ಕಾಂಗ್ರೆಸ್‌ ಸರ್ಕಾರಕ್ಕೆ ಹಿಂದೂ ವಿರೋಧಿ ಹಣೆಪಟ್ಟಿ ಹಚ್ಚಲು ಬಿಜೆಪಿ ಕುತಂತ್ರ: ಸಚಿವ ಮಹದೇವಪಪ್ಪ ಆರೋಪ

Most read

ಬೆಂಗಳೂರು: 2016 ರಿಂದ 2018 ರ ಅವಧಿಯಲ್ಲಿ ನುಡಿದಂತೆ ನಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಲು ಹಿಂದೂ ವಿರೋಧಿ ಸರ್ಕಾರ  ಎಂದು ತಂತ್ರ ಮತ್ತು ಕುತಂತ್ರ ಆರಂಭಿಸಲಾಗಿದ್ದು, ಈಗಲೂ ಮುಂದುವರದಿದೆ ಎಂದು ಬಿಜೆಪಿ ವಿರುದ್ಧ ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹರಿಹಾಯ್ದಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಬಿಜೆಪಿ ಮತ್ತು ಆ ಪಕ್ಷದ ಮುಖಂಡರ ಹುನ್ನಾರಗಳನ್ನು ಬಿಚ್ಚಿಟ್ಟಿದ್ದಾರೆ.

.ಈ ಕುತಂತ್ರ ಆರಂಭಗೊಂಡ ದಿನದಿಂದ ಹಲವು ಅಮಾಯಕರ ಸಾವುಗಳು ಸಂಭವಿಸಿದವು. ಶಿರಸಿಯ ಪರೇಶ್ ಮೇಸ್ತಾ ಎಂಬ ಯುವಕನಿಂದ ಆರಂಭಗೊಂಡು ಶರತ್ ಮಡಿವಾಳ ಎಂಬ ಯುವಕನವರೆಗೆ ಜರುಗಿದ ಸಾವುಗಳು ಮತ್ತು ಅವುಗಳ ವಿಷಯದಲ್ಲಿ ಬಿಜೆಪಿಯು ಮಾಡಿದ ಶವ ರಾಜಕೀಯವು ಇಂದಿಗೂ ನಮ್ಮ ಕಣ್ಣ ಮುಂದಿದೆ.

ಪರೇಶ್ ಮೇಸ್ತಾ ವಿಷಯದಲ್ಲಿ ಸಿಬಿಐ ತನಿಖೆಯು ಜರುಗಿ ಕಡೆಗೆ ಅದು ಕೊಲೆಯಲ್ಲ, ಸಹಜ ಸಾವು ಎಂದು ವರದಿ ಬಂದಿತು. ಇನ್ನು ಚುನಾವಣೆ ಸಂದರ್ಭದಲ್ಲಿ ಸತ್ತವರ ಮನೆಯನ್ನು ಬಳಸಿ ರಾಜಕೀಯ ಮಾಡಿದ ಬಿಜೆಪಿಗರು ನಂತರ ಅತ್ತ ಸುಳಿಯಲೂ ಇಲ್ಲ. ಇದನ್ನು ನಾನಲ್ಲ ಬದಲಿಗೆ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರೇ ಹಿಂದೆ ಹೇಳಿದ್ದಾರೆ.

ಇದೀಗ ನಾಡಿನ ಐಕ್ಯತೆಗಾಗಿ ಮಾಡಬೇಕಿದ್ದ ದಸರಾ ಮತ್ತು ಗಣೇಶ ಹಬ್ಬವನ್ನೂ ಕೂಡಾ ಧರ್ಮದ ಕಲಹಕ್ಕೆ ಬಳಸಿಕೊಳ್ಳುವ ಕೆಲಸವನ್ನು ಮಾಡಲು ಆರಂಭಿಸಿರುವ ಬಿಜೆಪಿಗರು ಚುನಾವಣಾ ಅಧಿಕಾರವನ್ನು ಪಡೆಯಲು ” ಜನಪರ ಪ್ರಣಾಳಿಕೆಗಳನ್ನು” ಮುಂದೆ ತಾರದೇ ಕೇವಲ ಹಿಂದೂ – ಮುಸ್ಲಿಂ ಜಗಳವನ್ನು ಮುನ್ನಲೆಗೆ ತರುತ್ತಿರುವುದನ್ನು ನೋಡಿದರೆ ಇವರಿಗೆ ಯಾವುದೇ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿ ಇಲ್ಲ ಎಂಬ ಸಂಗತಿಯು ಸ್ಪಷ್ಟವಾಗಿ ಅರಿವಾಗುತ್ತಿದೆ.

