ಎದೆಯ ಹಣತೆಯನ್ನು ಆರಿಸುತ್ತಿರುವ ಕೋಮುವಾದಿ ರಾಜಕಾರಣ

Most read

ಬಾನು ಮುಷ್ತಾಕ್ ಅವರನ್ನು  ಮುಸ್ಲಿಂ, ಅಥವಾ ಮಹಿಳೆ ಅಥವಾ ಕಮ್ಯೂನಿಸ್ಟ್ ಎಂದೆಲ್ಲಾ ನೋಡುವ ಬದಲಿಗೆ, ಅವರನ್ನು ಕನ್ನಡದ ಲೇಖಕಿಯಾಗಿ ಕಂಡರೆ ಮಾತ್ರ ದಸರಾ ಉದ್ಘಾಟನೆಗೆ ಅವರು ತಕ್ಕ ವ್ಯಕ್ತಿಯೇ ಅಲ್ಲವೇ ಎಂಬುದು ತಿಳಿಯುತ್ತದೆ. ಎಲ್ಲಾ ಧರ್ಮಗಳನ್ನು ಗೌರವಿಸುವ ನಾನು ಪ್ರೀತಿ ಮತ್ತು ಗೌರವದಿಂದ ದಸರಾ ಉದ್ಘಾಟಿಸುತ್ತೇನೆ ಎಂದಿರುವ ಬಾನು ಮುಷ್ತಾಕ್‍ರವರ ಉದ್ಘಾಟನಾ ಮಾತುಗಳನ್ನು ಕೇಳಲು ಕರ್ನಾಟಕದ ಜನತೆ ಎದುರು ನೋಡುತ್ತಿದೆ. ಲತಾಮಾಲಾ, ಲೇಖಕರು.

‘ಎದೆಯ ಹಣತೆ’ (ಹಾರ್ಟ್ ಲ್ಯಾಂಪ್) ಪುಸ್ತಕಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರ್ನಾಟಕ ಸರ್ಕಾರ ಅಹ್ವಾನಿಸಿದ್ದು, ಅದನ್ನು ಕೆಲವರು ವಿರೋಧಿಸಿದ್ದಾರೆ!?

ವಿರೋಧವೇನು? ಪ್ರಜಾಪ್ರಭುತ್ವದ ಭಾಗವಾಗಿ ದಸರಾ ಆಚರಣೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆಯೇ ಹೊರತು, ಇದು ಜಾತ್ಯತೀತತೆಯ (ಸೆಕ್ಯುಲರ್) ಪ್ರತೀಕವಲ್ಲ. ಇದು ಹಿಂದುಗಳ ಧಾರ್ಮಿಕ ಹಬ್ಬವಾಗಿದ್ದು,  ಚಾಮುಂಡಿ ಬೆಟ್ಟದಲ್ಲಿ ಪುಷ್ಪಾರ್ಚನೆ ಮತ್ತು ಆರತಿಗಳಿಂದ ದಸರಾ ಪ್ರಾರಂಭವಾಗುತ್ತದೆ. ಆದರೆ ಬಾನು ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದೆಯಾ? ಅವರು ದೇವರು, ಧರ್ಮ ಮತ್ತು ಮೂರ್ತಿ ಪೂಜೆಯನ್ನು ನಂಬದ ಕಮ್ಯೂನಿಸ್ಟರು. ಮುಷ್ತಾಕ್ ಅವರು ಕನ್ನಡದ ಹಿರಿಯ ಸಾಹಿತಿ, ಮುಸ್ಲಿಂ ಮಹಿಳೆಯರ ಶೋಷಣೆಯ ಕುರಿತಾದ ಅವರ ಸಾಹಿತ್ಯ, ಹೋರಾಟ ಸಾಮಾಜಿಕ ಕಾಳಜಿ ಮತ್ತು ಅವರು ಪಡೆದಿರುವ ಪ್ರತಿಷ್ಠಿತ ಪ್ರಶಸ್ತಿ – ಈ ಎಲ್ಲವನ್ನು ಮೆಚ್ಚುವಂತದ್ದೆ ಆಗಿದೆ.

