ಪ್ರಗತಿಪರ ಚಿಂತಕ, ಹವ್ಯಾಸಿ ಬರಹಗಾರ, ಸಾಮಾಜಿಕ ಕಾರ್ಯಕರ್ತ, ಅನುವಾದಕ, ಕವಿ, ಚಾರಣಿಗ, ಶ್ರೀನಿವಾಸ ಕಾರ್ಕಳರ ಬದುಕು ಹೂವಿನ ಹಾಸಿಗೆಯಲ್ಲ, ಬದಲಿಗೆ ಅದೊಂದು ಮುಳ್ಳಿನ ಹಾಸಿಗೆ. ಸೋಲಿಗೆ ಸೆಡ್ಡುಹೊಡೆದು ಮುರಿದ ಬದುಕನ್ನು ತನ್ನದೇ ರೀತಿಯಲ್ಲಿ ಮತ್ತೆ ಎತ್ತಿಕಟ್ಟಿ ಸ್ವಾಭಿಮಾನದಿಂದ ಬದುಕುತ್ತಾ ಇರುವ ಇವರು ಇದೀಗ, ಬದುಕಿನಲ್ಲಿ ಒಂದು ಬಾಗಿಲು ಮುಚ್ಚಿದವರಿಗೆ ಇನ್ನೊಂದು ಬಾಗಿಲು ನೋಡಲು ಪ್ರೇರಣೆಯಾಗಬಹುದು ಎಂಬ ಸದಾಶಯದಿಂದ ತಮ್ಮ ಬದುಕಿನ ಸೋಲು ಗೆಲುವಿನ ಕ್ಷಣಗಳಿಗೆ ಅಕ್ಷರ ರೂಪ ನೀಡಲಿದ್ದಾರೆ. ಕನ್ನಡ ಪ್ಲಾನೆಟ್ ಅವರ ದೊಡ್ಡ ಕತೆಯನ್ನು ಸರಣಿಯಾಗಿ ಪ್ರಕಟಿಸಲಿದೆ. ಮೊದಲ ಸರಣಿ ಇಲ್ಲಿದೆ.
ಅದು 1967 ನೇ ಇಸವಿಯ ಎಪ್ರಿಲ್ ತಿಂಗಳ ಏರುಹಗಲು ಇರಬಹುದು. ಕಾರ್ಕಳದಿಂದ ಉತ್ತರಕ್ಕೆ, ಉಡುಪಿ ಮತ್ತು ಹೆಬ್ರಿಯ ಕಡೆಗೆ ಹೋಗುವ ಮಾರ್ಗ ಕವಲೊಡೆಯುವಲ್ಲಿ ಸಿಗುವ ಜೋಡುರಸ್ತೆ ಎಂಬಲ್ಲಿನ ನಮ್ಮ ಪುಟ್ಟ ಬಾಡಿಗೆ ಮನೆಯ ಸಾಮಾನು ಸರಂಜಾಮುಗಳನ್ನು ಹೊತ್ತ ಲಾರಿ ಜೋಡುರಸ್ತೆಗೆ ವಿದಾಯ ಹೇಳಿ ಹೆಬ್ರಿಯ ದಿಕ್ಕಿನಲ್ಲಿ ಹೊರಟಿತು.
