ಮತಗಳ್ಳರ ಭಂಢ ಧೈರ್ಯ ಹೆಚ್ಚಲು ಕಾಂಗ್ರೆಸ್ಸಿಗರ  ಮೈಗಳ್ಳತನವೂ ಕಾರಣ ?!‌

Most read

ಭಾರತದ ಇವಿಎಂ ಗಳಿಗೆ “ಚಿಪ್” ಗಳನ್ನು ತಯಾರಿಸಿ ಕೊಡುತ್ತಿರುವ ಜಪಾನ್ ದೇಶವೇ ತನ್ನ ದೇಶದ ಚುನಾವಣೆಗೇ ಇವಿಎಂ ಬಳಸುತ್ತಿಲ್ಲ!  ಬಿ‌ಜೆ‌ಪಿಯವರಿಗೆ ಅತ್ಯಂತ ಪ್ರಿಯವಾಗಿರುವ ದೇಶ ಮತ್ತು ಪೆಗಾಸೆಸ್ ಸ್ಪೈವೇರ್ ಉತ್ಪಾದಿಸುವ ಇಸ್ರೇಲ್ ದೇಶವೂ ಇವಿಎಂ ಬಳಸುತ್ತಿಲ್ಲ.  ನಮ್ಮ ನೆರೆಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕೂಡ ಇವಿಎಂ  ಬಳಸುತ್ತಿಲ್ಲ. ಅಂದ ಮೇಲೆ ಭಾರತೀಯರಿಗೆ ಇವಿಎಂ-ವಿವಿಪ್ಯಾಟ್ ಇನ್ನೂ ಯಾಕೆ ಬೇಕು ?! ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಮೊನ್ನೆ ಆಗಸ್ಟ್ ಏಳು ತಾರೀಖಿಗೆ ರಾಹುಲ್ ಗಾಂಧಿಯವರು ಬೆಂಗಳೂರಿನ ಮಹಾದೇವಪುರ ಕ್ಷೇತ್ರದಲ್ಲಿ  ಒಂದು ಲಕ್ಷಕ್ಕೂ ಹೆಚ್ಚು ‘ನಕಲಿ ಮತಗಳು’ ಚಲಾವಣೆಯಾಗಿದ್ದು ಹೇಗೆಂದು ಅಂಕಿ-ಸಂಖ್ಯೆ-ಪುರಾವೆ ಸಹಿತ ಸಾಬೀತು ಮಾಡಿದ ಮೇಲೆ ಎಲ್ಲರೂ ಕಾಂಗ್ರೆಸ್ ಪಕ್ಷದ  ರಾಹುಲ್ ಗಾಂಧಿ ಮತ್ತು ಅವರ ತಂತ್ರಜ್ಞರ ಟೀಮ್ ಕುರಿತು ಹೊಗಳಿಕೆಯ ಮಹಾಪೂರ ಹರಿಸುತ್ತಿದ್ದಾರೆ. ಸ್ವತಃ ರಾಹುಲ್ ಗಾಂಧಿಯವರೂ ಕಂಪ್ಯೂಟರ್ ತಜ್ಞರು. (ಆದರೆ ಒಬ್ಬ ವ್ಯಕ್ತಿಯ ಒಂದು ಕಾಲಿನ  ಬೆರಳಿಗೆ ಸಣ್ಣ ಗಾಯ ಆಗಿದ್ದಾಗ  ಅದಕ್ಕೆ ಮದ್ದು ಹಚ್ಚಿ ಅದನ್ನು ಗುಣಪಡಿಸುವ ಬದಲು, ಆ ಗಾಯ ಉಲ್ಬಣಗೊಂಡು ಗ್ಯಾಂಗರಿನ್ ಆಗಿ  ಕೊನೆಗೆ ಅವನ ಜೀವ ಉಳಿಸಲು ಅವನ  ಕಾಲು ಕಟ್ ಮಾಡಿದ ಆ ಡಾಕ್ಟರ್ ನನ್ನು ಹೊಗಳುವ ಪರಿ ಆಗಿದೆ ಈಗ ಕಾಂಗ್ರೆಸ್ಸಿನ ಸ್ಥಿತಿ).               