ಕರೋನಾ ಸಂದರ್ಭದಲ್ಲಿ ಸಾಮಾನ್ಯ ಜನರು ಅನುಭವಿಸಿದ ಬವಣೆಯ ಬಗ್ಗೆ ಎಲ್ಲರಿಗೂ ಗೊತ್ತು.‌ ಕನಿಷ್ಠ ಪಕ್ಷ ಮನೆಯಿಂದ ಹೊರಗೆ ಬಾರದ ಸ್ಥಿತಿ, ದುಡಿಯಲು ಆಗದ ಸ್ಥಿತಿ ಮತ್ತು ಮನುಷ್ಯರನ್ನು ಪರಸ್ಪರ ಮುಟ್ಟಿಸಿಕೊಳ್ಳಲೂ ಆತಂಕದ ಸ್ಥಿತಿಯ ನಡುವೆ ಬಿಜೆಪಿಗರ ಕರೋನಾ ಭ್ರಷ್ಟಾಚಾರಕ್ಕೆ ಸಿಲುಕಿ ಜನ ತತ್ತರಿಸಿದ್ದರು.

ದುಡಿಯುವ ಜನರ ಪ್ರಾಥಮಿಕ ಬದುಕು ಇಷ್ಟೊಂದು ತೊಂದರೆಗೆ ಒಳಗಾಗಿದ್ದರಿಂದಲೇ ನಮ್ಮ ಸರ್ಕಾರವು ಅವರಿಗೆ ಗ್ಯಾರಂಟಿ ರೂಪದಲ್ಲಿ ಅವರ ಬದುಕಿಗೆ ಕನಿಷ್ಠ ಆದಾಯವನ್ನು ನಿಗದಿ ಪಡಿಸಿತು. ಈ ಸಮಸ್ಯೆಯು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೇ ಎಲ್ಲ ಪಕ್ಷದ ಜನರಿಗೂ ಸಮಾನವಾಗಿತ್ತು

ಆದರೆ ಈಗ ನೋಡಿದರೆ ಇದ್ಯಾವುದರ ಪರಿವೆಯೇ ಇಲ್ಲದೇ ಇವರು ಈ ರೀತಿ ಕಲಹ ಎಬ್ಬಿಸುವುದನ್ನು ನೋಡಿದರೆ ಇವರು ಕಾಲ ಕಲಿಸುವ ಪಾಠದಿಂದ ಏನು ಕಲಿತರೆಂದು ಗೊಂದಲವಾಗುತ್ತದೆ. ಇನ್ನು ಸಾಮಾಜಿಕವಾಗಿ ನೋಡುವಾಗಲೂ ಹಿಂದುಳಿದ ವರ್ಗಗಳ ಕೈಲಿ ಇರುವ ಅಧಿಕಾರಕ್ಕೆ ಪಡುವ ಅಸೂಯೆಯೂ ಕೂಡಾ ಇಂತಹ ಗಲಭೆಗಳಿಗೆ ಮುಖ್ಯ ಕಾರಣ ಎಂದು ನನಗೆ ಅನಿಸುತ್ತದೆ.

ಅದಕ್ಕಾಗಿಯೇ ಇವರು ಮುಸ್ಲಿಂ ಮತ್ತು ಕ್ರೈಸ್ತರ ಯಾವ ವಿಷಯವನ್ನೂ ಕೂಡಾ ರಾಜಕೀಯ ಮಾಡದೇ ಬಿಡಲು ಸಿದ್ಧರಿಲ್ಲ. ದೇಶಕ್ಕೆ ಬೂಕರ್ ಪ್ರಶಸ್ತಿಯನ್ನು ಕೊಡಿಸಿದ ವ್ಯಕ್ತಿಯ ವಿಷಯದಲ್ಲೂ ಕನಿಷ್ಠ ಪ್ರೀತಿ ಗೌರವ ಇಟ್ಟುಕೊಳ್ಳದ ಕನ್ನಡದ ಲೇಖಕಿಯ ವಿಷಯದಲ್ಲೂ ರಾಜಕೀಯ ಮಾಡುತ್ತಾರೆಂದರೆ ಇವರಿಗೆ ಇನ್ನೇನು ಹೇಳಬೇಕೆಂದು ತಿಳಿಯದಾಗಿದೆ.