ಕನ್ನಡ ಭುವನೇಶ್ವರಿ- ಸಾಂದರ್ಭಿಕ ಚಿತ್ರ

ಆದರೆ ದಸರಾ ಹಿಂದೂ ಧಾರ್ಮಿಕ ಆಚರಣೆಯಾದ ಕಾರಣ, ಆ ಧರ್ಮದ ಭಾವನೆಗಳನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಆಹ್ವಾನಿಸುವುದು ಹೆಚ್ಚು ಸೂಕ್ತ.  ‘ಕನ್ನಡವನ್ನು ನೀವು ಕನ್ನಡ ಭುವನೇಶ್ವರಿಯನ್ನಾಗಿ ಮಾಡಿಬಿಟ್ಟಿರಿ, ಹಳದಿ ಕೆಂಪಿನ ಅರಿಶಿಣ ಕುಂಕುಮದ ಬಾವುಟವನ್ನು ಹಾಕಿ ಆಕೆಯನ್ನು ಮಂದಾಸನದ ಮೇಲೆ ಕೂರಿಸಿಬಿಟ್ಟಿರಿ, ನಾನು ಎಲ್ಲಿ ನಿಲ್ಲಬೇಕು? ನಾನು ಏನನ್ನು ನೋಡಬೇಕು? ನಾನು ಹೇಗೆ ಒಳಗೊಳ್ಳಬೇಕು? ಎಂದು ಪ್ರಶ್ನಿಸುವ ಮುಷ್ತಾಕ್‍ರವರು  ತಾಯಿ ಚಾಮುಂಡಿಯ ಮೇಲೆ ಪೂಜ್ಯ ಭಾವ ಹೊಂದಿರುವುದು ಸಾಧ್ಯವೇ? ಹಿಂದು ಮಹಿಳೆಯರ ಭಾವನಾತ್ಮಕ ಸಂಕೇತವಾದ ಅರಿಶಿಣ ಕುಂಕುಮವನ್ನು ಅವರು ಹೀಯಾಳಿಸಿದ್ದಾರೆ. ಅವರು ನಮ್ಮನ್ನು (ಹಿಂದೂಗಳನ್ನು) ಪ್ರಶ್ನಿಸುವ ಅಗತ್ಯವಿಲ್ಲ, ತಮ್ಮ ಧರ್ಮದವರನ್ನು ಪ್ರಶ್ನಿಸಲಿ. ಒಂದು ವೇಳೆ ಅವರು ದಸರಾ ಉದ್ಘಾಟನೆ ಮಾಡುವುದೇ ಆಗಿದ್ದಲ್ಲಿ ದಸರಾ ಧಾರ್ಮಿಕ ಆಚರಣೆಗಳನ್ನು ನಡೆಸಲಿ, ಕುಂಕುಮ ಹಚ್ಚಿಕೊಳ್ಳಲಿ. . . . .,,ಇತ್ಯಾದಿ ಇತ್ಯಾದಿ ಮಾತುಗಳು ಎಲ್ಲೆಡೆ ಹರಿದಾಡುತ್ತಿವೆ. ಇದು ಯಾರ್ಯಾರ ಮಾತುಗಳು, ಯಾಕೆ ಹೇಳುತ್ತಿದ್ದಾರೆ ಎಂಬ ವಿಶ್ಲೇಷಣೆ ಮುಖ್ಯವಲ್ಲವಾದರೂ, ಸರ್ವರನ್ನು ಒಳಗೊಂಡು ಬದುಕಬೇಕೆಂಬ ಸಮಾಜದ ಹಂಬಲವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಹತ್ತಿಕ್ಕುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿದೆ ಎನ್ನುವುದು ನಿಚ್ಚಳವಾಗಿದೆ.    

