ಧರ್ಮಸ್ಥಳ ಹೈಟೆಕ್ ಕಾರ್ಪೊರೇಟ್ ಬಿಸಿನೆಸ್ ನ ಆಳ ಅಗಲಗಳನ್ನು ಕರ್ನಾಟಕದ ಜರ್ನಲಿಸಂನಲ್ಲಿ ಮೊದಲ ಬಾರಿಗೆ ದಾಖಲೆ ಸಮೇತ ಆಳವಾಗಿ ವಿಶ್ಲೇಷಣೆ ನಡೆಸಿದ್ದು ಸಮಾಚಾರ.ಕಾಂ. ಅದರ ಸಂಪಾದಕರಾಗಿದ್ದ ಪ್ರಶಾಂತ್ ಹುಲ್ಕೋಡ್ ಜೊತೆ ಒಂದು ಚಿಕ್ಕದಾದ ಬಹಳ ಬದ್ಧತೆಯ ನಿಷ್ಠಾವಂತ ಪತ್ರಕರ್ತರ ತಂಡ ಇಡೀ ಕರ್ಮಕಾಂಡದ ಬೆನ್ನು ಬಿದ್ದು ವರದಿ ಮಾಡಿ ಸಂಚಲನ ಮೂಡಿಸಿತ್ತು. ಆ ವರದಿಗಾರಿಕೆಯ ಅನುಭವಗಳನ್ನೂ ಒಳಗೊಂಡಂತೆ ಒಂದಷ್ಟು ಮಹತ್ವದ ಸಂಗತಿಗಳನ್ನು ಕನ್ನಡ ಪ್ಲಾನೆಟ್.ಕಾಂ ಗಾಗಿ ಪ್ರಶಾಂತ್ ಹುಲ್ಕೋಡ್ ಬರೆಯಲಿದ್ದಾರೆ. ಅದರ ಮೊದಲ ಭಾಗ ಇಲ್ಲಿದೆ.
ಅವರು ಸುದರ್ಶನ ಕುಡುಪು- ಸಿಬಿಐನ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದ ಕಲಾಪಗಳಲ್ಲಿ ಪರಿಚಯವಾದವರು. ಆಗ ಕರ್ನಾಟಕದಲ್ಲಿ ದಿನಬೆಳಗಾದರೆ ಗಣಿ ಹಗರಣದ ಸದ್ದು ಮೊಳಗುತ್ತಿತ್ತು. ಇವತ್ತಿನ ಹಾಗೆ ಸೋಷಿಯಲ್ ಮೀಡಿಯಾಗಳ ಅಬ್ಬರ ಇರಲಿಲ್ಲ. ಆದರೆ, ಬೆಂಗಳೂರಿನ ಸೆಷನ್ಸ್ ಕೋರ್ಟ್ ಆವರಣದಲ್ಲಿದ್ದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಲೇ ಇದ್ದವು. ದೊಡ್ಡ ಸಂಖ್ಯೆಯಲ್ಲಿ ಕ್ಯಾಮೆರಾಗಳು ನೆರೆಯುತ್ತಿದ್ದವು. ಮುಖ್ಯಮಂತ್ರಿಯೇ ಜೈಲಿಗೆ ಹೋಗಿ ಆಗಿತ್ತು. ಜತೆಗೆ ಅವರಿಗೆ ಕಂಪನಿ ನೀಡಲು ಶಾಸಕರುಗಳು, ನಟೋರಿಟಿ ಸಂಪಾದಿಸಿದ್ದ ಅವರ ಹಿಂಬಾಲಕರು, ಐಎಎಸ್ ಅಧಿಕಾರಿಗಳಿಂದ ಹಿಡಿದು ಇನ್ಸ್ಪೆಕ್ಟರ್ವರೆಗೆ ದೊಡ್ಡಪಟ್ಟಿಯೇ ಜೈಲು ಪಾಲಾಗಿತ್ತು. ಆಗಲೂ ಸುಪ್ರಿಂ ಕೋರ್ಟು ನೇಮಿಸಿದ್ದ ಸಿಇಸಿ, ಎಸ್ಐಟಿ ಎಂಬ ಪಡೆಗಳ ಕುರಿತು ದೇಶದ ಜನ ಆಸಕ್ತಿಯಿಂದ ಗಮನಿಸುತ್ತಿದ್ದರು. ಹೀಗಾಗಿ, ರಾಷ್ಟ್ರೀಯ ಮಾಧ್ಯಮಗಳಿಗೂ ಕರ್ನಾಟಕದ ಈ ಬೆಳವಣಿಗೆಗಳು ಸುದ್ದಿ ಸರಕಾಗಿತ್ತು. ಈ ಸಮಯದಲ್ಲಿಯೇ, ಸಿಬಿಐ ನ್ಯಾಯಾಲಯದ ಅಂಗಳದಲ್ಲಿ ನಿಂತು ಎಲ್ಲ ಮಾಧ್ಯಮ ಪ್ರತಿನಿಧಿಗಳನ್ನು ಸಂಭಾಳಿಸುತ್ತಿದ್ದವರು ಸುದರ್ಶನ ಕುಡುಪು.