ಮಹಾದೇವಪುರದಲ್ಲಿ  ನಕಲಿ ಮತದಾರರನ್ನು ಈಗ ರಾಹುಲ್ ಗಾಂಧಿ ಟೀಮ್ ಪತ್ತೆ ಹಚ್ಚಿದ್ದು ಶ್ಲಾಘನೀಯವೇ.  ಆದರೆ ಹಿಂದಿನ  ಹತ್ತು ವರ್ಷದಲ್ಲಿ ಸ್ವತಃ  ಕಾಂಗ್ರೆಸ್ಸಿನ  ಅಭ್ಯರ್ಥಿಗಳು ಮತ್ತು ಬೂತ್ ಪ್ರತಿನಿಧಿಗಳು ಚುನಾವಣೆ ಅಧಿಕಾರಿಗಳು ಮಾಡುತ್ತಿರುವ ಘೋಟಾಲಾ ಗಳನ್ನು ಪಕ್ಕಾ ಪುರಾವೆ ಸಹಿತ ಎತ್ತಿ ತೋರಿಸಿದರೂ ಕಾಂಗ್ರೆಸ್ಸಿನ ಹೈಕಮಾಂಡ್ ಎಂಬ ಜಡಭರತರು ಈ ವಂಚನೆಗಳನ್ನು ಬಹಿರಂಗಗೊಳಿಸಲು ತಾವೂ ಕ್ರಮ ಕೈಗೊಳ್ಳಲಿಲ್ಲ ಮತ್ತು ತಮ್ಮ ಅಭ್ಯರ್ಥಿಗೆ ತನ್ನ ಸ್ವಂತ ಖರ್ಚಿನಲ್ಲಿ ಕೋರ್ಟಿನಲ್ಲಿ ಕಾನೂನು ಪ್ರಕಾರ ಹೋರಾಡಲೂ ಅನುಮತಿಯನ್ನು ಕೊಡಲಿಲ್ಲ.  ಕಾಂಗ್ರೆಸ್ಸಿನ ಇಂತಹಾ ಹೆತ್ಲಾಂಡಿ ವರ್ತನೆಯಿಂದಾಗಿಯೇ ಚುನಾವಣಾ ಆಯೋಗ ಮತ್ತು ಬಿ‌ಜೆ‌ಪಿ ಪಕ್ಷವು ಭಂಢ ಧೈರ್ಯದಿಂದ ಹಿಂದಿನ ಐದು ವರ್ಷದಲ್ಲಿ ಮಧ್ಯ ಪ್ರದೇಶ, ಚತ್ತೀಸ್‌ಗಡ, ಒಡಿಶಾ, ಹರ್ಯಾಣ, ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆಯನ್ನು ಹೈಜಾಕ್ ಮಾಡಿದ್ದಲ್ಲದೆ ಪ್ರಜಾತಂತ್ರವನ್ನು ಒಂದು ಪ್ರಹಸನವಾಗಿ ಮಾಡಿಬಿಟ್ಟಿದೆ. ಕಾಂಗ್ರೆಸ್ಸಿನೊಳಗಿನ ಆರೆಸ್ಸೆಸ್ಸಿನ ಸ್ಲೀಪರ್  ಸೆಲ್ ಕೂಡಾ  ಈ ವಿಷಯದಲ್ಲಿ ಹೈಕಮಾಂಡಿಗೆ ತಪ್ಪು ಸಲಹೆ ನೀಡಿ ದಿಕ್ಕು ತಪ್ಪಿಸಿ ಬಿ‌ಜೆ‌ಪಿಗೆ ಪರೋಕ್ಷ ಸಹಾಯ ಮಾಡುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ.

ಉದಾಹರಣೆಗೆ, 2018 ರ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನೇ ನೆನಪಿಸಿಕೊಳ್ಳಿ.  ಆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಮೊದಲು ಬಿ‌ಜೆ‌ಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ 21,306 ಮತಗಳ ಅಂತರದಿಂದ ಗೆದ್ದರು ಎಂದು ಚುನಾವಣಾ ಅಧಿಕಾರಿ ಘೋಷಿಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಲವಡೆಯವರು ಆಕ್ಷೇಪ ಎತ್ತಿ  ಹಠ ಹಿಡಿದು ಆ ಕ್ಷೇತ್ರದ ವಿ‌ವಿಪ್ಯಾಟ್ ಮತ ಚೀಟಿಗಳನ್ನು ಸಂಪೂರ್ಣ ಎಣಿಸಿದಾಗ 21,000 ಕ್ಕೂ ಹೆಚ್ಚು ಮತಗಳು ಬಿ‌ಜೆ‌ಪಿ ಅಭ್ಯರ್ಥಿಗೆ ಹೆಚ್ಚುವರಿಯಾಗಿ ಬಿದ್ದಿದ್ದು ಕಂಡು ಬಂತು. ಕೊನೆಗೆ ಕೇವಲ 300 ಚಿಲ್ಲರೆ ಮತಗಳಿಂದ ಬಿ‌ಜೆ‌ಪಿ ಗೆದ್ದಿದೆ ಎಂದು ಘೋಷಿಸಲಾಯಿತು. (ಆದರೆ ಈ ಬದಲಾದ ಸಂಖ್ಯೆಯನ್ನು ಚು.ಆಯೋಗದ ವೆಬ್ಸೈಟ್ ನಲ್ಲಿ ಇಂದಿನ ವರೆಗೂ ಸರಿಪಡಿಸಿಲ್ಲ!). 