ಶಾಲೆಯಲ್ಲಿ ‘ನಾಡಹಬ್ಬ ದಸರಾ’ ಎಂಬ ಪಾಠವನ್ನು ಓದಿರುವುದು ನೆನಪಿದೆ. ಆದರೆ ಅದೀಗ ಧಾರ್ಮಿಕ ಹಬ್ಬವಂತೆ! ಈ ಸಾಂಸ್ಕೃತಿಕ ನಾಡ ಹಬ್ಬದಲ್ಲಿ ಧರ್ಮ, ಜಾತಿ, ವರ್ಗದ ಮಾತುಗಳು ಅನಾವಶ್ಯಕ. ಧಾರ್ಮಿಕ ಆಚರಣೆಗಳನ್ನು ಅರಸರ ಮನೆತನದವರು ವೈಯಕ್ತಿಕವಾಗಿ ನೇರವೇರಿಸುತ್ತಾರೆ. ಹೊರಗಿನ ಸಾಂಸ್ಕೃತಿಕ ಆಚರಣೆಗಳು ಸಾರ್ವಜನಿಕವಾಗಿ ಜರುಗುತ್ತಿದ್ದು, ರಾಜ್ಯ ಸರ್ಕಾರವು ಇದನ್ನು ನಿರ್ವಹಿಸುತ್ತದೆ. ಈ ಸಾಂಸ್ಕೃತಿಕ ಹಬ್ಬದ ಸೊಬಗನ್ನು ಸವಿಯಲು ಇತರೆ ರಾಜ್ಯ ಮತ್ತು ದೇಶಗಳಿಂದಲೂ ಜನರು ಬರುತ್ತಾರೆ.  ಚಾಮುಂಡಿ ದೇವಿಯನ್ನು ಹೊತ್ತ ಅಂಬಾರಿ ರಸ್ತೆಯಲ್ಲಿ ಸಾಗುವಾಗ ಎಲ್ಲಾ ಜನಾಂಗವು ತಮ್ಮ ಧರ್ಮ, ಜಾತಿ, ವರ್ಗಗಳನ್ನು ಮರೆತು ದೇವಿಯನ್ನು ಕಣ್ತುಂಬಿ ಕೊಳ್ಳುತ್ತಾರೆ. ನಮ್ಮ ದೇವರುಗಳು ಗರ್ಭಗುಡಿಯಿಂದ ಹೊರಗೆ ಬಂದ ಕೂಡಲೇ ಸೆಕ್ಯೂಲರ್ ಆಗುತ್ತವೆ ಎನ್ನುತ್ತಾರೆ ಡಾ.ಪುರುಷೊತ್ತಮ ಬಿಳಿಮಲೆಯವರು. ನವರಾತ್ರಿ ಸಮಯದಲ್ಲಿ ಹತ್ತು ದಿನಗಳು ನಡೆಯುವ ಈ ಹಬ್ಬವು ಪ್ರಾರಂಭವಾದಾಗ, ಉದ್ಘಾಟಿಸಲು ರಾಜ್ಯದ ಗಣ್ಯ ವ್ಯಕ್ತಿಯೊಬ್ಬರನ್ನು ಸರ್ಕಾರವು ಅಹ್ವಾನಿಸುತ್ತದೆ. ಈಗಾಗಲೇ ಹಲವು ಗಣ್ಯರು ಅಹ್ವಾನಿತರಾಗಿದ್ದು, ನಿತ್ಯೋತ್ಸವ ಕವಿ ಎಂದೇ ಹೆಸರಾದ ಹಿರಿಯ ಕವಿ ನಿಸಾರ್ ಅಹಮ್ಮದ್‍ರವರು ಈ ಹಿಂದೆ ದಸರಾ ಉದ್ಘಾಟನೆ ಮಾಡಿದ್ದರು. ಆಗ ಯಾವ ತಕರಾರು ಬಂದಿರಲಿಲ್ಲವಾದರೂ, ಬಾನು ಮುಷ್ತಾಕ್ ಇವರ ಭಾಗಿತ್ವವನ್ನು ಬಿಜೆಪಿಯ ಕೆಲವರು ವಿರೋಧಿಸುತ್ತಿದ್ದಾರೆ.  