ದಕ್ಷಿಣ ಕನ್ನಡ ಮೂಲದಿಂದ ಬಂದಿದ್ದ ಅವರದ್ದು ಅಜಾನುಬಾಹು ಶರೀರ. ಯಾವಾಗಲೂ ಶಿಸ್ತು ಬದ್ಧ ಕಟಿಂಗ್, ಶೇವಿಂಗ್ ಪಡೆದುಕೊಂಡಿದ್ದ ನಗುಮುಖ. ಇದ್ದ ಎತ್ತರದ ಕಾರಣಕ್ಕೆ ಕೆಲವೊಮ್ಮೆ ಕುಳ್ಳಗಿರುವ ವ್ಯಕ್ತಿಗಳ ಜತೆ ಕೆಳಗೆ ನೋಡಿ ಮಾತನಾಡುವ ಸಮಯ ಬಂದಾಗ, ಕೊಂಚ ನಡುಬಗ್ಗಿಸಿಯೇ ನಿಲ್ಲುವ ಸೌಜನ್ಯ. ಆರಂಭದಲ್ಲಿ ಸುದ್ದಿಗಳಿಗೆ ಮಾತ್ರವೇ ಸೀಮಿತವಾಗಿದ್ದ ನಮ್ಮಿಬ್ಬರ ಸಂಬಂಧ, ಮಧ್ಯಾಹ್ನದ ಹೊತ್ತಿಗೆ ಅವರು ಮನೆಯಿಂದ ತರುತ್ತಿದ್ದ ಟಿಫಿನ್ ಬಾಕ್ಸ್ ಊಟದ ಹಂಚಿಕೆವರೆಗೆ ವಿಸ್ತಾರಗೊಂಡಿತು. ಮೀನು ನಮ್ಮಿಬ್ಬರಿಗೂ ಇಷ್ಟದ ಖಾದ್ಯವಾಗಿತ್ತು. ನಂತರದ ದಿನಗಳಲ್ಲಿ, ಇಬ್ಬರ ರಾಜಕೀಯ ವಿಚಾರಧಾರೆಗಳಲ್ಲಿನ ಸಾಮ್ಯತೆ ಪರಸ್ಪರ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿತು. ಈ ಸಮಯದಲ್ಲಿಯೇ ವರದಿಗಾರನಾಗಿದ್ದ ನನಗೆ ಅತಿ ಹೆಚ್ಚು ‘ಸ್ಕೂಪ್’ಗಳು ಸಿಕ್ಕಿದ್ದು. ಗಣಿ ಹಗರಣದ ಅಪರೂಪದ, ಇವತ್ತಿಗೂ ಬೆಳಕುಕಾಣದ ಕೆಲವು ದಾಖಲೆಗಳನ್ನು ಓದಲು ಸಿಕ್ಕಿದ್ದು, ನಾಗರೀಕ ಸಮಾಜ ಹೇಗೆ ಸ್ಕ್ಯಾಂಡಲ್ನ್ನು ದಾಟುತ್ತದೆ ಎಂಬುದರ ಸುಳಿವು ಸಿಕ್ಕಿದ್ದು, ಜನಸಮೂಹ ಶಕ್ತಿಯಾಗಿ ಸಾಂಸ್ಥಿಕವಾಗಿ ನಡೆಯುವ ಅಕ್ರಮ- ಅನ್ಯಾಯಗಳನ್ನು ನಿವಾರಿಸಿಕೊಂಡು ಮುಂದಕ್ಕೆ ಚಲಿಸುತ್ತ ಇರುತ್ತಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದ್ದು.
ಹೇಗೆ ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೋ ಹಾಗೆ, ಕರ್ನಾಟಕದ ಗಣಿ ಹಗರಣವನ್ನೂ ಜನಮಾನಸದಿಂದ ಮರೆಸುವ ಕೆಲಸ ಶುರುವಾಯಿತು (ಇವತ್ತಿಗೂ ಎಸ್ಐಟಿ ತನಿಖೆ ಜಾರಿಯಲ್ಲಿದೆ). ಹೀಗಾಗಲು ಕಾರಣವಾದ ಅಂಶಗಳಲ್ಲಿ ಪ್ರಮುಖವಾದದ್ದು ಅಂದಿನ ಕೇಂದ್ರ ಸರಕಾರ ನಡೆಸಿದ ಸಿಬಿಐ ಆಪರೇಷನ್. ಮೊದಲು ಹೈದ್ರಾಬಾದಿನ ಸಿಬಿಐ ಕಚೇರಿಯಲ್ಲಿ ಒಂದಷ್ಟು ಎತ್ತಂಗಡಿಗಳಾದವು. ಹಣಬಲದ ಮಂಪರಿನಲ್ಲಿ ಕಲ್ಪಿತ ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿ ತನ್ನನ್ನು ತಾನು ಘೋಷಿಸಿಕೊಂಡಿದ್ದ, ಚಿನ್ನದ ಸಿಂಹಾಸನದಲ್ಲಿ ಕುಳಿತುಕೊಂಡಿದ್ದ ಸಚಿವನನ್ನು ಬಳ್ಳಾರಿಗೆ ಬಂದು ಎತ್ತಾಕಿಕೊಂಡು ಹೋದ ಅಧಿಕಾರಿಗಳನ್ನು ಜಾಗ ಖಾಲಿ ಮಾಡಿಸಲಾಯಿತು. ಮುಂದುವರಿದು, ಬೆಂಗಳೂರಿನ ಸಿಬಿಐ ರಚನೆಯಲ್ಲಿಯೂ ಬದಲಾವಣೆಗಳಾದವು. ಇದರ ಭಾಗವಾಗಿ ಸುದರ್ಶನ ಕುಡುಪು ಅವರ ವರ್ಗಾವಣೆಯೂ ಆಯಿತು. ಇದರ ಬೆನ್ನಲ್ಲೇ ರಾಜ್ಯ ಸರಕಾರದಿಂದ ವಿರೋಧಗಳ ನಡುವೆಯೂ ಕರ್ನಾಟಕ ಲೋಕಾಯುಕ್ತವನ್ನೇ ಅಪ್ರಸ್ತುತಗೊಳಿಸುವ ಕೆಲಸ ನಡೆಯಿತು. ಅಲ್ಲಿಂದ ನಿಧಾನವಾಗಿ, ಗಣಿ ಹಗರಣದ ವರದಿಗಳು ಎಲ್ಲಾ ಕಡೆ ಕಡಿಮೆಯಾಗಲು ಶುರುವಾದವು.
