ಜಯಂತಿ | ವಚನಕಾರ, ಶಿವಶರಣ ಹಡಪದ ಅಪ್ಪಣ್ಣ

Most read

ಬಸವಣ್ಣನವರ ನಿಕಟವರ್ತಿ, ಕ್ರಾಂತಿಕಾರಕ ಧೋರಣೆ, ವೈಚಾರಿಕ ಪ್ರಜ್ಞೆಯ, ಹಡಪದ ಅಪ್ಪಣ್ಣನವರ ಜಯಂತಿಯ  (ಜುಲೈ 10)  ಪ್ರಯುಕ್ತ ಅವರನ್ನು ಸ್ಮರಿಸಿದ್ದಾರೆ ಡಾ. ಗಂಗಾಧರಯ್ಯ ಹಿರೇಮಠ.

ಹನ್ನೆರಡನೆಯ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರ, ಅನುಭವ ಮಂಟಪದ ಮಹಾನುಭಾವಿ, ಅನುಪಮ ಚೇತನ ಹಾಗೂ ಬಸವಣ್ಣನವರ ನಿಕಟವರ್ತಿಯಾಗಿದ್ದವರು ಹಡಪದ ಅಪ್ಪಣ್ಣನವರು. ಕಲ್ಯಾಣದಲ್ಲಿ ಸರ್ವ ಶಿವಶರಣರ ನಿಕಟ ಸಂಪರ್ಕ ಹೊಂದಿದ್ದ ಇವರು ಶುದ್ಧ ಮನಸ್ಸಿನ ಬಲದಿಂದ ಬಸವಣ್ಣನವರಿಗೆ ಬಲಗೈ ಭಂಟನೆಂದೆ ಹೆಸರು ಪಡೆದಿದ್ದರು. ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಂತೆ ಇವರ ಸ್ಥಾನಮಾನಗಳು. ಬೆಳಗಿನಿಂದ ರಾತ್ರಿಯವರೆಗೆ ಬಸವಣ್ಣನವರ ಜೊತೆಯಲ್ಲೆ ಇದ್ದ ಅಪ್ಪಣ್ಣ ಅವರ ಒಡನಾಡಿಯಾಗಿ, ಆತ್ಮಜ್ಞಾನಿಗಳಾದವರು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರು ‘ಕಲ್ಯಾಣ’ ತೊರೆದು, ಕಪ್ಪಡಿ ಸಂಗಮಕ್ಕೆ ನಿರ್ಗಮಿಸಿದಾಗ ‘ಹಡಪದ ಅಪ್ಪಣ್ಣ’ ಅವರೊಂದಿಗೆ ಹೊರಟರು. ಹೀಗೆ ಬಾಲ್ಯದ ಒಡನಾಡಿಯಾಗಿದ್ದ ಅಪ್ಪಣ್ಣ ಮತ್ತು ಬಸವಣ್ಣನವರ ಸ್ನೇಹ, ಆತ್ಮೀಯತೆ ಮತ್ತು ಅನುಭಾವಗಳು ಅಪಾರವಾದವುಗಳು.

ಹಡಪದ ಅಪ್ಪಣ್ಣನ ಹಿನ್ನೆಲೆ:

ಹಡಪದ ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ‘ಮಸಬಿನಾಳ’ ಗ್ರಾಮದ ಚೆನ್ನವೀರಪ್ಪ – ದೇವಕ್ಕೆಮ್ಮನವರ ಸುಪುತ್ರ. ದೇಗಿನಾಳ್ ಗ್ರಾಮದ ಜೀರನಾಗಪ್ಪ – ಚೆನ್ನಬಸಮ್ಮನವರ ಮಗಳಾದ ‘ಲಿಂಗಮ್ಮ’ ಅಪ್ಪಣ್ಣನ ಪತ್ನಿ. ಇವರ ಕಾಲವನ್ನು ಕ್ರಿ.ಶ. 1160 ಎಂದು ಗುರುತಿಸಲಾಗಿದೆ. ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ  ಅಂಕಿತ ನಾಮದಲ್ಲಿ ಸುಮಾರು 250 ವಚನಗಳನ್ನು ಬರೆದಿದ್ದಾರೆ. ಇವರ ಪತ್ನಿ ಶಿವಶರಣೆ ಲಿಂಗಮ್ಮ ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ. ಚೆನ್ನಮಲ್ಲೇಶ್ವರ ಅಪ್ಪಣ್ಣನ ಪರಮ ಗುರು. ಹಡಪದ (ಕ್ಷೌರಿಕ) ಕಾಯಕ ಇವರದು. ಕಾರ್ಯ ನಿಷ್ಠೆ, ಜೀವನ ನಿಷ್ಠೆ, ಹಾಗೂ ಸೇವಾ ನಿಷ್ಠೆಗಳು ಇವರ ವ್ಯಕ್ತಿತ್ವದ ವಿಶೇಷತೆಗಳು.

