ಕೃಷಿ ಭೂಮಿ ಮತ್ತು ಮಹಿಳೆ

Most read

ಹಲವು ಸಲ ಅನ್ನಿಸುವುದಿದೆ- ಬಂಗಾರ ವಸ್ತ್ರ ಒಡವೆ ಎಂದು ಶೋಕಿಮಾಡುವ ಹೆಣ್ಣು ಮಕ್ಕಳು ನಮ್ಮಲ್ಲಿ ಅಲ್ಪಸಂಖ್ಯಾತರು. ಬಹು ಸಂಖ್ಯೆಯ ಹೆಂಗಸರು ಸ್ವಂತ ಮನೆ ಹೊಂದಲು, ಸ್ವಂತ ನೆಲಹೊಂದಲು ತಮ್ಮಲ್ಲಿರುವ ಒಡವೆ ವಸ್ತ್ರಗಳ ಅಡವು ಇಟ್ಟು ಬದುಕುತ್ತಾರೆ. ತಲೆಮೇಲೊಂದು ಸೂರು ಬಂದರೆ ಸಾಕೆಂದು ಹಳಹಳಿಸುತ್ತಾರೆ. ಇದು ಹಳ್ಳಿ ಬದುಕಿನ ಬಹುತೇಕ ಹೆಂಗಸರ  ಜಾಯಮಾನ ನಾಗರೇಖಾ ಗಾಂವಕರ, ಉಪನ್ಯಾಸಕರು.

ಶುದ್ಧ ಗಾಳಿ, ನೀರು, ಬೆಳಕು, ಆಹಾರ, ಪೊರೆಯುವ ಮಡಿಲನ್ನು ನೀಡಿದ ಈ ಪ್ರಕೃತಿಯನ್ನು, ಭೂಮಿಯನ್ನು  ನಮ್ಮ ಪೂರ್ವಜರು ಹೊತ್ತ ತಾಯಿ ಎಂದು ಹೆಣ್ತನವನ್ನು ಆರೋಪಿಸಿ ಅವಳ ಸೃಜನಶೀಲ ಮತ್ತು ತಾಳಿಕೆಯ ಬಲವನ್ನು ಹೃದಯದಿಂದ ಪೂಜಿಸುತ್ತಿದ್ದರು. ಆದರೆ ಇಂದು ಕಾರ್ಪೊರೇಟ್ ಜಗತ್ತು ಬಂಡವಾಳಶಾಹಿಗಳ ಮೇಲಾಟದಲ್ಲಿ ನಮ್ಮ ಕೊಳ್ಳುಬಾಕತನದ ಚಟಗಳಲ್ಲಿ ಭೂಮಿಯನ್ನು ಬರಿ ನಮ್ಮ ಅವಶ್ಯಕತೆಗಳನ್ನು ಪೂರೈಸುವ ನಿರ್ಜೀವ ವಸ್ತುವಿನಂತೆ ನೋಡಲಾಗುತ್ತಿದೆ. ಇದಕ್ಕೆ ವಿಜ್ಞಾನ ತಂತ್ರಜ್ಞಾನದ ಕುಮ್ಮಕ್ಕು ಸೇರಿ ಆಧುನಿಕತೆಯ ಪೆಡಂಭೂತದ ಹುಚ್ಚು ಕುಣಿತಕ್ಕೆ  ನಾವೆಲ್ಲ ಮರುಳಾಗಿದ್ದೇವೆ. ಹಾಗಿದ್ದೂ ಎಷ್ಟೇ ಸಿಟಿಯ ಚಮಕ್ ಚಮಕ್ ಬದುಕನ್ನು ಆಸ್ವಾದಿಸಿಯೂ ಬಣ್ಣದ ಜಗತ್ತಿಗೆ ಮರುಳಾಗಿಯೂ, ಆಗಾಗ ಕಾಡುಮೇಡು, ನದಿ, ಹಳ್ಳ, ಝರಿಯ ಆಲಿಂಗನದಲ್ಲಿ ಸಿಕ್ಕ ಸಂತೃಪ್ತಿ  ಈ ಪಟ್ಟಣದ ಮಾಯಾಲೋಕದಲ್ಲಿ ಸಿಗದು ಎಂಬುದನ್ನು ಭಾರತೀಯ ಮನಸ್ಥಿತಿಯ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕಾರಣವಿಷ್ಟೇ ಮನೆಯ ಅಡುಗೆಗೂ ಹೋಟೆಲ್ ಅಡುಗೆಗೂ ನಡುವೆ ಇರುವ ಅಂತರದಂತೆ ಇದೂ ಕೂಡಾ.