ನಾನೂ ಕೂಡ ವರದಿಗಾರನಾಗಿದ್ದ ದಿನಪತ್ರಿಕೆ ಬಿಟ್ಟು, ನ್ಯೂಸ್ ಚಾನಲ್ಗಳನ್ನು ಕಟ್ಟಲು ಹೋಗಿ, ಅಲ್ಲಿಂದ ಹೊರಬಿದ್ದು ಸ್ವತಂತ್ರ ಪತ್ರಿಕೋದ್ಯಮದ ಥಿಯರಿಯನ್ನು ತಲೆಗೆ ತುಂಬಿಕೊಂಡು ಫೀಲ್ಡ್ನಲ್ಲಿ ಓಡಾಡಿಕೊಂಡಿದ್ದೆ. ಇದಕ್ಕೆ ವೃತ್ತಿಜೀವನದಲ್ಲಿ ಘಟಿಸಿದ ಹಲವು ಘಟನೆಗಳು ಪ್ರೇರಣೆಯಾಗಿದ್ದವು. ಅದರಲ್ಲಿ ಮುಖ್ಯ ಅಂತ ಅನ್ನಿಸಿದ್ದು, ಧರ್ಮಸ್ಥಳ ಮತ್ತು ಅಂತಹದ್ದೇ ಕೆಲವು ಧಾರ್ಮಿಕ ಸಂಸ್ಥಾನಗಳು ಹಾಗೂ ಅವುಗಳನ್ನು ಪೋಷಿಸಿಕೊಂಡು ಬಂದ ಕೆಲವೇ ಕಾರ್ಪೋರೇಟ್ ಸಂಸ್ಥೆಗಳು ಹಣಬಲವನ್ನು ಮುಂದಿಟ್ಟು ಹೊಂದಿದ್ದ ಸಾಮಾಜಿಕ ಪ್ರಭಾವ. ರಾಜ್ಯದಲ್ಲಿ ಜನರಿಂದ ಆಯ್ಕೆಯಾದ ಸರಕಾರ ಅಧಿಕಾರದಲ್ಲಿದ್ದರೂ, ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾದ ವ್ಯವಸ್ಥೆಯನ್ನು ಇವರು ಪೋಷಿಸಿಕೊಂಡು ಬರುತ್ತಿದ್ದ ರೀತಿಯೇ ನನ್ನ ಅಚ್ಚರಿಗೆ ಕಾರಣವಾಗಿತ್ತು. ಇವರುಗಳು ಒಟ್ಟಾರೆಯಾಗಿ ಜನರ ಮೇಲೆ ಹೊಂದಿದ್ದ ಪ್ರಭಾವ ಅಗಾಧವೂ, ಅಪಾಯಕಾರಿಯೂ ಆಗಿತ್ತು. ಸಮೂಹ ಮಾಧ್ಯಮಗಳನ್ನು ಬಳಸಿಕೊಂಡು ಅಭಿಪ್ರಾಯ ರೂಪಿಸುವುದರಿಂದ ಹಿಡಿದು ಸಾಮೂಹಿಕ ನಡವಳಿಕೆಗಳನ್ನು ಬದಲಿಸುವವರೆಗೆ, ಚುನಾವಣೆಯ ಆಯ್ಕೆಗಳನ್ನು ರೂಪಿಸುವುದರಿಂದ ಹಿಡಿದು ಪರ್ಯಾಯಗಳೇ ಇಲ್ಲದಂತೆ ಮಾಡುವ ಈ ‘ಮುಖ್ಯವಾಹಿನಿ’ಯ ಆಟ ಗಮನಸೆಳೆದಿತ್ತು. ಇದು ಬದಲಾಗದ ಹೊರತು ಹೊಸತೇನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಅಂತ ಬಲವಾಗಿ ಅನ್ನಿಸಿತ್ತು. ಆದರೆ, ಬದಲಾವಣೆ ಹೇಗೆ?
