ಮೋಚಿ’ ಕಥೆಯು ಕರುಣೆ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಒಂದು ಸೂಕ್ಷ್ಮ ಸಂಘರ್ಷದ ಕಥನವಾಗಿದೆ. ಕಥೆಯ ರಾಚ, ಕೇವಲ ಬಡ ಚಮ್ಮಾರನಲ್ಲ. ಅವನು ಅಧಿಕಾರ ಮತ್ತು ಅನುಕಂಪದ ಎದುರು ತನ್ನ ಮೌನದ ಮೂಲಕವೇ ಘನತೆಯ ಪ್ರತಿರೋಧ ತೋರುವ ಅಧೀನ (ಸಬಾಲ್ಟರ್ನ್) ವ್ಯಕ್ತಿತ್ವ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಒಂದು ಕಥೆ, ಹಲವು ಆಯಾಮ
‘ಭಾರತೀಪ್ರಿಯ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಎಸ್. ವೆಂಕಟರಾವ್ ಅವರ ‘ಮೋಚಿ’, 1947ರಲ್ಲಿ ಪ್ರಕಟವಾದ ‘ರುದ್ರವೀಣೆ’ ಸಂಕಲನದಲ್ಲಿರುವ ಒಂದು ಶ್ರೇಷ್ಠ ಕನ್ನಡ ಕಥೆಯಾಗಿದೆ. ಸಂವೇದನಾಶೀಲ ಮತ್ತು ಬಹುಮುಖಿ ಅರ್ಥಗಳನ್ನು ಹೊಂದಿರುವ ಈ ಕಥೆಯು, ಮೇಲ್ನೋಟಕ್ಕೆ ಸರಳವೆನಿಸಿದರೂ, ತನ್ನೊಳಗೆ ಗಹನವಾದ ಸಾಮಾಜಿಕ ಮತ್ತು ಮಾನಸಿಕ ಆಯಾಮಗಳನ್ನು ಒಳಗೊಂಡಿದೆ.
ಕೇವಲ ಮೂರು ಪಾತ್ರಗಳ ಮೂಲಕವೇ ವರ್ಣ-ವರ್ಗ ವ್ಯವಸ್ಥೆಯ ಸಂಘರ್ಷಗಳನ್ನು ಈ ಕಥೆ ಪರಿಣಾಮಕಾರಿಯಾಗಿ ಅನಾವರಣಗೊಳಿಸುತ್ತದೆ. ಇದು ಕೇವಲ ಬಡತನ ಮತ್ತು ಅನುಕಂಪದ ನಿರೂಪಣೆಯಾಗಿ ಉಳಿಯದೆ, ಅಧಿಕಾರ, ವರ್ಗ ಮತ್ತು ಜಾತಿ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತದೆ. ಮನೋವೈಜ್ಞಾನಿಕವಾಗಿ, ಕಥೆಯು ಮಾನವೀಯ ಘನತೆ, ಸ್ವಾಭಿಮಾನ ಮತ್ತು ಪಾಪಪ್ರಜ್ಞೆಯಂತಹ ಸೂಕ್ಷ್ಮ ಭಾವನೆಗಳನ್ನು ಹಿಡಿದಿಡುತ್ತದೆ.