ಆ ಹುಬ್ಬಳ್ಳಿ ಕ್ಷೇತ್ರದಲ್ಲಿ ಒಟ್ಟು 400 ಕ್ಕಿಂತಲೂ ಹೆಚ್ಚು  ಇವಿಎಂ ಗಳಿದ್ದು ಪ್ರತಿಯೊಂದು ಇವಿಎಂ ನಲ್ಲಿಯೂ 50 ಮತಗಳು ಹೆಚ್ಚುವರಿಯಾಗಿ ಬಿದ್ದಿದ್ದು ಕಂಡು ಬಂತು ಹಾಗೂ ಆ ಎಲ್ಲಾ 50 ಮತಗಳೂ ಕೇವಲ ಬಿ‌ಜೆ‌ಪಿ ಪರ ಬಿದ್ದಿದ್ದವು!.  ಈ ಕೇಸ್ ನಲ್ಲಿ ನಿಜವಾಗಿ ಏನಾಗಿತ್ತೆಂದರೆ ಮತದಾನ ಮುಗಿದ ನಂತರ  ಇವಿಎಂ ಗಳನ್ನು ಸ್ಟ್ರಾಂಗ್ ರೂಂ ನಲ್ಲಿ ಇಟ್ಟಿದ್ದಾಗ ವಂಚಕರು ಕೇವಲ ಇವಿಎಂ ಯಂತ್ರ ಮಾತ್ರ ಬದಲಾಯಿಸಿದ್ದರು ಮತ್ತು  ಅದಕ್ಕೆ ಸಂಬಧಿಸಿದ ವಿ‌ವಿಪ್ಯಾಟ್ ಬದಲಾಯಿಸಿರಲಿಲ್ಲ, ಹಾಗಾಗಿ ವಿ‌ವಿಪ್ಯಾಟ್ ಚೀಟಿ ಪೂರ್ಣ ಎಣಿಸಿದಾಗ ವಂಚನೆ ಹೊರಗೆ ಬಂತು ಎಂದು ಆಗ ಆರೋಪಿಸಲಾಗಿತ್ತು.   ಈ ವಿಷಯವನ್ನು  ಎತ್ತಿಕೊಂಡು  ಸುಪ್ರೀಂ ಕೋರ್ಟಿನ ಬಾಗಿಲು ತಟ್ಟುತ್ತೇನೆ ಮತ್ತು ಮರು ಮತದಾನಕ್ಕೆ ಅಗ್ರಹಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೇಳಿದರೂ ಕಾಂಗ್ರೆಸ್ ಹೈಕಮಾಂಡ್  ತನ್ನ ಸೋತ ಅಭ್ಯರ್ಥಿ ಮಹೇಶರಿಗೆ ಕೋರ್ಟಿಗೆ ಹೋಗಲು ಅನುಮತಿಯನ್ನೇ ಕೊಡಲಿಲ್ಲ.  ಈ ಹುಬ್ಬಳ್ಳಿ-ಸೆಂಟ್ರಲ್ ಕ್ಷೇತ್ರದಲ್ಲಿ ಬಿ‌ಜೆ‌ಪಿ ನಡೆಸಿದ್ದ  ಇವಿಎಂ ವಂಚನೆಯನ್ನು ಹಸಿ ಹಸಿಯಾಗಿ ಹಿಡಿಯುವ ಸುವರ್ಣ ಅವಕಾಶವನ್ನು ಆಗ ಕಾಂಗ್ರೆಸ್ ಪಕ್ಷ  ಪೆದ್ದು ಪೆದ್ದಾಗಿ ಕೈಚೆಲ್ಲಿತು.