ಮಲೆನಾಡಿನಲ್ಲಿ ಹುಟ್ಟಿದ ನನಗೆ ಧಾರ್ಮಿಕ ನಂಬಿಕೆಗಳು ಹೇಗೆ ಇಡೀ ಪರಿಸರದ ನಡವಳಿಕೆಗಳನ್ನು ಆವರಿಸಿಕೊಂಡಿವೆ ಎಂಬುದು ಅರ್ಥವಾಗಿದ್ದು ಹದಿನೈದು- ಹದಿನಾರು ವರ್ಷಕ್ಕೆ. ಮೊದಲು ಓದಿದ ಕೃತಿ ‘ಮಲೆಗಳಲ್ಲಿ ಮದುಮಗಳು’ ಮತ್ತು ಅದರ ಬೆನ್ನಲ್ಲೇ ಓದಿದ ಹತ್ತು ಹಲವು ಪುಸ್ತಕಗಳು ಓದನ್ನು ರೂಢಿಸಿಕೊಂಡು ಬಂದಿದ್ದರ ಪರಿಣಾಮ ಹೊಸ ದೃಷ್ಟಿಯನ್ನೇ ನೀಡಿದ್ದವು. ಪ್ರತಿ ವರ್ಷ ಅಡಿಕೆ, ಭತ್ತದ ಕೊಯಿಲು ಮುಗಿದ ನಂತರ, ಬೆಳೆಗಳಲ್ಲಿ ಆಯ್ದ ಭಾಗವನ್ನು ಕೆಲವು ಮಲೆನಾಡಿನ ಹಾಗೂ ‘ಘಟ್ಟದ ಕೆಳಗಿನ’ ದೇವಸ್ಥಾನಗಳಿಗಾಗಿಯೇ ಎತ್ತಿಡುವುದು ಎದುರಿಗೇ ನಡೆಯುತ್ತಿತ್ತು. ಅದನ್ನು ಊರಿಗೆ ಬರುತ್ತಿದ್ದ ಮುಸ್ಲಿಂ ಸಗಟು ವ್ಯಾಪಾರಿಗಳಿಗೆ ಕೊಟ್ಟು, ಬಂದ ಹಣವನ್ನು ಅಂಚೆ ಕಚೇರಿಯಿಂದ ಧರ್ಮದ ಸ್ಥಾನಗಳಿಗೆ ಮನಿ ಆರ್ಡರ್ ಮಾಡುವುದು ಆಚರಣೆಯ ಭಾಗವಾಗಿತ್ತು. ದೀಪಾವಳಿ ನಂತರ ಆಚರಿಸುವ ‘ತುಳಸಿ ದೀಪ’ ಭಾಗವಾಗಿ ಮತ್ತೊಮ್ಮೆ ದೇವಸ್ಥಾನಗಳಿಗೆ ಹಣ ಎತ್ತಿಡುವ ಸಾಮೂಹಿಕ ನಡವಳಿಕೆಯೂ ಅಕ್ಕಪಕ್ಕ ನಡೆದೆ ಇತ್ತು. ಹೆಚ್ಚೆಂದರೆ ಇವೆಲ್ಲವೂ ಯಾಕೆ? ಎಂಬ ಬಂಡಾಯದ ಮೂಲ ಪ್ರಶ್ನೆಯೊಂದು ಹುಟ್ಟಿತ್ತು ಎಂಬುದು ಬಿಟ್ಟರೆ, ಸಾಮಾಜಿಕ ಸಮೂಹ ಸನ್ನಿಗಳನ್ನು ಮೀರುವ ಸಾಹಸಗಳನ್ನು ಮಾಡಿ ವಿಫಲನಾಗಿದ್ದೆ.