ಸ್ವಂತ ಮನೆ, ಸ್ವಂತ ಭೂಮಿ ಹೊಂದುವುದು ನಮ್ಮ ಭಾರತೀಯ ಮನಸುಗಳಲ್ಲಿ ಹುಟ್ಟುತ್ತಲೇ ಮೂಡುವ ಒಂದು ಸಂಕಲ್ಪ. ರೈತ ಕುಟುಂಬದಿಂದ ಬಂದವರಿಗಂತೂ ಹೊಲವೇ ಸರ್ವಸ್ವ.  ಒಂದು ಸಣ್ಣ ಜಮೀನು ಇದ್ದರೂ ಸಾಕು, ಅಂತಹ ಕುಟುಂಬಗಳಲ್ಲಿ ಆ ಮನೆಯ ಹೆಣ್ಣು ಮಕ್ಕಳು ವಿಶೇಷವಾಗಿ ಗೃಹಿಣಿ ಪಡುವ ಅಭಿಮಾನ ಬಹಳ ದೊಡ್ಡದು.  ಹಲವು ಸಲ ಅನ್ನಿಸುವುದಿದೆ- ಬಂಗಾರ ವಸ್ತ್ರ ಒಡವೆ ಎಂದು ಶೋಕಿಮಾಡುವ ಹೆಣ್ಣು ಮಕ್ಕಳು ನಮ್ಮಲ್ಲಿ ಅಲ್ಪಸಂಖ್ಯಾತರು. ಬಹು ಸಂಖ್ಯೆಯ ಹೆಂಗಸರು ಸ್ವಂತ ಮನೆ ಹೊಂದಲು, ಸ್ವಂತ ನೆಲಹೊಂದಲು ತಮ್ಮಲ್ಲಿರುವ ಒಡವೆ ವಸ್ತ್ರಗಳ ಅಡವು ಇಟ್ಟು ಬದುಕುತ್ತಾರೆ. ತಲೆಮೇಲೊಂದು ಸೂರು ಬಂದರೆ ಸಾಕೆಂದು ಹಳಹಳಿಸುತ್ತಾರೆ. ಇದು ಹಳ್ಳಿ ಬದುಕಿನ ಬಹುತೇಕ ಹೆಂಗಸರ  ಜಾಯಮಾನ.

ಸಾಂದರ್ಭಿಕ ಚಿತ್ರ

ನನಗಿನ್ನೂ ನೆನಪಿದೆ. ನನ್ನ ತಂದೆ ನಮ್ಮ ಹೊಲಕ್ಕೆ ಏತ ನೀರಾವರಿಯಿಂದ ಸಾಕಷ್ಟು ನೀರು ಪಡೆಯಲು ಸಾಧ್ಯವಾಗದೇ ಇದ್ದಾಗ ಹೊಲದಲ್ಲಿ ಬಾವಿ ತೋಡಿಸಿದ್ದರು. ಆದರೆ ದುಡ್ಡಿರಲಿಲ್ಲ. ಅನಿವಾರ್ಯವಾಗಿ ಬೇರೇನಾದರೂ ವ್ಯವಸ್ಥೆ ಆಗಬೇಕಿತ್ತು. ಅಂದು ತಾಯಿ ತಮ್ಮ ವಂಕಿ ಡಾಬು ಮಾರಿಕೊಂಡಿದ್ದರು. ಇದ್ದ ನೆಲದಲ್ಲಿ ಮೂರು ಬೆಳೆ ಬೆಳೆಯಬಹುದೆಂಬ ಆ ಸಣ್ಣ ಉಮೇದು ಅವರ ಬಂಗಾರದ ವ್ಯಾಮೋಹಕ್ಕಿಂತ ಹೆಚ್ಚಿತ್ತು.  ಹೆಣ್ಣಿಗೆ ಬಟ್ಟೆ ಒಡವೆಗಳು ಹುಚ್ಚೆಂದು ಗಂಡು ಜಗತ್ತು ಆರೋಪಿಸುತ್ತದೆ. ಆದರೆ ಅವರಿಗೆ ಗೊತ್ತಿಲ್ಲದ ಸತ್ಯವಾದ  ಸಂಗತಿ ಎಂದರೆ ಹೆಂಗಳೆಯರಿಗೆ ಈ ಬಟ್ಟೆ ಬಂಗಾರಕ್ಕಿಂತ ಆಕೆಯದಾದ ಒಂದು ಪುಟ್ಟ ಸೂರೋ, ತುಂಡು ನೆಲವೋ ಕೊಡುವ  ಬದುಕಿನ ಭರವಸೆಯನ್ನು ಈ ಬಟ್ಟೆ ಒಡವೆಗಳಿಂದ ಪಡೆಯಲಾಗದು ಎಂಬ ಸತ್ಯ ಅವಳಿಗೆ ಗೊತ್ತಿದೆ. ಹಾಗಾಗೇ ಶಿಷ್ಟ ಸಾಹಿತ್ಯ ಪರಂಪರೆಗೂ ಮುನ್ನ

