ತಿಮರೋಡಿ ಬಂಧನದ ಹಿಂದೆ ಕಾಂಗ್ರೆಸ್ಸಿನ ತಾರಾತಿಗಡಿ

Most read

ಕೊನೆಗೂ ಅಂದುಕೊಂಡಂತೆ ಮಹೇಶ ಶೆಟ್ಟಿ ತಿಮರೋಡಿಯವರನ್ನು ಬಂಧಿಸಲಾಗಿದೆ. ಕೊಲೆ ಸುಲಿಗೆ ಅತ್ಯಾಚಾರ ಪ್ರಕರಣಗಳೇನಿಲ್ಲ. ಧರ್ಮಸ್ಥಳದಲ್ಲಾದ ಸೌಜನ್ಯಳ ಮೇಲಿನ ಅಮಾನುಷ ದೌರ್ಜನ್ಯದ ವಿರುದ್ಧ ದೇವಸ್ಥಾನದ ಆಡಳಿತಾಧಿಕಾರಿಗಳನ್ನು ಪ್ರಶ್ನಿಸಿ ದಶಕಗಳ ಕಾಲ ಹೋರಾಟ ಮಾಡುತ್ತಲೇ ಬಂದ ತಿಮರೋಡಿಯವರನ್ನು ಬಂಧಿಸಲೇ ಬೇಕೆಂದು ಕಾಂಗ್ರೆಸ್ ಸರಕಾರ ಹಠಕ್ಕೆ ಬಿದ್ದಿತ್ತು.

ಮೊನ್ನೆ ಸದನದಲ್ಲೂ ತಿಮರೋಡಿಯವರ ಬಂಧನದ ಕುರಿತು ಆಳುವ ಹಾಗೂ ಪ್ರತಿಪಕ್ಷದವರಲ್ಲಿ ಅತ್ಯಾತುರ ಕಂಡುಬಂದಿತ್ತು. ಸಿಎಂ ಸಿದ್ದರಾಮಯ್ಯನವರು 24 ಕೊಲೆ ಮಾಡಿದ್ದಾರೆ ಎಂದು ಹೇಳಿದ ವಿಡಿಯೋ ಆಧರಿಸಿ ಇನ್ನೂ ಯಾಕೆ ಸರಕಾರ ಬಂಧಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಬ್ಬರಿಸಿದರು. ತಿಮರೋಡಿ ಹೇಳಿಕೆ ಕೊಟ್ಟು 48 ಗಂಟೆಯಾದರೂ ಇನ್ನೂ ಬಂಧನವಾಗಿಲ್ಲವೆಂಬುದು ಅಶೋಕರವರ ತಕರಾರು. ಅದಕ್ಕೆ ಬಿಜೆಪಿಯ ಶಾಸಕರಾದ ಸುನಿಲ್ ಕುಮಾರ್ ಹಾಗೂ ಸುರೇಶ್ ಕುಮಾರ್ ಧ್ವನಿಗೂಡಿದಿದರು. ಹೌದು ಆ ವಿಡಿಯೋ ನನ್ನ ಮೊಬೈಲಲ್ಲೂ ಇದೆ, ಸಿಎಂ ರವರಿಗೂ ಹೇಳಿರುವೆ, ಬಂಧಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎತ್ತರದ ಧ್ವನಿಯಲ್ಲಿ ಉತ್ತರಿಸಿದರು. ಹಿಂದು ಮುಂದು ನೋಡದೇ, ಸತ್ಯ ಏನೆಂದು ಅರಿಯದೇ ಗೃಹಸಚಿವ ಪರಮೇಶ್ವರರವರು “ಈಗಾಗಲೇ ತಿಮರೋಡಿಯವರ ಬಂಧನಕ್ಕೆ ಪೊಲೀಸರಿಗೆ ಸೂಚಿಸಲಾಗಿದೆ” ಎಂದು ಹೇಳಿದರು.

ಆದರೆ.. ಸಿಎಂ ಕೊಲೆಗಡುಕ ಎನ್ನುವುದು ಬಿಜೆಪಿ ಶಾಸಕ ಹರೀಶ್ ಪೂಂಜಾ 2023 ರ ಚುನಾವಣೆಯಲ್ಲೆ ಗೆದ್ದ ನಂತರ ಹೇಳಿದ್ದು ಅದನ್ನೇ ಎರಡು ವರ್ಷಗಳ ಹಿಂದೆ ತಿಮರೋಡಿಯವರು ಪ್ರತಿಧ್ವನಿಸಿದ್ದರು ಎಂಬ ಸತ್ಯ ಸಂಗತಿ ಬಯಲಾಯ್ತು. ಪೂಂಜಾರವರ ಮೂಲ ಮಾತುಗಳನ್ನು ಮರೆಮಾಚಿ ತಿಮರೋಡಿಯವರು ಆಡಿದ ಮಾತುಗಳನ್ನಷ್ಟೇ ಎಡಿಟ್ ಮಾಡಿ ಹರಿಬಿಡಲಾಗಿತ್ತು. ವಿವೇಚನೆಯನ್ನೇ ಮರೆತ ಸದನದ ನಾಯಕರುಗಳು ತಿಮರೋಡಿಯನ್ನು ಬಂಧಿಸುವ ಆತುರದಲ್ಲಿ ಮೂಲ ದ್ವೇಷಭಾಷಣಕಾರ ಹರೀಶ್ ಪೂಂಜಾರವರನ್ನು ನಿರ್ಲಕ್ಷಿಸಿದರು.

ಇಡೀ ಸದನ ಎಡಿಟೆಡ್ ವಿಡಿಯೋ ಆಧರಿಸಿ ತಿಮರೋಡಿಯವರ ಬಂಧನಕ್ಕೆ ಯಾಕೆ ತೊಡೆತಟ್ಟಿ ನಿಂತಿತ್ತು? ಎರಡು ವರ್ಷದ ಹಿಂದಿನ ಹೇಳಿಕೆಯ ವಿಡಿಯೋ ತುಣುಕನ್ನು 48 ಗಂಟೆಯ ಹಿಂದೆ ಹೇಳಿದ್ದು ಎಂದು ಯಾಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಆಳುವ ಪಕ್ಷದ ಡಿಸಿಎಂ ಡಿಕೆಶಿ ಹೇಳಿದ್ರು?. ಕನಿಷ್ಟ ತನಿಖೆ ಮಾಡದೇ ಬಂಧಿಸಲು ಸೂಚಿಸಿರುವೆ ಎಂದು ಯಾಕೆ ಗೃಹ ಸಚಿವರು ಸದನಕ್ಕೆ ತಿಳಿಸಿದರು?. ಇವರೆಲ್ಲರ ಆತುರ ನೋಡಿದರೆ ಇವರೆಲ್ಲರೂ ಧರ್ಮಸ್ಥಳದ ರೂವಾರಿಗಳ ತಾಳಕ್ಕೆ ಕುಣಿಯುವಂತಿದೆ.‌ ಧರ್ಮಸ್ಥಳದಲ್ಲಾದ ದೌರ್ಜನ್ಯಗಳ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಧ್ವನಿಗಳನ್ನು ಹತ್ತಿಕ್ಕುವುದಾಗಿದೆ. ಅದಕ್ಕಾಗಿಯೇ ತಿಮರೋಡಿಯವರನ್ನು ಬಂಧಿಸುವ ಮೂಲಕ ಹೋರಾಟಗಾರರನ್ನು ಹೆದರಿಸುವ ಹುನ್ನಾರ ಎದ್ದು ಕಾಣುತ್ತದೆ. ಧೂತ ಸಮೀರನನ್ನು ಬಂಧಿಸಿ ಯುಟ್ಯೂಬರ್ ಗಳನ್ನು ನಿಯಂತ್ರಿಸುವ ಶಡ್ಯಂತ್ರ ಶುರುವಾಗಿದೆ.

ಯಾವಾಗ ಸಿಎಂ ವಿರುದ್ಧ ಕೊಲೆ ಆರೋಪ ಮಾಡಿದ್ದು ತಿಮರೋಡಿಯವರಲ್ಲಾ ಎಂಬುದು ಹರೀಶ್ ಪೂಂಜಾರವರ ದ್ವೇಷ ಭಾಷಣದ ವಿಡಿಯೋದಿಂದ ಬಹಿರಂಗವಾಯ್ತೊ ಆಗ ಈ ಎಲ್ಲಾ ನಾಯಕರುಗಳು ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ಸದನದ ಹಾಗೂ ಜನತೆಯ ಕ್ಷಮೆ ಕೇಳಬೇಕಾಗಿತ್ತು. ಕೂಡಲೇ ಸದನದಲ್ಲೇ ಇದ್ದ ಹರೀಶ್ ಪೂಂಜಾರವರನ್ನು ಬಂಧಿಸಲು ಆದೇಶಿಸಬೇಕಿತ್ತು. ಆದರೆ ಇವರೆಲ್ಲರಿಗೂ ತಿಮರೋಡಿಯವರನ್ನು ಬಂಧಿಸಲು ನೆಪ ಬೇಕಿತ್ತು. ಆದರೆ ಯಾವಾಗ ಮೂಲ ದ್ವೇಷ ಭಾಷಣದ ವಿಡಿಯೋ ಹೊರಗೆ ಬಂತೋ ಆಗ ತಿಮರೋಡಿಯವರ ಮೇಲೆ ಇರುವ ಬೇರೆ ಕೇಸ್ ಗಳ ಕುರಿತು ವಿಚಾರಣೆ ಮಾಡಿಸಲಾಯ್ತು. ಅವರ ಮೇಲಿರುವ ಬಹುತೇಕ ಕೇಸ್ ಗಳು ಬಂಧಿಸುವ ಮಟ್ಟದವುಗಳಾಗಿರಲಿಲ್ಲ. ಸದನದಲ್ಲಿ ಹೇಳಿದ್ದರಿಂದ ಬಂಧಿಸಲೇ ಬೇಕಿತ್ತು. ಆರೆಸ್ಸೆಸ್ ಮುಖಂಡ್ ಬಿ.ಎಲ್.ಸಂತೋಷರವರನ್ನು ಅಯೋಗ್ಯ ಎಂದು ತಿಮರೋಡಿಯವರು ದೂಷಿಸಿದ ದೂರಿನ ಮೇರೆಗೆ ಆ 21 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯ್ತು. ಬಂಧನದ ಸುಳಿವನ್ನು ಅರಿತ ಯುಟ್ಯೂಬರ್ ಧೂತ ಸಮೀರ್ ಅದು ಹೇಗೋ ಹೋಗಿ ಮಂಗಳೂರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮಿನು ಪಡೆದು ಬಂಧನದಿಂದ ಬಚಾವಾದ. ಇನ್ನು ಗಿರೀಶ್ ಮಟ್ಟಣ್ಣನವರ ಬಂಧನ ಬಾಕಿ ಇದೆ.