ಆದರೆ, ಪತ್ರಿಕೋದ್ಯಮ ಪದವಿ ಓದುವ ಹೊತ್ತಿಗೆ ಒಡನಾಡಿದ RADICAL ಎಡಪಂಥೀಯ ಚಳವಳಿ, ವಿದ್ಯಾರ್ಥಿ ಚಳವಳಿ, ಪರಿಸರ ಚಳವಳಿಗಳು ಹಲವು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಲು ನೆಲೆಗಟ್ಟೊಂದು ಕಟ್ಟಿಕೊಟ್ಟವು. ಅವು ಲೌಕಿಕ ಪ್ರಪಂಚದಲ್ಲಿ ಅತಿ ಪ್ರಬಲವಾಗಿರುವ ವೈಜ್ಞಾನಿಕ ಹಾಗೂ ವೈಚಾರಿಕ ನಡವಳಿಕೆಗಳನ್ನು ಕಲಿಸುವುದರ ಜತೆಗೆ ಗತಕಾಲದಿಂದ ಕಟ್ಟಿಕೊಂಡು ಬಂದ ಅಲೌಕಿಕ ಪ್ರಪಂಚ ಮತ್ತು ಅದು ಹೊಂದಿರುವ ಪ್ರಭಾವವನ್ನು ಮೀರಲು ಬೇಕಿದ್ದ ಪೂರ್ಣದೃಷ್ಟಿಯಡೆಗಿನ ಪಯಣಕ್ಕೆ ಸಹಾಯ ಮಾಡಿದವು ಎಂದೇ ಹೇಳಬೇಕು. ಹಸಿವು, ಬಡತನ, ಜಾತಿ ದೌರ್ಜನ್ಯ, ಪಾಳೆಗಾರಿಕೆ, ಬಂಡವಾಳ, ಶ್ರಮ, ಲಾಭದ ಹಂಚಿಕೆಯಂತಹ ಪದಗಳಿಗೆ ಪ್ರಾಯೋಗಿಕವಾಗಿಯೇ ಅರ್ಥ ಸಿಗತೊಡಗಿತ್ತು. ಕಣ್ಣೆದುರಿಗೆ ನಡೆಯುವ ಪ್ರತಿ ವಿಚಾರ- ನಂಬಿಕೆ ಆಧಾರಿತ ನಡವಳಿಕೆಗಳಿಗೂ, ಅಧಿಕಾರ ಕೇಂದ್ರಗಳಿಗೂ ಇರುವ ಸಂಬಂಧವನ್ನು ಸುಲಿಯಲು ಅಸ್ತ್ರಗಳು ಸಿಕ್ಕಿದ್ದು ಇಲ್ಲಿಯೇ. ಚಳವಳಿ ಮಾತ್ರವೇ ಪರ್ಯಾಯ ಎಂಬುದು ಇಲ್ಲಿದ್ದವರ ದೃಢ ನಿಶ್ಚಯವೂ ಆಗಿತ್ತು. ಆದರೆ ನನಗೆ ಮಾತ್ರ ಆಳದಲ್ಲಿ “ಈ ಸಮೂಹ ಮಾಧ್ಯಮ ಬದಲಾಗದೇ ಇದ್ದರೆ ಯಾವುದೂ ಬದಲಾಗಲು ಸಾಧ್ಯವಿಲ್ಲ” ಎಂಬ ನಂಬಿಕೆ ಗಟ್ಟಿಯಾಗಿತ್ತು. ಆ ಕಾರಣಕ್ಕೆ, ಪದವಿಯಲ್ಲಿ ಇತರೆ ವಿಷಯಗಳಾಗಿದ್ದ ಭಾಷಾಶಾಸ್ತ್ರದ ಸೆಳೆತವನ್ನು, ಇಂಗ್ಲಿಷ್ ಸಾಹಿತ್ಯಗಳ ಮೋಹಕತೆಯನ್ನು ಮೀರಿ ಜರ್ನಲಿಸಂಗೆ ಕಟ್ಟುಬಿದ್ದೆ.
ಪದವಿ ಮುಗಿಸಿ, ಪತ್ರಕರ್ತನಾಗಿ ಸುದ್ದಿಮನೆಗಳಿಗೆ ಕಾಲಿಟ್ಟಾಗ ಮತ್ತೆ ಶೂನ್ಯದಿಂದಲೇ ಕೆಲಸ ಆರಂಭಿಸಿದಂತೆ ಆಗಿತ್ತು. ಯಾವುದನ್ನು ಅಮೂಲ್ಯ ಅಲ್ಲ ಅಂತ ಎತ್ತಿಟ್ಟಿದ್ದೆನೋ ಆ ಅಂಶಗಳಿಗೇ ಆದ್ಯತೆ ನೀಡಬೇಕಾಗಿತ್ತು. ಅದೇ ದಿನಚರಿಯೂ ಆಗಿ ಹೋಗಿತ್ತು. ಕೆಲವೊಂದು ವಿಚಾರದಲ್ಲಿ ಸಮೂಹ ಮಾಧ್ಯಮಗಳ ಪಾಕ ಶಾಲೆಗಳು ಎಂದು ಕರೆಯಬಹುದಾದ ನ್ಯೂಸ್ ರೂಮ್ಗಳು ತೋರಿಸುತ್ತಿದ್ದ ಮಡಿವಂತಿಕೆ ಅಸಹ್ಯ ತರಿಸಿತ್ತು. ಆದರೂ, ಮೂರ್ನಾಲ್ಕು ಸಂಸ್ಥೆಗಳನ್ನು ಬದಲಿಸಿಕೊಂಡು, ಮುಖ್ಯವಾಹಿನಿಯಲ್ಲಿಯೇ ಸುದೀರ್ಘ ಒಂದು ದಶಕದ ಪಯಣ ಮುಗಿಸಿದೆ. ಅಲ್ಲೀವರೆಗೆ ಓದಿದ್ದ ಥಿಯರಿಗಳನ್ನು ಬೆನ್ನಿಗೆ ಇಟ್ಟುಕೊಂಡು ನಡೆಸಿಕೊಂಡ ಬಂದ ವೃತ್ತಿ ಜೀವನಕ್ಕೆ ತಿಲಾಂಜಲಿ ಇಡುವ ಸಮಯ ಬಂದಿತ್ತು. ‘ಮುಖ್ಯ ವಾಹಿನಿ’ ಎಂಬ ಮಾಯೆಯನ್ನು ಕಳೆದುಕೊಂಡು ಹೊರಬಿದ್ದವನು ಸ್ವತಂತ್ರ ಪತ್ರಿಕೋದ್ಯಮದ ತೀರ್ಮಾನಕ್ಕೆ ಬಂದಾಗಿತ್ತು. ಪರಿಣಾಮ, ಅದುಮಿಟ್ಟುಕೊಂಡು ಬಂದ ಹಲವು ಸುದ್ದಿಗಳನ್ನು ಜಗತ್ತಿಗೆ ತಿಳಿಸುವ ಸಲುವಾಗಿ ಆರಂಭವಾಗಿದ್ದೆ ‘ಸಮಾಚಾರ’- ನ್ಯೂಸ್ ವೆಬ್ಸೈಟ್. ಆ ಹೊತ್ತಿಗೆ ಇಂತಹ ತೀರ್ಮಾನಗಳು ಹೊರಜಗತ್ತಿಗೆ ಅಡ್ವೆಂಚರಿಸಂ ತರ ಗೋಚರಿಸುವ ಅಪಾಯವೂ ಇತ್ತು. ಆದರೆ, ಸತ್ಯದ ಹುಡುಕಾಟವೇ ಪತ್ರಿಕೋದ್ಯಮದ ಕೇಂದ್ರವಾಗಿರುವುದರಿಂದ ಮೀಡಿಯಾದೊಳಗಿನ ನನ್ನೊಬ್ಬನ ಚಲನೆ ಕೂಡ ಸಾಮೂಹಿಕ ಚಲನೆಯ ಭಾಗ; ನಾನು ಮೊದಲೂ ಅಲ್ಲ, ಕೊನೆಯೂ ಆಗಲು ಸಾಧ್ಯವಿಲ್ಲ ಎಂಬುದು ನನ್ನ ಸಿದ್ಧಾಂತವಾಗಿತ್ತು. ಇಡೀ ವ್ಯವಸ್ಥೆ ಜಡತ್ವವನ್ನೇ ದಿನಚರಿ ಮಾಡಿಕೊಂಡಾಗ ಬದಲಾವಣೆ ಬಯಸುವ ಚಲನೆ ವೈಯುಕ್ತಿಕವಾಗಿಯಾದರೂ ಶುರುವಾಗಬೇಕಾಗುತ್ತದೆ.
2016ರ ಹೊತ್ತಿಗೆ ಕರ್ನಾಟಕದಲ್ಲಿ, ‘ದಟ್ಸ್ ಕನ್ನಡ’ ವೆಬ್ಸೈಟ್ ದಶಕ ಪೂರೈಸಿ, ‘ಒನ್ ಇಂಡಿಯಾ’ದ ರೂಪ ಪಡೆದಿತ್ತು. ದಿನಪತ್ರಿಕೆಗಳ ಪೈಕಿ ‘ವಿಕ’ ವೆಬ್ಸೈಟ್ ಹಿಂದಿನ ದಿನದ ಸುದ್ದಿಗಳನ್ನು ಪೂರೈಸುತ್ತಿತ್ತು. ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಅವರ ‘ಅವಧಿ’ ಸೈಟ್ ಸಾಹಿತ್ಯಿಕ ಪರಿಚಾರಿಕೆ ಮಾಡುತ್ತಿತ್ತು. ಸುದ್ದಿಗಳನ್ನು ನೀಡಲು ಬೆರಳೆಣಿಕೆಯ ವೆಬ್ಸೈಟ್ಗಳು ಕಾರ್ಯನಿರ್ವಹಿಸುತ್ತಿದ್ದವು. ಅವುಗಳಲ್ಲಿ ಬಹುತೇಕ ಸೈಟ್ಗಳು ಡೈಲಿಹಂಟ್ನಂತಹ ಅಗ್ರಿಗೇಟರ್ಗಳಿಗಾಗಿ ಬ್ರೇಕಿಂಗ್ ನೀಡಲು ಶುರುಮಾಡಿದ್ದವು. ಮುಖ್ಯವಾಹಿನಿಯ ನ್ಯೂಸ್ರೂಮ್ಗಳಲ್ಲಿ ಜನಪ್ರಿಯವಾಗಿದ್ದ ‘ಸಂಪಾದಕೀಯ’ ಬ್ಲಾಗ್ ನಿಂತುಹೋಗಿತ್ತು. ಹೀಗೆ ಕಳೆಗಟ್ಟುತ್ತಿದ್ದ ಡಿಜಿಟಲ್ನಲ್ಲಿ ತನಿಖಾ ವರದಿಗಳು ಮಾತ್ರ ಮಿಸ್ಸಿಂಗ್ ಅಂತ ಅನ್ನಿಸುತ್ತಿತ್ತು. ಹೀಗಾಗಿ, ‘ಸಮಾಚಾರ’, ಸುದ್ದಿಗಳಲ್ಲಿ ಸಂಪ್ರದಾಯ ಮೀರುವ, ರಚನೆಯಲ್ಲಿಯೂ ಲಾಭದಾಯಕವಲ್ಲದ ಪತ್ರಿಕೋದ್ಯಮದ ಹಾದಿಯನ್ನು ಹಿಡಿಯಿತು. ಮೊದಲ ದಿನದಿಂದಲೇ ತನಿಖೆಯ ಹೊಳುವುಗಳನ್ನು ನೀಡಲು ಶುರುಮಾಡಿದ್ದೆವು. ವಾರದ ಅಂತ್ಯಕ್ಕೆ 2 ಸಾವಿರದ ಆಸುಪಾಸಿನಲ್ಲಿ ಓದಿನ ಖುಷಿ ತೆಗೆದುಕೊಳ್ಳಲು ವೆಬ್ಸೈಟ್ಗೆ ಯೂಸರ್ಸ್ ನಿತ್ಯ ಬಂದು ಹೋಗುತ್ತಿದ್ದರು.