“ಏಳುತಾಲೇ ಎದ್ದು ಯಾರ್ಯಾರ ನೆನೆಯಲಿ

ಎಳ್ಳು ಜೀರಿಗೆ ಬೇಳಿಯೋಣ!!

ಭೂತಾಯ್ನ ಎದ್ದೊಂದ ಗಳಿಗೆ ನೆನೆದೇನು” ಎಂದು ಹಾಡಿದವರು ನಮ್ಮ ಜನಪದ ಗರತಿಯರು.

ಈ ಉಲ್ಲೇಖಕ್ಕೆ ಕಾರಣವಿದೆ. ಕಳೆದ ತಿಂಗಳು ದೇವನಹಳ್ಳಿಯ ಚೆನ್ನರಾಯಪಟ್ಟಣದ 13 ಹಳ್ಳಿಗಳ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಪಟ್ಟುಹಿಡಿದು ಸುಮಾರು 1198 ದಿನಗಳವರೆಗೆ ರೈತರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕು ಇದೊಂದು ಐತಿಹಾಸಿಕ ಗೆಲವು ಎಂಬಂತಾಗಿದೆ. ಅಲ್ಲಿನ ರೈತರು ತಮ್ಮ ಜಾತಿ, ಮತ ಪಂಥಗಳ ಮೀರಿ ಒಗ್ಗಟ್ಟಾದ ಕುರುಹು ಆಗಿ ಈ ಜಯ ಪ್ರಮುಖವೆನಿಸಿದೆ. ಆಳುವ ಸರಕಾರ ರೈತಮುಖಿ ಸರಕಾರವಾಗಿದ್ದ ಕಾರಣವೋ ಏನೋ ಈ ಹೋರಾಟಕ್ಕೆ ಮಣಿದು ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಹಿಂತೆಗೆದುಕೊಂಡಿದೆ. ಮತ್ತು ಈ  ನಿರ್ಧಾರ ಕಾರ್ಪೋರೇಟ್ ಜಗತ್ತಿನ ವಿರುದ್ಧವಾಗಿದ್ದು, ರೈತರ ಪರವಾಗಿದೆ ಎಂಬಿತ್ಯಾದಿಯಾಗಿ ಸಕಾರಾತ್ಮಕ ಹೇಳಿಕೆಗಳು, ಲೇಖನಗಳು  ಪ್ರಕಟವಾಗಿವೆ. ದೇವನಹಳ್ಳಿಯ ಈ ಚೆನ್ನರಾಯ ಪಟ್ಟಣ ಹೋಬಳಿಯ 1,777 ಎಕರೆ ಜಮೀನನ್ನು ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ನಿರ್ಮಾಣದ ಗುರಿ ಹೊಂದಿ ಸುಮಾರು ಮೂರು ವರ್ಷಗಳ ಹಿಂದೆ ಅಂದಿನ ಸರಕಾರ ಈ ಯೋಜನೆಗೆ ಅಸ್ತು ಎಂದಿತ್ತು. ಭೂಸ್ವಾಧೀನಕ್ಕೆ ಸಂಬಂಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ಈ ಮೂರು ವರ್ಷಗಳಿಂದಲೂ ರೈತರು ಯಾವ ಹಿಂಸಾತ್ಮಕ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹೋರಾಟವನ್ನು ನಡೆಸಿಕೊಂಡೇ ಬಂದರು. ಮತ್ತು ಕೊನೆಗೂ ಆಡಳಿತಾರೂಢ ಸರಕಾರ ತೆಗೆದುಕೊಂಡ ಸದ್ಯದ ನಿರ್ಧಾರ ಪ್ರಕೃತಿಪೂರಕ, ರೈತಪರವಾಗಿದ್ದು, ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಲ್ಲಿ ನಡೆಯುವ ನಿಸರ್ಗದ ನಾಶವನ್ನು ತಪ್ಪಿಸಿದೆ. ಮತ್ತು ನಮ್ಮ ಸಾಂಪ್ರದಾಯಿಕ ಬದುಕಿನ ಮೌಲ್ಯವನ್ನು ಎತ್ತಿ ಹಿಡಿದಿದೆ ಎನ್ನಬಹುದು. (ಇಲ್ಲೂ ಕೆಲವು ಗೊಂದಲಗಳೂ ಇನ್ನೂ ಇವೆ) ಇವೆಲ್ಲವೂ ಹೊಲ ಭೂಮಿ ಪರವಾಗಿರುವ  ಗಮನಾರ್ಹ ಅಂಶಗಳು.