ಅಪ್ಪಣ್ಣನ ವಚನಗಳಲ್ಲಿ ವೈಶಿಷ್ಟ್ಯತೆ:

ಇವರ ವಚನಗಳಲ್ಲಿ ಬೆಡಗಿನ ವಚನಗಳ ಸಂಖ್ಯೆಯೇ ಅಧಿಕವಾಗಿವೆ. ಷಟಸ್ಥಲ ವಿಷಯವನ್ನೇ ಇಲ್ಲಿ ಪ್ರಮುಖವಾಗಿ ವಿವೇಚಿಸಲಾಗಿದೆ. ಚಿಕ್ಕ ವಾಕ್ಯಗಳಿಂದ ಕೂಡಿದ ಅಪ್ಪಣ್ಣನ ವಚನಗಳಲ್ಲಿ ಸರಳತೆ, ಸಹಜತೆ ಹಾಗೂ ಕಥನ ಶೈಲಿಯನ್ನು ಕಾಣುತ್ತೇವೆ. ತತ್ತ್ವ ನಿರೂಪಣೆಯ ಸಂದರ್ಭದಲ್ಲಿ ಲೋಕಪ್ರಸಿದ್ಧ ಸಂಗತಿಗಳನ್ನು ಬಳಸುವುದರಿಂದ ವಚನಗಳನ್ನು ಸುಲಭವಾಗಿ ಅರ್ಥೈಸಬಹುದಾಗಿದೆ. ಅಪ್ಪಣ್ಣನ ಬಹುದೊಡ್ಡ ವಚನಗಳಿವೆ. ಈ ವಚನಗಳಲ್ಲಿಯ ಆಧಾರಗಳನ್ನು ಗಮನಿಸಿದರೆ ಅವರ ಪಾಂಡಿತ್ಯದ ಪರಿಚಯ ಆಗದೇ ಇರದು. ಋಗ್ವೇದ, ಯಜುರ್ವೇದ, ಆದಿತ್ಯ ಪುರಾಣ, ಲಿಂಗ ಪುರಾಣಗಳ ಶ್ಲೋಕಗಳನ್ನು ಶಿವರಹಸ್ಯ, ಶಿವಧರ್ಮ, ಸ್ಕಂದಪುರಾಣ, ಆಗಮ, ಉಪನಿಷತ್ತುಗಳು ಹೀಗೆ ಆಧಾರಗಳನ್ನು ತಮ್ಮ ವಚನಗಳಲ್ಲಿ ಬಳಸಿದ ಅಪ್ಪಣ್ಣ ಇತರ ವಚನಕಾರರಿಗಿಂತ ಭಿನ್ನವಾಗಿ ಮಹಾಜ್ಞಾನಿಯಾಗಿ ಕಾಣುತ್ತಾರೆ.

ಶರಣರನ್ನು ಕುರಿತು ಅಪ್ಪಣ್ಣನ ವ್ಯಾಖ್ಯಾನ:

ನಿಜವಾದ ಶರಣನ ಲಕ್ಷಣವನ್ನು ಹಡಪದ ಅಪ್ಪಣ್ಣ ತನ್ನ ವಚನದಲ್ಲಿ ಹೀಗೆ ತಿಳಿಸುತ್ತಾನೆ. “ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು, ಕುಳಿತರೆ ಲಿಂಗವಾಗಿ ಕುಳಿತಿರಬೇಕು. ಇದ್ದರೆ ಜಂಗಮವಾಗಿ ಇರಬೇಕೆಂಬ” ಈ ವಚನವು ಶರಣನ ನಡೆ-ನುಡಿಯನ್ನು ಪ್ರಶ್ನಿಸುವಂತಿದೆ. ಶರಣ ಗುರುವಾಗಿ ನಡೆಯಬೇಕು. ಅವನ ಮಾತಿನಲ್ಲಿ ಗುರುವಿನ ಹಿರಿತನದೊಂದಿಗೆ ಹೊಣೆಯರಿತು ಮಾತನಾಡಬೇಕು, ಶರಣ ಶಿವ ಸ್ವರೂಪಿಯಾಗಿರ ಬೇಕು. ಬಂದವರು ಪೂಜ್ಯತೆಯಿಂದ ಕಾಣುವಂತಿರ ಬೇಕು. ಇದ್ದರೆ ಜಂಗವಾಗಿರಬೇಕು. ಲಿಂಗಸ್ಥಿರವಾದರೆ ಜಂಗಮ ಚಲಿಸುವಂತದ್ದು. ಸಂಚರಿಸುವ ಕಡೆಯಲ್ಲೆಲ್ಲ ಶರಣನಾಗಿರಬೇಕು. ಗುರು, ಲಿಂಗ, ಜಂಗಮ ಬಹಳ ಮುಖ್ಯ. ಈ ಮೂರರ ಮಹತ್ತ್ವ ಅರಿಯದವನು ಎಷ್ಟು ಕಾಲ ಬದುಕಿದರೂ ಯಾವುದೇ ಪ್ರಯೋಜನವಿಲ್ಲ ಎಂಬುದಾಗಿ ಅಪ್ಪಣ್ಣ ನಿಜವಾದ ಶರಣನ ಆದರ್ಶವನ್ನು ತಿಳಿಸಿದ್ದಾರೆ.