ದಸರಾ ನೋಟ

ಬಾನು ಮುಷ್ತಾಕ್ ಅವರು ಏನನ್ನು ನಂಬುತ್ತಾರೆ ಅಥವಾ ನಂಬುವುದಿಲ್ಲ ಎನ್ನುವುದು ಅವರ ಸ್ವಂತ ವಿಚಾರ. ಯಾವುದೋ ಸಂದರ್ಭದಲ್ಲಿ ಆಡಿದ ಮೇಲಿನ ಅವರ ಮಾತುಗಳ ತುಣುಕನ್ನು ಮಾತ್ರ ಬಳಸಿ, ಅರ್ಥವನ್ನು ತಿರುಚಿ ಜನರಲ್ಲಿ ಅವರ ಬಗ್ಗೆ ತಪ್ಪು ಭಾವನೆ ಹುಟ್ಟಿಸುವ ಪ್ರಯತ್ನ ನಡೆದಿದೆ. ಬಾನುರವರು 2023ರಲ್ಲಿ  ಜನಸಾಹಿತ್ಯ ಸಮ್ಮೇಳನದ ಪ್ರತಿರೋಧ ಸಮಾವೇಶದಲ್ಲಿ ಮಾಡಿದ ಪೂರ್ಣ ಭಾಷಣ ಕೇಳಿದರೆ ಅವರು ಕನ್ನಡವನ್ನು ಬೆಳೆಸುವ ಹಿನ್ನೆಲೆಯಲ್ಲಿ ಆಡಿದ ಮಾತಿದು ಎಂದು ಯಾರಿಗೂ ತಿಳಿಯುತ್ತದೆ. ಕನ್ನಡ ಭಾಷೆಗೆ ದೇವರ ಸ್ಥಾನ ಕೊಟ್ಟು, ಧಾರ್ಮಿಕ ಸಂಕೇತಗಳನ್ನು ಬಳಸುವ ಮೂಲಕ ಮುಸ್ಲಿಮರನ್ನು ಕನ್ನಡ ಕಲಿಯದಂತೆ ಮಾಡಿದಿರಿ ಎನ್ನುವುದಾಗಿತ್ತು ಅವರ ಮಾತಿನ ಇಂಗಿತ. ಬೇರೆ ಬೇರೆ ಸಂದರ್ಭಗಳಲ್ಲಿ ಮತ್ತು ತಮ್ಮ ಸಾಹಿತ್ಯದ ಮೂಲಕ ಬಾನುರವರು ತಮ್ಮ ಧರ್ಮದವರನ್ನೂ ಸಹ ಅತಿ ಕಟುವಾಗಿ ಪ್ರಶ್ನಿಸಿದ್ದಾರೆ ಮತ್ತು ಪ್ರಶ್ನಿಸುತ್ತಿದ್ದಾರೆ. ಅವರು ಮುಸ್ಲಿಮರಾದ ಕಾರಣ ಇತರೆ ಧರ್ಮೀಯರನ್ನು ಪ್ರಶ್ನಿಸಬಾರದು ಎಂಬ ವಾದವು ಈ ಜಗತ್ತನ್ನು ಹಲವು ಶತಮಾನಗಳ ಹಿಂದಕ್ಕೆ ಕರೆದೊಯ್ಯುತ್ತದೆ. ಬಾನುರವರ ಮಾತನ್ನು ತಿರುಚಿ ಬೇರೆ ಅರ್ಥವನ್ನು ಸಮಾಜಕ್ಕೆ ರವಾನಿಸುತ್ತಿರುವ ಬುದ್ಧಿವಂತರಿಗೆ ಅವರ ಭಾಷಣದ ನಿಜಾರ್ಥ ತಿಳಿದಿಲ್ಲವೆಂದಲ್ಲ. ಕೋಮು ವಿವಾದಗಳನ್ನು ಹುಟ್ಟಿಹಾಕಿ ಮಾಧ್ಯಮಗಳ ಗಮನ ಸೆಳೆಯುವುದು ಕೆಲ ಗುಂಪಿನ ಪ್ರತಿದಿನದ ಕೆಲಸವಾಗಿದ್ದು, ಇದಾವುದು ಅಕಸ್ಮಿಕವಾಗಿ ನಡೆಯುತ್ತಿಲ್ಲ. ಇವರು ತೆಗೆದಿರುವ ವಿವಾದದಿಂದ ಬಾನು ಮುಷ್ತಾಕ್‍ರವರ ದಸರಾ ಉದ್ಘಾಟನೆ ನಿಲ್ಲುವುದಿಲ್ಲವೆಂದೂ ಸಹ ಆ ಗುಂಪಿಗೆ ತಿಳಿದಿದೆ. ಆದರೂ, ಹಂತಹಂತವಾಗಿ ಧರ್ಮ ದ್ವೇಷವನ್ನು ಜನರ ಮನದಲ್ಲಿ ಬೇರಿಳಿಸಿ ಕೋಮುವಾದಿ ಮನಸ್ಥಿತಿಯನ್ನು ಬೆಳೆಸುವ ಮೂಲಕ ಸಮಾಜವನ್ನು ಒಡೆದು ಆಳುವ ಇವರ ದೀರ್ಘಕಾಲದ ಯೋಜನೆಯ ಭಾಗವಾಗಿ ಈ ವಿವಾದಗಳು ಸೃಷ್ಟಿಯಾಗುತ್ತಿದ್ದು,  ಇದರ ಪರಿಣಾಮಗಳು ದೇಶದ ಪ್ರಗತಿಗೆ ಕಂಟಕವಾಗಿದೆ.