ದೇವನಹಳ್ಳಿಯ ಭೂ ಹೋರಾಟ

ಈ ಹೋರಾಟದಲ್ಲಿ ಸ್ತ್ರೀ ಪ್ರತಿನಿಧೀಕರಣದ  ಬಗ್ಗೆ ಕೊಂಚ ಚರ್ಚಿಸೋಣ. ಹಲವು ಮಹಿಳೆಯರು ಹೋರಾಟದ ಉದ್ದಕ್ಕೂ ಪುರುಷರಿಗೆ ಜೊತೆಜೊತೆಯಾಗಿ ನಿಂತರು. ಜನಾಭಿಮತ ಸಂಗ್ರಹದಲ್ಲಿ ಭಾಗವಹಿಸಿದರು. ರೈತ ಮುಖಂಡರು ಹಿರಿಯರಿಂದ ಬಂದ ನೆಲವನ್ನು ಬಿಟ್ಟುಕೊಡದೇ “ ನಮ್ಮ ಪ್ರಾಣ ಬೇಕಾದರೂ ಬಿಟ್ಟೇವು. ಆದರೆ ಮಣ್ಣನ್ನು ಮಾತ್ರ ಮಾರಿಕೊಳ್ಳುವುದಿಲ್ಲ” ಎಂದು ‘ದೇವನಹಳ್ಳಿ ಚಲೋ’ ದಲ್ಲಿ ಪ್ರತಿಜ್ಞೆ ಮಾಡಿದ್ದರು. ಆ ದಿನ ಮಹಿಳೆಯರು ತಮ್ಮ ಗ್ರಾಮಗಳಿಂದ ತಂದ ಮಣ್ಣನ್ನು ಗಿಡಕ್ಕೆ ಸುರಿಯುವ ಮೂಲಕ ಸಾಂಕೇತಿಕವಾಗಿ ಈ ಹೋರಾಟಕ್ಕೆ ಚಾಲನೆ ನೀಡಿದ್ದರು. ಮನೆಯ ಹೆಂಗಸರು ನೀಡುವ  ಎಲೆಮರೆಯಲ್ಲಿನ ಹಲವು ಉತ್ತಮ ಸಲಹೆ ಸೂಚನೆಗಳ ಒಟ್ಟು ಫಲವೇ ಇಂದು ಸರಕಾರದ ರೈತಪರ ನಿರ್ಧಾರಕ್ಕೆ ಸಕಾರಣವೂ ಆಗಿರಬಹುದು.

