ಸಂವಿಧಾನಕ್ಕೆ ವಿರುದ್ಧವಾಗಿ ನಡೆದ ಮತಗಳ್ಳತನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಮತಗಳನ್ನು ಅಪಹರಿಸಿ, ಕಳ್ಳ ಮತಗಳನ್ನು ಸೃಷ್ಟಿಸುವ ಮತಮಾಫಿಯಾವನ್ನು ಮಟ್ಟ ಹಾಕಲೇಬೇಕಿದೆ. ಇಲ್ಲದೇ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ಸರ್ವಾಧಿಕಾರಿ ಪ್ರಭುತ್ವ ಈ ದೇಶವನ್ನಾಳುತ್ತದೆ. ವರ್ಣ ವ್ಯವಸ್ಥೆ ಹಾಗೂ ಮನುವಾದಿ ಸಂವಿಧಾನ ಜಾರಿಯಾಗುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬಿಜೆಪಿ ಪಕ್ಷದ ಬುಡಕ್ಕೆ ಬಾಂಬ್ ಬಿದ್ದಂತಾಗಿದೆ. ಕೇಸರಿ ಪಕ್ಷದ ಕಲಿಗಳು ತಲ್ಲಣಗೊಂಡಿದ್ದಾರೆ. ಅಧಿಕಾರದ ಪಟ್ಟಕ್ಕೇರಲು ಅಕ್ರಮವಾಗಿ ಕಟ್ಟಿಕೊಂಡ ಮೆಟ್ಟಿಲುಗಳ ಮಹಿಮೆ ಕಳಚಿ ಬಿದ್ದಂತೆಲ್ಲಾ ಬಿಜೆಪಿ ನಾಯಕತ್ವ ತಳಮಳಗೊಂಡಿದೆ. ಮತಗಳ್ಳತನದ ಕುರಿತು ಸಾಕ್ಷಿ ಆಧಾರಗಳ ಸಮೇತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಜನತೆಯ ಮುಂದೆ ತೆರೆದಿಟ್ಟಿದ್ದೇ ಇದಕ್ಕೆಲ್ಲಾ ಕಾರಣ.
ಆದರೆ ರಾಹುಲ್ ರವರ ಬಹುತೇಕ ಆರೋಪ ಇದ್ದಿದ್ದು ಚುನಾವಣಾ ಆಯೋಗದ ಮೇಲೆ. ತಕರಾರಿದ್ದಿದ್ದು ಆಯೋಗ ಮತದಾರರ ಪಟ್ಟಿಯಲ್ಲಿ ಮಾಡಿದ ವ್ಯಾಪಕ ವಂಚನೆಯ ಕುರಿತು. ನ್ಯಾಯಸಮ್ಮತ ಪಾರದರ್ಶಕ ಚುನಾವಣೆಯನ್ನು ನಡೆಸುವ ಹೊಣೆಗಾರಿಕೆ ಹೊತ್ತಿರುವ ಚುನಾವಣಾ ಆಯೋಗವೇ ಬಿಜೆಪಿ ಪಕ್ಷದ ಪರವಾಗಿ ಮತವಂಚನೆಗೆ ಇಳಿದಿದ್ದರ ಕುರಿತು. ರಾಹುಲ್ ರವರು ಮತಗಳ್ಳತನದ ಬಾಂಬ್ ಇಟ್ಟಿದ್ದು ಚುನಾವಣಾ ಆಯೋಗಕ್ಕೆ, ಆದರೆ ಅದು ಸ್ಫೋಟಗೊಂಡಿದ್ದು ಬಿಜೆಪಿ ಬುಡದಲ್ಲಿ. ಮತಕಳ್ಳ ಎಂದ ಕೂಡಲೇ ಹೆಗಲು ಮುಟ್ಟಿ ನೋಡಿಕೊಂಡ ಬಿಜೆಪಿ ನಾಯಕರು ರಾಹುಲ್ ಗಾಂಧಿಯವರ ಮೇಲೆ ಮುಗಿಬಿದ್ದರು.