ಬಾನು ಮುಷ್ತಾಕ್‌ ಜನ ಸಾಹಿತ್ಯ ಪ್ರತಿರೋಧ ಸಮ್ಮೇಳನದಲ್ಲಿ..

ಮಹಿಳೆ ಅವಳ ಸಾಮರ್ಥ್ಯ ಮಾತ್ರದಿಂದಲೇ ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಮತ್ತೆ ಮತ್ತೆ ದೃಢವಾಗುತ್ತಿದೆ. ತನ್ನ ನಿಲುವಿನ ವಿರುದ್ಧವಾಗಿಯಾದರೂ ಸರಿ, ಧರ್ಮವು ನಿಗದಿ ಪಡಿಸಿದ ನಿಯಮ ಮತ್ತು ಪರೀಕ್ಷೆಗಳನ್ನು ದಾಟಬೇಕೆಂದು ಸಮಾಜದ ನಿರೀಕ್ಷೆಯಾಗಿದೆ.  ಸರ್ ಮಿರ್ಜಾ ಮುಹಮ್ಮದ್ ಇಸ್ಮಾಯಿಲ್ ಅವರ ಸಾಮರ್ಥ್ಯವನ್ನು ನೋಡಿ ಅಂದಿನ ಮಹಾರಾಜರು ಅವರಿಗೆ ದಿವಾನಗಿರಿ ಕೊಟ್ಟಿದ್ದರು. ಆ ಸ್ಥಾನ ಕೊಡಲು ಮಹಾರಾಜರು ಹಿಂದು ಧರ್ಮದ ಮೇಲಿನ ಅವರ ನಂಬಿಕೆಯನ್ನು ಪರೀಕ್ಷಿಸಲಿಲ್ಲ. ಅಂತೆಯೇ ಅಬ್ದುಲ್ ಕಲಾಂ  ರಾಷ್ಟ್ರಪತಿಗಳಾಗಲು ತಾವು ಹಿಂದೂ ಧರ್ಮಕ್ಕೆ ಬದ್ಧರೆಂದು ಹೇಳಿಕೊಳ್ಳಬೇಕಾಗಿರಲಿಲ್ಲ. ಕವಿ ನಿಸಾರ್ ಅಹಮ್ಮದ್‍ರವರಿಗೂ ಅವರ ನಂಬಿಕೆಯನ್ನು ಖಾತ್ರಿ ಪಡಿಸಲು ಸಾಕ್ಷಿ ಕೇಳಿರಲಿಲ್ಲ. ಆದರೆ ಬಾನು ಮುಷ್ತಾಕ್‍ರವರು ದೇವಿಯ ಮೇಲಿನ ತಮ್ಮ ನಂಬಿಕೆಯನ್ನು ಹಣೆಗೆ ಕುಂಕುಮ ಹಚ್ಚಿಯೋ ಅಥವಾ ಪ್ರಾರ್ಥನೆ ಮಾಡುವ ಮೂಲಕವೋ ಸಾಬೀತು ಮಾಡಬೇಕಾಗಿದೆ!! 