ಸಬಾಲ್ಟರ್ನ್(ಅಧೀನರ) ಅಧ್ಯಯನದ ದೃಷ್ಟಿಯಿಂದ ನೋಡಿದಾಗ, ಈ ಕಥೆಯು ಮೇಲ್ವರ್ಗದ ಮಾನವತಾವಾದಿ ದೃಷ್ಟಿಯ ಮಿತಿಗಳನ್ನು ಪ್ರಶ್ನಿಸುತ್ತದೆ. ಮುಖ್ಯವಾಹಿನಿಯ ಇತಿಹಾಸದಲ್ಲಿ ಮೌನವಾಗಿಸಲ್ಪಟ್ಟವರ ಧ್ವನಿಯನ್ನು ಹುಡುಕುತ್ತಾ, ಗಾಯತ್ರಿ ಸ್ಪಿವಾಕ್ ಅವರ ಎತ್ತಿದ ‘Can the Subaltern Speak?’(ಅಧೀನನಿಗೆ ಮಾತನಾಡಲು ಸಾಧ್ಯವೇ?) ಎಂಬ ಪ್ರಶ್ನೆಯನ್ನು ಕೇಂದ್ರದಲ್ಲಿರಿಸುತ್ತದೆ. ಕಥಾನಾಯಕನು ಸಮಾಜದ ಅಂಚಿನಲ್ಲಿರುವ ‘ರಾಚ’ನನ್ನು ಅರ್ಥಮಾಡಿಕೊಳ್ಳಲು ನಡೆಸುವ ಪ್ರಯತ್ನದ ಮೂಲಕವೇ ಅಧೀನರ ಅಸ್ಮಿತೆ ಮತ್ತು ಅವರ ಮೌನ ಪ್ರತಿರೋಧದ ಸೂಕ್ಷ್ಮ ರೂಪಗಳನ್ನು ಈ ಕಥೆಯು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.
ಕಥಾ ಹಂದರ: ಚಪ್ಪಲಿ ಬೆಸೆದ ಸಂಬಂಧ
‘ಮೋಚಿ’ ಕಥೆಯ ಪ್ರಮುಖ ಪಾತ್ರಗಳೆಂದರೆ ಹೆಸರಿಲ್ಲದ ಕಥಾನಾಯಕ/ನಿರೂಪಕ, ಅವನ ಪತ್ನಿ ಕಮಲ ಮತ್ತು ಮೋಚಿ ರಾಚ. ನಗರದ ಮಧ್ಯಮ ವರ್ಗದ ಸುಶಿಕ್ಷಿತ ನಿರೂಪಕ ಮತ್ತು ದಾರಿಯಲ್ಲಿ ಕುಳಿತು ಕೆಲಸ ಮಾಡುವ ಮೋಚಿ ರಾಚನನ್ನು ಒಂದು ಹರಿದ ಚಪ್ಪಲಿ ಬೆಸೆಯುತ್ತದೆ. ಇವರಿಬ್ಬರ ಕೆಲವೇ ಭೇಟಿಗಳೆ ಈ ಕಥೆಯ ಹಂದರ.
ಕಥಾನಾಯಕ/ನಿರೂಪಕ ಹರಿದ ತನ್ನ ಚಪ್ಪಲಿ ಹೊಲಿಸಿಕೊಳ್ಳಲು ರಾಚನ ಬಳಿ ಹೋಗುವುದರೊಂದಿಗೆ ಕಥೆ ಆರಂಭವಾಗುತ್ತದೆ. ಅಂದು ರಾತ್ರಿ, ರಾಚನ ಬಡತನ ಮತ್ತು ತನ್ನ ಸಿರಿತನದ ನಡುವಿನ ಅಂತರವು ನಿರೂಪಕನ ಮನಸ್ಸನ್ನು ಕಲಕುತ್ತದೆ. ಮರುಕ ಮತ್ತು ಅಪರಾಧಿ ಪ್ರಜ್ಞೆಯಿಂದಾಗಿ, ಅವನು ಮರುದಿನ ಉದ್ದೇಶಪೂರ್ವಕವಾಗಿ ತನ್ನ ಚಪ್ಪಲಿಯನ್ನು ಹರಿದುಕೊಂಡು ರಾಚನ ಬಳಿ ಹೋಗುತ್ತಾನೆ.
