ಟೆಲ್ ಅವಿವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಉಲ್ಬಣಗೊಂಡಿದೆ. ಇಂದು ಎರಡೂ ದೇಶಗಳು ಪರಸ್ಪರ ಹಲವು ಕ್ಷಿಪಣಿಗಳನ್ನು ಹಾರಿಸಿವೆ. ಪರಮಾಣು ಬಾಂಬ್ ತಯಾರಿಸುವ ಯತ್ನವನ್ನು ವಿಫಲಗೊಳಿಸುವ ಭಾಗವಾಗಿ ಇರಾನ್ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ನ ದಾಳಿಗೆ ಇರಾನ್ ಪ್ರತಿದಾಳಿ ನಡೆಸಿದ್ದು,. ಇದನ್ನು ಇಸ್ರೇಲ್ ನ ಕ್ಷಿಪಣಿ ನಿರೋಧಕ ಸಾಧನಗಳು ನಿಷ್ಕ್ರಿಯೆಗೊಳಿಸುವ ಯತ್ನ ನಡೆಸಿದವು ಎಂದು ತಿಳಿದು ಬಂದಿದೆ.
ಟೆಲ್ ಅವಿವ್ ಮತ್ತು ಜೆರುಸಲೆಮ್ ನಲ್ಲಿ ಸೈರನ್ ಗಳು ಮೊಳಗಿದವು. ಸಾರ್ವಜನಿಕರನ್ನು ತಕ್ಷಣವೇ ಸುರಕ್ಷತಾ ಸ್ಥಳಕ್ಕೆ ಕರೆದೊಯ್ಯಲಾಯಿತು. ಇರಾನ್ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿ ಇಬ್ಬರು ಇಸ್ರೇಲ್ ನಲ್ಲಿ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇರಾನ್ ನ ಕ್ಷಿಪಣಿಗಳು ಇಸ್ರೇಲ್ ನ ಹಲವು ವಸತಿ ಪ್ರದೇಶಗಳಿಗೆ ಅಪ್ಪಳಿಸಿವೆ ಎಂದು ಆ ದೇಶದ ಆಂಬುಲೆನ್ಸ್ ಚಾಲಕನೊಬ್ಬ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಟ್ಜ್, ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಇರಾನ್ ಅಪಾಯದ ಗೆರೆಯನ್ನು ದಾಟಿದೆ. ಇದಕ್ಕಾಗಿ ಆ ದೇಶ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಯೆಮೆನ್ ನಲ್ಲಿರುವ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕ ಸಂಘಟನೆ ಸಿಡಿಸಿದ ಕ್ಷಿಪಣಿಯು ಪಶ್ಚಿಮ ತೀರದಲ್ಲಿರುವ ಇಸ್ರೇಲ್ ಆಕ್ರಮಿತ ಪ್ಯಾಲೆಸ್ಟೀನ್ ನಲ್ಲಿ ಮೂವರು ಮಕ್ಕಳ ಸಹಿತ ಐವರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ರೆಡ್ ಕ್ರೆಸೆಂಟ್ ತಿಳಿಸಿದೆ.
ಇರಾನ್ ರಾಜಧಾನಿ ಟೆಹರಾನ್ ನಲ್ಲಿ ಶುಕ್ರವಾರ ರಾತ್ರಿ ಹಲವೆಡೆ ಸ್ಫೋಟದ ಸದ್ದು ಕೇಳಿ ಬಂದಿದೆ. ಎರಡು ಕ್ಷಿಪಣಿಗಳು ಮೆಹ್ರಾಬಾದ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿವೆ ಎಂದು ಸ್ಥಳೀಯ ಫಾರ್ಸ್ ನ್ಯೂಸ್ ವರದಿ ಮಾಡಿದೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಹಿರಿಯ ಸೇನಾಧಿಕಾರಿಗಳನ್ನೂ ಒಳಗೊಂಡು 78 ಜನರು ಮೃತಪಟ್ಟಿದ್ದು, 320 ಮಂದಿ ಗಾಯಗೊಂಡಿದ್ದಾರೆ. ಇರಾನ್ ದಾಳಿಯನ್ನು ಹಿಮ್ಮೆಟ್ಟಿಸಲು ಇಸ್ರೇಲ್ ಪಡೆಗೆ ನೆರವಾಗಲು ಅಮೆರಿಕದ ರಕ್ಷಣಾ ಸಾಧನಗಳು ಶುಕ್ರವಾರ ಯುದ್ಧಭೂಮಿ ತಲುಪಿವೆ. ಇರಾನ್ ಸುಮಾರು 100 ಕ್ಷಿಪಣಿಗಳನ್ನು ಸಿಡಿಸಿದ್ದು, ಅವುಗಳಲ್ಲಿ ಬಹುತೇಕವನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಸೇನಾಧಿಕಾರಿಗಳು ತಿಳಿಸಿದ್ದಾರೆ.