ಹಲ್ಮಿಡಿ-ಬಾದಾಮಿ ಶಾಸನಗಳ ಕನ್ನಡ : ಕಾನೂನಿನಿಂದ ಕಾವ್ಯಕ್ಕೆ

Most read

ಹಲ್ಮಿಡಿ ಶಾಸನವು ಕನ್ನಡದ ಶಿಲಾಕ್ಷರ ಪರಂಪರೆಗೆ ಹಾಕಿದ ಪ್ರಾಚೀನ ಅಡಿಪಾಯವಾದರೆ, ಆ ಅಡಿಪಾಯದ ಮೇಲೆ ರೂಪುಗೊಂಡ ಮೊದಲ ಕಾವ್ಯಶಿಲ್ಪವೇ ಬಾದಾಮಿ ಶಾಸನ. ಈ ಎರಡೂ ಶಾಸನಗಳು, ಸುಮಾರು ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಕನ್ನಡ ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಧಾರೆಗಳು ತಲುಪಿದ ಮಹತ್ವಪೂರ್ಣ ಬೆಳವಣಿಗೆಗೆ ಎಂದಿಗೂ ಮಾದರಿಯಾಗಿರುತ್ತವೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.

ಅಕ್ಷರದಿಂದ ಅಸ್ಮಿತೆಗೆ

ಯಾವುದೇ ಒಂದು ಜನಾಂಗದ ಸಾಂಸ್ಕೃತಿಕ ಪ್ರಜ್ಞೆಯು ಸ್ಥಗಿತವಾದದ್ದಲ್ಲ; ಅದು ನಿರಂತರ ಸಂಘರ್ಷ ಮತ್ತು ಪಲ್ಲಟಗಳ ಮೂಲಕ ತನ್ನನ್ನು ತಾನು ಮರುಶೋಧಿಸಿಕೊಳ್ಳುತ್ತಲೇ ಇರುತ್ತದೆ. ಕನ್ನಡದ ಸಂದರ್ಭದಲ್ಲಿ ಈ ತಾತ್ವಿಕ ಪಲ್ಲಟಕ್ಕೆ ಮೂರ್ತ ಸಾಕ್ಷಿಗಳಾಗಿ ನಿಲ್ಲುವುದು ಕನ್ನಡದ ಪ್ರಾಚೀನ ಲಿಖಿತ ದಾಖಲೆಗಳಾದ ಹಲ್ಮಿಡಿ (ಕ್ರಿ.ಶ.450) ಮತ್ತು ಬಾದಾಮಿಯ ಕಪ್ಪೆ ಅರಭಟ್ಟನ(ಕ್ರಿ.ಶ.700) ಶಾಸನಗಳು.

ರಾಜಸತ್ತೆಯು ತನ್ನ ಅಧಿಕಾರ ಮತ್ತು ಆಡಳಿತವನ್ನು ಶಿಲೆಯ ಮೇಲಿನ ಅಕ್ಷರಗಳ ಮೂಲಕ ಶಾಶ್ವತಗೊಳಿಸಲು ಯತ್ನಿಸುತ್ತದೆ. ಇದಕ್ಕೆ ಕದಂಬರ ಕಾಲದ ಹಲ್ಮಿಡಿ ಶಾಸನ ಒಂದು ಶ್ರೇಷ್ಠ ಉದಾಹರಣೆ. ದೀರ್ಘಕಾಲದವರೆಗೆ ಕನ್ನಡದ ಮೊದಲ ಶಾಸನವೆಂದೇ ಪರಿಗಣಿಸಲಾಗಿದ್ದ ಇದು, ಕನ್ನಡಕ್ಕೆ ಒಂದು ಆಡಳಿತಾತ್ಮಕ ಅಸ್ಮಿತೆಯನ್ನು ನೀಡಿದ ಪ್ರಾಚೀನ ದಾಖಲೆಯಾಗಿದೆ. ಆದರೆ ಕಾಲಾನಂತರದಲ್ಲಿ, ಅದೇ ರಾಜಸತ್ತೆಯು ಭಾಷೆಯಲ್ಲಿ ಕೇವಲ ಆಜ್ಞೆಯನ್ನಲ್ಲದೆ, ಹೊಸ ಶಕ್ತಿಯನ್ನೂ ಕಂಡುಕೊಂಡಿತು. ಬಾದಾಮಿ ಶಾಸನದ ಮೂಲಕ ಭಾಷೆಯನ್ನು ಜನಾಂಗದ ಸ್ವಾಭಿಮಾನ ಮತ್ತು ತಾತ್ವಿಕತೆಯ ‘ಅಭಿವ್ಯಕ್ತಿ’ಯಾಗಿ ಅರಳಿಸಿ, ಕನ್ನಡಕ್ಕೆ ಒಂದು ಸಾಂಸ್ಕೃತಿಕ ಅಸ್ಮಿತೆಯನ್ನು ತಂದುಕೊಟ್ಟಿತು.