ಯಾಕೆಂದರೆ ಈ ಹಿಂದೆ ಬೆಂಗಳೂರು ಕೆಂಪೇಗೌಡ  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂದರ್ಭದಲ್ಲಿ ಸುಮಾರು 4,300 ಎಕರೆ ಕೃಷಿ ಭೂಮಿ ವಶಪಡಿಸಿಕೊಂಡು ರೈತರಿಗೆ ಪರಿಹಾರ ನೀಡಲಾಗಿತ್ತು. ಪರಿಹಾರ ಪಡೆದ ನೂರಾರು ರೈತರು ಇತ್ತ ಹಣವನ್ನು ಇಟ್ಟುಕೊಳ್ಳದೇ ಅತ್ತ ಭೂಮಿಯನ್ನು ಕಳೆದುಕೊಂಡು ಅತಂತ್ರರಾದ ಹತ್ತಾರು ಉದಾಹರಣೆಗಳು ಇದ್ದವು. ಕೆಲವರಂತೂ ತಮ್ಮದೇ ನೆಲದಲ್ಲಿ ಕಾರ್ಪೋರೇಟ್ ಜಗತ್ತಿನ ಒಡೆತನದಲ್ಲಿ ತಲೆ ಎತ್ತಿದ ದೊಡ್ಡ ದೊಡ್ಡ ಮಳಿಗೆಗಳಲ್ಲಿ ಕೂಲಿಗಳಾಗಿ ಬದುಕುತ್ತಿರುವ ಹಲವು ಉದಾಹರಣೆಗಳು ಅವರ ಮುಂದಿವೆ. ಬದುಕನ್ನು ಎದೆಯುಬ್ಬಿಸಿ ಕಳೆದ ಆ ದಿನಗಳು ಮರೆಯಾಗಿ ತಲೆಬಗ್ಗಿಸಿ ದುಡಿಯುವಂತಹ ಪರಿಸ್ಥಿತಿಗೆ ಒಳಗಾಗಿದ್ದಾರೆ. ಹಣ ಸಿಕ್ಕೊಡನೆ ದುಂದುವೆಚ್ಚ ಮಾಡುವ ಸಹಜ ಗುಣ ಪುರುಷನದು. ನೆಲವಿದ್ದರೆ ಕುಟುಂಬ ನಿರ್ವಹಣೆಗೆ ಒಂದು ಆಸರೆ ಇರುವುದು, ಮಕ್ಕಳ ಭವಿಷ್ಯಕ್ಕೂ ಒಂದು ಆಧಾರವಿರುವುದು ಎಂಬುದು ಸಹಜವಾಗಿ ಮನೆಯ ಹೆಂಗಸರಿಗೆ ಅನ್ನಿಸುವ ವಿಚಾರ. ಅಂದು ನಡೆದ ಅಭಿವೃದ್ಧಿಯ ಹೆಸರಿನ ಹಿಂದಿನ  ಕರಾಳ ಮುಖ ಈ ರೈತರಿಗೆ, ಆ ಕುಟುಂಬಕ್ಕೆ  ವಿಶೇಷವಾಗಿ ಮಹಿಳೆಯರಿಗೆ ಒಂದು ಪಾಠವಾಗಿರುವ ಕಾರಣದಿಂದಲೇ ಈ ಸಲದ ಹೋರಾಟದಲ್ಲಿ ಮಹಿಳೆಯರು ಇಷ್ಟು ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಕಾರಣವಾಗಿರುವ ಸಾಧ್ಯತೆಯೂ ಇದೆ.

ಹಾಗೇ ರೈತ ಮಹಿಳೆಯರ ಬದುಕಿನ ಕುರಿತು ಚಿಂತಿಸುವುದಾದರೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲನ್ನು ಎರಡನೇ ಸ್ಥಾನದಲ್ಲೇ ಗ್ರಹಿಸಲಾಗುತ್ತದೆ. ಒಂದು ಮಾಹಿತಿಯ ಪ್ರಕಾರ “ಡೌನ್ ಟು ಅರ್ಥ” ಎಂಬ ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ಒಂದು ಬೆಳೆ ಬೆಳೆಯುವ ಅವಧಿಯಲ್ಲಿ ಒಬ್ಬ ಮಹಿಳೆ ಸುಮಾರು 3,300 ಗಂಟೆ ಕೆಲಸ ಮಾಡುತ್ತಾಳೆ. ಆದರೆ ಅದೇ ಗಂಡು ಕೇವಲ 1,860 ಗಂಟೆಗಳಷ್ಟೇ ಕೆಲಸ ಮಾಡುತ್ತಾನೆ. ಅಂದರೆ  ಮಹಿಳೆಯರ ಶ್ರಮ ಪುರುಷನಿಗಿಂತ ಹೆಚ್ಚು.  ಆದರೆ ನಿರ್ಧಾರ ತೆಗೆದುಕೊಳ್ಳುವ, ಹೊಲದ ಒಡೆತನ ಹೊಂದುವ, ಒಡೆತನ ಹೊಂದಿದ ಹೊಲದ ಮೇಲೆ  ಸಾಲ ಪಡೆಯುವ ಅಧಿಕಾರ ಹೊಂದಿದವರು ಬಹುಪಾಲು ಪುರುಷರು. ಅಷ್ಟೇ ಅಲ್ಲದೇ ಭಾರತೀಯ ಕೃಷಿ ವಲಯದಲ್ಲಿ ಮಹಿಳಾ ರೈತರು ಬಹು ಸಣ್ಣ ಸಂಖ್ಯೆಯಲ್ಲಿದ್ದಾರೆ. ಆದರೆ ಕೃಷಿ ಕೂಲಿಕಾರರಾಗಿ ದುಡಿಯುತ್ತಿರುವ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.