ಅಲ್ಲಿಂದ ನೇರವಾಗಿ ರಾಚನ ಮುರುಕಲು ಗುಡಿಸಲಿಗೆ ಭೇಟಿ ನೀಡಿ, ಅವನ ದಾರಿದ್ರ್ಯವನ್ನು ಕಣ್ಣಾರೆ ಕಂಡು ಮರುಗುತ್ತಾನೆ. ಅವನಿಗೆ ದೊಡ್ಡ ಮೊತ್ತದ ಹಣವನ್ನು ನೀಡಿ ಸಹಾಯ ಮಾಡಲು ಮುಂದಾಗುತ್ತಾನೆ. ನಿರೂಪಕನ ಈ ವರ್ತನೆಯಿಂದ ನೊಂದಿರಬಹುದಾದ ರಾಚ, ಮರುದಿನ ಯಾರಿಗೂ ತಿಳಿಸದೆ ತನ್ನ ಮಕ್ಕಳೊಂದಿಗೆ ಆ ಜಾಗವನ್ನು ಖಾಲಿ ಮಾಡುತ್ತಾನೆ. ತನ್ನ ಸಹಾಯ ಮಾಡುವ ಆತುರವೇ ರಾಚನ ಸ್ವಾಭಿಮಾನಕ್ಕೆ ಧಕ್ಕೆ ತಂದಿರಬಹುದೆಂದು ನಿರೂಪಕನಿಗೆ ಅರಿವಾಗುತ್ತದೆ. ಅವನು ತನ್ನ ತಪ್ಪಿಗಾಗಿ ತೀವ್ರವಾಗಿ ಪಶ್ಚಾತ್ತಾಪ ಪಡುತ್ತಾನೆ.
ಮೋಚಿ: ವೃತ್ತಿಯ ಘನತೆ
‘ಮೋಚಿ’ ಎಂದರೆ ಚರ್ಮದ ವಸ್ತುಗಳನ್ನು, ವಿಶೇಷವಾಗಿ ಪಾದರಕ್ಷೆಗಳನ್ನು ತಯಾರಿಸುವ ಅಥವಾ ದುರಸ್ತಿ ಮಾಡುವ ಕುಶಲಕರ್ಮಿ. ‘ಚಮ್ಮಾರ’ ಮತ್ತು ‘ಸಮಗಾರ’ ಪದಗಳು ‘ಮೋಚಿ’ಗೆ ಸಮಾನಾರ್ಥಕಗಳಾಗಿವೆ. ನಮ್ಮ ರಾಜ್ಯದಲ್ಲಿ ಈ ವೃತ್ತಿ ಮಾಡುವ ಸಮುದಾಯವನ್ನು ಸಮಗಾರ, ಮೋಚಿಗಾರ, ಚಾಂಬಾರ್ ಮತ್ತು ಚಂಬಾಗ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
‘ಮೋಚಿ’ ಕಥೆಯಲ್ಲಿ ಈ ವೃತ್ತಿಗೆ ವಿಶೇಷವಾದ ಘನತೆ ಮತ್ತು ಸ್ವಾಭಿಮಾನದ ಆಯಾಮವನ್ನು ನೀಡಲಾಗಿದೆ. ಕಥೆಯ ನಾಯಕ ರಾಚನು ಕೇವಲ ಚಪ್ಪಲಿ ಹೊಲಿಯುವವನಲ್ಲ. ಅವನು ಬಡತನದಲ್ಲೂ ತನ್ನ ದುಡಿಮೆಯಲ್ಲಿ ನಂಬಿಕೆಯಿಟ್ಟು, ಯಾರ ಸಹಾಯವನ್ನೂ ಅಪೇಕ್ಷಿಸದೆ ಸ್ವಾಭಿಮಾನದಿಂದ ಬದುಕುವ ವ್ಯಕ್ತಿಯ ಪ್ರತೀಕವಾಗಿದ್ದಾನೆ.