ಲಾರಿಯಲ್ಲಿ ನನ್ನ ತಂದೆ ತಾಯಿ, ನನ್ನ ಇಬ್ಬರು ಅಣ್ಣಂದಿರು ಮತ್ತು ಒಬ್ಬಳು ತಂಗಿ ಹೀಗೆ ನಾವು ಆರು ಮಂದಿ ಇದ್ದೆವು. ಜೋಡುರಸ್ತೆಯಿಂದ ಹೊರಟ ಲಾರಿ ಹೆಬ್ರಿ, ಸೋಮೇಶ್ವರ, ಹಾಲಾಡಿಯ ದಿಕ್ಕಿನಲ್ಲಿ ಸಾಗಿ, ಹಾಲಾಡಿ ಹೊಳೆ ದಾಟಿ, ಶಂಕರನಾರಾಯಣಕ್ಕೆ ಹೋಗುವ ಮಾರ್ಗದಲ್ಲಿ ಒಂದೆರಡು ಕಿಲೋಮೀಟರ್ ಚಲಿಸಿ ತಲ್ಲಂಜೆ ಎಂಬಲ್ಲಿ ನಿಂತಿತು. ಮನೆ ಸಾಮಗ್ರಿಗಳೊಂದಿಗೆ ನಮ್ಮನ್ನು ಅಲ್ಲಿ ಇಳಿಸಿದ ಲಾರಿ ಮರಳಿ ಕಾರ್ಕಳದ ಹಾದಿ ಹಿಡಿಯಿತು.
ಹೀಗೆ ಅಪ್ಪನ ಸರಕಾರಿ ನೌಕರಿಯ ನೆಪದಲ್ಲಿ ಜಿಲ್ಲೆಯ ದಕ್ಷಿಣ ತುದಿಯಿಂದ ಹೊರಟವರು ವರ್ಗಾವಣೆಯ ಕಾರಣ ಜಿಲ್ಲೆಯ (ಈಗಿನ ಉಡುಪಿ ಜಿಲ್ಲೆಯೂ ಸೇರಿಕೊಂಡ ಬೃಹತ್ತಾದ ಅವಿಭಜಿತ ದಕ್ಷಿಣ ಕನ್ನಡ) ಬೇರೆ ಬೇರೆ ಊರುಗಳಲ್ಲಿ ನೆಲೆಸುತ್ತ, ಉತ್ತರಕ್ಕೆ ಸರಿಯುತ್ತ ಸರಿಯುತ್ತ, ಈಗ ಉತ್ತರದ ತುತ್ತ ತುದಿಯ ಮತ್ತೊಂದು ಊರಿಗೆ ಬಂದು ತಲಪಿದ್ದೆವು. ಊರ ಹೆಸರು ಶಂಕರನಾರಾಯಣ, ಬಳಕೆಯಲ್ಲಿ ಶಂಕ್ರಾಣ, ಜನಸಾಮಾನ್ಯರ ಬಾಯಿಯಲ್ಲಿ ಗೋಳಿಕಟ್ಟೆ.
ನಿಮ್ಮ ಊರು ಯಾವುದು ಎಂದು ಯಾರಾದರೂ ಕೇಳಿದಾಗ ತಕ್ಷಣ ಉತ್ತರಿಸಲು ನನಗೆ ಒಂದಿಷ್ಟು ಕಷ್ಟವಾಗುವುದಿದೆ? ನನ್ನ ನಿಜ ಊರು ಯಾವುದು? ನನ್ನ ತಂದೆಯ ಊರೇ? ಸರಕಾರಿ ಉದ್ಯೋಗದಲ್ಲಿ ತೊಡಗಿಕೊಂಡ ಬಳಿಕ ಅಪ್ಪನಿಗೆ ಹುಟ್ಟೂರಿನೊಂದಿಗೆ ಬಹುತೇಕ ಯಾವ ಸಂಪರ್ಕವೂ ಇರಲಿಲ್ಲ. ನನ್ನ ತಾಯಿಯ ಊರೇ? ನಮ್ಮ ಪರಂಪರೆಯಲ್ಲಿ ತಾಯಿಯ ಊರು ನಮ್ಮ ಊರಾಗುವುದಿಲ್ಲ. ಆದರೆ ʼಊರಿಗೆ ಹೋಗುವುದುʼ ಎಂದು ನಾವು ಹೋಗುತ್ತಿದ್ದುದು ಮಾತ್ರ ಹೆಚ್ಚಾಗಿ ತಾಯಿಯ ಅಣ್ಣ ಪಂಜಿಕಲ್ಲಿನ ಐತಪ್ಪ ಗೌಡರ ಮನೆಗೇ (ಅವರು ಅಲ್ಲಿನ ಶಾಲೆಯ ಮ್ಯಾನೇಜರ್ ಕೂಡಾ ಆಗಿದ್ದರು). ಇನ್ನು, ಅಪ್ಪನ ನೌಕರಿಯ ಕಾರಣಕ್ಕೆ ಕಾಲ ಕಾಲಕ್ಕೆ ವಾಸಿಸಿದ ಬೇರೆ ಬೇರೆ ಊರುಗಳೇ? ಅಥವಾ ಊರೂರು ಅಲೆಯುವುದು ಸಾಕು ಎಂದು ಅಲೆಮಾರಿ ಬದುಕಿನ ನಡುವೆ ಒಂದೆಡೆ ಪುಟ್ಟ ಜಮೀನು ಖರೀದಿಸಿ ಮನೆ ಕಟ್ಟಿ ನೆಲೆ ನಿಂತ ಊರೇ? ನಿಜವಾಗಿ ನನ್ನ ಊರು ಯಾವುದು?