ಮತದಾನಕ್ಕಿಂತ ಮೊದಲು ಪ್ರತಿ ಇವಿಎಂ ನಲ್ಲಿ 50 ಮತಗಳನ್ನು ಹಾಕಿ ಆ ಮತಯಂತ್ರ ಸರಿಯಾಗಿ ಕೆಲಸ ಮಾಡುತ್ತದೆ ಎಂದು ತೋರಿಸಲು “ಡೆಮೋ” (ಪ್ರಾತ್ಯಕ್ಷಿಕೆ) ಮಾಡುವಾಗ ಹಾಕಿದ 50 ಮತಗಳನ್ನು ಮತದಾನ ಶುರು ಆಗುವುದಕ್ಕೆ ಮೊದಲೇ ಅಳಿಸಿ ಹಾಕಲು ನಾವು ಮರೆತಿರುವುದರಿಂದ ಈ ತಪ್ಪಾಯಿತು ಎಂದು ಕ್ಷೇತ್ರದ ಚುನಾವಣಾ ಅಧಿಕಾರಿ ತಿಪ್ಪೆ ಸಾರಿಸಿದ್ದರು. ಆದರೆ ಡೆಮೋ ಮಾಡಲು ಬೇರೆ ಬೇರೆ ಮತಗಟ್ಟೆಯಲ್ಲಿ, ಬೇರೆ ಹಳ್ಳಿಯಲ್ಲಿ, ಬೇರೆ ಬೇರೆ ಬೂತ್ ಗಳಲ್ಲಿ, ಇಡಲಾಗಿದ್ದ ಎಲ್ಲಾ  400 ಇವಿಎಂ ಗಳಲ್ಲಿ ಹಾಕಿದ ಡೆಮೋ-ಮತಗಳನ್ನು ಎಲ್ಲಾ 400 ಚುನಾವಣಾ ಅಧಿಕಾರಿಗಳು ಅಳಿಸಲು ಮರೆಯುವುದು ಸಾಧ್ಯವೇ? ಎಂಬ ಸಿಂಪಲ್ ಪ್ರಶ್ನೆಯನ್ನು ಕಾಂಗ್ರೆಸ್ಸಿಗರು ಆಗ ಚು.ಆಯುಕ್ತರಿಗೆ ಕೇಳಲೇ ಇಲ್ಲ! ಅದರಂತೆ ನಮ್ಮ ಬೆಳ್ತಂಗಡಿ ಸಹಿತ  ಕರ್ನಾಟಕದ ಹಲವೆಡೆ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಉನ್ನತ ಕೋರ್ಟಿನಲ್ಲಿ ತಮ್ಮ ಕ್ಷೇತ್ರದ ಫಲಿತಾಂಶದ ವಿರುದ್ಧ ತಮ್ಮ ತಮ್ಮ ಖರ್ಚಿನಲ್ಲಿಯೇ ಪುರಾವೆ ಸಹಿತ ದಾವೆ ಹೂಡುತ್ತೇವೆ ಎಂದು ಮುಂದೆ ಬಂದಿದ್ದರೂ ಕಾಂಗ್ರೆಸ್ ಹೈಕಮಾಂಡ್ ಈ ಎಲ್ಲರನ್ನೂ ಗದರಿ ಸುಮ್ಮನಾಗಿಸಿತು. ಇದರಿಂದ ಇವಿಎಂ ಬದಲಾವಣೆಯಿಂದ ಗೆದ್ದಿದ್ದ ಎಲ್ಲಾ ಬಿ‌ಜೆ‌ಪಿ ಅಭ್ಯರ್ಥಿಗಳು ನಿರಾಳರಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ಮನದಲ್ಲಿ ಥ್ಯಾಂಕ್ಸ್ ಹೇಳಿರಬಹುದು.  ಒಂದು ವೇಳೆ ಅಂದು ಹುಬ್ಬಳ್ಳಿ ಕ್ಷೇತ್ರದಲ್ಲಿ ಮರು ಮತದಾನ ನಡೆದಿದ್ದರೆ ಇಡೀ ಭಾರತದ ಜನತೆಗೆ ಚು.ಆಯೋಗದ ಕಣ್ಣೆದುರೆ ಹೇಗೆ ಮತಗಳ್ಳತನ ನಡೆಯುತ್ತದೆ ಎಂಬುದಕ್ಕೆ ಪಕ್ಕಾ ಪುರಾವೆ ಸಿಗುತ್ತಿತ್ತು ಹಾಗೂ 2018 ರ ನಂತರ ಭಾರತದ ಎಲ್ಲಾ ಕ್ಷೇತ್ರಗಳಲ್ಲೂ 100% ವಿ‌ವಿಪ್ಯಾಟ್ ಮತಚೀಟಿ ಎಣಿಕೆಗೆ ಕೋರ್ಟಿನಿಂದಲೇ ಬೆಂಬಲ ಸಿಗುತ್ತಿತ್ತು.

