ಸಂತ್ರಸ್ತರ ಪರವಾಗಿ ಧ್ವನಿ ಎತ್ತುವ ಸ್ವತಂತ್ರ ಸುದ್ದಿ ಮಾಧ್ಯಮಗಳ ಧ್ವನಿಯನ್ನು ದಮನಿಸಲು ಶಾಸಕ ಸಚಿವರೆಲ್ಲ ಸದನದಲ್ಲಿ ಒಂದಾಗಿದ್ದಾರೆ. ಸ್ವತಂತ್ರ ಸುದ್ದಿ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅನ್ಯಾಯವನ್ನು ಪ್ರಶ್ನಿಸುವವರು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಪಾವಿತ್ರ್ಯತೆ ಹಾಳಾಯ್ತು ಎಂದು ಹುಯಿಲೆಬ್ಬಿಸುತ್ತಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ವಿಧಾನಸೌಧದ ಅಧಿವೇಶನದಲ್ಲಿ ಧರ್ಮಸ್ಥಳದ ಕುರಿತು ಇಡೀ ದಿನ ಚರ್ಚೆ. ಅಲ್ಲಿದ್ದ ಬಹುತೇಕ ಎಲ್ಲಾ ಶಾಸಕ ಸಚಿವರುಗಳು ಧರ್ಮಸ್ಥಳದ ಪರವಾಗಿ, ಧರ್ಮಾಧಿಕಾರಿಗಳಿಗೆ ಬೆಂಬಲವಾಗಿದ್ದವರೇ. ಎಲ್ಲರ ಕೋಪ ತಾಪ ಪ್ರಕೋಪ ಆರೋಪ ಇದ್ದದ್ದು ಯುಟ್ಯೂಬ್ ಚಾನಲ್ ಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಈ ಮಾಧ್ಯಮಗಳ ಮೇಲೆ ಕೂಡಲೇ ತೀವ್ರ ಕ್ರಮಕೈಗೊಳ್ಳಬೇಕು ಎಂಬುದು ಪಕ್ಷಾತೀತ ಆಗ್ರಹ.
“ಸುಳ್ಳು ಸುದ್ದಿ ಪ್ರಸಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾನೂನು ತರಲಾಗುವುದು” ಎಂದು ಗೃಹ ಸಚಿವರ ಹೇಳಿಕೆ. ‘ಮಾಧ್ಯಮಗಳನ್ನು ನಿರ್ಬಂಧಿಸಬೇಕು’ ಎಂಬುದು ಎಲ್ಲಾ ಜನಪ್ರತಿನಿಧಿಗಳ ಬಯಕೆ. ಯುಟ್ಯೂಬರ್ ಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂಬುದು ಪ್ರತಿಪಕ್ಷದವರ ಆರೋಪ.
ಆಯ್ತು.. ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಿದ್ದರೆ ದೂರು ದಾಖಲಿಸಲಿ, ತನಿಖೆ ಮಾಡಿ ಕ್ರಮ ತೆಗೆದುಕೊಳ್ಳಲಿ. ಆದರೆ ಈ ಜನಪ್ರತಿನಿಧಿಗಳೇ ಸುಳ್ಳು ಸುದ್ದಿಯನ್ನು ಸದನದಲ್ಲಿ ಪ್ರಸ್ತಾಪಿಸಿ ಅಧಿವೇಶನದ ದಿಕ್ಕುತಪ್ಪಿಸಿದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕಲ್ಲವೇ?
ಈಗ ಆಗಿದ್ದೇನೆಂದರೆ.. “ಮುಖ್ಯ ಮಂತ್ರಿ ಸಿದ್ದರಾಮಯ್ಯನವರು 24 ಜನರ ಕೊಲೆ ಮಾಡಿದ್ದಾರೆ ಎಂದು ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿಯವರು ಹೇಳಿಕೆ ಕೊಟ್ಟು 48 ಗಂಟೆಗಳಾಗಿದ್ದರೂ ಇನ್ನೂ ಅವರನ್ನು ಯಾಕೆ ಬಂಧಿಸಿಲ್ಲಾ” ಎಂಬುದು ವಿರೋಧ ಪಕ್ಷದ ನಾಯಕ ಸನ್ಮಾನ್ಯ ಅಶೋಕರವರ ಆಕ್ರೋಶ. “ಹೌದು ಆ ವಿಡಿಯೋ ನೋಡಿದ್ದೇನೆ, ಸಿಎಂ ಗಮನಕ್ಕೂ ತಂದಿದ್ದೇನೆ, ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂಬುದು ಆಳವ ಪಕ್ಷದ ಉಪಮುಖ್ಯಮಂತ್ರಿಯಾದ ಮಾನ್ಯ ಡಿ.ಕೆ.ಶಿವಕುಮಾರರವರ ಹೇಳಿಕೆ. “ಈಗಾಗಲೇ ತಿಮರೋಡಿಯವರನ್ನು ಬಂಧಿಸಲು ಪೊಲೀಸರಿಗೆ ಸೂಚಿಸಿದ್ದೇನೆ” ಎಂಬುದು ಮಹನೀಯರಾದ ಗೃಹಮಂತ್ರಿ ಪರಮೇಶ್ವರರವರ ಆದೇಶ.