ಇದನ್ನೂ ಓದಿ- ಬಾನುವೂ – ಭುವನೇಶ್ವರಿಯೂ

ಬಾನು ಮುಷ್ತಾಕ್ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ ಸರ್ಕಾರವು ಅಹ್ವಾನ ನೀಡಿದೆ ಎಂಬುದು ಜನರ ತಿಳುವಳಿಕೆಯಾಗಿದೆ. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಗೌರವ ತಂದುಕೊಟ್ಟ ಒಬ್ಬ ಹಿರಿಯ ಮಹಿಳಾ ಸಾಹಿತಿಗೆ ಹಿಂದೂ ಧರ್ಮವನ್ನು ಗೌರವಿಸುವುದಾಗಿ ಸಾಬಿತು ಮಾಡಲು ಹಾಕುತ್ತಿರುವ ಈ ಷರತ್ತುಗಳು ಎಷ್ಟು ಸರಿ? ಹಿಂದೂ ರೀತಿಯ ಪೂಜೆ / ಪ್ರಾರ್ಥನೆ ಮಾಡಬೇಕೆನ್ನುವ ಒತ್ತಾಯವೂ ಸಹ ಒಂದು ರೀತಿಯ ಮತಾಂತರವೇ ಅಲ್ಲವೇ? ಬಹುಶಃ ಸ್ವಾಮಿ ವಿವೇಕಾನಂದರು ಇಂದು ಜೀವಂತವಿದ್ದಿದ್ದರೆ ಇದೇನಾಯಿತು ನನ್ನ ದೇಶಕ್ಕೆ ಎಂದು ಮರುಗಬೇಕಾಗಿತ್ತು. ಮುಷ್ತಾಕ್ ಅವರನ್ನು  ಮುಸ್ಲಿಂ, ಅಥವಾ ಮಹಿಳೆ ಅಥವಾ ಕಮ್ಯೂನಿಸ್ಟ್ ಎಂದೆಲ್ಲಾ ನೋಡುವ ಬದಲಿಗೆ, ಅವರನ್ನು ಕನ್ನಡದ ಕವಿಯಾಗಿ ಕಂಡರೆ ಮಾತ್ರ ದಸರಾ ಉದ್ಘಾಟನೆಗೆ ಅವರು ತಕ್ಕ ವ್ಯಕ್ತಿಯೇ ಅಲ್ಲವೆ ಎಂಬುದು ತಿಳಿಯುತ್ತದೆ.  ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಸಂಪೂರ್ಣ ಸ್ವಂತ ವಿಚಾರವಾಗಿದ್ದು, ಸಾಬೀತು ಪಡಿಸುವ ಅಗತ್ಯ ಮುಷ್ತಾಕ್ ಅವರಿಗಿಲ್ಲ. ಎಲ್ಲಾ ಧರ್ಮಗಳನ್ನು ಗೌರವಿಸುವ ನಾನು ಪ್ರೀತಿ ಮತ್ತು ಗೌರವದಿಂದ ದಸರಾ ಉದ್ಘಾಟಿಸುತ್ತೇನೆ ಎಂದಿರುವ ಬಾನು ಮುಷ್ತಾಕ್‍ರವರ ಉದ್ಘಾಟನಾ ಮಾತುಗಳನ್ನು ಕೇಳಲು ಕರ್ನಾಟಕದ ಜನತೆ ಎದುರು ನೋಡುತ್ತಿದೆ. ಈ ಕೋಮುವಾದದ ರಾಜಕಾರಣವನ್ನು ಮೀರಿ ಸಾಮರಸ್ಯದ ಹಣತೆ ಎಲ್ಲರೆದೆಯಲ್ಲಿ ಬೆಳಗಲಿ ಎಂಬುದೊಂದೇ ಆಶಯ.

ಲತಾಮಾಲಾ

ಲೇಖಕರು 

ಇದನ್ನೂ ಓದಿ- ಬಾನು ಹೇಳಿದ್ದರಲ್ಲಿ ತಪ್ಪೇನಿದೆ?

More articles

Latest article