ರಾಹುಲ್ ಗಾಂಧಿಯವರು ಲೋಕಸಭೆ ಚುನಾವಣೆಯ ಸೋಲಿನ ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಬೇರೆ ದೇಶದ ಚಿತಾವಣೆಯಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದೆಲ್ಲಾ ಆರೋಪಗಳನ್ನು ಕೇಸರಿಗರು ಮಾಡತೊಡಗಿದರು. ಮತ್ತೆ ರಾಹುಲ್ ರವರ ತಾಯಿಯವರ ವಿದೇಶಿ ಮೂಲವನ್ನು ಕೆದಕ ತೊಡಗಿದರು. ಭಾರತೀಯರಾದವರು ಹೀಗೆಲ್ಲಾ ಆರೋಪ ಮಾಡಲು ಸಾಧ್ಯವೇ ಇಲ್ಲವೆಂದು ಕೇಸರಿ ನ್ಯಾಯಾಧೀಶರು ಹೇಳಿದರು. ದಾಖಲೆಗಳಿದ್ದರೆ ಕೋರ್ಟಿಗೆ ಹೋಗಲಿ ಎಂದೂ ಆಗ್ರಹಿಸಿದರು. ಮತಗಳ್ಳತನದ ಕುರಿತು ದಾಖಲೆ ಬಿಡುಗಡೆ ಮಾಡಿದವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಮಡಿಲ ಮಾಧ್ಯಮಗಳು ಮಾಡತೊಡಗಿದವು.
“ಮತಗಳ್ಳತನಕ್ಕೆ ಅಫಿಡವಿಟ್ ಸಲ್ಲಿಸಿ ಸಹಿ ಹಾಕಬೇಕು. ಆರೋಪ ಸುಳ್ಳಾದರೆ ಶಿಕ್ಷೆ ಅನುಭವಿಸಬೇಕು” ಎಂದು ಚುನಾವಣಾ ಆಯೋಗದ ಆಯುಕ್ತರು ರಾಹುಲ್ ರವರನ್ನು ಹೆದರಿಸಲು ನೋಡಿದರು. ಮೂರು ರಾಜ್ಯಗಳ ಚುನಾವಣಾ ಆಯೋಗವು ನೋಟೀಸ್ ಜಾರಿಗೊಳಿಸಿದವು.
‘ಸುಳ್ಳು ಮಾಹಿತಿಯನ್ನು ರಾಗಾರವರು ಹಂಚಿಕೊಳ್ಳುತ್ತಿದ್ದಾರೆ’ ಎಂಬುದು ಚುನಾವಣಾ ಆಯೋಗದ ಆರೋಪ. ಆದರೆ ರಾಹುಲ್ ರವರು ಯಾವುದೇ ದಾಖಲೆಗಳನ್ನು ಸೃಷ್ಟಿಸಿಲ್ಲ. ಚುನಾವಣಾ ಆಯೋಗವೇ ಕೊಟ್ಟ ಮತದಾರರ ಪಟ್ಟಿಯನ್ನೇ ಅಧ್ಯಯನ ಮಾಡಿ ಅದರಲ್ಲಾದ ಅಪಸವ್ಯಗಳನ್ನು ಸಾಕ್ಷ್ಯಾಧಾರಗಳ ಸಮೇತ ಹೇಳಿದ್ದಾರೆ. ಆದರೆ ಫೇಕ್ ಇನ್ಫಾರ್ಮೇಶನ್ ಎಂದು ಚುನಾವಣಾ ಆಯೋಗದ ಆಯುಕ್ತರು ಆರೋಪಿಸಿ ತಮ್ಮ ಪ್ರಭುತ್ವ ಪರ ವಂಚನೆಯನ್ನು ಮರೆಮಾಚಲು ಪ್ರಯತ್ನಿಸಿದಷ್ಟೂ ತಾವೇ ಬೆತ್ತಲಾಗುತ್ತಿದ್ದಾರೆ.
