ಮುಷ್ತಾಕ್ ಹೆನ್ನಾಬೈಲ್ ಅವರ ” ಧರ್ಮಾಧರ್ಮ ” ಬಿಡುಗಡೆ

Most read

ವಿಜಯಪುರ : ಕನ್ನಡ ಸಾಹಿತ್ಯ ವಲಯದಲ್ಲಿ ಕುತೂಹಲ ಮೂಡಿಸಿರುವ ಲೇಖಕ ಮುಷ್ತಾಕ್ ಹೆನ್ನಾಬೈಲ್ ಪ್ರಕಟಿಸಿದ “ಧರ್ಮಾಧರ್ಮ” ಪುಸ್ತಕ ವಿಜಯಪುರದ ಹೋಟೆಲ್ ಮಧುವನ್ ಇಂಟರ್ನ್ಯಾಷನಲ್ ನಲ್ಲಿ ನಡೆದ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ಸೌಹಾರ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ, ಕಾರ್ಗಿಲ್ ಯುದ್ಧದ ಶೌರ್ಯಕ್ಕಾಗಿ ಗ್ಯಾಲಂಟರಿ ಪದಕ ಪಡೆದ ಭಾರತೀಯ ಸೇನೆಯ ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್ ” ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ಕುರಿತು ವ್ಯಾಪಕ ಅಪಪ್ರಚಾರಗಳಿವೆ. ಸ್ವತ: ಮುಸ್ಲಿಮರಿಗೇ ತಮ್ಮ ಧರ್ಮ ಮತ್ತು ಸಮುದಾಯದ ವಿರುದ್ಧ ಬರುವ ವಿಚಾರಗಳನ್ನು ಎದುರಿಸುವುದು ಹೇಗೆ ಎನ್ನುವುದು ಗೊತ್ತಿರುವುದಿಲ್ಲ. ಭಾರತದಲ್ಲಿರುವ ಹಿಂದೂ ಮುಸ್ಲಿಮರು ವಿಶ್ವದ ಅತ್ಯಂತ ದೊಡ್ಡ ಸಮುದಾಯಗಳು. ಇಷ್ಟು ದೊಡ್ಡ ಸಮುದಾಯಗಳ ನಡುವೆ ಸಂಶಯಗಳು ಉಳಿದಲ್ಲಿ, ಸಾಮರಸ್ಯ ಎಂದಿಗೂ ಸಾಧ್ಯವಾಗದು. ಇಂತಹ ಸಂಶಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಲೇಖಕ ಮುಷ್ತಾಕ್ ಹೆನ್ನಾಬೈಲ್ ಈ ಪುಸ್ತಕದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನ ನಿಜವಾದ ದೇಶಸೇವೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ಮೇಲೆ ಕೇಳಿ ಬಂದ ಸುಮಾರು 58 ಪ್ರಮುಖ ಪ್ರಶ್ನೆಗಳಿಗೆ ಹೆನ್ನಾಬೈಲ್ ಈ ಪುಸ್ತಕದಲ್ಲಿ ಅತ್ಯಂತ ಪ್ರಬಲವಾಗಿ ಹಾಗೂ ಸಮಂಜಸವಾಗಿ ಉತ್ತರಿಸಿ ಸಮುದಾಯಗಳ ನಡುವಿನ ಸಾಮರಸ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಸೌಹಾರ್ದ ಬಯಸುವ ಸಮಸ್ತರಿಗೆ ಈ ಪುಸ್ತಕ ಒಂದು ಆಸ್ತಿ ಎನ್ನುವುದು ಪುಸ್ತಕದ ಆರಂಭಿಕ ಓದು ಖಚಿತಪಡಿಸುತ್ತದೆ. ಈ ಪುಸ್ತಕ ಯಾರಿಗೆ ಆಗಲಿ ಇಷ್ಟವಾಗದೇ ಇರಲು ಕಾರಣವೇ ಇಲ್ಲ ” ಎಂದು ಹೇಳಿದರು.

ಸಮಾರಂಭದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆ ಗೌರವಾಧ್ಯಕ್ಷ ಡಾ. ಮುಹಮ್ಮದ್ ಶಫಿ ಮುಲ್ಲಾ, ಅಧ್ಯಕ್ಷ ಝಾಕೀರ್ ಹುಸೇನ್ ಉಚ್ಚಿಲ, ಕಾರ್ಯದರ್ಶಿ ಡಾ. ರಹಮತುಲ್ಲಾ ದಾವಣಗೆರೆ, ನಿವೃತ್ತ ಡಿವೈಎಸ್ಪಿ ಸೂಹೇಲ್ ಅಹಮದ್ ಮರೂರ್, ಸಮಾಜಸೇವಕ ಕೋಟ ಇಬ್ರಾಹಿಂ ಸಾಹೇಬ್, ನಿವೃತ್ತ ನ್ಯಾಯಮೂರ್ತಿ ನಬಿ ರಸೂಲ್ ಮುಹಮ್ಮದಾಪುರ, ಮುಝಫರ್ ಹುಸೇನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

More articles

Latest article