ಹಲ್ಮಿಡಿ ಶಾಸನ

ಹೀಗಾಗಿಯೇ, ಹಲ್ಮಿಡಿಯಿಂದ ಬಾದಾಮಿಗೆ ಇರುವ ಅಂತರವು ಕೇವಲ ಕಾಲದ್ದಲ್ಲ, ತತ್ವದ್ದು. ಈ ಚಾರಿತ್ರಿಕ ಪಲ್ಲಟದ ಸ್ವರೂಪವನ್ನು ಶೋಧಿಸಲು ಈ ಬರಹವು ಕೆಲವು ಮೂಲಭೂತ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತದೆ: ರಾಜಕೀಯ-ಕಾನೂನಿನ ಒಪ್ಪಂದವಾಗಿದ್ದ ‘ಪ್ರಭುತ್ವ’ವು ವೀರನೊಬ್ಬನ ‘ನೈತಿಕ ಆದರ್ಶ’ವಾಗಿ ಮರುಹುಟ್ಟು ಪಡೆದದ್ದು ಹೇಗೆ? ಆಡಳಿತಾತ್ಮಕ ಅನಿವಾರ್ಯತೆಯಾಗಿದ್ದ ‘ಯುದ್ಧ’ವು ವ್ಯಕ್ತಿಯ ‘ಆತ್ಮಗೌರವದ’ ಪರೀಕ್ಷೆಯಾಗಿ ಮತ್ತು ಸಾಂಸ್ಥಿಕ ‘ನಿಷ್ಠೆ’ಯು ‘ವೈಯಕ್ತಿಕ ಶೌರ್ಯ’ದ ಸಂಕೇತವಾಗಿ ಪರಿವರ್ತನೆಗೊಂಡಿದ್ದು ಏಕೆ? ಮುಖ್ಯವಾಗಿ, ‘ಸಂಘರ್ಷ’ದ ನೆಲೆಯೇ ಆರಂಭದಲ್ಲಿ ಆಡಳಿತದ ಸಾಧನವಾಗಿದ್ದ ‘ಕನ್ನಡ ಭಾಷೆ’ಗೆ ಭಾವತೀವ್ರ ‘ಕಾವ್ಯಭಾಷೆ’ಯಾಗಿ ಅರಳಲು ಸ್ಫೂರ್ತಿ ನೀಡಿತೇ? ಈ ಪ್ರಶ್ನೆಗಳ ಮೂಲಕವೇ, ಆಡಳಿತಾತ್ಮಕ ದಾಖಲೆಯಿಂದ ಆತ್ಮಗೌರವದ ಘೋಷಣೆಯವರೆಗೆ ಕನ್ನಡ ಪ್ರಜ್ಞೆಯು ಸಾಗಿದ ಹಾದಿಯನ್ನು ವಿಶ್ಲೇಷಿಸುತ್ತದೆ.