ಸಾಂದರ್ಭಿಕ ಚಿತ್ರ

ಕುಡುಕ ಗಂಡನ ಕಟ್ಟಿಕೊಂಡ ಕೆಲವು ಹೆಂಗಳೆಯರು ಹೆಚ್ಚಾಗಿ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿರುತ್ತಾರೆ.  ಸಣ್ಣ ಊರಿಂದ ಹಿಡಿದು ದೊಡ್ಡ ದೊಡ್ಡ ಊರುಗಳಲ್ಲೂ ಇಂತಹ ಹೆಂಗಸರು ತಮ್ಮ ಸಣ್ಣಪುಟ್ಟ ಹೊಲದ ಕೆಲಸಗಳ ಜೊತೆಗೆ ತಮ್ಮ ಬಿಡುವಿನ ದಿನಗಳಲ್ಲಿ ಅಕ್ಕಪಕ್ಕದ ಹೊಲಗಳಲ್ಲಿ ದುಡಿಮೆ ಮಾಡಲು ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಹಿಳೆಯರ ದಿನದ ಆದಾಯವೂ ಬಹುಮುಖ್ಯ ಪಾಲು ಹೊಂದಿದೆ. ಅದೆಷ್ಟೋ ಪ್ರಕರಣಗಳಲ್ಲಿ ಸಾಲ ಮಾಡಿ ಅದನ್ನು ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಾಗ, ಗಟ್ಟಿಯಾಗಿ ನಿಂತು ಅದೇ ಹೊಲದಲ್ಲಿ ಉತ್ತಮ ಬೆಳೆ ತೆಗೆದು ಇಲ್ಲ ಕೂಲಿನಾಲಿ ಮಾಡಿಯೋ ದುಡಿದು ಹುಟ್ಟಿದ ಕುಡಿಗಳಿಗೂ ವಿದ್ಯೆ ಬುದ್ಧಿ ಕಲಿಸಿ ಸ್ವತಂತ್ರ ಬದುಕು ಕಟ್ಟಿಕೊಂಡ ಮಹಿಳೆಯರಿದ್ದಾರೆ. ಅಂತಹ ಹಲವು ಉದಾಹರಣೆಗಳಿವೆ. ಮಹಿಳೆಯರಿಗಿರುವ ತಾಳಿಕೆಯ, ಬಾಳಿಕೆಯ ಮನೋಧರ್ಮ ಅವರನ್ನು  ದುಡುಕಿನ ನಿರ್ಧಾರಗಳ ಕಡೆ ಎಳೆಯುವುದಿಲ್ಲ.