ನನ್ನ ಅಮ್ಮ
ನನ್ನ ಅಮ್ಮನ ಹೆಸರು ವೆಂಕಮ್ಮ. ಸುಳ್ಯ ಜಾಲ್ಸೂರಿನಿಂದ ಪಯಸ್ವಿನಿ ನದಿ ಗುಂಟ ಕೇರಳದ ಬದಿಯಡ್ಕದೆಡೆಗೆ ಹೋಗುವಾಗ ಸಿಗುವ ಪಂಜಿಕಲ್ಲು ಎಂಬಲ್ಲಿನ ಪ್ರತಿಷ್ಠಿತ ದೇವರಗುಂಡ ಕುಟುಂಬದವರು ಅವರು (ಈ ಕುಟುಂಬದವರೇ ಒಬ್ಬರು ಮುಂದೆ ಕರ್ನಾಟಕದ ಮುಖ್ಯಮಂತ್ರಿ ಮತ್ತು ಕೇಂದ್ರ ಮಂತ್ರಿಯೂ ಆದರು). ರಸ್ತೆಯೊಂದು ಕೇರಳ ಮತ್ತು ಕರ್ನಾಟಕವನ್ನು ಪ್ರತ್ಯೇಕಿಸುತ್ತಾ, ರಾಜ್ಯಗಡಿಯನ್ನು ಕತ್ತರಿಸುತ್ತಾ, ಅಲ್ಲಲ್ಲಿ ಪಯಸ್ವಿನಿಯನ್ನು ತಡವುತ್ತಾ ಹೋಗುವ ಮೋಹಕ ಭೂಪ್ರದೇಶವದು. ರಸ್ತೆಯ ಅತ್ತ ಕರ್ನಾಟಕ, ಇತ್ತ ಕೇರಳ.
ಅವರದು ಮನೆಯೊಳಗೆ ಕೂರುವ ಜಾಯಮಾನವಲ್ಲ. ಬಿಸಿಲಿರಲಿ ಮಳೆಯಿರಲಿ ಅಂಗಳಕ್ಕಿಳಿಯಬೇಕು, ತೋಟ ಸುತ್ತಬೇಕು, ಅಲ್ಲಿ ಕಣ್ಣಿಗೆ ಬಿದ್ದ ಏನಾದರೂ ಕೆಲಸ ಮಾಡಬೇಕು. ಧಾರಾಕಾರ ಮಳೆ ಸುರಿಯುವಾಗಲೂ ಅವರು ತಲೆಗೊಂದು ಪ್ಲಾಸ್ಟಿಕ್ ಗೊರಬು ಸಿಕ್ಕಿಸಿಕೊಂಡು ಮನೆ ಸುತ್ತಮುತ್ತ ತಿರುಗಾಡುವವರೇ. ಜಾರಿಬಿದ್ದರೆ ಮುಂದೆ ಏನಾಗಬಹುದು ಎಂಬ ಅರಿವೇ ಇಲ್ಲ ಅವರಿಗೆ. ಬೇಡ ಎಂದರೆ ಕೇಳುವವರೂ ಅಲ್ಲ. ಇದೇ ಕಾರಣಕ್ಕೆ ಅಣ್ಣನೊಂದಿಗೆ ಸದಾ ಹುಸಿ ಜಗಳ ಅವರದು. 67 ರ ಮಗ ಅವರ ಪ್ರಕಾರ ಈಗಲೂ ಏನೂ ತಿಳಿಯದ ಮಗು. ಏನಾದರೂ ಬುದ್ಧಿವಾದ ಹೇಳಿದರೆ, ʼನೀನು ಹೇಳಿದರೆ ನಾನು ಕೇಳಬೇಕಲ್ಲ?ʼ ಎಂಬುದು ಅವರ ಮಾಮೂಲಿ ಪ್ರತಿಕ್ರಿಯೆ.
