ಮೈಸೂರು: 42 ದೇಶ ಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಲಭೆ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಕೇಳಲು ಸಮಯ ಇಲ್ಲ. ದೇಶದಲ್ಲಿ ಜನರು ಸಾಯುವಾಗ ವಿದೇಶ ಪ್ರವಾಸ ಮಾಡುತ್ತಾರೆ. ಸಾರ್ವಜನಿಕ ಉದ್ಯಮಗಳನ್ನು ಮುಚ್ಚಿ ಅದಾನಿ, ಅಂಬಾನಿಗಳಿಗೆ ಮಾರುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ 2578 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಯೋಜನೆಗಳು ಬಂದರೂ ಸಿದ್ದರಾಮಯ್ಯ ಮೈಸೂರಿಗೆ ಮೊದಲ ಆದ್ಯತೆ ಕೊಡುತ್ತಾರೆ. ಮೈಸೂರಿನ ಮೇಲೆ ಅವರಿಗೆ ಪ್ರೀತಿ ಹೆಚ್ಚು. ಹಣಕಾಸು ಸಚಿವರಾಗಿ ಅವರು ಮೈಸೂರಿಗೆ ಹೆಚ್ಚು ಅನುದಾನ ನೀಡಿದ್ದಾರೆ. ಬಿಜೆಪಿ ಮುಖಂಡರು ಕೇವಲ ಟೀಕಾಚಾರ್ಯರು. ಅವರಿಗೆ ಕೇವಲ ಟೀಕೆ ಮಾಡುವುದನ್ನು ಬಿಟ್ಟು ಬೇರೆ ಏನೂ ತಿಳಿದಿಲ್ಲ ಎಂದರು
ಕಾಂಗ್ರೆಸ್ ಏನು ಮಾಡಿದೆ ಎಂಬುದು ದೇಶದ ಜನರ ಮುಂದೆ ಇದೆ. ನೆಹರೂ ಕಾಲದಲ್ಲಿ ಅನೇಕ ಕಾರ್ಖಾನೆಗಳನ್ನು ಮೈಸೂರಿಗೆ ಕೊಟ್ಟಿದೆ. ಮೋದಿ ಹಾಗೂ ಇಲ್ಲಿರುವ ಅವರ ಶಿಷ್ಯರು ಈ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಹೇಳಬೇಕು ಎಂದು ಸವಾಲು ಹಾಕಿದರು.
ಬಿಜೆಪಿ ಹಾಗೂ ಆರ್ ಎಸ್ ಎಸ್ ಸಂವಿಧಾನವನ್ನು ತಿದ್ದುವ ಕೆಲಸವನ್ನು ಮಾಡುತ್ತಿದೆ. ಆದರೆ ನೀವೆಷ್ಟೇ ತಿಪ್ಪರಲಾಗ ಹೊಡೆದರೂ ಈ ದೇಶದ ಜನ ಅದಕ್ಕೆ ಅವಕಾಶ ನೀಡುವುದಿಲ್ಲ. ಅಂಬೇಡ್ಕರ್ ಸಂವಿಧಾನ ಬರೆಯದೇ ನಿಮ್ಮ ತಾತ, ಆರ್ ಎಸ್ ಎಸ್ ನವರು ಬರೆದರೆ? ಸಂವಿಧಾನ ಬರೆದಿದ್ದೇ ಅಂಬೇಡ್ಕರ್. ಆ ಸಂವಿಧಾನದಿಂದಲೇ ನೀವು ಪ್ರಧಾನಿ ಆಗಿದ್ದೀರಿ. ಅದನ್ನೇ ಕೊಲೆ ಮಾಡುವ ಕೆಲಸ ಏಕೆ ಮಾಡುತ್ತಿದ್ದೀರಿ ಎಂದು ಖರ್ಗೆ ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಕೋಟಿ ಕೋಟಿ ಜನ ಬಯಸುತ್ತಿದ್ದಾರೆ. ಆದರೆ ಮೋದಿ ಬರಬೇಕು ಅನ್ನುವವರು ಕೇವಲ 2% ಅಷ್ಟೇ. ಲೋಕಸಭೆಯಲ್ಲಿ ಕಾಂಗ್ರೆಸ್ ಇನ್ನಷ್ಟು ಸ್ಥಾನ ಗಳಿಸಿದ್ದರೆ ಮೋದಿ ಅಹಂಕಾರ ಅಳಿಸಬಹುದಿತ್ತು ಎಂದರು.
ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ್ ಅಂತಾರೆ. ನಮಗೂ ಅವರಿಗೂ ಕೇವಲ ಶೇ.2 ರಷ್ಟು ಮಾತ್ರ ವ್ಯತ್ಯಾಸ. ಅಹಂಕಾರದ ಮನುಷ್ಯ ಕೆಳಗಡೆ ಬಿದ್ದೇ ಬೀಳುತ್ತಾನೆ ಎಂದು ಬಿಜೆಪಿ ವಿರುದ್ದ ಖರ್ಗೆ ಹರಿಹಾಯ್ದರು.
ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಶೂನ್ಯ. ರಾಜ್ಯದ ಪಂಚ ಗ್ಯಾರಂಟಿಗಳು ಬೇರೆ ದೇಶಗಳಿಗೆ ಮಾದರಿಯಾಗಿದೆ. ಸಂವಿಧಾನ ಬದಲಾವಣೆ ಮಾಡಲು ನಾವು ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡುವವರಿದ್ದಾರೆ. ಆದೆ ಮೋದಿ ಬಳಿ ಮಾತನಾಡುವವರು ಮಾತ್ರ ಇದ್ದಾರೆ ಎಂದರು.