ಅಲ್ಲಿ ಸದನದಲ್ಲಿದ್ದ ಯಾರಿಗೂ ಅಸಲಿ ಸತ್ಯ ಗೊತ್ತಿಲ್ಲ. ಪ್ರಸ್ತಾಪಿಸಲಾದ ಹೇಳಿಕೆಯ ಮೇಲೆ ಎಲ್ಲರೂ ತೌಡು ಕುಟ್ಟಿ ತಿಮರೋಡಿಯವರ ಬಂಧನ ಆಗಲೇ ಬೇಕೆಂದು ಒತ್ತಾಯಿಸುವವರೆ. ಧರ್ಮಸ್ಥಳದ ಕುರಿತ ಭಾವತೀವ್ರತೆ ಈ ನಾಯಕರುಗಳ ತಲೆಗೇರಿ ಸತ್ಯಾಸತ್ಯಗಳ ವಿವೇಚನೆಯನ್ನೇ ಕಳೆದುಕೊಂಡಿದ್ದಂತೂ ದಿಟ.
ಆದರೆ.. ಅಸಲಿ ಸಂಗತಿಯೇ ಬೇರೆಯಾಗಿತ್ತು. ಎಂದೋ ಎರಡು ವರ್ಷಗಳ ಹಿಂದೆ ತಿಮರೋಡಿಯವರು ಹೇಳಿದ್ದ ವಿಡಿಯೋ ಕ್ಲಿಪ್ಪಿಂಗನ್ನು ಯಾವನೋ ಒಬ್ಬ ಸಂಘಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಅದು ವೈರಲ್ ಆಗಿ, “ಮುಖ್ಯಮಂತ್ರಿಗಳು ಮರ್ಡರ್ ಮಾಡಿದ್ದಾರೆ” ಎಂಬ ಅಪಪ್ರಚಾರಕ್ಕೆ ಆಸ್ಪದ ಮಾಡಿಕೊಟ್ಟಿತು. ಈ ತಿರುಚಿದ ವಿಡಿಯೋ ತುಣುಕನ್ನೇ ನಿಜ ಎಂದು ನಂಬಿದ ವಿರೋಧ ಪಕ್ಷದ ಅಪಕ್ವ ನಾಯಕ ಆರ್.ಅಶೋಕ್ “ಮುಖ್ಯ ಮಂತ್ರಿಗಳ ಮೇಲೆ ಕೊಲೆ ಆರೋಪ ಬಂದಿದೆಯಾದ್ದರಿಂದ ಸರಕಾರ ಅದಕ್ಕೊಂದು ಎಸ್ಐಟಿ ರಚನೆ ಮಾಡಿ ತನಿಖೆ ಮಾಡಿಸಬೇಕು. ಇಲ್ಲವೇ ಈ ರೀತಿ ಆರೋಪ ಮಾಡಿದ ಮಹೇಶ್ ತಿಮರೋಡಿಯನ್ನು ಈಗಲೇ ಬಂಧಿಸಬೇಕು” ಎಂದು ಸದನದಲ್ಲಿ ಸದ್ದು ಮಾಡಿದರು. ಅಲ್ಲಿರುವ ಎಲ್ಲರೂ ಅದನ್ನೇ ನಂಬಿದರು. ‘ಬಂಧನಕ್ಕೆ ಪೊಲೀಸರಿಗೆ ಸೂಚಿಸಿರುವೆ’ ಎಂದು ಗೃಹಸಚಿವರು ಹೇಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು.