ವ್ಯವಸ್ಥೆಯಿಂದ ವ್ಯಕ್ತಿತ್ವಕ್ಕೆ

ಹಲ್ಮಿಡಿ ಶಾಸನದಲ್ಲಿ ಪ್ರಭುತ್ವವು ಒಂದು ಶ್ರೇಣೀಕೃತ ಮತ್ತು ಸಾಂಸ್ಥಿಕ ವ್ಯವಸ್ಥೆಯಾಗಿ ಅನಾವರಣಗೊಳ್ಳುತ್ತದೆ. ಕದಂಬ ರಾಜ ಕಕುಸ್ಥವರ್ಮನು ಪರಮಾಧಿಕಾರಿಯಾದರೂ, ಅವನ ಅಧಿಕಾರವು ಸಾಮಂತರು ಮತ್ತು ಸ್ಥಳೀಯ ವೀರರ ನಿಷ್ಠೆಯ ಮೇಲೆ ನಿಂತಿತ್ತು. ಇಲ್ಲಿ ಪ್ರಭುತ್ವವು ಯೋಧರ ಸೇವೆಗೆ ಪ್ರತಿಯಾಗಿ ‘ಬಾಳ್ಗೞ್ಚು’(ಖಡ್ಗ ತೊಳೆಯುವುದು, ವೀರನ ಪರಾಕ್ರಮಕ್ಕೆ ಮೆಚ್ಚಿ ಕೊಡುವ ಉಡುಗೊರೆ) ರೂಪದಲ್ಲಿ ಭೂದಾನವನ್ನು ನೀಡುತ್ತದೆ. ಇದು ರಾಜನ ಪೋಷಣೆ ಮತ್ತು ಯೋಧನ ಸೇವೆಯ ನಡುವಿನ ವ್ಯಾವಹಾರಿಕ ಒಡಂಬಡಿಕೆಯನ್ನು ಸಾರುತ್ತದೆ. ಈ ದಾನವನ್ನು ಉಲ್ಲಂಘಿಸಿದವರಿಗೆ ‘ಮಹಾಪಾತಕ’ ತಟ್ಟುತ್ತದೆ ಎಂಬ ಶಾಪಾಶಯವು ರಾಜಾಜ್ಞೆಗೆ ಧಾರ್ಮಿಕ ಮತ್ತು ಕಾನೂನಾತ್ಮಕ ಕವಚವನ್ನು ತೊಡಿಸುತ್ತದೆ.

ಇದಕ್ಕೆ ತೀರಾ ಭಿನ್ನವಾಗಿ, ಬಾದಾಮಿ ಶಾಸನದಲ್ಲಿ ಪ್ರಭುತ್ವದ ಪರಿಕಲ್ಪನೆಯು ಸಾಂಸ್ಥಿಕ ಚೌಕಟ್ಟನ್ನು ಮೀರಿ ವ್ಯಕ್ತಿನಿಷ್ಠ ಆದರ್ಶವಾಗಿ ರೂಪುಗೊಳ್ಳುತ್ತದೆ. ಇಲ್ಲಿ ಪ್ರಭುತ್ವದ ಆದರ್ಶವು ಕಪ್ಪೆ ಅರಭಟ್ಟನ ವ್ಯಕ್ತಿತ್ವದಲ್ಲೇ ಮೂರ್ತಗೊಂಡಿದೆ. ‘ಶಿಷ್ಟಜನಪ್ರಿಯ,’ ‘ಕಷ್ಟಜನವರ್ಜಿತ’ ಮತ್ತು ‘ಕಲಿಯುಗ ವಿಪರೀತ’ ಎಂಬ ವಿಶೇಷಣಗಳು ಕೇವಲ ಹೊಗಳಿಕೆಯಲ್ಲ; ಅವು ಆದರ್ಶ ಪ್ರಭುವಿನ ಕರ್ತವ್ಯಗಳನ್ನು ವ್ಯಾಖ್ಯಾನಿಸುವ ರಾಜಧರ್ಮದ ಸೂತ್ರಗಳು. ‘ಮಾಧವನೀತನ್ ಪೆರನಲ್ಲ’ ಎಂಬ ಉಕ್ತಿಯು ರಾಜನನ್ನು ವಿಷ್ಣುವಿಗೆ ಸಮೀಕರಿಸುವ ಮೂಲಕ, ಅವನ ಅಧಿಕಾರಕ್ಕೆ ದೈವಿಕ ಮಾನ್ಯತೆಯನ್ನು ನೀಡುತ್ತದೆ. ಹೀಗೆ, ಹಲ್ಮಿಡಿಯಲ್ಲಿ ರಾಜಕೀಯ ವ್ಯವಸ್ಥೆಯಾಗಿದ್ದ ಪ್ರಭುತ್ವವು, ಬಾದಾಮಿಯಲ್ಲಿ ನೈತಿಕ ಮತ್ತು ತಾತ್ವಿಕ ಶಕ್ತಿಯಾಗಿ ಮರುಹುಟ್ಟು ಪಡೆಯುತ್ತದೆ.