ವಿರೋಧ ಪಕ್ಷಗಳು ಇದೇ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಡಿಜಿಟಲ್ ಫಾರ್ ಮೆಟ್ ಒದಗಿಸಿ ಹಾಗೂ ಚುನಾವಣಾ ಮತಗಟ್ಟೆಯ ಸಿಸಿ ಕ್ಯಾಮೆರಾ ಫೂಟೇಜ್ ಗಳನ್ನು ಕೊಡಿ ಎಂದು ಆಗ್ರಹಿಸಿತ್ತು. ಆದರೆ ಮತದಾರನ ಖಾಸಗಿ ವಿವರಗಳ ದುರುಪಯೋಗ ಆಗಬಹುದಾದ್ದರಿಂದ ಡಿಜಿಟಲ್ ಪಟ್ಟಿ ಒದಗಿಸಲು ಸಾಧ್ಯವಿಲ್ಲವೆಂದು ಆಯೋಗ ನಿರಾಕರಿಸಿತು. ಹಾಗೂ ಮತದಾನವಾದ 45 ದಿನಗಳಲ್ಲಿ ಕ್ಯಾಮೆರಾ ಫೂಟೇಜ್ ಗಳನ್ನು ಅಳಿಸಲಾಗುತ್ತದೆ ಎಂದು ಕಾನೂನನ್ನೇ ಜಾರಿಗೊಳಿಸಲಾಯ್ತು. ಇದರಿಂದಾಗಿಯೇ ಚುನಾವಣಾ ಅಕ್ರಮಗಳಿಗೆ ಆಯೋಗದ ಸಹಕಾರ ಇರುವುದು ನಿಕ್ಕಿಯಾದಂತಾಯ್ತು. ಮತಗಳ್ಳತನ ಸಂದೇಹ ಹೆಚ್ಚಾಯಿತು. ಗೆಲ್ಲಬಹುದಾದ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಮುವತ್ತು ಸಾವಿರದಷ್ಟು ಮತಗಳ ಅಂತರದಿಂದ ಸೋತಿರುವುದು ಹಾಗೂ ಕೆಲವು ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಾಗಿರುವುದು ಅನುಮಾನಕ್ಕೆ ಕಾರಣವಾಯ್ತು.
ಇದೇ ಅನುಮಾನದ ಕುರಿತು ಅಧ್ಯಯನ ಮಾಡಲು ರಾಹುಲ್ ಗಾಂಧಿ ಒಂದು ತಂಡವನ್ನು ರಚಿಸಿದರು. ಹೇಗಾದರೂ ಮಾಡಿ ಬಿಜೆಪಿಯ ಕೈಗೊಂಬೆಯಾಗಿರುವ ಚುನಾವಣಾ ಆಯೋಗದ ಅಕ್ರಮಗಳನ್ನು ಬಯಲು ಮಾಡಲು ಬೆಂಗಳೂರು ಕೇಂದ್ರ ಲೋಕಸಭಾ ಮತಕ್ಷೇತ್ರದಲ್ಲಿ ಬರುವ ಮಹದೇವಪುರ ವಿಧಾನಸಭಾ ಮತಕ್ಷೇತ್ರದ ಮತದಾರರ ಪಟ್ಟಿ ಕುರಿತು 40 ಜನರ ತಂಡ ಆರು ತಿಂಗಳುಗಳ ಕಾಲ ಅಧ್ಯಯನ ಮಾಡಿತು. ಚುನಾವಣಾ ಆಯೋಗವೇ ಒದಗಿಸಿದ ಮತದಾರರ ಪೇಪರ್ ಪಟ್ಟಿಯನ್ನು ಡಿಜಿಟಲ್ ಫಾರ್ಮ್ಯಾಟಿಗೆ ಬದಲಾಯಿಸಿ ಪರಾಮರ್ಶಿಸಿದಾಗ ಮತದಾರರ ಪಟ್ಟಿಯಲ್ಲಿ ಚುನಾವಣಾ ಆಯೋಗ ಮಾಡಿರುವ ಗೋಲ್‌ಮಾಲ್ ಹೇರಾಪೇರಿ ಬಯಲಾಗತೊಡಗಿತು.