ನಡೆ-ನುಡಿ ಸಮನ್ವಯವೇ ಶರಣನ ಧ್ಯೇಯ:

ನಡೆ-ನುಡಿ ಏಕತೆಯ ಕುರಿತು ಹಡಪದ ಅಪ್ಪಣ್ಣ ತನ್ನ ವಚನದಲ್ಲಿ “ನುಡಿದರೇನಯ್ಯ ನಡೆ ಇಲ್ಲದನ್ನಕ್ಕ? ನಡೆದರೇನಯ್ಯ ನುಡಿ ಇಲ್ಲದನ್ನಕ್ಕ? ಈ ನಡೆ-ನುಡಿಯರಿದು ಏಕನಾಗಿ, ತಾವು ಮೃದು ಸ್ವರೂಪರಾದ ಶರಣರಡಿಗೆರಗಿ ನಾನು ಬದುಕಿದೆನಯ್ಯ, ಬಸವಪ್ರಿಯ ಕೂಡಲ ಚೆನ್ನಬಸವಣ್ಣಾ. ನುಡಿದಂತೆ ನಡೆಯದ ಮೇಲೆ ಆ ನುಡಿ ಅರ್ಥಹೀನ, ನಡೆದಂತೆ ನುಡಿದು, ನುಡಿದಂತೆ ನಡೆದು, ನಡೆನುಡಿಗಳು ಒಂದಾಗಬೇಕು. ಹಾಗೆ ನಾನೂ ಕೂಡ ನಡೆ-ನುಡಿಗಳನ್ನು ಸಮೀಕರಿಸಿಕೊಂಡು ಸಾಕ್ಷಾತ್ ಶಿವ ಸ್ವರೂಪರಾದ ಶರಣರ ಪಾದಗಳಿಗೆ ನಮಿಸಿ ಬದುಕಿಕೊಂಡೆ ಎಂದು ಅಪ್ಪಣ್ಣ ಹೇಳುತ್ತಾನೆ. ನಡೆ-ನುಡಿಯ ಸಮನ್ವಯವೇ ಶರಣನಾದವನ ಪ್ರಮುಖ ಧೈಯವಾಗಿರಬೇಕೆಂಬುದೇ ಅವರ ವಚನದ ಆಶಯವಾಗಿದೆ.

ಸ್ತುತಿ, ನಿಂದೆಗೆ ಸಮಾಧಾನಿಯಾಗಿರು:

ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ, ನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು ಎಂದು ‘ಅಕ್ಕಮಹಾದೇವಿ’ ಹೇಳುತ್ತಾಳೆ, ಇದನ್ನೇ ಹಡಪದ ಅಪ್ಪಣ್ಣ ತಮ್ಮ ವಚನದಲ್ಲಿ ಹೀಗೆ ತಿಳಿಸುತ್ತಾರೆ.

“ವಂದನೆಗೆ ನಿಲ್ಲಬೇಡ,

ನಿಂದೆಗಂಜಿ ಓಡಬೇಡ,

ಹಿಂದು ಮುಂದು ಆಡಲಿಬೇಡ,

ಸಂದೇಹಗೊಳಲಿಬೇಡ,

ದ್ವಂದ್ವಬುದ್ಧಿಯ ಕಳೆದು ನಿಂದರೆ

ಬಸವಪ್ರಿಯ ಕೂಡಲ ಚೆನ್ನಬಸವಣ್ಣ”.