ರಾಜನೀತಿಯಿಂದ ಆತ್ಮಗೌರವಕ್ಕೆ

ಬಾದಾಮಿ ಶಾಸನ

ಹಲ್ಮಿಡಿ ಮತ್ತು ಬಾದಾಮಿ ಶಾಸನಗಳು ಯುದ್ಧವನ್ನು ಎರಡು ವಿಭಿನ್ನ ತಾತ್ವಿಕ ನೆಲೆಗಳಲ್ಲಿ ಪ್ರತಿಪಾದಿಸುತ್ತವೆ. ಹಲ್ಮಿಡಿ ಶಾಸನದಲ್ಲಿ ಯುದ್ಧವು ಒಂದು ರಾಜಕೀಯ ಅನಿವಾರ್ಯತೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಯಾಗಿದೆ. ವಿಜ ಅರಸನು ಕೇಕಯ-ಪಲ್ಲವರ ವಿರುದ್ಧ ನಡೆಸಿದ ಹೋರಾಟವು ರಾಜ್ಯದ ಗಡಿಗಳನ್ನು ರಕ್ಷಿಸುವ ಸಾಂಸ್ಥಿಕ ಸಂಘರ್ಷವೇ ಹೊರತು ವೈಯಕ್ತಿಕ ಕಲಹವಲ್ಲ. ಇಲ್ಲಿ ಶೌರ್ಯಕ್ಕೆ ಭೂಮಿಯೇ ಪ್ರತಿಫಲ; ಯುದ್ಧವು ಪ್ರಭುತ್ವದ ವ್ಯಾವಹಾರಿಕ ನೀತಿಯ ಒಂದು ವಿಸ್ತರಣೆಯಾಗಿದೆ.

ಇದಕ್ಕೆ ತದ್ವಿರುದ್ಧವಾಗಿ, ಬಾದಾಮಿ ಶಾಸನವು ಯುದ್ಧವನ್ನು ವೀರನ ಅಸ್ಮಿತೆ, ನೈತಿಕತೆ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿ ಪರಿವರ್ತಿಸುತ್ತದೆ. ‘ವರನ್ತೇಜಸ್ವಿನೋ ಮೃತ್ತ್ಯರ್ನತು ಮಾನಾವಖಣ್ಡನಂ’ (ತೇಜಸ್ವಿಗಳಿಗೆ ಅವಮಾನಕ್ಕಿಂತ ಮರಣವೇ ಶ್ರೇಷ್ಠ) ಎಂಬ ಶ್ಲೋಕವೇ ಈ ಶಾಸನದ ಆತ್ಮವಾಗಿದೆ. ಇಲ್ಲಿ ಯುದ್ಧವು ಭೌತಿಕ ಲಾಭದ ಲೆಕ್ಕಾಚಾರವನ್ನು ಮೀರಿ, ‘ಮಾನ’ ರಕ್ಷಣೆಗಾಗಿ ನಡೆಸುವ ಧರ್ಮಯುದ್ಧವಾಗುತ್ತದೆ. ಕಪ್ಪೆ ಅರಭಟ್ಟನ ಯುದ್ಧನೀತಿಯು ‘ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ’ ಎಂಬ ನೈತಿಕ ಸೂತ್ರವನ್ನು ಆಧರಿಸಿದೆ. ಆದ್ದರಿಂದ ಯುದ್ಧವು ನೈತಿಕತೆಯ ಅಗ್ನಿಪರೀಕ್ಷೆಯಾಗುತ್ತದೆ. ‘ಕಟ್ಟಿದ ಸಿಂಘಮನ್… ಬಿಟ್ಟವೊಲ್’ ಎಂಬ ರೂಪಕವು ಅವನನ್ನು ಕೇವಲ ಯೋಧನಾಗಿ ಅಲ್ಲ, ಬದಲಾಗಿ ಎದುರಿಸಲಾಗದ ಒಂದು ನೈತಿಕ ಶಕ್ತಿಯಾಗಿ ಬಿಂಬಿಸುತ್ತದೆ. ಹೀಗೆ ಹಲ್ಮಿಡಿಯಲ್ಲಿ ಪ್ರಭುತ್ವದ ರಾಜಕೀಯ ದಾಳವಾಗಿದ್ದ ಯುದ್ಧವು, ಬಾದಾಮಿಯಲ್ಲಿ ವೀರನ ಆತ್ಮಗೌರವದ ಅಂತಿಮ ಪರೀಕ್ಷೆಯಾಗಿ ರೂಪುಗೊಳ್ಳುತ್ತದೆ.