ಅಮ್ಮ ಹುಟ್ಟಿದ್ದು ಅಂದಾಜು 1933 ನೇ ಇಸವಿಯಲ್ಲಿ; ಪಂಜಿಕಲ್ಲಿನಲ್ಲಿ. ಅವರು ಈಗಲೂ ಬದುಕಿದ್ದಾರೆ. ಸುಳ್ಯದ ಪೈಚಾರು ಬಳಿಯ ಶಾಂತಿನಗರದ ನನ್ನ ಎರಡನೆ ಅಣ್ಣ ಉಮೇಶನ ಮನೆಯಲ್ಲಿ ವಾಸಿಸುತ್ತಿದ್ದಾರೆ. 92 ರ ಈ ಇಳಿವಯಸ್ಸಿನಲ್ಲಿಯೂ ಅವರ ಕ್ರಿಯಾಶೀಲತೆ ನೋಡಿದರೆ ಯುವಕರೂ ನಾಚಬೇಕು.
ಅವರೊಡನೆ ಒಂದೆರಡು ದಿನಗಳಾದರೂ ಕಳೆಯಬೇಕೆಂದು ನಾನು ಈಗಲೂ ವರ್ಷದಲ್ಲಿ ಒಂದೋ ಎರಡೋ ಬಾರಿ ಮಂಗಳೂರಿನಿಂದ ಅಲ್ಲಿಗೆ ಹೋಗುವುದಿದೆ. ಅಲ್ಲಿರುವಾಗ ʼತಗೋ ಮಾವಿನ ಹಣ್ಣು, ತಗೋ ಹಲಸಿನ ಹಣ್ಣುʼ ಎಂದು ಬೇಡವೆಂದರೂ ತಿನ್ನಿಸುತ್ತಿರುತ್ತಾರೆ. ಬೇಡ ಬೇಡ ಎಂದರೂ ನನ್ನ ಬಟ್ಟೆಗಳನ್ನು ಒಗೆದು ಹಾಕುತ್ತಾರೆ. ತುಂಬಾ ಸುಸ್ತು ಎಂದು ಪದೇ ಪದೇ ಹೇಳುತ್ತಾ, ದೇಹ ಕೇಳದಿದ್ದರೂ, ಅಡಿಕೆ ಸುಲಿಯುವ ಕೆಲಸ, ಎಣ್ಣೆ ಮಾಡಲು ತೆಂಗಿನ ಕಾಯಿ ಬಿಡಿಸಿ ಒಣಗಿಸುವ ಕಾಯಕ ಇತ್ಯಾದಿ ಹುರುಪಿನಿಂದಲೇ ಮಾಡುತ್ತಿರುತ್ತಾರೆ. ಈಗಲೂ ಅವರು ತೆಂಗಿನ ಸೋಗೆಯಿಂದ ಎಷ್ಟು ಚಂದದ ಹಿಡಿಸೂಡಿ ಮಾಡುತ್ತಾರೆ ಗೊತ್ತಾ? ಮಂಗಳೂರಿಗೆ ಮರಳುವಾಗ ಅವರು ಮಾಡಿದ ಒಂದೆರಡಾದರೂ ಹಿಡಿಸೂಡಿ ನಮ್ಮ ಕಾರಿನಲ್ಲಿರುತ್ತದೆ.