ಇಲ್ಲಿ ಅಪ್ಪಣ್ಣ ವಂದನೆಗೆ ನಿಲ್ಲಬೇಡ, ನಿಂದನೆಗೆ ಹೆದರಿಮ ಓಡಬೇಡ ಎನ್ನುತ್ತಾನೆ. ಜನ ನಮ್ಮನ್ನು ಹೊಗಳಲಿ ಎಂದು ನಿರೀಕ್ಷಿಸಬಾರದು. ಅಂದರೆ ಹೊಗಳಿಕೆಗೆ ಬಾಯಿ ಬಿಡಬಾರದು. ಏಕೆಂದರೆ ನಿಂದಿಸಿದವರು ನಮ್ಮ ದೋಷಗಳನ್ನು ತೋರಿಸಿ ಕೊಡಬಹುದು. ಹಿಂದು ಮುಂದು ಆಡಬೇಡ, ಎದುರಿಗೊಂದು, ಬೆನ್ನ ಹಿಂದೆ ಒಂದು ಆಡಬಾರದು, ಅದು ಸಮಯ ಸಾಧಕತನವಾಗುತ್ತದೆ, ಏಕೋಭಾವ ಗುಣವೇ ಸ್ಥಿತಪ್ರಜ್ಞತೆಗೆ ಮೂಲ.  ಏಕೋಭಾವದಿಂದ ಶಿವನಲ್ಲಿ ಮನಸ್ಸು ನೆಟ್ಟು ಭಕ್ತಿ ಸಾಧನೆ ಮಾಡಲು ಸಾಧ್ಯ.  ಜೀವನದಲ್ಲಿ ಮಾತ್ರವಲ್ಲ, ಭಕ್ತಿ ಸಾಧನೆಯಲ್ಲೂ ಏಕನಿಷ್ಠೆ ಮತ್ತು ಸ್ಥಿತಪ್ರಜ್ಞತೆ ಬೇಕಾಗುತ್ತದೆ ಎಂಬುದು ಅಪ್ಪಣ್ಣನ ಆಶಯವಾಗಿದೆ.

ಭಕ್ತರನ್ನು ಕುರಿತು ಅಪ್ಪಣ್ಣನ ವಿಡಂಬನೆ:

ಹಡಪದ ಅಪ್ಪಣ್ಣನ ಈ ವಚನವು ವೇಷಧಾರಿ ಭಕ್ತರನ್ನು ಅಥವಾ ವಿರಾಗಿಗಳನ್ನು ವಿಡಂಬಿಸುತ್ತದೆ.

“ಹಸಿವಿನಾಸೆಗೆ ಅಶನವ ಕೊಂಬರು,

ವಿಷಯದಾಸೆಗೆ ಹುಸಿಯ ನುಡಿವರು,

ಹಸನಾಗಿ ವ್ಯಸನವ ಹೊತ್ತು,

ಭಸಿತವಹೂಸಿ ವಿಶ್ವವ ತಿರುಗಿದವರು.

ಈ ಹುಸಿಯ ಬಿಟ್ಟು,

ಮಾಯೆಯ ಮಸಕವ ಮಾಣ್ದಲ್ಲಿದೆ

ನಮ್ಮ ಬಸವಪ್ರಿಯ ಕೂಡಲ ಚೆನ್ನಬಸವಣ್ಣನ ಕೂಡಾ

ಇವರು ಮೇಲೆ ವಿಭೂತಿ ಧರಿಸಿ ಭಕ್ತನ ವೇಷಹಾಕಿಕೊಂಡು ಎಲ್ಲಕಡೆ ತಿರುಗುತ್ತ ಜನರನ್ನು ಮೋಸ ಪಡಿಸುತ್ತಾರೆ. ಆದರೆ ಇವರು ನಿಜವಾದ ಭಕ್ತರಲ್ಲ ಅಥವಾ ವಿರಾಗಿಗಳಲ್ಲ. ಏಕೆಂದರೆ ಇವರು ಹಸಿವು ನೀಗಿಸಿ ಕೊಳ್ಳಲು ಬಗೆಬಗೆಯ ಆಹಾರವನ್ನು ಬಯಸುತ್ತಾರೆ. ಈ ವೇಷ, ಸುಳ್ಳು, ವಂಚನೆಗಳನ್ನು, ಸುಖ ಮೋಹಗಳನ್ನು ತೊರೆಯದೆ ಅಥವಾ ದೇಹ ಸುಖದ ಮಾಯೆಯ ಜಾಲದಿಂದ ಮುಕ್ತರಾಗದೆ ಹೇಗೆ ತಾನೆ ಭಕ್ತರಾಗಬಲ್ಲರು ಅಥವಾ ವಿರಾಗಿಗಳಾಗಬಲ್ಲರು ಎಂಬುದು ಅಪ್ಪಣ್ಣನ ಅಭಿಮತವಾಗಿದೆ.