ಒಪ್ಪಂದದಿಂದ ಸಿದ್ಧಾಂತಕ್ಕೆ

ಹಲ್ಮಿಡಿ ಮತ್ತು ಬಾದಾಮಿ ಶಾಸನಗಳಲ್ಲಿ ಪ್ರಭುತ್ವ-ಜನತೆಯ ಸಂಬಂಧದ ಚಿತ್ರಣ ಸಂಪೂರ್ಣ ಭಿನ್ನವಾಗಿದೆ. ಹಲ್ಮಿಡಿಯಲ್ಲಿ, ಈ ಸಂಬಂಧವು ಒಂದು ಸ್ಪಷ್ಟ ಒಪ್ಪಂದ. ಇಲ್ಲಿ ‘ಜನತೆ’ ಎಂದರೆ ಎಲ್ಲರೂ ಅಲ್ಲ; ಅವರು ‘ಸೇನ್ದ್ರಕ ಬಣೋಭಯ ದೇಶದಾ ವೀರಪುರುಷ’ರಂತಹ ಪ್ರಭಾವಿ ಗುಂಪು. ಅವರ ಸಾಕ್ಷಿತ್ವಕ್ಕೆ ಪ್ರತಿಯಾಗಿ, ರಾಜನು ಯೋಧನಿಗೆ ಭೂಮಿ ನೀಡುತ್ತಾನೆ. ಇದು ಸೇವೆ-ಪ್ರತಿಫಲದ ನೇರ ವ್ಯವಹಾರ. ನಿಷ್ಠೆಯನ್ನು ಪ್ರತಿಫಲ ನೀಡಿ ಗಳಿಸಿಕೊಳ್ಳುವುದು ಇಲ್ಲಿನ ರಾಜನೀತಿ.

ಬಾದಾಮಿಯಲ್ಲಿ ಈ ಚಿತ್ರಣ ತಲೆಕೆಳಗಾಗುತ್ತದೆ. ಇಲ್ಲಿ ಸಂಬಂಧವು ಒಪ್ಪಂದದ್ದಲ್ಲ, ಸಿದ್ಧಾಂತದ್ದು. ‘ಸಾಧುಗೆ ಸಾಧು… ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್’ ಎಂಬ ತ್ರಿಪದಿಯು ಪ್ರಭುತ್ವದ ಸಿದ್ಧಾಂತವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತದೆ. ಹಾಗಾಗಿ ಜನರನ್ನು ‘ಸಾಧು’ ಮತ್ತು ‘ಕಲಿ’ ಎಂದು ನೈತಿಕವಾಗಿ ವಿಂಗಡಿಸಲಾಗಿದೆ. ನೀನು ಸಜ್ಜನನಾದರೆ ರಾಜನಿಂದ ನಿನಗೆ ರಕ್ಷಣೆ, ದುಷ್ಟನಾದರೆ ಶಿಕ್ಷೆ. ರಾಜನು ‘ಮಾಧವನೀತನ್ ಪೆರನಲ್ಲ’ವಾದ್ದರಿಂದ ಅವನ ತೀರ್ಪು ದೈವಿಕ; ಅವನ ಕೋಪವು ‘ಕಟ್ಟಿದ ಸಿಂಹವನ್ನು ಬಿಟ್ಟಂತೆ’ ಭಯಾನಕ. ಇಲ್ಲಿ ಜನತೆ ಸಾಕ್ಷಿಯಲ್ಲ, ರಾಜನೀತಿಯ ನೇರ ಗುರಿ.