ಅಧ್ಯಯನದಿಂದ ಕಂಡುಕೊಂಡ ಸತ್ಯಗಳನ್ನು ರಾಹುಲ್ ಗಾಂಧಿಯವರು ಆಗಸ್ಟ್ 7 ರಂದು ದೆಹಲಿಯಲ್ಲಿ ಪವರ್ ಪ್ರಸೆಂಟೇಶನ್ ಮೂಲಕ ಎಳೆಎಳೆಯಾಗಿ ಬಿಡಿಸಿ ದೇಶದ ಮುಂದಿಟ್ಟರು. ಆಗಸ್ಟ್ 8 ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು ಜನರಿಗೆ ಮನದಟ್ಟು ಮಾಡಿದರು. ಆಗಸ್ಟ್ 11 ರಂದು ಇಂಡಿಯಾ ಮೈತ್ರಿಕೂಟದ ನಾಯಕರು ಸಂಸದರು ದೆಹಲಿಯಲ್ಲಿ ಮತಗಳ್ಳತನದ ವಿರುದ್ಧ ಹೋರಾಟಕ್ಕಿಳಿದರು.
ಇಷ್ಟೆಲ್ಲಾ ಘಟನೆಗಳು ಒಂದರ ನಂತರ ಒಂದು ಆದಾಗ ಬಿಜೆಪಿ ಪಕ್ಷಕ್ಕೆ ಭಾರೀ ಮುಜುಗರ ಶುರುವಾಯಿತು. ಸುಮ್ಮನೇ ಆರೋಪ ಮಾಡಿದ್ದರೆ ರಾಜಕೀಯ ಭಾಷಣ ಎಂದು ಕೇಂದ್ರ ಸರಕಾರ ನಿರ್ಲಕ್ಷಿಸಬಹುದಾಗಿತ್ತು. ಆದರೆ ಯಾವಾಗ ದಾಖಲೆ ಸಮೇತ ರಾಹುಲ್ ಗಾಂಧಿಯವರು ಮತಗಳ್ಳತನದ ಕುರಿತು ಚುನಾವಣಾ ಆಯೋಗ ಹಾಗೂ ಬಿಜೆಪಿಯ ಪಾಲುದಾರಿಕೆಯನ್ನು ಪ್ರಶ್ನಿಸಿದರೋ ಆಗ ಬಿಜೆಪಿಯಲ್ಲಿ ಕಂಪನ ಶುರುವಾಯಿತು. ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ನಾಯಕರು ಪ್ರತ್ಯಾರೋಪಗಳನ್ನು ಮಾಡತೊಡಗಿದರು ಹಾಗೂ ಬಿಜೆಪಿಯ ಕಾಲಾಳುಗಳಾದ ಮಡಿಲ ಮಾಧ್ಯಮಗಳನ್ನು ಬಳಸಿಕೊಂಡು ರಾಹುಲ್ ಗಾಂಧಿಯವರ ಆರೋಪವೇ ಸುಳ್ಳು ಎಂದು ಸಾಬೀತು ಮಾಡಲು ಹೆಣಗಾಡತೊಡಗಿದರು.
ಬಂದ ಬಿಜೆಪಿಯಾಗಲೀ ಇಲ್ಲವೇ ಚುನಾವಣಾ ಆಯೋಗವಾಗಲೀ ರಾಹುಲ್ ಗಾಂಧಿಯವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಉತ್ತರಿಸಲು ಅಸಾಧ್ಯವಾದಾಗ ಪ್ರತ್ಯಾರೋಪಗಳನ್ನು ಮಾಡುವ ಮೂಲಕ ತಮ್ಮ ಅಕ್ರಮಗಳನ್ನು ಮುಚ್ಚಿಡಲು ಪ್ರಯತ್ನಿಸಲಾಯ್ತು. ಮಹದೇವಪುರ ಮತಕ್ಷೇತ್ರವನ್ನು ಕೇಂದ್ರವಾಗಿಟ್ಟುಕೊಂಡು ರಾಹುಲ್ ರವರು ಪ್ರಸ್ತಾಪಿಸಿದ ಮತಗಳ್ಳತನದ ಲೆಕ್ಕ ಹೀಗಿದೆ.