2019 ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರೂ ತಾನು ಸುಪ್ರೀಂ ಕೋರ್ಟಿಗೆ ಹೋಗಿ ತನ್ನ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸುವುದಾಗಿ ಹೇಳಿದರೂ ಕಾಂಗ್ರೆಸ್ ಹೈಕಮಾಂಡ್ ಆ ಹಿರಿಯ ನಾಯಕರನ್ನೂ ಗದರಿ ಸುಮ್ಮನಾಗಿಸಿತು. (ಅವರಿಗೆ ಹಿಂದಿನ ಬಾರಿಗಿಂತ ಒಂದೂಕಾಲು ಲಕ್ಷ ವೋಟು ಕಡಿಮೆ ಬಿದ್ದಿತ್ತು). ಬಿ‌ಜೆ‌ಪಿಗೆ ಪರೋಕ್ಷ ವರದಾನವಾಗಿದ್ದ ಕಾಂಗ್ರೆಸ್ಸಿನ ಈ ಪೆದ್ದುತನ.  ಮಧ್ಯಪ್ರದೇಶದಲ್ಲಿ 2023 ರ ವಿಧಾನಸಭಾ ಚುನಾವಣೆಯ ನಂತರ ಅಲ್ಲಿಯ ಹಿರಿಯ ಕಾಂಗ್ರೆಸ್ ನೇತಾರ ದಿಗ್ವಿಜಯ ಸಿಂಗರು ಕೆಲವು ಪುರಾವೆಗಳೊಂದಿಗೆ ತಮ್ಮ ರಾಜ್ಯದ ವಿಧಾನಸಭಾ  ಚುನಾವಣೆಯ ಫಲಿತಾಂಶದ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದ್ದಾರೆ ನಿಜ. ಆದರೆ ಇವಿ‌ಎಂ ಮತ್ತು ವಿ‌ವಿಪ್ಯಾಟ್ ಎರಡೂ ಒಟ್ಟಿಗೆ ಬದಲಾದಾಗ ಹುಬ್ಬಳ್ಳಿ ಮಾದರಿಯಲ್ಲಿ 100% ವಿ‌ವಿಪ್ಯಾಟ್ ಮತಚೀಟಿ ಎಣಿಸಿ ಇವಿಎಂ ವಂಚನೆಯನ್ನು ಸಾಬೀತು ಮಾಡುವುದಕ್ಕೆ ಮಧ್ಯಪ್ರದೇಶದಲ್ಲಿ ಯಾವುದೇ ಆಸ್ಪದ ಉಳಿದಿರುವುದಿಲ್ಲ.