ಸಬಾಲ್ಟರ್ನ್ ಅಧ್ಯಯನ: ಅಂಚಿನಲ್ಲಿರುವವರ ಧ್ವನಿ
ಸಬಾಲ್ಟರ್ನ್ ಎಂದರೆ ಸಮಾಜದ ಮುಖ್ಯವಾಹಿನಿಯಿಂದ ಹೊರಗಿರುವ ಜನಸಮೂಹ. ಅಧಿಕಾರ ರಚನೆಯಲ್ಲಿ ಕೆಳಸ್ಥಾನದಲ್ಲಿರುವ ಇವರ ಧ್ವನಿಯನ್ನು ಅಡಗಿಸಲಾಗಿರುತ್ತದೆ. ಈ ಪರಿಕಲ್ಪನೆಯು ಕೇವಲ ಬಡವರನ್ನು ಮಾತ್ರವಲ್ಲ, ಜಾತಿ, ಲಿಂಗ, ಮತ್ತು ಜನಾಂಗೀಯ ಕಾರಣಗಳಿಂದ ಶೋಷಣೆಗೊಳಗಾದ ಎಲ್ಲರನ್ನೂ ಒಳಗೊಳ್ಳುತ್ತದೆ. ಇಟಲಿಯ ಚಿಂತಕ ಆಂಟೋನಿಯೊ ಗ್ರಾಮ್ಶಿ ಇದನ್ನು ಪ್ರಪಂಚಕ್ಕೆ ಪರಿಚಯಿಸಿದರೆ, ರಣಜಿತ್ ಗುಹಾ ಮತ್ತು ಗಾಯತ್ರಿ ಸ್ಪಿವಾಕ್ ಅವರಂತಹ ಚಿಂತಕರು ಭಾರತದ ಜಾತಿ ಮತ್ತು ವರ್ಗದ ಹಿನ್ನೆಲೆಯಲ್ಲಿ ಇದನ್ನು ವಿವರಿಸಿದ್ದಾರೆ.
ರಾಚ ಅಧೀನ ವರ್ಗದ ಪ್ರತೀಕ
ಕಥೆಯ ಮೋಚಿ ರಾಚ, ಸಬಾಲ್ಟರ್ನ್ ವರ್ಗದ ಸ್ಪಷ್ಟ ಪ್ರತೀಕ. ‘ನಾನು ಮೋಚಿ ಬುದ್ದಿ…. ಎಡಗೈನವ’ ಎಂಬ ಅವನ ಮಾತು, ತನ್ನ ಜಾತಿ ಮತ್ತು ಸಾಮಾಜಿಕ ಸ್ಥಾನದ ಬಗ್ಗೆ ಅವನಿಗಿರುವ ಅರಿವನ್ನು ತೋರಿಸುತ್ತದೆ. ‘ಹರಕಲು ಗೋಣಿಚೀಲದ ಮೇಲೆ ಕೂರುವ’, ‘ಮುರುಕು ಗುಡಿಸಲಿನಲ್ಲಿ’ ವಾಸಿಸುವ ಅವನ ಬದುಕು ಬಡತನದಿಂದ ಕೂಡಿದೆ. ಅವನ ಮಕ್ಕಳ ಹರಕುಲು ಬಟ್ಟೆಗಳು ಬಡತನ ಮತ್ತು ನಿರಾಶೆಯನ್ನೇ ಮೂರ್ತಿವೆತ್ತಂತೆ ಮಾಡುತ್ತವೆ. ಕಥಾನಾಯಕನ ಶಿಷ್ಟ ಭಾಷೆಗೂ ರಾಚನ ಆಡುನುಡಿಗೂ(‘ಮಾಸಾಮಿ’, ‘ಬುದ್ದೀ’, ‘ನನ್ನೊಡ್ಯಾ’, ‘ಗೆಪ್ತಿ ಇಲ್ಲ’) ಇರುವ ವ್ಯತ್ಯಾಸ, ಅವರಿಬ್ಬರ ನಡುವಿನ ಸಾಮಾಜಿಕ ಅಂತರವನ್ನು ಎತ್ತಿ ತೋರಿಸುತ್ತದೆ.
ಅಧೀನನಿಗೆ ಮಾತನಾಡಲು ಸಾಧ್ಯವೇ?