2024 ರ ಬೆಂಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಮಹದೇವಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಮಾತ್ರ ಬಿಜೆಪಿ 1,01,446 ಮತಗಳ ಲೀಡ್ ಪಡೆದಿತ್ತು. ಇದರಲ್ಲಿ 1,00,250 ಮತಗಳು ಕಳ್ಳತನದಿಂದ ಪಡೆದಿದ್ದು ಎಂಬುದು ರಾಹುಲ್ ರವರ ಆರೋಪ. ಅದಕ್ಕೆ ಸಾಕ್ಷಿಯಾಗಿ ಮತದಾರರ ಪಟ್ಟಿಯನ್ನು ಆಧರಿಸಿದ ಮಾಹಿತಿ ಹೀಗಿವೆ.
* ನಕಲಿ ಮತದಾರರ ಸಂಖ್ಯೆ 11,965
* ಅಮಾನ್ಯ ವಿಳಾಸಗಳ ಮತದಾರರು 40,009
* ಒಂದೇ ವಿಳಾಸದಲ್ಲಿರುವ ಹೆಚ್ಚು ಮತದಾರರು 10,452
* ಅಮಾನ್ಯ ಫೋಟೋಗಳ ಮತದಾರರು 4,132
* ಫಾರಂ 6 ರ ದುರ್ಬಳಕೆ 33,692
ಇವೆಲ್ಲವುಗಳನ್ನೂ ಒಟ್ಟು ಸೇರಿಸಿದರೆ 1,00,250 ಮತಗಳಾಗುತ್ತವೆ. ಈ ನಕಲಿ ಮತಗಳಿಂದಾಗಿಯೇ ಬಿಜೆಪಿ ಅಭ್ಯರ್ಥಿ 30 ಸಾವಿರ ಮತಗಳಿಂದ ಗೆದ್ದಿದ್ದು ಎಂಬುದು ರಾಹುಲ್ ಗಾಂಧಿಯವರ ಅಧ್ಯಯನದ ಫಲಶೃತಿ.
ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನೇ ಆಧರಿಸಿ ತಯಾರಿಸಲಾದ ಈ ಡಾಟಾಗಳೆಲ್ಲಾ ಚುನಾವಣೆಯಲ್ಲಿ ಆದ ಅಕ್ರಮಗಳ ಅಸಲಿತನವನ್ನು ಬಯಲು ಮಾಡುತ್ತವೆ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತವೆ. ಇದೇ ರೀತಿ ದೇಶಾದ್ಯಂತ ಹಲವಾರು ಮತಕ್ಷೇತ್ರದಲ್ಲಿ ನಕಲಿ ಮತದಾರರನ್ನು ಚುನಾವಣಾ ಆಯೋಗ ಸೇರಿಸಿದ್ದು ಬಿಜೆಪಿ ಗೆಲುವಿಗೆ ಕಾರಣವಾಗಿದೆ ಎಂಬುದು ರಾಹುಲ್ ರವರ ಆಪಾದನೆಯಾಗಿದೆ. ದೇಶಾದ್ಯಂತ ನಡೆದ ಚುನಾವಣಾ ಮತದಾರರ ಪಟ್ಟಿಯ ಅಕ್ರಮವನ್ನು ಬಯಲುಗೊಳಿಸಲು ರಾಹುಲ್ ರವರು ಈ ಕೆಳಗಿನ ಎರಡು ಪ್ರಮುಖವಾದ ದಾಖಲೆಗಳಿಗಾಗಿ ಆಗ್ರಹಿಸಿದ್ದಾರೆ.
* ಮತದಾರರ ಎಡಿಟ್ ಮಾಡಬಹುದಾದ ಡಿಜಿಟಲ್ ಡಾಟಾವನ್ನು ಚುನಾವಣಾ ಆಯೋಗ ಒದಗಿಸಬೇಕು.
* ಮತದಾನ ಕೇಂದ್ರಗಳ ಸಿಸಿ ಟಿವಿ ವಿಡಿಯೋ ರಿಕಾರ್ಡನ್ನು 45 ದಿನಗಳ ನಂತರ ಅಳಿಸಿ ಹಾಕದೇ ಒದಗಿಸಬೇಕು.