ಅಸಲಿಗೆ ಮುಖ್ಯಮಂತ್ರಿಗಳ ಮೇಲೆ 24 ಹಿಂದೂ ಕಾರ್ಯಕರ್ತರ ಕೊಲೆ ಆರೋಪ ಮಾಡಿದ್ದು ಇದೇ ಬಿಜೆಪಿ ಪಕ್ಷದ ಬೆಳ್ತಂಗಡಿಯ ಕೋಮುವ್ಯಾಧಿ ಪೀಡಿತ ಶಾಸಕ ಹರೀಶ್ ಪೂಂಜಾ. ಅದೂ 2023 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಮಾಡಿದ ಸಾರ್ವಜನಿಕ ಭಾಷಣದಲ್ಲಿ ಕೋಮು ಪ್ರಚೋದನೆ ಮಾಡುವ ಜೊತೆಗೆ ಸಿದ್ದರಾಮಯ್ಯನವರ ಮೇಲೆ ಕೊಲೆ ಆರೋಪ ಮಾಡಿ ಕೋಮುಪಡೆಯಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪೂಂಜಾರವರ ವಿರುದ್ಧ ಐಪಿಸಿ 153, 153ಎ, 505 (1) ಎ ಬಿ ಸಿ ಕಲಂ ಅಡಿಯಲ್ಲಿ ಎಫ್ಐರ್ ದಾಖಲಾಗಿದ್ದು ಪೂಂಜಾರವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ.
ಈ ಕೋಮುವಾದಿ ಶಾಸಕನ ಹೇಳಿಕೆಗಳನ್ನೇ ಆಧರಿಸಿ ಆಗ ಪ್ರತಿಕ್ರಿಯಿಸಿದ್ದ ತಿಮರೋಡಿಯವರು ” ನಮ್ಮ ಶಾಸಕರ ಮಾತು ನಿಜವಾಗಿದ್ದರೆ ಸಿದ್ದರಾಮಯ್ಯನವರು ಕೊಲೆ ಆರೋಪದ ಮೇಲೆ ಕೂಡಲೇ ರಾಜೀನಾಮೆ ಕೊಡಬೇಕು, ಸುಳ್ಳಾಗಿದ್ದರೆ ಹರೀಶ್ ಪೂಂಜಾರವರ ಮೇಲೆ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿದ್ದರು. ತಿಮರೋಡಿಯವರ ಭಾಗಶಃ ಹೇಳಿಕೆಯ ವಿಡಿಯೋ ತುಣುಕನ್ನು ನಂಬಿದ ಬಿಜೆಪಿಯ ಆರ್.ಅಶೋಕ, ಸುನಿಲ್ ಕುಮಾರ್ ಹಾಗೂ ಸುರೇಶ್ ಕುಮಾರ್ ರವರು ಸದನದಲ್ಲಿ ಅಬ್ಬರಿಸಿ ಬೊಬ್ಬಿರಿದರು. ತಿಮರೋಡಿಯವರ ಬಂಧನಕ್ಕೆ ಆತುರಿಸಿದರು. ಸತ್ಯಾಸತ್ಯತೆಯನ್ನು ತಿಳಿಯದ ಗೃಹಮಂತ್ರಿಗಳು ‘ಬಂಧಿಸಲು ಪೊಲೀಸರಿಗೆ ಸೂಚಿಸಿರುವುದಾಗಿ ಹೇಳಿದರು.