ಅವರ ಅಡುಗೆಯ ಉತ್ಸಾಹ ನನ್ನ ಅಣ್ಣನಿಗೆ ದೊಡ್ಡ ತಲೆನೋವಿನ ವಿಷಯ. ಅವರನ್ನು ಒಬ್ಬರನ್ನೇ ಬಿಟ್ಟು ಮನೆಯಿಂದ ದೂರ ಹೋಗುವುದಾದರೆ ಗ್ಯಾಸ್ ಸಿಲಿಂಡರ್ ಎಲ್ಲಾದರೂ ತಪ್ಪಿಸಿ ಇಡಬೇಕು ಅಷ್ಟೇ. ಇಲ್ಲವಾದರೆ ವಾಪಸ್ ಬರುವಾಗ ಒಂದಕ್ಕೆ ಒಂದೂವರೆ ಮಾಡಿಕೊಂಡಿರುತ್ತಾರೆ ಎಂದು ಕಾಳಜಿ, ಆತಂಕ ಸಹಿತವಾಗಿ ನಗುತ್ತಾನೆ ಅಣ್ಣ.
ಬಿಡುವಿನ ವೇಳೆಯಲ್ಲಿ ಟಿವಿಯಲ್ಲಿ ವಾರ್ತೆ, ಜಗತ್ತಿನ ಬೇರೆ ಬೇರೆ ದೇಶಗಳ ಕೃಷಿ ಮತ್ತಿತರ ಚಟುವಟಿಕೆಗಳ ವೀಡಿಯೋ ವೀಕ್ಷಿಸುವ ಅವರಿಗೆ ಇಂದಿನ ಅನೇಕರಿಗೆ ಇಲ್ಲದಷ್ಟು ರಾಜಕೀಯ ಸಹಿತ ಸುತ್ತಲ ಆಗುಹೋಗುಗಳು ಮತ್ತು ಬೇರೆ ದೇಶಗಳ ಕೃಷಿಕರ ಬದುಕಿನ ಬಗೆಗಿನ ಪರಿಜ್ಞಾನವಿದೆ. ಮೌಢ್ಯಗಳಿಂದ ಅವರು ಬಹುಮಟ್ಟಿಗೆ ದೂರ.
ಅಮ್ಮ ಅನಕ್ಷರಸ್ಥೆ. ಅದಕ್ಕೆ ಕಾರಣವೂ ಇದೆ. ಅಮ್ಮ ಹುಟ್ಟಿದ ಊರು ಪಂಜಿಕಲ್ಲಿನಲ್ಲಿ ಆಗ ಶಾಲೆ ಇರಲಿಲ್ಲ. ಶಾಲೆಗೆ ಹೋಗಬೇಕಾದರೆ ದೂರದ ಸುಳ್ಯಕ್ಕೆ ಹೋಗಬೇಕು. ಕಳೆದ ಶತಮಾನದ ಮೂರನೆಯ ದಶಕದಲ್ಲಿ ಆ ಭಾಗದ ಭೌಗೋಳಿಕ ಮತ್ತು ಸಾಮಾಜಿಕ ಪರಿಸ್ಥಿತಿ ಹೇಗಿರಬಹುದು ನೀವೇ ಊಹಿಸಿ. ದಾರಿಯ ನಡುವೆ ಸಿಗುವ ನದಿ, ಬಯಲು, ವಿರಳ ವಾಹನ ವ್ಯವಸ್ಥೆ, ಹೆಣ್ಣುಮಗು, ಬಡತನ, ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣದ ಮಹತ್ತ್ವದ ಬಗ್ಗೆ ಇನ್ನೂ ಜನರಲ್ಲಿ ಸಾಕಷ್ಟು ಅರಿವು ಮೂಡಿರದ ಕಾಲ. ಹಾಗಾಗಿ ಅಮ್ಮ ಪಯಸ್ವಿನಿ ನದಿ ದಾಟಿ ಕೆಲವು ದಿನಗಳ ಕಾಲ ಸುಳ್ಯದ ಶಾಲೆಗೆ ಹೋದವಳು ಓದು ಅರ್ಧಕ್ಕೆ ನಿಲ್ಲಿಸಿ ಹೆತ್ತವರು ಗೇಣಿಗೆ ದುಡಿಯುತ್ತಿದ್ದ ಭತ್ತದ ಗದ್ದೆಯಲ್ಲಿ ಕೆಲಸ ಮಾಡತೊಡಗಿದಳು.