ಆದರೆ ಏನೇ ಆದರೂ ಈ ದಾಖಲೆಗಳನ್ನು ಒದಗಿಸಲು ಚುನಾವಣಾ ಆಯೋಗ ನಿರಾಕರಿಸುತ್ತಿದೆ. ಎಲ್ಲಿ ತಮ್ಮ ಅಕ್ರಮಗಳೆಲ್ಲಾ ಬಯಲಾಗುತ್ತವೆಯೋ ಎಂಬ ಆತಂಕ ಆಯೋಗದ್ದು. ಈ ದಾಖಲೆ ಒದಗಿಸಿದರೆ ಚುನಾವಣಾ ಮತಗಳ್ಳತನ ಬಯಲಾಗಿ ಬಿಜೆಪಿ ಪಕ್ಷದ ಚುನಾವಣಾ ಅಕ್ರಮ ಜಗಜ್ಜಾಹೀರಾಗುವುದರಲ್ಲಿ ಸಂದೇಹವೇ ಇಲ್ಲ.
ಏನೇ ಆಗಲಿ ರಾಹುಲ್ ರವರ ಅಧ್ಯಯನದಿಂದಾಗಿ ಮತಗಳ್ಳತನದ ಕುರಿತು ದೇಶಾದ್ಯಂತ ಸಂಚಲನ ಮೂಡಿದ್ದಂತೂ ಸತ್ಯ. ವಿರೋಧ ಪಕ್ಷಗಳೆಲ್ಲಾ ಒಂದಾಗಿ ರಾಷ್ಟ್ರವ್ಯಾಪಿ ಹೋರಾಟ ಮಾಡಿದರೆ, ನ್ಯಾಯಾಲಯಗಳಲ್ಲಿ ಮತಗಳ್ಳತನದ ಬಗ್ಗೆ ಪ್ರಶ್ನಿಸಿದರೆ, ಚುನಾವಣಾ ಆಯೋಗದ ಅಕ್ರಮಗಳನ್ನು ನಿರಂತರವಾಗಿ ಬಯಲು ಮಾಡಿದರೆ ಸತ್ಯಕ್ಕೆ ಜಯ ಸಿಗಬಹುದಾಗಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದ ಮತಗಳ್ಳತನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಮತಗಳನ್ನು ಅಪಹರಿಸಿ, ಕಳ್ಳ ಮತಗಳನ್ನು ಸೃಷ್ಟಿಸುವ ಮತಮಾಫಿಯಾವನ್ನು ಮಟ್ಟ ಹಾಕಲೇಬೇಕಿದೆ. ಇಲ್ಲದೇ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಿ ಸರ್ವಾಧಿಕಾರಿ ಪ್ರಭುತ್ವ ಈ ದೇಶವನ್ನಾಳುತ್ತದೆ. ವರ್ಣ ವ್ಯವಸ್ಥೆ ಹಾಗೂ ಮನುವಾದಿ ಸಂವಿಧಾನ ಜಾರಿಯಾಗುತ್ತದೆ. ಬಿಜೆಪಿಯ ಮಾತೃ ಸಂಘಟನೆಯಾದ ಆರೆಸ್ಸೆಸ್ ನ ಅಂತಿಮ ಗುರಿಯೂ ಇದೇ ಆಗಿದೆ. ಹಾಗಾಗದಂತಾಗಲು ಜನರು ಎಚ್ಚೆತ್ತುಕೊಳ್ಳಲೇಬೇಕಿದೆ. ಸಂವಿಧಾನದ ಉಳಿವಿಗಾಗಿ ಪ್ರಜಾಪ್ರಭುತ್ವ ವಿರೋಧಿ ಶಡ್ಯಂತ್ರಗಳನ್ನು ಸೋಲಿಸಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಸಚಿವ ರಾಜಣ್ಣ ವಜಾ; ವಾಚಾಳಿತನಕ್ಕೆ ಸಿಕ್ಕ ಸಜಾ