ದೇವನಹಳ್ಳಿಯ ಸದ್ಯದ ಹೋರಾಟದಲ್ಲಿ ಬಹು ಸಕ್ರಿಯವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಈ ವಿಜಯಕ್ಕೊಂದು ಹೊಸತನ ತಂದುಕೊಟ್ಟಿದೆ. ತಮ್ಮ  ಅಡುಗೆ ಕೆಲಸ, ಮನೆ ಕೆಲಸ, ಮಕ್ಕಳನ್ನು ನೋಡಿಕೊಳ್ಳುವ, ವಯಸ್ಸಾದ ಹಿರಿಯರನ್ನು ನೋಡಿಕೊಳ್ಳುವ ಇತ್ಯಾದಿ ಕೆಲಸಗಳನ್ನು  ನಿಭಾಯಿಸಿಯೂ ಮತ್ತೆ ಬಂದು ಹರತಾಳದಲ್ಲಿ  ಭಾಗವಹಿಸಲು  ಧಾವಿಸಿ ಬಂದ ಎಲ್ಲ ರೈತ ಮಹಿಳೆಯರ ಈ ತೆರೆಮರೆಯ ಸೇವೆಯನ್ನು ನಾವು ಶ್ಲಾಘಿಸಬೇಕಿದೆ. ಇದಕ್ಕೆ ಕಾರಣವೆಂದರೆ ಅವರಿಗೆ ಅವರ ನೆಲದ ಮೇಲಿನ ಅಭಿಮಾನ. ಅದನ್ನು ಬಿಟ್ಟುಕೊಡಬಾರದೆಂಬ ಬಯಕೆ ಮತ್ತು ಬದುಕಿನ ಬಹುದೊಡ್ಡ ಆಧಾರವಾಗಿ ಅವರು ಭೂಮಿಯನ್ನು ಗ್ರಹಿಸಿದ ಬಗೆ. ಅಲ್ಲದೇ ದೇವನಹಳ್ಳಿಯ ಫಲವತ್ತಾದ ಭೂಮಿಯೇ ಬೆಂಗಳೂರಿನ ಆಹಾರ ಮತ್ತು ಪೌಷ್ಟಿಕಾಂಶ ಪೂರೈಕೆಯ ಮುಖ್ಯ ಆಗರ. ಅಲ್ಲಿಯ ನೂರಾರು ಸಣ್ಣ ಪುಟ್ಟ  ರೈತ ಮಹಿಳೆಯರ ಆದಾಯದ ಮೂಲವೂ ಹೌದು. ಕಿರು ಬೇಸಾಯ ಮಾಡಿ ಖುದ್ದು ತರಕಾರಿ, ಬೇಳೆ ಕಾಳುಗಳ ತಂದು ಸುತ್ತ ಮುತ್ತಲಿನ ತರಕಾರಿ ಮಂಡಿಗಳಲ್ಲಿ ಇಲ್ಲವೇ ಸಂತೆಗಳಿಗೆ ಒಯ್ದು ಮಾರಾಟ ಮಾಡುವ ಮಹಿಳೆಯರ ಬದುಕಿನ ಮುಖ್ಯ ಆದಾಯ ಇಂತಹ ಸಣ್ಣ ವ್ಯಾಪಾರಗಳೇ. ಹಾಗಾಗಿಯೇ ಈ ಸಲದ ಹೋರಾಟದಲ್ಲಿ ಕಬ್ಬನ್‌ ಪಾರ್ಕ್‌ ನ ರೈತ ಸಮಾವೇಶದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಅಪಾರವಾಗಿತ್ತು.

ಹೆಚ್ಚಾಗಿ ಬದುಕಿನ ವೈಪರೀತ್ಯಗಳು ಕುಟುಂಬವನ್ನು ತಲ್ಲಣಗೊಳಿಸಿದ್ದಲ್ಲಿ ಅದರ ಮೊದಲ ಪರಿಣಾಮ ಆ ಮನೆಯ ಹೆಂಗಸರ ಮೇಲೆ ಉಂಟಾಗುತ್ತದೆ. ಮನೆಯನ್ನು ಮಕ್ಕಳನ್ನು ಕುಟುಂಬವನ್ನು ನಿಭಾಯಿಸುವ ಹೆಣ್ಣು ಸೂಕ್ಷ್ಮವಾಗಿ ಮುಂದೊದಗುವ ಅಪಾಯವನ್ನು ವೇಗವಾಗಿ ಗ್ರಹಿಸುತ್ತಾಳೆ. ನಿಮಗೆ ಗೊತ್ತಿರುವಂತೆ ಉತ್ತರಾಖಂಡ್‍ನಲ್ಲಿ ಕಾಡಿನ ನಾಶದಿಂದ ಮೊದಲು ಪರಿತಪಿಸಿದವರು ಮಹಿಳೆಯರು. ತಮ್ಮ ದನಕರುಗಳಿಗೆ ಮೇವಿನ ಕೊರತೆ, ಅಡುಗೆ ಮಾಡಲು ಉರುವಲು ಕಟ್ಟಿಗೆಯ ಕೊರತೆ, ಕುಡಿಯುವ ನೀರಿಗಾಗಿ ನೂರಾರು ಮೈಲು ಕ್ರಮಿಸಬೇಕಾಗಿ ಬಂದಾಗ ಅಲ್ಲಿನ ಮಹಿಳೆಯರೇ ಒಗ್ಗಟ್ಟಾದರು. ಅಲ್ಲಿ ಪ್ರಾರಂಭವಾದ ಚಿಪ್ಕೋ ಚಳುವಳಿಯ ಸಂದರ್ಭದಲ್ಲಿ ಬಚ್ನಿದೇವಿ ಎಂಬ ಮಹಿಳೆ ಕಂಟ್ರಾಕ್ಟರನಾದ  ತನ್ನ ಗಂಡನ ವಿರುದ್ಧವೇ ದಂಗೆ ಎದ್ದಳು. ಮರ ಕಡಿಯಲು ಬಂದ ಅಧಿಕಾರಿಗಳಿಗೆ ಹಾಡುಹಗಲೇ ಬೆಳಗಿದ ಲಾಟೀನು ಹಿಡಿದು ಮರಗಳ ಕಾಡಿನ ಅನಿವಾರ್ಯತೆಯನ್ನು, ಅಗತ್ಯತೆಯನ್ನು ಮನಗಾಣಿಸಿದವಳು.