ಭತ್ತದ ಕೃಷಿ ಕೆಲಸದಲ್ಲಿ ಪರಿಣತರಾಗಿದ್ದ ಅಮ್ಮ ಮುಂದೆ ಮದುವೆಯಾಗಿ ಗಂಡನ ನೌಕರಿಯ ಕಾರಣಕ್ಕೆ ಊರೂರು ಅಲೆಯುತ್ತಾ ಬೇರೆ ಬೇರೆ ಊರುಗಳಲ್ಲಿ ನೆಲೆಸಿದಾಗಲೂ ನೆರೆ ಹೊರೆಯವರಿಗೆ ನಾಟಿ, ಕೊಯ್ಲು ಹೀಗೆ ಕೃಷಿ ಕೆಲಸಗಳಲ್ಲಿ ನೆರವಾಗುತ್ತಿದ್ದರು. ಇದನ್ನೆಲ್ಲ ಮಾಡುವಾಗ ತಾನು ಸರಕಾರಿ ನೌಕರನ ಹೆಂಡತಿ ಎಂಬ ಹಮ್ಮು ಬಿಮ್ಮು ಅವರಿಗೆ ಯಾವತ್ತೂ ಅಡ್ಡ ಬರುತ್ತಿರಲಿಲ್ಲ.
ಆಗಿನ ಕಾಲದಲ್ಲಿ ಸರಕಾರಿ ನೌಕರರಿಗೆ ಹೇಳಿಕೊಳ್ಳುವಂತಹ ಸಂಬಳವೇನೂ ಇರಲಿಲ್ಲ. ಅಪ್ಪನಿಗೆ ಲಂಚ ಪಡೆದುಕೊಳ್ಳುವುದೂ ಗೊತ್ತಿರಲಿಲ್ಲ. ಹಾಗಾಗಿ ನಮ್ಮದು ಎಲ್ಲರಂತೆ ಕಡು ಕಷ್ಟದ ಬದುಕು. ಅರಣ್ಯ ಇಲಾಖೆಯ ನೌಕರನ ಹೆಂಡತಿ ಒಲೆ ಉರಿಸುವುದಕ್ಕಾಗಿ ಕಾಡಿಗೆ ಹೋಗಿ ಉರುವಲು ಕಟ್ಟಿಗೆ ತಲೆಯಲ್ಲಿ ಹೊತ್ತು ತರುತ್ತಿದ್ದರು. ಸಾಕಿದ ದನಕ್ಕಾಗಿ ಹಸಿರು ಹುಲ್ಲು, ಸೊಪ್ಪು ಹೆರೆದು ತರುತ್ತಿದ್ದರು.