ಹೀಗಿರುವಾಗಲೇ, ಒಂದು ದಿನ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ‘ಕುಮಾರಿ ಸೌಜನ್ಯ ಪ್ರಕರಣ’ದಲ್ಲಿ ಮಧ್ಯಂತರ ಆದೇಶ ಹೊರಡಿಸಿದೆ ಎಂಬ ಮಾಹಿತಿ ಹೊರಬಿತ್ತು. ನನಗೆ ನೆನಪಾಗಿದ್ದು ಸುದರ್ಶನ ಕುಡುಪು ಅವರು; ಆಗ ಅವರು ದಿಲ್ಲಿಯಲ್ಲಿದ್ದರು. ಆದೇಶದ ಪ್ರತಿಯ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡರು. ಅವರ ಸಹೋದ್ಯೋಗಿ- ಹಿಂದೆ ಅವರಿಂದಲೇ ಪರಿಚಯವಾಗಿದ್ದ- ಕೇರಳ ಮೂಲದ ವಕೀಲರೊಬ್ಬರು ಜೆರಾಕ್ಸ್ ತಲುಪಿಸಿದರು. ‘ಸಮಾಚಾರ’ದಲ್ಲಿ ವಿಸ್ತೃತ ಸುದ್ದಿ ಹೊರಬಿತ್ತು- ಕೆಲವು ಇಂಗ್ಲಿಷ್ ವೆಬ್ಸೈಟ್ಗಳಲ್ಲಿ, ಕನ್ನಡದ ದಿನ ಪತ್ರಿಕೆಗಳಲ್ಲಿ ಫಾಲೋಅಪ್ ಆಯಿತು. ಸೌಜನ್ಯ ಪ್ರಕರಣದಲ್ಲಿ ಅಲ್ಲೀವರೆಗೂ ಜೈಲಿನಲ್ಲಿದ್ದ, ಆರೋಪಿ ಸಂತೋಷ್ ರಾವ್ ಜೈಲಿನಿಂದ ಹೊರಬರಲು ಈ ಮಧ್ಯಂತರ ಆದೇಶ ಪ್ರಮುಖ ಕಾರಣವಾಯಿತು.
***
ಹಾಗೆ ನೋಡಿದರೆ, ಇದು ಸೌಜನ್ಯ ಕುರಿತು ನಾನು ಬರೆದು, ಪ್ರಕಟಿಸಿದ ಮೊದಲ ವರದಿಯಾಗಿತ್ತು. ಹಿಂದೆ ಕೆಲಸ ಮಾಡಿದ ಯಾವ ಮುಖ್ಯವಾಹಿನಿಯ ಮಾಧ್ಯಮದಲ್ಲೂ ಸಾಧ್ಯವಾಗದ ಈ ಸಾಧ್ಯತೆ ಸೃಷ್ಟಿಯಾಗಿದ್ದು ಖುಷಿಕೊಟ್ಟಿತ್ತು. ಸುದ್ದಿ ಪೋಸ್ಟ್ ಆಗಿ ಕೆಲವು ಗಂಟೆಗಳು ಅಂತದ್ದೇನೂ ನಡೆಯಲಿಲ್ಲ. ಅವತ್ತಿಗೆ ಫೇಸ್ಬುಕ್ನಲ್ಲಿ ‘ಜಸ್ಟಿಸ್ ಫಾರ್ ಸೌಜನ್ಯ’ ಎಂಬ ಪೇಜ್ ಒಂದು ಆಕ್ಟಿವ್ ಆಗಿ ಕೆಲಸ ಮಾಡಿ, ಕೇಸುಗಳನ್ನು ಹಾಕಿಸಿಕೊಂಡು ತಣ್ಣಗಾಗಿತ್ತು. ಆದರೂ ನೋಡೋಣ ಎಂದು, ನಮ್ಮ ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ವರದಿಯ ಲಿಂಕ್ನ್ನು ‘ಜಸ್ಟಿಸ್ ಫಾರ್ ಸೌಜನ್ಯ’ ಪೇಜ್ನ ಅಡ್ಮಿನ್ಗೆ ಪೋಸ್ಟ್ ಮಾಡುವಂತೆ ಡಿಎಂ ಮಾಡಿದೆವು. ಅಲ್ಲಿ ಪೋಸ್ಟ್ ಆಗಿದ್ದಷ್ಟೆ, ಇಲ್ಲಿ ನಮ್ಮ ವೆಬ್ಸೈಟ್ ಹ್ಯಾಂಗ್ ಆಗಲು ಶುರುವಾಯಿತು. ರಿಯಲ್ ಟೈಮ್ನಲ್ಲಿಯೇ ದೊಡ್ಡ ಸಂಖ್ಯೆಯಲ್ಲಿ ನುಗ್ಗಿ ಬರಬಹುದಾದ ಜನರನ್ನು (ಸ್ಪೈಕ್) ತಡೆದುಕೊಳ್ಳಲು ನಾವು