ಸಂವಿಧಾನಕ್ಕೂ ವಚನ ತತ್ವಗಳಿಗೂ ವ್ಯತ್ಯಾಸವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

Most read

ಬೆಳಗಾವಿ: ಭಾರತೀಯ ಸಂವಿಧಾನಕ್ಕೂ ವಚನ ತತ್ವಗಳಿಗೂ ಗಮನಾರ್ಹ ವ್ಯತ್ಯಾಸವಿಲ್ಲ. ಶರಣರು ವಚನಗಳಲ್ಲಿ ಏನು ಹೇಳಿದರೋ ಅದನ್ನೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಇದೇ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಾರೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದಕ್ಕೂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಅವರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ರಾಷ್ಟ್ರೀಯ ಬಸವದಳ ಮತ್ತು ಲಿಂಗಾಯತ ಸಂಘಟನೆ ಜಂಟಿಯಾಗಿ ಇಲ್ಲಿನ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲಿ ಮಾತನಾಡಿದರು.

ಬಸವ ತತ್ವಗಳು ಭೂಮಿ ಇರುವವರೆಗೂ ಇರಬೇಕಾದ ಅನಿವಾರ್ಯತೆ ಇದೆ. ಬಸವಣ್ಣ ಸೇರಿದಂತೆ ಶರಣರು ಸಮಾನತೆಗೆ ಹೋರಾಡಿದರು. ಆಗ ಅವರ ತತ್ವಗಳನ್ನು ಹತ್ತಿಕ್ಕುವ ವ್ಯವಸ್ಥಿತ ಸಂಚು ನಡೆಯಿತು. ವಚನಗಳನ್ನು ನಾಶ ಮಾಡಲಾಯಿತು. ಪ್ರಾಣಕ್ಕಿಂತ ಹೆಚ್ಚಾಗಿ ವಚನಗಳನ್ನು ಕಾಪಾಡಲು ಶರಣರು ಪ್ರಯತ್ನಿಸಿದ್ದರಿಂದಲೇ  ಬಸವಾದಿ ಶರಣರ ವಚನಗಳು ಮತ್ತು ತತ್ವಗಳು ನಮಗೆ ಲಭ್ಯವಾಗಿವೆ ಎಂದು ಹೇಳಿದರು.

ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ 12ನೇ ಶತಮಾನದಲ್ಲಿ ವೈದಿಕರು ವಚನಗಳನ್ನು ನಾಶ ಮಾಡಿದರು. ಆದರೆ, ಇಂದು ನಮ್ಮವರೇ ನಾಶ ಮಾಡುತ್ತಿರುವುದು ವಿಷಾದನೀಯ. ಲಿಂಗಾಯತ ಧರ್ಮದ ಮರು ಸ್ಥಾಪನೆಯೊಂದೇ ಇದಕ್ಕೆ ಇರುವ ಪರ್ಯಾಯಮಾರ್ಗ ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ ಧರ್ಮ 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಹುಟ್ಟಿದೆ. ಹಿಂದೂ ಧರ್ಮ ಸಾವಿರಾರು ವರ್ಷಗಳ ಹಿಂದೆ ಹುಟ್ಟಿದೆ. ಪುರಾತನ ಧರ್ಮವನ್ನೇ ಅನುಸರಿಸಬೇಕು ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಲಿಂಗಾಯತ ಧರ್ಮವೇ ವಿಶ್ವ ಧರ್ಮವಾಗಲಿ ಎಂದು ಹಂದಿಗುಂದದ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಬಸವಲಿಂಗ ಪಟ್ಡದ್ದೇವರು ಭಾಲ್ಕಿಯ ಬಸವಲಿಂಗ ಪಟ್ಡದ್ದೇವರು ಮಾತನಾಡಿ ಅಕ್ಟೋಬರ್‌ 5ರಂದು ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ. ಬೆಂಗಳೂರಿನಲ್ಲಿ ಒಂದಾಗಿ ಶಕ್ತಿ ಪ್ರದರ್ಶನ ಮಾಡೋಣ ಎಂದರು.

ಬೈಲೂರು ಮಠದ ನಿಜಗುಣಾನಂದ ಸ್ವಾಮೀಜಿ  ಮಾತನಾಡಿ ದೇಶದ ಶೇ 99ರಷ್ಟು ಮಂದಿ ಅಸ್ಪೃಶ್ಯರಾಗಿದ್ದಾಗ ದೇವಸ್ಥಾನಕ್ಕೆ ಪ್ರವೇಶವೇ ಇಲ್ಲದಿದ್ದಾಗ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದರೆ ಗದಗದ ತೋಂಟದ ಸಿದ್ಧರಾಮ ಸ್ವಾಮೀಜಿ  ಪ್ರಜೆಗಳಿಗೆ ಅಧಿಕಾರವೇ ಇಲ್ಲದ ಕಾಲದಲ್ಲಿ ಬಸವಣ್ಣಸಮಾನತೆಯ ಸಂದೇಶ ಸಾರಿ ಸಾಮಾಜಿಕ ನ್ಯಾಯವನ್ನು ಆಚರಣೆಗೆ ತಂದರು ಎಂದು ಹೇಳಿದರು.

More articles

Latest article