ವಿ ವಿ ಪ್ಯಾಟ್

ಮೊದಲೆಲ್ಲಾ ಇವಿಎಂ ಯಂತ್ರದ ಚಿಪ್ಪನ್ನು ಆ ಯಂತ್ರದಲ್ಲಿ ಅಳವಡಿಸುವಾಗಲೇ ಒಂದು ರಾಜಕೀಯ ಪಕ್ಷದವರು ಆ ಇವಿಎಂ ನ್ನು  ತಿರುಚಲು ಸಾಧ್ಯ ಆಗುವಂತಹಾ ಪ್ರೋಗ್ರಾಮಿಂಗನ್ನು  ಚಿಪ್ ನಲ್ಲಿಯೇ ಮಾಡಿಸುತ್ತಾರೆ ಅಥವಾ ರಿಮೋಟ್ ಕಂಟ್ರೋಲ್ ಮುಖಾಂತರ ದೂರದ ಕಂಪ್ಯೂಟರ್ ನಿಂದ ಇವಿಎಂ ಹ್ಯಾಕ್ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಅನುವಾಗುವಂತಹ ಟೆಕ್ನಲಾಜಿ ಅಳವಡಿಸಿಕೊಳ್ಳುತ್ತಾರೆ ಎಂಬ ಆರೋಪವಿತ್ತು.  ಆದರೆ ಇತ್ತೀಚೆಗೆ ಮಧ್ಯಪ್ರದೇಶ ಮತ್ತು ಚತ್ತಿಸ್‌ಗಡ ರಾಜ್ಯಗಳ ಚುನಾವಣೆಯಲ್ಲಿ ಸಿಕ್ಕಿರುವ ಪುರಾವೆಯಿಂದ ತಿಳಿದು ಬಂದಿದ್ದೇನೆಂದರೆ ಇವಿಎಂ ಗಳನ್ನು ದೂರದಿಂದ ರಿಮೋಟ್ ಕಂಟ್ರೋಲ್ ಮೂಲಕ ಅಥವಾ ದೂರದ ಲ್ಯಾಪ್ ಟಾಪ್ ನಿಂದ ತಾಂತ್ರಿಕವಾಗಿ ತಿರುಚುವುದು ಸಾಧ್ಯವಿಲ್ಲ.  ಅದಕ್ಕೆ ಬದಲಾಗಿ ಇವಿಎಂ ಯಂತ್ರ ಮತ್ತು ವಿ‌ವಿಪ್ಯಾಟ್ ಯಂತ್ರ ಎರಡನ್ನೂ ಮತದಾನ ಮುಗಿದ ನಂತರ ವ್ಯಕ್ತಿಗತವಾಗಿ ಬದಲಾಯಿಸಲಾಗುತ್ತದೆ. ಅಂದರೆ ಚುನಾವಣೆಯಲ್ಲಿ ಬಳಸಿದ ಇವಿಎಂ ಮತ್ತು ವಿ‌ವಿಪ್ಯಾಟ್ ಎರಡನ್ನೂ ಸ್ಟ್ರಾಂಗ್ ರೂಂನಿಂದ ತೆಗೆದು ಅದರ ಜಾಗದಲ್ಲಿ ಬೇರೊಂದು “ಪ್ರೀಲೋಡೆಡ್” ಇವಿಎಂ ಮತ್ತು ವಿ‌ವಿಪ್ಯಾಟ್ ಇಡಲಾಗುತ್ತದೆ. ಇದರಿಂದಾಗಿ ಆನಂತರ ನೂರಕ್ಕೆ ನೂರು ವಿ‌ವಿಪ್ಯಾಟ್ ಚೀಟಿಗಳನ್ನು ಏಣಿಸಿ ಇ‌ವಿಎಂ ನೊಂದಿಗೆ ತಾಳೆ ಹಾಕಿದರೂ ಕಳ್ಳಾಟ ಸಿಕ್ಕಿ ಬೀಳುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.  ಅದಕ್ಕೆ ಅನುಕೂಲ ಮಾಡಿಕೊಡಲೆಂದೇ ಛತ್ತೀಸ್‌ಗಡ ಮತ್ತು ಮಧ್ಯ ಪ್ರದೇಶದಲ್ಲಿ ಮತದಾನದ ತರುವಾಯ 20 ರಿಂದ 28 ದಿನಗಳ ಗ್ಯಾಪ್ ಇಟ್ಟು ಮತ ಎಣಿಕೆ ಮಾಡಿರುವುದು, ಅಂದರೆ ಈ ದೀರ್ಘ ಅವಧಿಯನ್ನು ಉಪಯೋಗಿಸಿಕೊಂಡು ಮತದಾನಕ್ಕೆ ಬಳಸಿದ ಮೂಲ ಇವಿಎಂ ಮತ್ತು ವಿ‌ವಿಪ್ಯಾಟ್ ಗಳನ್ನು ಸ್ಟಾಂಗ್-ರೂಂ ನಿಂದ ತೆಗೆದು ಬೇರೆ ಪ್ರೀ-ಲೋಡೆಡ್  ಯಂತ್ರಗಳನ್ನು ರಾತೋರಾತ್ರಿ ಅಲ್ಲಿ ತಂದಿಡಲಾಗಿತ್ತು ಎಂದು ಆರೋಪಿಸಲಾಗುತ್ತಿದೆ.  

