ಕಾಂಗ್ರೆಸ್‌  ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆ: ಹಿಂದುಳಿದ ವರ್ಗಗಳ ಹೋರಾಟಕ್ಕೆ ವೇದಿಕೆ: ಹರಿಪ್ರಸಾದ್

Most read

ಬೆಂಗಳೂರು: ದೇಶದ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪ್ರಸ್ತುತತೆಯನ್ನು ಚರ್ಚಿಸಲು ಬೆಂಗಳೂರಿನಲ್ಲಿ ನಡೆಯುತ್ತಿರುವ ಎಐಸಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ ಚಾರಿತ್ರಕವೂ ಹೌದು, ಭವಿಷ್ಯತ್ತಿನ ವಿದ್ಯಮಾನಗಳಿಗೆ ದಿಕ್ಸೂಚಿಯೂ ಆಗಲಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಹೇಳಿದ್ದಾರೆ.

ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಎಐಸಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ ಕುರಿತು ಅವರು ಎಕ್ಸ್‌ ನಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಈ ಸಭೆಗೆ ಹರಿಪ್ರಸಾದ್‌ ಅವರೂ ಆಹ್ವಾನಿತರಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಕಾಲ ಕಾಲಕ್ಕೆ ತನ್ನ ಕಾರ್ಯಸೂಚಿಯನ್ನು ಪ್ರಜಾಸತ್ತಾತ್ಮಕವಾಗಿ ಚರ್ಚಿಸುತ್ತಾ, ಸಂವಾದ, ಸಲಹೆ ಸೂಚನೆಗಳಿಗೆ ತೆರೆದುಕೊಳ್ಳುತ್ತಾ ಪಕ್ಷದ ನೀತಿ-ನಿಯಮಗಳನ್ನು ಬದಲಾಯಿಸಿಕೊಂಡಿದೆ. ಅಂತಹ ಬದಲಾವಣೆಯ ಮುಂದುವರೆದ ಭಾಗವಾಗಿ ಇಂದು ನಡೆಯುತ್ತಿರುವ ರಾಷ್ಟ್ರೀಯ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆ ಐತಿಹಾಸಿಕ ವೇದಿಕೆಯಾಗಲಿದೆ.

ಹಿಂದುಳಿದ ಸಮುದಾಯಗಳ ತಾತ್ವಿಕ ರಾಜಕೀಯದ ಪರಿಭಾಷೆಯನ್ನು ಆಳವಾಗಿ ಅಧ್ಯಯನ ನಡೆಸಿರುವ ನಮ್ಮ ಪಕ್ಷದ ನಾಯಕರೂ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಅತ್ಯಂತ ಸ್ಪಷ್ಟವಾಗಿ ಹಾಗೂ ಬದ್ದತೆಯೊಂದಿಗೆ ಹಿಂದುಳಿದ ವರ್ಗಗಳ ಪ್ರಭಲ ಧ್ವನಿಯಾಗಿರುವುದು ಈ ಕಾಲದ ಆಶಯವೇ ಸರಿ.

ಭಾರತ್ ಜೋಡೋ ಯಾತ್ರೆಯ ಮೂಲಕ ದೇಶದ ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆ- ಸವಾಲುಗಳ ಬಗ್ಗೆ ಅಧ್ಯಯನ ನಡೆಸಿರುವ ರಾಹುಲ್ ಗಾಂಧಿಯವರು ಅತ್ಯಂತ ಸ್ಪಷ್ಟವಾದ ನಿಲುವನ್ನು ಕಂಡುಕೊಂಡಿದ್ದಾರೆ. ಜಾತಿ ಜನಗಣತಿ, ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಗಳ ಒತ್ತಾಯ, ಪಕ್ಷದ ಆಂತರಿಕ ಸಮಿತಿಗಳಲ್ಲಿ ಹಿಂದುಳಿದವರಿಗೆ ಆದ್ಯತೆಗಳು ಸೇರಿದಂತೆ ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ದಿಯತ್ತ ಚಿಂತನೆಗಳು ಪ್ರಭಲವಾಗಿ ನಡೆಯುತ್ತಿದೆ.

ನಾಲ್ವಡಿ ಒಡೆಯರು, ಶಾಹು ಮಹಾರಾಜರು, ಫುಲೆ, ಬಾಬಾ ಸಾಹೇಬರು ಸೇರಿದಂತೆ ಅನೇಕ ಮಹನೀಯರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಅಂತಹ ಮಹನೀಯರ ಪ್ರೇರಣೆಯೊಂದಿಗೆ ಶ್ರೀ ರಾಹುಲ್ ಗಾಂಧಿ ಅವರು ರಾಷ್ಟ್ರಮಟ್ಟದಲ್ಲಿ ಹಿಂದುಳಿದವರ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯ ತಾತ್ವಿಕ ಹೋರಾಟಕ್ಕೆ ನಾಯಕತ್ವ ನೀಡಿರುವುದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ.

ರಾಜ್ಯದ ಮುಖ್ಯಮಂತ್ರಿಗಳು, ಹಿಂದುಳಿದ ಸಮುದಾಯಗಳ ನಾಯಕರೂಗಳು ಆಗಿರುವ ಸಿದದಾರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯಲಿರುವ ಎಐಸಿಸಿ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ  ಸ್ವಾತಂತ್ರ್ಯ ನಂತರದ ಕಳೆದ 75ವರ್ಷಗಳ ಹಿಂದುಳಿದವರ ಸಮಸ್ಯೆ ಸವಾಲುಗಳು ಚರ್ಚೆಗೆ ಮಾತ್ರ ಸೀಮಿತವಾಗದೆ ಭವಿಷ್ಯತ್ತಿನ ಹಿಂದುಳಿದ ವರ್ಗಗಳ ತಾತ್ವಿಕ ಹೋರಾಟಕ್ಕೆ ನಾಂದಿ ಹಾಡಲಿದೆ ಎಂದು ಆಶಿಸೋಣ ಎಂದು ಹೇಳಿದ್ದಾರೆ.

More articles

Latest article