ಆದರೆ ನಿಜವಾಗಿಯೂ ಪ್ರಶ್ನೆ ಇರುವುದು ಈಗ ಯಾರನ್ನು ಬಂಧಿಸಬೇಕು ಎನ್ನುವುದು. ತಿಮರೋಡಿಯವರು ಹೇಳಿದ ವಿಡಿಯೋವನ್ನು ಎಡಿಟ್ ಮಾಡಿ ಸುಳ್ಳು ಸುದ್ದಿ ಹರಡಿದವರನ್ನಾ? ಅವರೂ ಬಿಜೆಪಿಯವರೇ. ಮುಖ್ಯಮಂತ್ರಿಗಳ ಮೇಲೆ ಸುಳ್ಳು ಕೊಲೆ ಆರೋಪ ಹೊರಿಸಿದ ಶಾಸಕ ಹರೀಶ್ ಪೂಂಜಾರವರನ್ನಾ? ಅವರೂ ಬಿಜೆಪಿಯ ಶಾಸಕರು. ಹೋಗಲಿ ಪೂಂಜಾರವರ ಮಾತುಗಳನ್ನೇ ಆಧರಿಸಿ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ ಮಹೇಶ್ ತಿಮರೋಡಿಯವರನ್ನು ಬಂಧಿಸಬೇಕಾ? ಅವರೂ ಬಿಜೆಪಿಯ ಹಿಂದೂ ಸಂಘಟನೆಯ ನಾಯಕರೇ. ಈ ಫೇಕ್ ಸುದ್ದಿಯನ್ನು ಸದನದಲ್ಲಿ ಹರಡಿ ಕೊಲಾಹಲ ಸೃಷ್ಟಿಸಿದ ಆರ್.ಅಶೋಕ್, ಸುರೇಶ್ ಕುಮಾರ್, ಸುನಿಲ್ ಕುಮಾರರವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾ? ಇವರೆಲ್ಲಾ ಬಿಜೆಪಿ ನಾಯಕರುಗಳೇ. ಹಾಗಾದರೆ ಸುಳ್ಳು ಸುದ್ದಿಯನ್ನು ಸತ್ಯವೆಂದು ನಂಬಿಸಿದ ಇವರಲ್ಲಿ ಯಾರನ್ನು ಆರೆಸ್ಟ್ ಮಾಡಬೇಕು? ‘ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ, ಬಿಜೆಪಿಗರಿಗೆ ಸುಳ್ಳೆ ಮನೆ ದೇವರು’ ಎಂಬ ವಾಡಿಕೆ ಜನಸಾಮಾನ್ಯರಲ್ಲಿದೆ. ಅದಕ್ಕೆ ಸಮರ್ಪಕವಾದ ಉದಾಹರಣೆ ಈ ಪ್ರಕರಣ.
ಹೋಗಲಿ ಈ ಕಾಂಗ್ರೆಸ್ಸಿಗರಿಗಾದರೂ ಒಂಚೂರು ವಿವೇಚನೆ ಬೇಡವೇ? ಯಾವುದೋ ಒಂದು ವಿಡಿಯೋ ತುಣಕನ್ನು ನಂಬಿದ ಡಿಸಿಎಂ ಡಿಕೆಶಿಯವರು ಸಿಎಂ ಜೊತೆ ಮಾತಾಡಿರುವೆ ಎನ್ನುತ್ತಾರೆ. ಹೋಂ ಮಿನಿಸ್ಟರ್ ಆದವರು ‘ತಿಮರೋಡಿಯವರನ್ನು ಬಂಧಿಸುತ್ತೇವೆ’ ಎನ್ನುತ್ತಾರೆ. ಸತ್ಯಾಸತ್ಯತೆಯನ್ನು ಅರಿತು ಪ್ರತಿಕ್ರಿಯಿಸುವ ಜವಾಬ್ದಾರಿಯೂ ಆಡಳಿತ ಪಕ್ಷದ ನಾಯಕರಿಗೆ ಇಲ್ವಾ? ‘ಕೋಣ ಈಯ್ತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು’ ಎನ್ನುವಷ್ಟು ಮೂರ್ಖರಾ?
ಹೋಗಲಿ “ಯುಟ್ಯೂಬರ್ ಗಳು ಹಾಗೂ ಸಾಮಾಜಿಕ ಜಾಲತಾಣಿಗರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಈ ಎಲ್ಲಾ ಜನಪ್ರತಿನಿಧಿಗಳು ಆಗ್ರಹಿಸುತ್ತಿದ್ದಾರಲ್ಲಾ, ಈಗ ಇವರುಗಳೇ ಸುಳ್ಳು ಸುದ್ದಿ ನಂಬಿ ಸದನದಲ್ಲಿ ಅರಚಾಡುತ್ತಿದ್ದಾರಲ್ಲಾ ಇಂತವರ ಮೇಲೆ ಕ್ರಮ ಇಲ್ವಾ? ಸದನದಲ್ಲಿ ಏನೇ ಮಾತಾಡಿದರೂ ಕಾನೂನು ವ್ಯಾಪ್ತಿಗೆ ಬರದು ಎಂಬ ಸಾಂವಿಧಾನಿಕ ರಕ್ಷಣೆ ಪಡೆದಿರುವುದರಿಂದ ಈ ಪ್ರತಿನಿಧಿಗಳು ಬಾಯಿಗೆ ಬಂದಂತೆ ಮಾತಾಡುತ್ತಾ ಸದನದ ಘನತೆ, ಪಾವಿತ್ರ್ಯತೆ ಹಾಗೂ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವುದು ಖಂಡಿತಾ ಆಕ್ಷೇಪಣೀಯ.