ಅಪ್ಪಣ್ಣನದು ಸೇವಾ ಸಂಜನಿತ ವ್ಯಕ್ತಿತ್ವ:

ಹಡಪದ ಅಪ್ಪಣ್ಣ ಶಿವಶರಣರ ಸಮೂಹದಲ್ಲಿಯೇ ಹೆಚ್ಚಿನ ಪಾಂಡಿತ್ಯ, ಅನುಭಾವ ಹೊಂದಿದವರು. ಕಲ್ಯಾಣಕ್ಕೆ ಆಗಮಿಸಿದ ಪ್ರಭುದೇವರನ್ನು ಮೊಟ್ಟಮೊದಲು ಗುರುತಿಸಿದವರೇ ಅಪ್ಪಣ್ಣ. ರಾಮನಿಗೆ ಹನುಮಂತ ಹೇಗೋ ಹಾಗೆ ಬಸವಣ್ಣನಿಗೆ ಅಪ್ಪಣ್ಣ ಸೇವಾ ಸಂಜನಿತ. ಬಸವಣ್ಣ ಕಲ್ಯಾಣ ಕ್ರಾಂತಿಯ ನಂತರ ಕಪ್ಪಡಿ ಸಂಗಮಕ್ಕೆ ಬಂದಾಗ ಪತ್ನಿ ನೀಲಮ್ಮನವರು ಕಲ್ಯಾಣದಲ್ಲಿಯೇ ಉಳಿಯುತ್ತಾರೆ. ಅವರನ್ನು ಕರೆತರಲು ಬಸವಣ್ಣ ಅಪ್ಪಣ್ಣನಿಗೆ ಒಪ್ಪಿಸುತ್ತಾರೆ. ಅವರ ಅಣತಿಯಂತೆ ಕಲ್ಯಾಣಕ್ಕೆ ಹೋದ ಅಪ್ಪಣ್ಣನಕರೆಗೆ ‘ನೀಲಾಂಬಿಕೆ’ ಬರಲು ತಿರಸ್ಕರಿಸುತ್ತಾಳೆ. ಕಾರಣ ಕಲ್ಯಾಣದ ದಾರಣ ಸನ್ನಿವೇಶ, ಕಟುಕರ ಕೇರಿಯಂತಾಗಿತ್ತು, ಭಯಾನಕ ಭೀಷಣವಾಗಿದ್ದ ಕಲ್ಯಾಣದಿಂದ ಅವರನ್ನು ಒಪ್ಪಿಸಿ ಕಪ್ಪಡಿ ಸಂಗಮಕ್ಕೆ ಬರುವಾಗ ಕಪ್ಪಡಿ ಸಂಗಮ ಇನ್ನು ಎರಡು ಮೈಲು ಅಂತರ ಇದ್ದ ತಂಗಡಗಿ ಗ್ರಾಮಕ್ಕೆ ಬರುವಷ್ಟರಲ್ಲಿ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ತಿಳಿಯುತ್ತಲೇ ನೀಲಾಂಬಿಕೆ ತಂಗಡಿಗಿಯಲ್ಲಿಯೇ ನಿಧನರಾಗುತ್ತಾರೆ. ಹಡಪದ ಅಪ್ಪಣ್ಣ ಅಲ್ಲಿಯೇ ನಿಧನರಾದದ್ದು ಇವರಿಬ್ಬರ ಸಮಾಧಿಗಳಿಂದ ಕೂಡಿದ ದೇವಾಲಯಗಳು ಇಂದಿಗೂ ಅಲ್ಲಿ ಕಂಡುಬರುತ್ತಿವೆ. ಹೀಗೆ ಅವರು ಮಾಡಿದ ಚಿಂತನೆ, ಸೇವೆ, ವಚನಗಳ ಆಶಯ ಇವತ್ತಿನ ಜನಾಂಗ ಅರಿತು ಆಚರಿಸಬೇಕಾಗಿದೆ.

ಡಾ. ಗಂಗಾಧರಯ್ಯ ಹಿರೇಮಠ

ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ.

ಮೊ: 9880093613

ಇದನ್ನೂ ಓದಿ- ಭಾವನಾ ಬೋಲ್ಡ್ ಹೆಜ್ಜೆ-ಸಾಧ್ಯವಾದರೆ ಮೆಚ್ಚೋಣ, ಇಲ್ಲವಾದರೆ ಸುಮ್ಮನಿರೋಣ

More articles

Latest article