ಆದರೆ ಅದೇ ಕಾಲಕ್ಕೆ ನಡೆದ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಈ ವಂಚನೆ ಮಾಡಲಿಲ್ಲ. ಕಾರಣ ಅಲ್ಲಿ  ಜನಪ್ರಿಯತೆಯಲ್ಲಿ ಕೆಳಗಿನ ನಾಲ್ಕನೇ ಸ್ಥಾನದಲ್ಲಿ ಇದ್ದ ಬಿ‌ಜೆ‌ಪಿಯು ಹೆಚ್ಚು ಸೀಟು ಗೆದ್ದರೆ ಜನರಿಗೆ ತಕ್ಷಣ ಸಂಶಯ ಬರುತ್ತದೆ ಮತ್ತು ಹಸಿ ಕೈಯಲ್ಲಿ ತಮ್ಮ ಕಳ್ಳತನ ಸಿಕ್ಕಿಬೀಳುವ ಸಾಧ್ಯತೆ ಇದ್ದುದರಿಂದ ತೆಲಂಗಾಣ ರಾಜ್ಯದಲ್ಲಿ ಮತದಾನದ ದಿನಾಂಕವನ್ನು ಮತ ಎಣಿಕೆಗಿಂತ ಕೇವಲ ಎರಡು ದಿನ ಮುಂಚೆ ಇಟ್ಟಿದ್ದು ಎಂದು ಹೇಳಲಾಗುತ್ತಿದೆ.  ನಮ್ಮ ದೇಶದಲ್ಲಿ ಎಲ್ಲಿಯೇ ಆಗಲಿ  ಸ್ಥಳೀಯ ಜಿಲ್ಲಾಡಳಿತದ ಮತ್ತು ಸ್ಥಳೀಯ ಚುನಾವಣಾ ಅಧಿಕಾರಿಯ  ಸಹಕಾರ ಇದ್ದರೆ ಇವಿಎಂ-ವಿವಿಪ್ಯಾಟ್ ಅದಲಾ-ಬದಲಿ ಸುಲಭವಾಗುತ್ತದೆ ಹಾಗೂ ಈ ವಂಚನೆಯ ಹೂರಣ ಹೊರಗೆ ಬರುವುದಿಲ್ಲ ಎಂದು ಆರೋಪಿಸುತ್ತಾರೆ ವಿರೋಧ ಪಕ್ಷದ ನೇತಾರರು.  

ಭಾರತದಾದ್ಯಂತ ಹತ್ತೊಂಬತ್ತು ಲಕ್ಷ ಇವಿಎಂ ಗಳು ಕಾಣೆಯಾಗಿರುವುದನ್ನು ಚು.ಆಯೋಗ ಖಚಿತ ಪಡಿಸಿದೆ, ಆದರೆ ಅದನ್ನು ಹುಡುಕುವ ಪ್ರಯತ್ನ ಆಗಿರುವಂತೆ ಕಾಣುತ್ತಿಲ್ಲ.  ಈ ವಿಷಯ ಮುಂಬೈ ಹೈಕೋರ್ಟ್ ಮೆಟ್ಟಲೇರಿದ್ದರೂ ಕಾಣೆಯಾಗಿರುವ ಇವಿಎಂ ಗಳ ವಿಷಯದಲ್ಲಿ ಹೈಕೋರ್ಟ್ ನೇರವಾಗಿ ಯಾವುದೇ ನಿಖರ ಆದೇಶ ಇನ್ನೂ ಕೊಟ್ಟಿಲ್ಲವಂತೆ. ಕೇವಲ “ತಾರೀಖ್-ಪೆ-ತಾರೀಖ್” ನಡೆಯುತ್ತಿದೆ ಅಷ್ಟೇ. ಕಾಂಗ್ರೆಸ್ ನವರು ಈ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. 