ಇಷ್ಟಕ್ಕೂ ಪಕ್ಷಾತೀತವಾಗಿ ಧರ್ಮಸ್ಥಳದ ಪರವಾಗಿ ವಕಾಲತ್ತು ವಹಿಸುವ ಈ ಜನಪ್ರತಿನಿಧಿಗಳಿಗೆ ಯಾಕೆ ಯುಟ್ಯೂಬರ್ ಗಳ ಮೇಲೆ ಇಷ್ಟೊಂದು ಕೋಪ? ಸಂವಿಧಾನವೇ ಕೊಟ್ಟಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವೇ ಇಲ್ವಾ? ಧರ್ಮಸ್ಥಳದ ವಿರುದ್ಧ ಯಾರೂ ಏನನ್ನೂ ಪ್ರಸಾರ ಮಾಡಬಾರದು ಎಂದು ಸಾವಿರಾರು ಯುಟ್ಯೂಬ್ ಚಾನೆಲ್ಗಳು ಹಾಗೂ ವೆಬ್ ಪತ್ರಿಕೆಗಳ ವಿರುದ್ಧ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆ ರವರ ಸಹೋದರ ಹರ್ಷೇಂದ್ರ ಹೆಗ್ಗಡೆಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಹೈಕೋರ್ಟ್ ಈ ತಡೆಯಾಜ್ಞೆಯನ್ನೇ ಅಮಾನ್ಯ ಗೊಳಿಸಿತು. ಈಗ ಸಾಮಾಜಿಕ ಜಾಲತಾಣ ಸುದ್ದಿ ಮಾಧ್ಯಮಗಳನ್ನು ನಿರ್ಬಂಧಿಸಬೇಕು ಎಂದು ಈ ಶಾಸಕಾಂಗ ಪಡೆ ಆಗ್ರಹಿಸುತ್ತಿದೆ. ಆದರೆ ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲವೆಂಬುದನ್ನು ಮರೆಯುತ್ತದೆ. ‘ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವವರ ವಿರುದ್ಧ ಕಾನೂನು ತರಲಾಗುತ್ತದೆ’ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಆದರೆ ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂಬುದನ್ನು ಇತ್ಯರ್ಥ ಮಾಡುವುದು ನ್ಯಾಯಾಂಗವೇ ಹೊರತು ಶಾಸಕಾಂಗವಲ್ಲ.
ಇಷ್ಟಕ್ಕೂ ಈಗ ಯಾರೂ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ. ಯಾರೆಂದರೆ ಯಾರೊಬ್ಬರೂ ಹಿಂದೂ ಧರ್ಮದ ಕುರಿತು ಅಪಪ್ರಚಾರ ಮಾಡಿದ್ದಿಲ್ಲ. ದೇವಸ್ಥಾನದ ಆಚಾರ ವಿಚಾರ ಆಚರಣೆಗಳ ಕುರಿತು ಚಕಾರ ಎತ್ತಿಲ್ಲ. ಆದರೂ ಈ ನಾಯಕರಿಗೆ ಯಾಕಿಷ್ಟು ಅಸಮಾಧಾನ. ಹಿಂದೂ ಧರ್ಮಕ್ಕೆ ಕಂಟಕ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಎಂದು ಯಾಕೆ ಅವಲತ್ತುಕೊಳ್ಳುತ್ತಿದ್ದಾರೆ? ಯಾಕೆಂದರೆ ಈ ನಾಯಕರಿಗೆ ಧರ್ಮಸ್ಥಳದ ಭಕ್ತರ ಓಟು ಬೇಕು. ಧರ್ಮಸ್ಥಳದ ದೇವಸ್ಥಾನದ ಆಡಳಿತ ಮಂಡಳಿಗೆ ಭಕ್ತರು ಕೊಡುವ ನೋಟು ಬೇಕು. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾದರೆ ಈ ಅರಮನೆ ಮತ್ತು ಗುರುಮನೆಯವರಿಗೆ ಬಹು ದೊಡ್ಡ ನಷ್ಟ. ಹೀಗಾಗಿ ದೇವರ ಹೆಸರಲ್ಲಿ ರಾಜಕಾರಣ ಹಾಗೂ ವ್ಯಾಪಾರೀಕರಣ ಮಾಡುವ ಇವರುಗಳು ದೈವ ಭಕ್ತಿಯ ಹೆಸರಲ್ಲಿ, ಹಿಂದೂ ಧರ್ಮದ ಹೆಸರಲ್ಲಿ ಭಕ್ತರ ಭಾವನೆಗಳನ್ನು ಉದ್ದೀಪನಗೊಳಿಸುತ್ತಾ ಬಂದಿದ್ದಾರೆ. ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ ಎರಡು ದಶಕಗಳಿಂದ ವರದಿಯಾಗುತ್ತಿರುವ ಅಸಹಜ ಸಾವು, ಹಲ್ಲೆ, ಹತ್ಯೆ, ಅಪಹರಣ, ಅತ್ಯಾಚಾರಗಳಂತಹ ಪ್ರಕರಣಗಳಿಂದ ಎಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗುವುದೋ ಎನ್ನವ ಚಿಂತೆ.