ಗಾಯತ್ರಿ ಸ್ಪಿವಾಕ್ ಅವರ ‘ಅಧೀನನಿಗೆ ಮಾತನಾಡಲು ಸಾಧ್ಯವೇ?’ ಎಂಬ ಪ್ರಶ್ನೆ ಇಲ್ಲಿ ಮಹತ್ವ ಪಡೆಯುತ್ತದೆ. ಅಧೀನರು ಮಾತನಾಡಿದರೂ, ಮೇಲ್ವರ್ಗದವರು ಅದನ್ನು ತಮ್ಮ ಚೌಕಟ್ಟಿನಲ್ಲೇ ಅರ್ಥೈಸುತ್ತಾರೆ. ರಾಚ ಮಾತನಾಡುತ್ತಾನಾದರೂ, ಅವನ ಮಾತುಗಳು ಕಥಾನಾಯಕನ ಪ್ರಶ್ನೆಗಳಿಗೆ ಕೇವಲ ಪ್ರತಿಕ್ರಿಯೆಗಳಾಗಿವೆ. ಅವನ ನೋವು, ಚಿಂತೆಗಳು ಅವನ ಬಾಯಿಂದ ನೇರವಾಗಿ ಹೊರಬರುವುದಿಲ್ಲ.
ಕಥಾನಾಯಕನೇ ರಾಚನ ಭಾವನೆಗಳಿಗೆ ವ್ಯಾಖ್ಯಾನ ನೀಡುತ್ತಾನೆ. ‘ಅವನದು ನಿಸ್ವಾರ್ಥ ಜೀವನ,’ ‘ನೊಂದು ನೋವನ್ನು ನುಂಗಿಕೊಳ್ಳುವ ಸ್ವಭಾವ’ ಎನ್ನುವ ಮಾತುಗಳೆಲ್ಲವೂ ಕಥಾನಾಯಕನ ಗ್ರಹಿಕೆಗಳೇ ಹೊರತು ರಾಚನ ನೇರ ನುಡಿಗಳಲ್ಲ. ರಾಚನ ಸ್ವಾಭಿಮಾನ ನಮಗೆ ತಿಳಿಯುವುದೇ ಕಥಾನಾಯಕನ ವಿವರಣೆಯಿಂದ. ಹೀಗೆ, ಮೇಲ್ವರ್ಗದ ನಿರೂಪಕನು ಅಧೀನನಾದ ರಾಚನ ಪರವಾಗಿ ತಾನೇ ಮಾತನಾಡುತ್ತಾ, ಅವನ ನಿಜವಾದ ಧ್ವನಿಯನ್ನು ಮರೆಮಾಚುತ್ತಾನೆ.
ಅಧೀನನ ಮೌನ, ಮೇಲ್ವರ್ಗದ ವ್ಯಾಖ್ಯಾನ
ಈ ಕಥೆಯು ಉತ್ತಮ ಪುರುಷ ನಿರೂಪಣೆಯಲ್ಲಿರುವುದು ಅತ್ಯಂತ ಪರಿಣಾಮಕಾರಿ ತಂತ್ರ. ಇದರಿಂದಾಗಿ ಇಡೀ ಕಥೆ ಕಥಾನಾಯಕನ ದೃಷ್ಟಿಕೋನದಲ್ಲೇ ಸಾಗುತ್ತದೆ. ನಮ್ಮ ಗಮನ ರಾಚನ ಬಡತನದ ಮೇಲೆ ಕೇಂದ್ರೀಕೃತವಾಗುವ ಬದಲು, ಕಥಾನಾಯಕನ ಮಾನಸಿಕ ತೊಳಲಾಟ, ಪಾಪಪ್ರಜ್ಞೆ ಮತ್ತು ಆತ್ಮವಿಮರ್ಶೆಯ ಮೇಲೆ ನಿಲ್ಲುತ್ತದೆ.
ರಾಚನು ಇಲ್ಲಿ ಸ್ವತಂತ್ರ ಪಾತ್ರವಾಗಿರದೆ, ಕಥಾನಾಯಕನ ಆಂತರಿಕ ಪರಿವರ್ತನೆಗೆ ಕಾರಣವಾಗುವ ಒಬ್ಬ ವೇಗವರ್ಧಕನಾಗುತ್ತಾನೆ. ಕೊನೆಯಲ್ಲಿ, ರಾಚನನ್ನು ‘ಸ್ವಾಭಿಮಾನಿ’ ಎಂದು ಆದರ್ಶೀಕರಿಸುವ ಮೂಲಕ, ಕಥಾನಾಯಕನು ತನ್ನ ತಿರಸ್ಕೃತಗೊಂಡ ಸಹಾಯದಿಂದಾದ ಮುಜುಗರದಿಂದ ಪಾರಾಗುತ್ತಾನೆ. ನಮಗೆ ಸಿಗುವುದು ರಾಚನ ನಿಜವಾದ ಬದುಕಿನ ಚಿತ್ರಣವಲ್ಲ, ಬದಲಿಗೆ ರಾಚನನ್ನು ಕಂಡು ಕಥಾನಾಯಕನಿಗೆ ಏನನ್ನಿಸಿತು ಎಂಬ ವಿವರಣೆ ಮಾತ್ರ.