ಬ್ಯಾಲೆಟ್‌ ಪೇಪರ್-‌ ಸಾಂದರ್ಭಿಕ ಚಿತ್ರ

ಅದಕ್ಕಾಗಿಯೇ  2024 ರ ಲೋಕಸಭಾ ಚುನಾವಣೆಯನ್ನು ಬ್ಯಾಲೆಟ್ ಪೇಪರಲ್ಲಿ ಮಾಡಿಸಬೇಕು ಎಂದು ವಿರೋಧ ಪಕ್ಷಗಳು ಕೇಳಿಕೊಳ್ಳುತ್ತಿದ್ದವು. ಇಲ್ಲಿಯೂ ಕಾಂಗ್ರೆಸ್ಸಿನ ಧ್ವನಿ ಕ್ಷೀಣವಾಗಿತ್ತು. ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಇವಿಎಂ ತಿರುಚಿದಾಗ ಯಾರೂ ಹುಯಿಲೆಬ್ಬಿಸ ಬಾರದು ಎಂಬ ಪೂರ್ವಭಾವಿ ಆಲೋಚನೆಯಿಂದ 2023 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಗೆಲ್ಲಲು ಬಿಟ್ಟು ಉತ್ತರ ಭಾರತದ ವಿರೋಧ ಪಕ್ಷಗಳ ಇವಿಎಂ ಟೀಕಾಕಾರರನ್ನು ಪೂರ್ವಭಾವಿಯಾಗಿಯೇ ಬಿ‌ಜೆ‌ಪಿ ಯವರು ಬಾಯಿ ಮುಚ್ಚಿಸಿದ್ದರು ಎನ್ನಲಾಗುತ್ತಿದೆ. ಜೈ ಶ್ರೀರಾಮ್, ಜೈ ಜಗನ್ನಾಥ್, ಹರಹರ ಮಹಾದೇವ್  ಎಂದು ಕೂಗಿದರೆ ಸಾಕು ಎಂತಹ ದೊಡ್ಡ ಅಪರಾಧವೂ ಮುಚ್ಚಿಹೋಗುತ್ತದೆ ಬಿಡಿ.  ಬ್ಯಾಲೆಟ್ ಪೇಪರ್ ಬಂದರೂ ಕಾಗದದ ಮತಪತ್ರಗಳಿರುವ ಸಂಪೂರ್ಣ ಪೆಟ್ಟಿಗೆಯನ್ನೇ ಜಿಲ್ಲಾಡಳಿತದ ಸಹಕಾರದಿಂದ ಬದಲಾಯಿಸಬಹುದು ತಾನೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದರಲ್ಲಿ ತಥ್ಯ ಇದೆ. ಆದರೆ ಬ್ಯಾಲೆಟ್ ಪೇಪರ್ ನಲ್ಲಿಯ ಮೋಸವನ್ನು ಬೇಗ ಪತ್ತೆ ಹಚ್ಚಬಹುದು ಅನ್ನಲಾಗುತ್ತದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಹಾಗೂ ಆನಂತರದ ಮಹಾರಾಷ್ಟ್ರ ಹರಿಯಾಣದ ವಿಧಾನಸಭಾ ಚುನಾವಣೆಯಲ್ಲೂ ಸಂಜೆ ಆರು ಗಂಟೆಗೆ ಮತದಾನ ಮುಕ್ತಾಯಗೊಂಡ ಮೇಲೆ ಆಶ್ಚರ್ಯಕರವಾಗಿ ಮತದಾನದ ಪೆರ್ಸೆಂಟೇಜ್ 8 ರಿಂದ 10 % ವರೆಗೂ ಹೆಚ್ಚಿಸಿ ಪ್ರಕಟಿಸಲಾಗುತ್ತಿತ್ತು. ಇದು ಮತದಾನದ ಅವಧಿ ಮುಗಿದ ನಂತರ ಗುಟ್ಟಾಗಿ ನಡೆದ ನಕಲಿ ಮತದಾನದ ಪರಿಣಾಮ ಎಂಬ ಆರೋಪವಿದೆ.     

ಎಲ್ಲಕ್ಕಿಂತ ಮಿಗಿಲಾಗಿ “ಗ್ರೋಕ್-AI” ಕೃತಕ ಬುದ್ಧಿಮತ್ತೆ ಮತ್ತು ಟೆಕ್ನಾಲಾಜಿ ದಿಗ್ಗಜ ಎಲಾನ್ ಮಸ್ಕ್ ಇವರೇ- “ಎಲ್ಲಾ ತರದ ಎಲೆಕ್ಟ್ರಾನಿಕ್  ಮತಯಂತ್ರಗಳನ್ನು ನಾನು ಹ್ಯಾಕ್ ಮಾಡಿ ತೋರಿಸಬಲ್ಲೆ” ಎಂದು ಕೇವಲ ಆರು ತಿಂಗಳ ಹಿಂದೆ ಚಾಲೆಂಜ್ ಮಾಡಿದ್ದರು.  ಅಂದ ಮೇಲೆ ಭಾರತೀಯರಿಗೆ ಇವಿಎಂ-ವಿವಿಪ್ಯಾಟ್ ಇನ್ನೂ ಯಾಕೆ ಬೇಕು ?!

ಪ್ರವೀಣ್ . ಎಸ್. ಶೆಟ್ಟಿ

ಚಿಂತಕರು

ಇದನ್ನೂ ಓದಿ- ಮಿಥ್ಯಾರೋಪಗಳ ಕದನ; ವಿವೇಚನೆ ಮರೆತ ಸದನ

More articles

Latest article