ರಾಜಕೀಯ ಕಾರಣಕ್ಕೆ ದ್ವೇಷ ಭಾಷಣ ಮಾಡಿದವರನ್ನು ಬಂಧಿಸುವುದೇ ಆದರೆ ಈ ಬಿಜೆಪಿಯ ಬಹುತೇಕ ಪ್ರಮುಖ ನಾಯಕರು ಈಗ ಜೈಲಿನಲ್ಲಿರಬೇಕಿತ್ತು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ಏಳೆಂಟು ಗಂಭೀರ ಪ್ರಕರಣಗಳಿವೆ. ಹೈಕೋರ್ಟಲ್ಲಿ ತಡೆಯಾಜ್ಞೆ ಸಿಕ್ಕಿದೆಯಾದರೂ ಇಲ್ಲಿವರೆಗೂ ಅವುಗಳನ್ನು ತೆರುವು ಗೊಳಿಸಲು ರಾಜ್ಯ ಸರಕಾರ ಸುಪ್ರೀಂ ಕೋರ್ಟಲ್ಲಿ ಅರ್ಜಿ ಸಲ್ಲಿಸಿಲ್ಲ. ಸಿಎಂ 24 ಕೊಲೆ ಮಾಡಿದ್ದಾರೆಂದು ಇದೇ ಪೂಂಜಾ ಆರೋಪಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ತಿಮರೋಡಿ ಹೇಳಿದ್ದಾರೆಂದು ಬಂಧಿಸಲು ಇಡೀ ಸರಕಾರ ಆತುರ ತೋರಿತು.

ಮತ್ತೊಬ್ಬ ಕೋಮುವಾದಿ ನಾಯಕ ಸಿಟಿ ರವಿ ಕಾಂಗ್ರೆಸ್ಸಿನ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಬಾರ್ ಡಾನ್ಸರ್ ಎಂದು ದೂಷಿಸಿದಾಗ, ಕಾಂಗ್ರೆಸ್ ಹೈಕಮಾಂಡ್  ರಾಹುಲ್ ಗಾಂಧಿಯವರಿಗೆ ಡ್ರಗ್ ಅಡಿಕ್ಟ್ ಎಂದು ಬೆಳಗಾವಿ ಸದನದಲ್ಲೇ ಆರೋಪಿಸಿದಾಗ ಆಡಳಿತದಲ್ಲಿರುವ ಇದೇ ಕಾಂಗ್ರೆಸ್ ಸರಕಾರ ಇದುವರೆಗೂ ಆತನನ್ನು ಬಂಧಿಸಿಲ್ಲ. ಮಹಿಳೆಯರಾದ ಕಲಬುರಗಿ ಡಿಸಿ ಹಾಗೂ ಸಿಎಂ ಸೆಕ್ರೆಟರಿಗಳನ್ನು ನಿಂದನೆ ಮಾಡಿದ್ದ ಬಿಜೆಪಿ ಎಂಎಲ್ಸಿ ರವಿಕುಮಾರರ ಬಂಧನವಾಗಿಲ್ಲ. ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪನವರ ಮೇಲೆ ಪೋಕ್ಸೋ ಪ್ರಕರಣ ದಾಖಲಾದರೂ ಬಂಧಿಸಿಲ್ಲ, ಹೈಕೋರ್ಟ್ ತಡೆಯಾಜ್ಞೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿಲ್ಲ. ಹೀಗೆ ಪಟ್ಟಿ ಮಾಡಿದರೆ ಈ ಬಿಜೆಪಿಗರ ದ್ವೇಷಭಾಷಣ ಹಗರಣಗಳು ಬೇಕಾದಷ್ಟಿವೆ.