ಅದೃಶ್ಯ ರೂಪದ ಪ್ರತಿರೋಧ
ಅಧಿಕಾರವನ್ನು ನೇರವಾಗಿ ಎದುರಿಸಲಾಗದಿದ್ದಾಗ ಸಬಾಲ್ಟರ್ನ್‌ಗಳು ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಕಥಾನಾಯಕ ನೀಡಲು ಬಂದ ಹಣವನ್ನು ‘ಬ್ಯಾಡಿ ಬುದ್ದೀ’ ಎಂದು ನಿರಾಕರಿಸುವುದು ರಾಚನ ಮೊದಲ ಪ್ರತಿರೋಧ. ಇದು ಕೇವಲ ಹಣದ ನಿರಾಕರಣೆಯಲ್ಲ, ಮೇಲ್ವರ್ಗದ ‘ದಾನ’ ಮತ್ತು ‘ಕರುಣೆ’ಯ ರಾಜಕಾರಣದ ತಿರಸ್ಕಾರ.
ನಂತರ ಹಣ ಕೊಡಲು ಬಂದಾಗ ‘ಇವೊತ್ತು ಬ್ಯಾಡಿ ದ್ಯಾವ್ರೆ, ನಾಳೆ ಕೊಡಿ’ ಎಂದು ಹೇಳುವ ಮೂಲಕ, ಆ ಸನ್ನಿವೇಶದ ಮೇಲಿನ ನಿಯಂತ್ರಣವನ್ನು ರಾಚ ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ಇದು ಅವನ ಸ್ವಾಭಿಮಾನ ಮತ್ತು ಸ್ವಾಯತ್ತತೆಯ ಘೋಷಣೆಯಾಗಿದೆ. ಕಥಾನಾಯಕನಿಗೆ ರಾಚನ ಮೇಲೆ ಅನುಕಂಪವಿದೆ, ಕಾಳಜಿಯಿದೆ. ಆದರೆ ಅದು ಸಮಾನತೆಯ ನೆಲೆಯದ್ದಲ್ಲ. ಬದಲಾಗಿ ಶ್ರೀಮಂತನು ಬಡವನ ಮೇಲೆ ತೋರುವ ಕರುಣೆ. ಈ ಕರುಣೆಯು ರಾಚನನ್ನು ಒಬ್ಬ ‘ವ್ಯಕ್ತಿ’ಯ ಸ್ಥಾನದಿಂದ ‘ದಯಾಪಾತ್ರ’(Pitiable Object) ವಸ್ತುವಿನ ಸ್ಥಾನಕ್ಕೆ ಇಳಿಸುತ್ತದೆ. ಕಥಾನಾಯಕನ ‘ಉದ್ಧಾರದ’ ಯೋಜನೆಯಿಂದ ತಪ್ಪಿಸಿಕೊಳ್ಳಲು ರಾಚ ಕಣ್ಮರೆಯಾಗುತ್ತಾನೆ. ಅವನ ಈ ಕಣ್ಮರೆ, ಮೇಲ್ವರ್ಗದ ಅಧಿಕಾರದ ಆಟದಲ್ಲಿ ತಾನು ದಾಳವಾಗಲು ಇಷ್ಟಪಡುವುದಿಲ್ಲ ಎಂಬುದರ ಸಂಕೇತವಾಗಿ ‘ರಾಚ…. ಇಲ್ಲ….’ ಎಂದು ಮಾರ್ದನಿ ಕೇಳುತ್ತದೆ. ಹೀಗೆ ತನ್ನ ಬದುಕಿನ ಮೇಲೆ ತನಗಿರುವ ಅಂತಿಮ ಹಕ್ಕನ್ನು ಅವನು ಸ್ಥಾಪಿಸುತ್ತಾನೆ. ಅವನ ಖಾಲಿ ಗುಡಿಸಲು ಕಥಾನಾಯಕನ ಮುಖಕ್ಕೆ ಹೊಡೆದಂತ ಉತ್ತರವಾಗಿ ಕಾಣುತ್ತದೆ..
