ಮುಜಾಫರ್ ಪುರ್: ಮೂರು ತಿಂಗಳ ಹಿಂದೆ ಪಾಕಿಸ್ತಾನದ ಜತೆ ನಡೆದ ಸಂಘರ್ಷವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚಿಸಿದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡರು ಎಂದು ಕಾಂಗ್ರೆಸ್ ನಾಯಕ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಮುಜಫರ್ ಪುರ್ ಜಿಲ್ಲೆಯಲ್ಲಿ ನಡೆದ ಮತದಾರ ಅಧಿಕಾರ ಯಾತ್ರೆ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ 24 ಗಂಟೆಗಳಲ್ಲಿ ಕದನ ವಿರಾಮವನ್ನು ಒಪ್ಪಿಕೊಳ್ಳುವಂತೆ ಸೂಚಿಸಿದ್ದರು. ಟ್ರಂಪ್ ಆದೇಶವನ್ನು ಪ್ರಧಾನಿ ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದ್ದರು ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಟ್ರಂಪ್ 15ಕ್ಕೂ ಹೆಚ್ಚು ಬಾರಿ ಭಾರತ ಪಾಕಿಸ್ತಾನ ಸಂಘರ್ಷವನ್ನು ಕೊನೆಗೊಳಿಸಿದ್ದು ನಾನೇ ಎಂದು ಪ್ರತಿಪಾದಿಸಿದ್ದಾರೆ., ಆದರೆ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ನಿರಾಕರಿಸಿದ್ದರು. ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆಯ ಮೂಲಕ ಮಿಲಿಟರಿ ಕ್ರಮಗಳನ್ನು ನಿಲ್ಲಿಸಿವೆ ಎಂದು ತಿಳಿಸಿದ್ದರು.
ಸಮಾವೇಶದಲ್ಲಿ ಇಂಡಿಯಾ ಬ್ಲಾಕ್ ಪಾಲುದಾರ ಪಕ್ಷಗಳಾದ ಡಿಎಂಕೆ ಮುಖಮಡ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮತ್ತು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಭಾಗವಹಿಸಿದ್ದರು.