ಹಳ್ಳಿಗಳ ನಾಡಾದ ನಮ್ಮ ಭಾರತದಲ್ಲಿ ಇಂದು ಆಧುನಿಕ ಬದುಕು ನಿಧಾನವಾಗಿ ಒಕ್ಕರಿಸುತ್ತಿರುವ ಒಂದು ಸಂದಿಗ್ಧ ಕಾಲಘಟ್ಟದಲ್ಲಿ ನಿಂತು ನೋಡಿದರೂ ಹಳ್ಳಿ ಜೀವನದ ಹೊರತಾಗಿ ನಮ್ಮಲ್ಲಿ  ಸಂಪೂರ್ಣ ಪಾಶ್ಚಾತ್ಯ ಜೀವನ ಶೈಲಿಗಳು ಬರಲು ಇನ್ನೂ ಇನ್ನೂರು ಮುನ್ನೂರು ವರ್ಷಗಳಾದರೂ ಬೇಕು. ಹಾಗೇ ನಮ್ಮ ಮನಸ್ಸುಗಳು ಕೂಡಾ ಈ ನೆಲ ಜಲ ಸಂಸ್ಕೃತಿಗೆ ಪಕ್ಕಾದ ಪರಂಪರೆ ಹೊಂದಿವೆ. ಈ ಬೆಸುಗೆಗೊಂದು ತಾತ್ವಿಕ ಸಂಬಂಧವೂ ಇದೆ. ಯಾಕೆಂದರೆ ಭಾರತೀಯ ಸಂಸ್ಕೃತಿ ಯಾ ಪರಂಪರೆಯ ಅರ್ಥ ಡೆಮೋಕ್ರಸಿ ಎಂಬ ಬಹುದೊಡ್ಡ ಬಹುತ್ವ ಆಧಾರಿತ ಸಿದ್ದಾಂತದ ಮೇಲೆ ಕಟ್ಟಲ್ಪಟ್ಟಿದೆ. ಈ ಬಹುತ್ವದ ಪರಂಪರೆಯನ್ನು, ಸಾಂಪ್ರದಾಯಿಕ ಕೃಷಿ ಸಂಸ್ಕೃತಿಯನ್ನು ಉಳಿಸುವಲ್ಲಿ ಪುರುಷರೊಂದಿಗೆ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಹೆಚ್ಚಾಗುವಂತಾದರೆ ಭವಿಷ್ಯದಲ್ಲಿ ಬೇಸಾಯ ಉಳಿದೀತು.

ನಾಗರೇಖಾ ಗಾಂವಕರ

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು ಬರಹಗಾರರೂ ಅನುವಾದಕರೂ ಮತ್ತು ಅಂಕಣಕಾರರೂ ಆಗಿದ್ದಾರೆ.

ಇದನ್ನೂ ಓದಿ- http://ಒಳ ಮೀಸಲಾತಿ ಒಡೆದ ಮನಸುಗಳಾಗದಿರಲಿ… https://kannadaplanet.com/may-internal-reservations-not-lead-to-broken-hearts/

More articles

Latest article