ಪಾಪಪ್ರಜ್ಞೆಯ ರಾಜಕಾರಣ
ಕಥಾನಾಯಕ ಮತ್ತು ರಾಚನ ನಡುವಿನ ಸಂಬಂಧ ಮೊದಲು ವ್ಯಾವಹಾರಿಕವಾಗಿರುತ್ತದೆ. ಆದರೆ ಒಂದು ಕನಸಿನ ನಂತರ, ಕಥಾನಾಯಕನಲ್ಲಿ ಪಾಪಪ್ರಜ್ಞೆ ಮೂಡುತ್ತದೆ. ತನ್ನ ಸುಖಭೋಗದ ಜೀವನವು ರಾಚನಂತಹವರ ಶ್ರಮದ ಮೇಲೆ ನಿಂತಿದೆಯೇ ಎಂಬ ಸಂಘರ್ಷ ಅವನನ್ನು ಕಾಡುತ್ತದೆ. ಈ ಪಾಪಪ್ರಜ್ಞೆಯಿಂದ ಹೊರಬರಲು, ಅವನು ಉದ್ದೇಶಪೂರ್ವಕವಾಗಿ ತನ್ನ ಜೋಡನ್ನು ಹರಿದುಕೊಂಡು ರಾಚನಿಗೆ ‘ಸಹಾಯ’ ಮಾಡಲು ಹೋಗುತ್ತಾನೆ.
ರಾಚನು ಕಣ್ಮರೆಯಾದಾಗ, ಕಥಾನಾಯಕನು ‘ಅವನ ಲೀಲೆ?’ ಎಂದು ಹೇಳುತ್ತಾನೆ. ಇದು ಒಂದು ಸಾಮಾಜಿಕ-ಆರ್ಥಿಕ ಸಮಸ್ಯೆಯನ್ನು ದೈವಿಕ ಅಥವಾ ತಾತ್ವಿಕ ಪ್ರಶ್ನೆಯಾಗಿ ಪರಿವರ್ತಿಸುವ ಪ್ರಯತ್ನ. ವ್ಯವಸ್ಥೆಯ ಸಮಸ್ಯೆಯನ್ನು ಒಪ್ಪಿಕೊಳ್ಳುವ ಬದಲು, ಅದನ್ನು ವಿಧಿಯಾಟವೆಂದು ಸಮಾಧಾನ ಮಾಡಿಕೊಳ್ಳುವ ಮೂಲಕ ಮೇಲ್ವರ್ಗವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ.
ಪಶ್ಚಾತ್ತಾಪದ ಕಥನ
‘ಮೋಚಿ’ ಕಥೆಯು ಕರುಣೆ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಒಂದು ಸೂಕ್ಷ್ಮ ಸಂಘರ್ಷದ ಕಥನವಾಗಿದೆ. ಕಥೆಯ ರಾಚ, ಕೇವಲ ಬಡ ಚಮ್ಮಾರನಲ್ಲ. ಅವನು ಅಧಿಕಾರ ಮತ್ತು ಅನುಕಂಪದ ಎದುರು ತನ್ನ ಮೌನದ ಮೂಲಕವೇ ಘನತೆಯ ಪ್ರತಿರೋಧ ತೋರುವ ಅಧೀನ(ಸಬಾಲ್ಟರ್ನ್) ವ್ಯಕ್ತಿತ್ವ. ಇದಕ್ಕೆ ಪ್ರತಿಯಾಗಿ, ಕಥಾನಾಯಕನ ‘ಸಹಾಯ’ವು ಸಮಾನತೆಯ ಆಶಯದಿಂದ ಬಂದಿದ್ದಲ್ಲ, ಅದು ಅವನೊಳಗಿನ ಪಾಪಪ್ರಜ್ಞೆ ಮತ್ತು ಮೇಲ್ವರ್ಗದ ಅಪರಾಧಿ ಪ್ರಜ್ಞೆಯಿಂದ ಹುಟ್ಟಿದ್ದು.
