ಥಗ್‌ ಲೈಫ್‌ ಚಿತ್ರ ಬಿಡುಗಡೆ; ಸುಪ್ರೀಂಕೋರ್ಟ್‌ ಆದೇಶ ಪಾಲನೆ: ಸಚಿವ ಶಿವರಾಜ್ ತಂಗಡಗಿ

Most read

ಕೊಪ್ಪಳ: ಕಮಲ್ ಹಾಸನ್  ನಟಿಸಿರುವ ಥಗ್‌ ಲೈಫ್‌ ಚಿತ್ರ ಬಿಡುಗಡೆ ಕುರಿತು ಸುಪ್ರೀಂ ಕೋರ್ಟ್  ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ಗೌರವಿಸಲಿದೆ. ಸಿನಿಮಾ ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ಮತ್ತು  ಕನ್ನಡಿಗರು ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡೋಣ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಹೇಳಿದ್ದಾರೆ.

ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಚಿತ್ರನಟ ಕಮಲ್‌ ಹಾಸನ್‌ ಹೇಳಿಕೆ ನೀಡಿದ ನಂತರ ಅವರ ನಟನೆಯ ಥಗ್‌ ಲೈಫ್‌ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಅಡ್ಡಿ ಉಂಟಾಗಿತ್ತು.

ಕೊಪ್ಪಳದಲ್ಲಿ ಮಾತನಾಡಿದ ಸಚಿವರು, ಕನ್ನಡದ ಸ್ವಾಭಿಮಾನದ ವಿಚಾರ ಬಂದಾಗ ಕನ್ನಡದ ಚಿತ್ರಮಂದಿರದ ಮಾಲೀಕರು ಅವರ ಚಿತ್ರಗಳಿಗೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಕನ್ನಡ ಭಾಷೆ, ನೆಲ ಹಾಗೂ ಜಲದ ವಿಚಾರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರುತ್ತೇವೆ. ನಮ್ಮ ಚಿತ್ರಮಂದಿರದ ಮಾಲೀಕರು ಹಾಗೂ ಸಿನಿಮಾ ವಿತರಕರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆ ಮಾಡುತ್ತೇನೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜತೆಯೂ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಕೋರ್ಟ್ ಆದೇಶವನ್ನು ಗೌರವಿಸುತ್ತೇವೆ. ಸಿನಿಮಾ ವಿತರಕರು ಹಾಗೂ ಚಿತ್ರಮಂದಿರದ ಮಾಲೀಕರು ಕೂಡ ಕನ್ನಡಿಗರೇ. ಚಲನಚಿತ್ರದ ವಾಣಿಜ್ಯ ಮಂಡಳಿಯ ಜೊತೆ ಚರ್ಚೆ ಮಾಡಿದ ಬಳಿಕ ನಿರ್ಧಾರವನ್ನು ತಿಳಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

More articles

Latest article