ಆದರೆ ಆರೆಸ್ಸೆಸ್ ನಾಯಕ ಬಿ.ಎಲ್.ಸಂತೋಷರವರಿಂದ ಬಿಜೆಪಿ ಪಕ್ಷಕ್ಕೆ ನಷ್ಟವಾಯ್ತು ಎಂದು ತಿಮರೋಡಿ ಹೇಳಿದ್ದನ್ನೇ ಆಧರಿಸಿ ಈಗ ಬಂಧಿಸಲಾಗಿದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಂತಿದೆ. ಧರ್ಮಸ್ಥಳದ ವಿಚಾರದಲ್ಲಿ ಎಲ್ಲಾ ಪಕ್ಷಗಳು ಖಾವಂದರ ಚರಣ ಪದ್ಮ ಕಮಲಗಳಲ್ಲಿ ಶರಣಾದಂತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ಸಿನ ನಾಯಕರು ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಬೆಂಬಲಿಸಿ ಕಾರ್ ರ್ಯಾಲಿ ಮೆರವಣಿಗೆ ನಡೆಸುತ್ತಿದ್ದಾರೆ. ಅಲ್ಲಿ ದೌರ್ಜನ್ಯ ಪೀಡಿತ ಹೆಣ್ಣುಮಕ್ಕಳ ಪರವಾಗಿ ಮಾತಾಡಬೇಕಿದ್ದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿಣಿ ಲಕ್ಷ್ಮಿ ಹೆಬ್ಬಾಳ್ಕರ್ ಧರ್ಮಾಧಿಕಾರಿಗಳ ಪರವಾಗಿ ಮಾತಾಡುತ್ತಿದ್ದಾರೆ. ಅನ್ಯಾಯಕ್ಕೊಳಗಾದವರ ಬೆಂಬಲಕ್ಕೆ ನಿಲ್ಲಬೇಕಾದ ಡಿಸಿಎಂ ಡಿ.ಕೆ.ಶಿವಕುಮಾರ್ ಧರ್ಮಸ್ಥಳದ ವಿರುದ್ಧ ಶಡ್ಯಂತ್ರ ನಡೆದಿದೆ ಎಂದು ಹೇಳುವ ಮೂಲಕ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಧ್ವನಿ ಹತ್ತಿಕ್ಕುತ್ತಿದ್ದಾರೆ. ಇದೆಲ್ಲದಕ್ಕೂ ಸಿಎಂ ಸಿದ್ದರಾಮಯ್ಯ ಜಾಣಮೌನಕ್ಕೆ ಶರಣಾಗಿದ್ದಾರೆ.

ಈಗ ಜನರಿಗೆ ಎಸ್‌ ಐ ಟಿ ತನಿಖೆಯೊಂದೇ ಅಂತಿಮ ಆಶಾಕಿರಣವಾಗಿದೆ. ಸರಿಯಾದ ರೀತಿಯಲ್ಲಿ ಪಾರದರ್ಶಕ ತನಿಖೆಯಾಗಿ ಧರ್ಮಸ್ಥಳದಲ್ಲಿ ಮುಚ್ಚಿಟ್ಟ ಸತ್ಯ ಬಿಚ್ಚಿಡಬೇಕೆಂಬುದು ಬಹುಜನರ ಬಯಕೆಯಾಗಿದೆ. ಭೀಕರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವೇದವಲ್ಲಿ, ಪದ್ಮಲತಾ, ಯಮುನಾ, ಸೌಜನ್ಯ ಸೇರಿದಂತೆ ಭೂಮಾಫಿಯಾಕ್ಕೆ ಬಲಿಯಾದ ಎಲ್ಲರ ಸಾವಿನ ಸತ್ಯ ಹೊರಬರಬೇಕಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ, ಅದೆಷ್ಟೇ ಪ್ರಭಾವಿಗಳಾಗಿದ್ದರೂ ಶಿಕ್ಷೆಗೆ ಒಳಪಡಿಸಬೇಕಿದೆ. ಆಗ ಮಾತ್ರ ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೇವರ ಮೇಲೆ ಜನರ ನಂಬಿಕೆ ಹೆಚ್ಚಾಗುತ್ತದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿhttp://ಒಳ ಮೀಸಲಾತಿ ಒಡೆದ ಮನಸುಗಳಾಗದಿರಲಿ…https://kannadaplanet.com/may-internal-reservations-not-lead-to-broken-hearts/

More articles

Latest article