ಹಳ್ಳಿಗರ ಕೈಯಲ್ಲಿ ಆಗ ನಗದು ಹಣ ಓಡಾಡುತ್ತಿರಲಿಲ್ಲ. ಬೆಳೆ ಇರುತ್ತಿತ್ತು. ನಮ್ಮಂಥವರಿಗೆ ಭತ್ತ ಇತ್ಯಾದಿ ಕೊಟ್ಟು ಅವರು ನಗದು ಹಣ ಪಡೆದುಕೊಳ್ಳುತ್ತಿದ್ದರು (ಕೆಲವೊಮ್ಮೆ ಸಾಲ ಪಡೆದುಕೊಂಡಿರುತ್ತಿದ್ದರು). ಹೀಗೆ ಬಂದ ಭತ್ತವನ್ನು ಬೇಯಿಸಿ ಒಣಗಿಸಿ ಒನಕೆಯ ಮೂಲಕ ಕುಟ್ಟಿ ಅಮ್ಮ ಅಕ್ಕಿಯಾಗಿಸುತ್ತಿದ್ದರು.
ಈ ನಡುವೆ ಎಂಟು ಮಕ್ಕಳನ್ನು ಹೆತ್ತು (ಮೊದಲ ಮಗು ಹುಟ್ಟಿ ಕೆಲವೇ ತಿಂಗಳಲ್ಲಿ ಸತ್ತು ಹೋಗಿತ್ತಂತೆ; ಅದೂ ಸೇರಿದರೆ ಒಂಭತ್ತು ಮಕ್ಕಳು), ಮನೆಯಲ್ಲಿ ಊಟಕ್ಕೇನಾದರೂ ಇದೆಯೇ ಎಂದು ಕೇಳದ ಗಂಡನ ಒಂದರ್ಥದ ಬೇಜವಾಬ್ದಾರಿ ವರ್ತನೆಯ ನಡುವೆ, ಕಾಡಿನಿಂದ ಅಡುಗೆಗೆ ಆಗುವ ಸೊಪ್ಪು ಕಾಯಿಗಳನ್ನು ತಂದು, ಅಥವಾ ಪಕ್ಕದಲ್ಲಿಯೇ ಏನನ್ನಾದರೂ ಬೆಳೆದು ಮನೆಯ ಒಂಬತ್ತು ಮಂದಿಯ ಹೊಟ್ಟೆ ಹಸಿವು ನೀಗಿಸಿ, ಉಳಿದರೆ ತಾನು ಉಂಡು ಮಲಗುತ್ತಿದ್ದವಳು. ಮಕ್ಕಳೆಲ್ಲ ಒಂದು ಸ್ಥಿತಿಗೆ ಬಂದು, ಸ್ವಂತ ಮನೆ ಮಾಡಿಕೊಂಡು ವಾಹನಗಳನ್ನೂ ತಮ್ಮದಾಗಿಸಿಕೊಂಡು, ಬದುಕಿನ ಸುಖ ಎಂಬುದು ಒಂದಿಷ್ಟಾದರೂ ಸಿಗಲಾರಂಭಿಸುವಾಗ ಆಕೆಗೆ ವಯಸ್ಸು ಅರವತ್ತು ಎಪ್ಪತ್ತು ಕಳೆದಿತ್ತು. ಆದರೆ ಆಕೆ ತನ್ನ ಕಷ್ಟವನ್ನು ಎಂದೂ ಹೇಳಿಕೊಂಡವಳಲ್ಲ. ಅವೆಲ್ಲ ಬದುಕಿನ ಭಾಗ ಎಂಬಂತೆ ಬದುಕಿದವಳು. ಆಗ ಎಂದಲ್ಲ, ಈಗಲೂ ಹಾಗೆಯೇ. ಆಕೆಯ ಒಡ ಹುಟ್ಟಿದವರು ಯಾರೂ ಈಗ ಬದುಕಿಲ್ಲ. ಬದುಕಿ ಉಳಿದಿರುವುದು ನನ್ನ ಅಮ್ಮ ಮಾತ್ರ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- 47 ರ ಸ್ವಾತಂತ್ರ್ಯ – ಯಾರಿಗೆ ಬಂತು, ಎಲ್ಲಿಗೆ ಬಂತು?