ಯಾರು ಈ ಅಪಸವ್ಯಗಳನ್ನು ಪ್ರಶ್ನಿಸುತ್ತಾರೋ ಅವರ ಧ್ವನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಧರ್ಮಸ್ಥಳದಲ್ಲಾದ ಹೆಣ್ಣುಮಕ್ಕಳ ದಾರುಣ ಸಾವಿಗೆ ನ್ಯಾಯ ಕೇಳಿದವರ ದಮನಿಸುವ ಪ್ರಯತ್ನ ಮಾಡಲಾಗುತ್ತದೆ. ಅನಾಚಾರ ಅನ್ಯಾಯಗಳ ಕುರಿತು ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಪ್ರಶ್ನಿಸಿದರೆ ‘ಅಯ್ಯೋ ಯುಟ್ಯೂಬರ್ ಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಇವರನ್ನೆಲ್ಲಾ ನಿರ್ಬಂಧಿಸಬೇಕು, ಬಂಧಿಸಿ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ. ಯಾರು ಜನರ ಪರವಾಗಿ ಇರಬೇಕಿತ್ತೋ, ಯಾರು ಸಂತ್ರಸ್ತರ ಪರವಾಗಿ ಮಾತಾಡಬೇಕಿತ್ತೋ, ಯಾರು ದುರುಳರ ದುಷ್ಕೃತ್ಯಕ್ಕೆ ಬಲಿಯಾದವರ ಬೆಂಬಲಕ್ಕೆ ನಿಲ್ಲಬೇಕಿತ್ತೋ, ಆ ಎಲ್ಲಾ ನಾಯಕರುಗಳು ಈಗ ಧರ್ಮಾಧಿಕಾರಿಗಳ ಪರವಾಗಿ ವಕಾಲತ್ತು ವಹಿಸುವುದು ಅತ್ಯಂತ ಬೇಸರದ ಸಂಗತಿ. ಈಗ ಆಗುತ್ತಿರುವ ತನಿಖೆ ನಿಲ್ಲಿಸಲು, ಸಂತ್ರಸ್ತರ ಪರವಾಗಿ ಧ್ವನಿ ಎತ್ತುವ ಸ್ವತಂತ್ರ ಸುದ್ದಿ ಮಾಧ್ಯಮಗಳ ಧ್ವನಿಯನ್ನು ದಮನಿಸಲು ಶಾಸಕ ಸಚಿವರೆಲ್ಲ ಸದನದಲ್ಲಿ ಒಂದಾಗಿದ್ದಾರೆ. ಸ್ವತಂತ್ರ ಸುದ್ದಿ ಮಾಧ್ಯಮಗಳ ಮೇಲೆ ಹರಿಹಾಯುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅನ್ಯಾಯವನ್ನು ಪ್ರಶ್ನಿಸುವವರು ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಪಾವಿತ್ರ್ಯತೆ ಹಾಳಾಯ್ತು ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಹುಸಿ ಕಥನ ಸೃಷ್ಟಿಸುತ್ತಿದ್ದಾರೆ.
ಅದೆಷ್ಟೇ ನಿರ್ಬಂಧ ಹೇರಲಿ, ಅದೆಷ್ಟೇ ದಮನ ಮಾಡಲಿ ಸತ್ಯ ಒಂದಿಲ್ಲೊಂದು ದಿನ ಯಾವುದೋ ರೂಪದಲ್ಲಿ ಹೊರಗೆ ಬಂದೇ ಬರುವುದು ಸತ್ಯ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಈ ಸುದ್ದಿಯನ್ನೂ ಓದಿ- ಧರ್ಮಸ್ಥಳ ಪ್ರಕರಣ: ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮಕ್ಕೆ ಸರ್ಕಾರ ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್