ಅತ್ತ ಸರ್ಕಾರ ಬಂದಾಗಿನಿಂದಲೂ ” ಭಾರತೀಯ ಜನಗಳಾದ ನಾವು’ ಎಂಬ ಭಾವನೆಯನ್ನು ಮೂಡಿಸಲು, ಸಂವಿಧಾನದ ಪೀಠಿಕೆಯನ್ನು ಓದಿಸುವುದು, ಎಲ್ಲರನ್ನೂ ಒಳಗೊಂಡ ಹಾಗೆ ಮಾನವ ಸರಪಳಿಯನ್ನು ರಚಿಸುವ ಕೆಲಸದ ಜೊತೆಗೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡುವ ಪ್ರಯತ್ನವನ್ನು ಮಾಡಲಾಗಿದೆ.

ಹೀಗಿದ್ದರೂ ಕೂಡಾ ಇವರು ಭಾವೈಕ್ಯತೆಯನ್ನು ಮೂಲೆಗೆ ಎಸೆದು ಮತ್ತೆ ಮತ್ತೆ ಐಕ್ಯತೆಗಾಗಿಯೇ ಆಚರಿಸಲ್ಪಡುವ ಗಣೇಶ ಹಬ್ಬವನ್ನೂ ಕೂಡಾ ಜನಾಂಗೀಯ ಮತ್ತು ಧಾರ್ಮಿಕ ದ್ವೇಷಕ್ಕಾಗಿ ಬಳಸುವುದು ಬಹು ಅಪಾಯಕಾರಿ ಸಂಗತಿ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಚುನಾವಣೆಗಾಗಿಯೇ ನಡೆಸಲಾಗುವ ಗಲಭೆಗಳಲ್ಲಿ ಎಲ್ಲಿಯೂ ಸಹ ದುಡಿದು ತಿನ್ನುವ ಜನರು ಇಲ್ಲ. ಅವರಿಗೆ ಈ ಸಂಗತಿಯಲ್ಲಿ ಕನಿಷ್ಠ ಆಸಕ್ತಿಯೂ ಇಲ್ಲ ಎಂಬುದನ್ನು ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು. ಇಲ್ಲ ಜನರ ಬದುಕು ನಮಗೆ ಅನವಶ್ಯಕ, ಗಲಭೆ ಎಬ್ಬಿಸುವುದೇ ನಮ್ಮ ಜೀವನದ ಏಕೈಕ ಗುರಿ ಎಂದು ಬಿಜೆಪಿಗರು ಭಾವಿಸಿದರೆ ಅದನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಕಷ್ಟವೇನಲ್ಲ ಎಂಬುದು ಎಲ್ಲರಿಗೂ ಗೊತ್ತು.

ಇನ್ನು‌ ಮಂಡ್ಯ ಭಾಗದಲ್ಲಿ ಗಲಾಟೆಯ ಮೂಲಕವೇ ಬಿಜೆಪಿ ಅಸ್ತಿತ್ವಕ್ಕೆ ಬರಲು ಯತ್ನಿಸುತ್ತಿದ್ದು, ತನ್ನ ಮೈತ್ರಿಕೂಟದ ಜೆಡಿಎಸ್ ಪಕ್ಷಕ್ಕೆ ನೆಪ ಮಾತ್ರಕ್ಕೆ ಇರುವ ಜಾತ್ಯಾತೀತ ಎಂಬ ರೆಕ್ಕೆಗಳನ್ನೂ ಸಹ ಒಂದೊಂದಾಗಿ ಕಿತ್ತು ಹಾಕುವ ಕೆಲಸ ಮಾಡುತ್ತಿದೆ. ಬಹುಶಃ ಮುಂದೆ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಜ್ಜಾದಂತೆ ಇರುವ ಜೆಡಿಎಸ್ ನವರಿಗೂ ಅದೇ ಬೇಕಾದಂತೆ ಕಾಣುತ್ತಿದ್ದು ಇವರ ಬಗ್ಗೆ ಜನ ಸಾಮಾನ್ಯರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಮತ್ತು ಸಮಾಜದಲ್ಲಿ ಇರಲೇಬೇಕಾದ ಸಂವಿಧಾನಿಕ ಐಕ್ಯತೆಯ ಮಹತ್ವವನ್ನು ಅರಿಯಬೇಕು.

More articles

Latest article