ಬಾದಾಮಿಯ ಕಪ್ಪೆ ಅರಭಟ್ಟನ (ಕ್ರಿ.ಶ.700) ಶಾಸನ

ಎರಡೂ ಶಾಸನಗಳು ಪ್ರಭುತ್ವದ ನ್ಯಾಯಸಮ್ಮತತೆಯನ್ನು ಯುದ್ಧ ಮತ್ತು ಧರ್ಮಪಾಲನೆಯ ಮೇಲೆ ಸ್ಥಾಪಿಸುತ್ತವೆ. ಹಲ್ಮಿಡಿಯ ಪ್ರಭುತ್ವವು ಕಾನೂನಿನ ಚೌಕಟ್ಟಿನಲ್ಲಿ ವ್ಯವಹರಿಸಿದರೆ, ಬಾದಾಮಿಯ ಪ್ರಭುತ್ವವು ನೈತಿಕ ಆದರ್ಶವಾಗಿ ನಿಲ್ಲುತ್ತದೆ. ಹಲ್ಮಿಡಿ ಪ್ರತಿಫಲ ನೀಡಿ ನಿಷ್ಠೆ ಖರೀದಿಸಿದರೆ, ಬಾದಾಮಿ ನೈತಿಕತೆ ಬೋಧಿಸಿ ಮತ್ತು ಭಯ ಹುಟ್ಟಿಸಿ ನಿಷ್ಠೆಯನ್ನು ಗಳಿಸಿಕೊಳ್ಳುತ್ತದೆ. ಪ್ರಭುತ್ವದ ರಕ್ಷಣೆ ಎಂಬುದು ನಿರಂಕುಶ ಹಕ್ಕಲ್ಲ, ಬದಲಾಗಿ ಅದು ಜನತೆಯ ನಿಷ್ಠೆ ಮತ್ತು ಸಜ್ಜನಿಕೆಯ ಮೇಲೆ ನಿಂತಿರುವ ಒಂದು ಷರತ್ತುಬದ್ಧ ಭರವಸೆ ಎಂಬುದನ್ನು ಈ ಶಾಸನಗಳು ದೃಢಪಡಿಸುತ್ತವೆ.

ಆಡಳಿತದ ಸಾಧನದಿಂದ ಆತ್ಮದ ಅಭಿವ್ಯಕ್ತಿಗೆ

ಈ ರಾಜಕೀಯ ಪಲ್ಲಟವು ಭಾಷೆಯಲ್ಲೇ ಮೊದಲು ಸ್ಪಷ್ಟವಾಗುತ್ತದೆ.  ಹಲ್ಮಿಡಿಯ ಭಾಷೆ ಅದರ ಉದ್ದೇಶದಷ್ಟೇ ನೇರ; ಅದೊಂದು ಆಡಳಿತದ ಸಾಧನ. ಅದರ ಉದ್ದೇಶ ಒಂದೇ ದಾನದ ದಾಖಲಾತಿ. ಹೀಗಾಗಿ, ಭಾಷೆ ನೇರ, ಶುಷ್ಕ ಮತ್ತು ಅಲಂಕಾರ ರಹಿತ. ಅಂದರೆ ಇಲ್ಲಿನ ಪದಗಳಿಗೆ ಸೌಂದರ್ಯದ ಹೊದಿಕೆಯಿಲ್ಲ, ಕೇವಲ ಕಾನೂನಿನ ನಿಖರತೆಯಿದೆ. ಇದು ಕವಿಯ ಲೇಖನಿಯಿಂದಲ್ಲ, ಕಾರಕೂನನ ಶಾಯಿಯಿಂದ ಮೂಡಿದಂತೆ ಕಾಣುವ ಆಡಳಿತಾತ್ಮಕ ದಾಖಲೆ.

