ನವದೆಹಲಿ: ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದ್ದರೆ ಭಾರತ ಅದನ್ನು ಶೇ. 100ಕ್ಕೆ ದ್ವಿಗುಣಗೊಳಿಸಬೇಕು. ಆಗ ಮಾತ್ರ ಅಮೆರಿಕಕ್ಕೆ ಪಾಠ ಕಲಿಸಲು ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲಿನ ಶೇ. 11ರಷ್ಟು ಸುಂಕವನ್ನು ಮನ್ನಾಮಾಡಲು ನಿರ್ಧರಿಸಿದೆ. ಈ ನಿರ್ಧಾರದಿಂದ ದೇಶದ ರೈತರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕದಿಂದ ಆಮದು ಮಾಡಲಾಗುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕವನ್ನು ವಿಧಿಸಬೇಕು. ಮೋದಿ ಅವರು ಇಂತಹ ದಿಟ್ಟ ತೆಗೆದುಕೊಂಡರೆ ಇಡೀ ದೇಶ ಅವರನ್ನು ಬೆಂಬಲಿಸಲಿದೆ ಎಂದರು.
ಅಮೆರಿಕ ಹೇರಿದ ಒತ್ತಡದ ತಂತ್ರಗಳಿಗೆ ಅನೇಕ ದೇಶಗಳು ಬಲಿಯಾಗಲಿಲ್ಲ. ಬದಲಾಗಿ ಅಮೆರಿಕದ ಮೇಲೆ ಪ್ರತಿ ಸುಂಕ ವಿಧಿಸಿ ಪ್ರತೀಕಾರ ತೀರಿಸಿಕೊಂಡಿದ್ದವು. ಅದೇ ಮಾದರಿಯಲ್ಲಿ ಭಾರತವೂ ಹೆಚ್ಚುವರಿ ಸುಂಕಗಳನ್ನು ವಿಧಿಸಿ ದೃಢ ನಿರ್ಧಾರ ಪ್ರಕಟಿಸಬೇಕು. ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದ್ದರೆ ಭಾರತ ಅದನ್ನು ಶೇ. 100ಕ್ಕೆ ದ್ವಿಗುಣಗೊಳಿಸಬೇಕು ಎಂದರು.
ಇತ್ತೀಚೆಗೆ ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಭಾರತವು ಶೇ 11ರಷ್ಟು ಸುಂಕ ವಿಧಿಸುತ್ತಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಆ.19ರಿಂದ 30ರವರೆಗೆ ಈ ಸುಂಕವನ್ನು ಮನ್ನಾ ಮಾಡಲು ನಿರ್ಧರಿಸಿದೆ. ಅಮೆರಿಕದ ಹತ್ತಿಯು ಸ್ವದೇಶಕ್ಕಿಂತ ದುಬಾರಿಯಾಗುತ್ತಿತ್ತು. ಆದರೆ ಇದೀಗ ಜವಳಿ ಕೈಗಾರಿಕೆಗಳಿಗೆ ಕಡಿಮೆ ಬೆಲೆಗೆ ಹತ್ತಿ ಪೂರೈಕೆಯಾಗಲಿದ್ದು, ದೇಶೀಯ ಹತ್ತಿ ಮಾರುಕಟ್ಟೆಯ ಬೇಡಿಕೆ ಕುಸಿತವಾಗಲಿದೆ. ಹತ್ತಿ ಬೆಳೆಯುವ ಪಂಜಾಬ್, ತೆಲಂಗಾಣ, ವಿದರ್ಭ ಮತ್ತು ಗುಜರಾತ್ ರಾಜ್ಯಗಳ ರೈತರು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.