲ.  ಇದು ಬುದ್ಧರ ಅಹಿಂಸಾ ತತ್ವ.

ಬಾಬಾಸಾಹೇಬರು ತಮ್ಮ ಜೀವನದಲ್ಲಿ ಕಂಡುಂಡ ನೋವುಗಳಿಗೆ ಮತ್ತು ಈ ದೇಶದ ಶೋಷಿತರ ಮೇಲಿನ ದೌರ್ಜನ್ಯಗಳಿಗೆ, ಮಹಿಳೆಯರ ಮೇಲಿನ ಹಿಂಸೆಗಳಿಗೆ ಎಂದೂ ಹಿಂಸೆಯ ಮೂಲಕ ಪ್ರತಿಕ್ರಿಯಿಸಲಿಲ್ಲ ಬದಲಾಗಿ ಅಹಿಂಸೆಯ ಮೂಲಕವೇ ಕಾನೂನಾತ್ಮಕವಾಗಿ ಪರಿಹಾರಗಳನ್ನು ಸೂಚಿಸಿದರು. ಅಷ್ಟೇ ಅಲ್ಲದೆ ಈ ದೇಶದ ಜನರನ್ನು ಬುದ್ಧರೊಂದಿಗೆ ಜೋಡಿಸಿ ಅಹಿಂಸೆಗೆ ಬುನಾದಿ ಹಾಕಿದರು.

ಈ ಸಂದರ್ಭದಲ್ಲಿ ಬುದ್ಧರ ದಮ್ಮ ಪದದ ಈ ಗಾಥೆ ಬಹಳ ಅರ್ಥಪೂರ್ಣವಾಗಿದೆ.

 “ನ ಹಿ ವೇರೇನ ವೇರಾನಿ,

ಸಮ್ಮತ್ತೀಧ ಕೂದಾಚನಮ್I

ಅವೇರೆನ ಚ ಸಮ್ಮಂತಿ

ಏಸ ಧಮ್ಮೋ ಸನಂತನೋ II

ವೈರವು ವೈರದಿಂದ ಎಂದೂ ಶಮಾನವಾಗುವುದಿಲ್ಲ. ಅವೈರದಿಂದ (ಪ್ರೀತಿ) ಮಾತ್ರ ಇದು ಶಮನವಾಗುತ್ತದೆ.

ಬುದ್ಧರ ಮಾತುಗಳಲ್ಲಿ ಎಷ್ಟು ಸೊಗಸಾದ ಅರ್ಥವಿದೆ ಅಲ್ಲವೇ? ಆದರೂ ಈ ದೇಶದಲ್ಲಿ ಹಿಂಸೆಗೆ ದೊಡ್ಡ ಇತಿಹಾಸ ಇದೆ. ಇಂದಿಗೂ ಹಿಂಸೆ ಜನಮಾನಸದಲ್ಲಿದೆ. ಜಾತಿಯ ಹೆಸರಲ್ಲಿ ನಡೆಯುತ್ತಿರುವ ಹಿಂಸೆ ಅದು ಭಯೋತ್ಪಾದನೆಗೆ ಸಮವಾಗಿದೆ. ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ನಡೆಸುವ ಹಿಂಸೆಯೂ ಕೂಡ ಮಾನವ ವಿರೋಧಿ ನಡೆಯಾಗಿದೆ. ಹಾಗಾಗಿ ಇಂದು ಬುದ್ಧರ ಅಹಿಂಸಾ ತತ್ವ ಪ್ರಪಂಚಕ್ಕೆ ಅನಿವಾರ್ಯವಾಗಿದೆ. ಯುದ್ಧ ಬೇಡ ಬುದ್ಧ ಬೇಕು ಎಂಬ ಘೋಷಣೆಗಳು ಎಲ್ಲೆಡೆ ಮೊಳಗುತ್ತಿವೆ.

ಡಾ. ನಾಗೇಶ್ ಮೌರ್ಯ

ಬೌದ್ಧ ಚಿಂತಕರು

ಮೊ : 9743907399

ಇದನ್ನೂ ಓದಿ- ಬೌದ್ಧ ಧರ್ಮದ ಪ್ರಮುಖ ಚಿನ್ಹೆಗಳು

More articles

Latest article