ವ್ಯವಸ್ಥೆಯನ್ನೇ ಮಾಡಿಕೊಂಡಿರಲಿಲ್ಲ. ದಿನದ ಅಂತ್ಯಕ್ಕೆ ಹೇಗೋ ತಾಂತ್ರಿಕ ಮಿತಿಗಳಿಂದ ಹೊರಬಂದೆವು. ಡಿಜಿಟಲ್ ಲೋಕದಲ್ಲಿ ‘ಧರ್ಮಾಧಿಕಾರಿ’ ಬಗೆಗೆ ಇರುವ ಆಸಕ್ತಿ ಕಂಡು ದಂಗಾಗಿ ಹೋಗಿದ್ದೆವು. ಸುಮಾರು ಐವತ್ತು ಸಾವಿರ ಜನ ವರದಿಯನ್ನು ಮೊದಲ ದಿನವೇ ಓದಿದ್ದರು. ಧರ್ಮ, ನಂಬಿಕೆಗಳ ಹೊದಿಕೆ ಏನೇ ಇರಲಿ, ಅಧಿಕಾರದಲ್ಲಿರುವವರು ಎಷ್ಟೇ ಸಾಗಹಾಕುವ ಪ್ರಯತ್ನ ಮಾಡಲಿ, ಸಾಮಾನ್ಯ ಜನರಿಗೆ ಸತ್ಯ ಮಾತ್ರವೇ ಎಲ್ಲಾ ಕಾಲಕ್ಕೂ ಮುಖ್ಯವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಸಾವಿರಾರು ಕಾಮೆಂಟ್ಗಳು ಬಿದ್ದಿದ್ದವು. ಇವಿಷ್ಟು ಪ್ರಕ್ರಿಯೆಗಳು ಸಾಂಪ್ರದಾಯಿಕ ಮೀಡಿಯಾದಲ್ಲಿ ನಡೆದಿದ್ದರೆ, ಬಹುಶಃ ಅವತ್ತಿಗೇ ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುಬಹುದಿತ್ತೇನೋ?.
ಆದರೆ, ಏನೇ ಸಿಬಿಐ ತನಿಖೆ ನಡೆಯುತ್ತಿದ್ದರೂ, ಪ್ರಧಾನಿ, ನ್ಯಾಯಾಧೀಶರು, ಮುಖ್ಯಮಂತ್ರಿಯಾದಿಯಾಗಿ ನಮ್ಮದೇ ಸಹೋದ್ಯೋಗಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಪಕ್ಕದಲ್ಲಿ ನಿಂತು ಫೊಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾಗ ಸಾಮಾಜಿಕ ಹೊಣೆಗಾರಿಕೆ ಇರುವ ಉತ್ತರವನ್ನು ಯಾರಿಂದ ನಿರೀಕ್ಷೆ ಮಾಡಲು ಸಾಧ್ಯವಿತ್ತು? ಹಾಗಂತ ಸುಮ್ಮನೆ ಕೂರುವ ಹಾಗೂ ಇರಲಿಲ್ಲ. ಧರ್ಮಸ್ಥಳದ ಬಗೆಗಿನ ಸತ್ಯಾನ್ವೇಷಣೆಗೆ ಸೌಜನ್ಯ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆ ಬಗೆಗಿನ ಒಂದು ವರದಿ ಹಾಗೂ ಅಂದಿನ ಡಿಜಿಟಲ್ ಜಗತ್ತು ತೋರಿಸಿದ ರೆಸ್ಪಾನ್ಸ್ ಪ್ರೇರಣೆ ನೀಡಿತು.
**
ಮುಂದಿನ ಭಾಗದಲ್ಲಿ: ದಿ ಮೇಕಿಂಗ್ ಆಫ್ ಧರ್ಮಸ್ಥಳ: ಅಲೌಕಿಕಕ್ಕಾಗಿ ನಡೆದ ಒಳಒಪ್ಪಂದ ಮತ್ತು ಆಗಮ ವಿರಚಿತ ಪಾಳೇಗಾರಿಕೆ
ಪ್ರಶಾಂತ್ ಹುಲ್ಕೋಡು
ಪತ್ರಕರ್ತರು
ಇದನ್ನೂ ಓದಿ- ಸ್ವತಂತ್ರ ಪತ್ರಕರ್ತರ ಮೇಲೆ ದಾಳಿ, ಹಿಂದೆ ಯಾರಿದ್ದಾರೆ ಹೇಳಿ..