ಹಣವನ್ನು ತಿರಸ್ಕರಿಸಿ ರಾಚನು ಕಣ್ಮರೆಯಾಗುವುದು, ಈ ಕಥನದ ಅತ್ಯಂತ ಮಹತ್ವದ ತಿರುವು. ಇದು ಕೇವಲ ಭೌತಿಕ ಅದೃಶ್ಯವಾಗುವಿಕೆಯಲ್ಲ, ಬದಲಿಗೆ ತನ್ನ ಅಸ್ತಿತ್ವ ಮತ್ತು ಸ್ವಾಭಿಮಾನದ ಮೇಲಿನ ಹಕ್ಕನ್ನು ಸ್ಥಾಪಿಸುವ ಅವನ ಕ್ರಮ. ಇದೇ ಅವನ ಅತ್ಯಂತ ಶಕ್ತಿಯುತವಾದ ಮಾತು. ಜೊತೆಗೆ ಅವನ ಇರುವಿಕೆಯ ಪ್ರತೀಕ. ಕಥಾನಾಯಕನ ಅಂತಿಮ ಪ್ರಶ್ನೆ, ‘ನಾನು ಯಾರು ಅದನ್ನು ಮಾಡುವುದಕ್ಕೆ?’ ಎಂಬುದು ಅವನ ಪಶ್ಚಾತ್ತಾಪ ಮತ್ತು ತನ್ನ ತಪ್ಪಿನ ಅರಿವನ್ನು ಸೂಚಿಸುತ್ತದೆ.
ಹೀಗಾಗಿ, ಈ ಕಥೆಯ ನಿಜವಾದ ದುರಂತ ರಾಚನ ಬಡತನವಲ್ಲ, ಬದಲಿಗೆ ಅವನಿಗೆ ತನ್ನ ಕಥೆಯನ್ನು ಹೇಳಿಕೊಳ್ಳುವ ಅವಕಾಶವೇ ಇಲ್ಲದಿರುವುದು. ವಿಪರ್ಯಾಸವೆಂದರೆ, ಅವನನ್ನು ‘ಉದ್ಧರಿಸಲು’ ಬಂದ ಕಥಾನಾಯಕನೇ ಅಂತಿಮವಾಗಿ ಅವನ ಮೌನಕ್ಕೆ ಮತ್ತು ಅದೃಶ್ಯವಾಗುವಿಕೆಗೆ ಕಾರಣನಾಗುತ್ತಾನೆ. ಕೊನೆಯಲ್ಲಿ ನಮಗೆ ದಕ್ಕುವುದು ರಾಚನ ಬದುಕಿನ ವಾಸ್ತವವಲ್ಲ, ಬದಲಿಗೆ ಅವನನ್ನು ಅರ್ಥಮಾಡಿಕೊಳ್ಳಲು ಸೋತ ಮೇಲ್ವರ್ಗದ ಪಶ್ಚಾತ್ತಾಪದ ಕಥನವಷ್ಟೇ.
ಡಾ. ರವಿ ಎಂ. ಸಿದ್ಲಿಪುರ
ಇವರು ಶಿವಮೊಗ್ಗೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಎಂ.ಎ., ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಮತ್ತು ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ’ ಎಂಬ ಸಂಶೋಧನೆಗೆ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಲೇಖನಗಳು ವಿವಿಧ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಪರ್ಯಾಯ’, ‘ವಿಮರ್ಶೆ ಓದು’ ಮತ್ತು ‘ಶಾಸನ ಓದು’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಪ್ರಸ್ತುತ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ‘ಅಮ್ಮ, ಆಚಾರ, ನಾನು’ ಮತ್ತು ‘ಗುಡಿಯಾ’