ಬಾದಾಮಿಯಲ್ಲಿ ಈ ಚಿತ್ರಣ ಸಂಪೂರ್ಣ ಬದಲು. ಇಲ್ಲಿ ಕನ್ನಡವು ಆಡಳಿತದ ಭಾಷೆಯಲ್ಲ; ಅದು ಆತ್ಮದ ಭಾಷೆ. ಇಲ್ಲಿಯ ಪ್ರೌಢ ಹಳಗನ್ನಡವು ತಾತ್ವಿಕತೆ ಮತ್ತು ಭಾವಾವೇಶವನ್ನು ಹೊಮ್ಮಿಸುವ ಕಾವ್ಯಭಾಷೆಯಾಗಿ ಮೈದಾಳಿದೆ. ತ್ರಿಪದಿಯಂತಹ ದೇಸಿ ಛಂದಸ್ಸಿನಲ್ಲಿ, ಪ್ರಾಸಬದ್ಧವಾಗಿ ವೀರನ ಅಂತರಂಗವನ್ನು ಅನಾವರಣಗೊಳಿಸುವ ಈ ಶಾಸನವು ಪ್ರಜ್ಞಾಪೂರ್ವಕ ಕಲಾಕೃತಿಯಾಗಿದೆ.  ಕನ್ನಡವು ಕೇವಲ ವ್ಯಾವಹಾರಿಕ ಭಾಷೆಯಲ್ಲ, ಅದು ಉನ್ನತ ಚಿಂತನೆ ಮತ್ತು ಭಾವನೆಗಳನ್ನು ಹೊಮ್ಮಿಸಬಲ್ಲ ಸಾಹಿತ್ಯಿಕ ಶಕ್ತಿ ಎಂಬುದಕ್ಕೆ ಬಾದಾಮಿಯೇ ಮೊದಲ ಮುದ್ರೆ. ಹಲ್ಮಿಡಿ ಒಂದು ಕಾನೂನು ಪತ್ರವಾದರೆ, ಬಾದಾಮಿ ಒಂದು ಕಾವ್ಯಕೃತಿ. ಇವುಗಳಲ್ಲಿನ ಕನ್ನಡವು ಕೇವಲ ದಾಖಲೆಯ ಭಾಷೆಯಿಂದ, ಅನುಭವವನ್ನು ಕಟ್ಟಿಕೊಡುವ ಭಾಷೆಯಾಗಿ ಬೆಳೆದ ಕಥೆಯನ್ನು ಈ ಶಾಸನಗಳು ಹೇಳುತ್ತವೆ.

ಯುದ್ಧವು ಭಾಷೆಗೆ ನೀಡಿದ ರೂಪ

ಯುದ್ಧವೇ ಕನ್ನಡದ ಲಿಖಿತ ಪರಂಪರೆಗೆ ನಾಂದಿ ಹಾಡಿತು ಎಂಬುದಕ್ಕೆ ಈ ಶಾಸನಗಳೇ ಪುರಾವೆ. ಹಲ್ಮಿಡಿ ಶಾಸನ ಹುಟ್ಟಿದ್ದೇ ಒಂದು ಯುದ್ಧದ ಗೆಲುವಿನಿಂದ. ಗೆದ್ದದ್ದನ್ನು ದಾಖಲಿಸುವ, ಕೊಟ್ಟ ದಾನವನ್ನು ಖಚಿತಪಡಿಸುವ ಆಡಳಿತಾತ್ಮಕ ಅನಿವಾರ್ಯತೆಯೇ ಕನ್ನಡದ ಲಿಖಿತ ಪರಂಪರೆಯ ಬೀಜವನ್ನು ಬಿತ್ತಿತು. ಇಲ್ಲಿ ಸಂಘರ್ಷವು ಒಂದು ಕಾನೂನುಬದ್ಧ ದಾಖಲೆಗೆ ಜನ್ಮ ನೀಡಿತು.

ಬಾದಾಮಿಯಲ್ಲಿ ಯುದ್ಧವು ದಾಖಲೆಯಲ್ಲ, ಅದೊಂದು ಸ್ಫೂರ್ತಿ. ಇದು ಗೆದ್ದ ರಾಜನ ವರದಿಯಲ್ಲ, ಸೋಲೊಪ್ಪದ ವೀರನ ಆತ್ಮಗೌರವದ ಕಿಡಿ. ಅವಮಾನಕ್ಕಿಂತ ಮರಣವೇ ಶ್ರೇಷ್ಠ ಎಂಬ ನೈತಿಕ ನಿಲುವೇ ಈ ಶಾಸನದ ಸೃಷ್ಟಿಗೆ ಮೂಲ ಪ್ರೇರಣೆ. ಈ ಆದರ್ಶವೇ ಕನ್ನಡದ ದೇಸಿ ಛಂದಸ್ಸಾದ ತ್ರಿಪದಿಗೆ ಜೀವ ತುಂಬಿ, ಅದನ್ನು ಕಾವ್ಯವನ್ನಾಗಿಸಿತು. ಹಲ್ಮಿಡಿಯಲ್ಲಿ ಯುದ್ಧವು ‘ದಾಖಲೆ’ಯನ್ನು ಸೃಷ್ಟಿಸಿದರೆ, ಬಾದಾಮಿಯಲ್ಲಿ ಅದು ‘ಕಾವ್ಯ’ಕ್ಕೆ ಜನ್ಮ ನೀಡಿತು. ಒಂದು ಸಂಘರ್ಷವು ಭಾಷೆಗೆ ಕಾನೂನಿನ ಬಲ ನೀಡಿದರೆ, ಇನ್ನೊಂದು ಸಂಘರ್ಷವು ಅದಕ್ಕೆ ಕಲೆಯ ಚೈತನ್ಯವನ್ನು ನೀಡಿತು.

ಶಿಲಾಕ್ಷರದಿಂದ ಕಾವ್ಯಶಿಲ್ಪದವರೆಗೆ

ಹಲ್ಮಿಡಿ ಮತ್ತು ಬಾದಾಮಿ ಶಾಸನಗಳು ಕನ್ನಡ ಸಾಂಸ್ಕೃತಿಕ ಚರಿತ್ರೆಯ ಎರಡು ನಿರ್ಣಾಯಕ ಘಟ್ಟಗಳನ್ನು ಪ್ರತಿನಿಧಿಸುತ್ತವೆ. ಇವುಗಳ ನಡುವಿನ ಪಯಣವು, ಕನ್ನಡ ಪ್ರಜ್ಞೆಯು ಸಾಂಸ್ಥಿಕ ಮತ್ತು ವ್ಯಾವಹಾರಿಕ ಚೌಕಟ್ಟನ್ನು ಭೇದಿಸಿ ವೈಯಕ್ತಿಕ ಶೌರ್ಯ, ನೈತಿಕ ಆದರ್ಶ ಮತ್ತು ಕಾವ್ಯಾತ್ಮಕ ಅಭಿವ್ಯಕ್ತಿಯೆಡೆಗೆ  ಸಾಗಿದ ಹಾದಿಯನ್ನು ಸ್ಪಷ್ಟಪಡಿಸುತ್ತದೆ. ಈ ಪರಿವರ್ತನೆಯಲ್ಲಿ  ಪ್ರಭುತ್ವವು ಕಾನೂನಾತ್ಮಕ ಒಪ್ಪಂದದಿಂದ ನೈತಿಕ ಹೊಣೆಗಾರಿಕೆಗೆ, ಯುದ್ಧವು ರಾಜಕೀಯ ಅನಿವಾರ್ಯತೆಯಿಂದ ಸ್ವಾಭಿಮಾನದ ಸಂಘರ್ಷಕ್ಕೆ, ನಿಷ್ಠೆಯು ಪ್ರತಿಫಲದ ಪ್ರೇರಣೆಯಿಂದ ನೈತಿಕ ಬದ್ಧತೆಗೆ ಮತ್ತು ಭಾಷೆಯು ಆಡಳಿತಾತ್ಮಕ ದಾಖಲೆಯಿಂದ ಕಾವ್ಯಾತ್ಮಕ ಅಭಿವ್ಯಕ್ತಿಗೆ ಪರಿವರ್ತನೆಗೊಂಡಿತು. ಹಲ್ಮಿಡಿ ಶಾಸನವು ಕನ್ನಡದ ಶಿಲಾಕ್ಷರ ಪರಂಪರೆಗೆ ಹಾಕಿದ ಪ್ರಾಚೀನ ಅಡಿಪಾಯವಾದರೆ, ಆ ಅಡಿಪಾಯದ ಮೇಲೆ ರೂಪುಗೊಂಡ ಮೊದಲ ಕಾವ್ಯಶಿಲ್ಪವೇ ಬಾದಾಮಿ ಶಾಸನ. ಈ ಎರಡೂ ಶಾಸನಗಳು, ಸುಮಾರು ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ ಕನ್ನಡ ನಾಡಿನ ರಾಜಕೀಯ ಮತ್ತು ಸಾಂಸ್ಕೃತಿಕ ವಿಚಾರಧಾರೆಗಳು ತಲುಪಿದ ಮಹತ್ವಪೂರ್ಣ ಬೆಳವಣಿಗೆಗೆ ಎಂದಿಗೂ ಮಾದರಿಯಾಗಿರುತ್ತವೆ.

ಡಾ. ರವಿ ಸಿದ್ಲಿಪುರ

ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ- ಭಾರತೀಪ್ರಿಯರ ‘ಮೋಚಿ’ ಕಥೆ: ಸಬಾಲ್ಟರ್ನ್ ಓದು

More articles

Latest article