ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬಿ.ಜೆ ಮೆಡಿಕಲ್ ಕಾಲೇಜಿನ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಬಿ.ಜೆ. ವೈದ್ಯಕೀಯ ಕಾಲೇಜಿನ ಕಿರಿಯ ವೈದ್ಯರ ಸಂಘ (ಜೆಡಿಎ) ತಿಳಿಸಿದೆ.
2023ನೇ ಬ್ಯಾಚ್ ನ ಜಯಪ್ರಕಾಶ್ ಚೌಧರಿ, ರಾಕೇಶ್ ದಿಹೋರಾ ಹಾಗೂ 2024ನೇ ಬ್ಯಾಚ್‌ನ ಆರ್ಯನ್ ರಜಪೂತ್, ಮಾನವ್ ಬಾದು ಎಂಬುವವರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿಇತರೆ 20 ಎಂಬಿಬಿಎಸ್ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರಲ್ಲಿ 11 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜೆಡಿಎ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನ ದುರಂತದಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ರೀತಿಯ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ವೈದ್ಯರ ಸಂಘ ಮನವಿ ಮಾಡಿದೆ.‘ಅತುಲ್ಯಂ’ ಕಟ್ಟಡದಲ್ಲಿ ವಾಸಿಸುತ್ತಿದ್ದ ಸೂಪರ್ ಸ್ಪೆಷಾಲಿಟಿ ವೈದ್ಯರ ಕುಟುಂಬದ ನಾಲ್ವರು ಸದಸ್ಯರೂ ಸಾವಿಗೀಡಾಗಿದ್ದಾರೆ ಎಂದು ವೈದ್ಯರ ಸಂಘ ತಿಳಿಸಿದೆ.
ಗುರುವಾರ ಮಧ್ಯಾಹ್ನ ಅಹಮದಾಬಾದ್ ನ ಸರ್ದಾರ್ ವಲ್ಲಭ ಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ವೈದ್ಯಕೀಯ ಕಲೇಜಿನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು. ಈ ದುರಂತದಲ್ಲಿ ಪ್ರಯಾಣಿಕರು, ಪೈಲಟ್, ಸಿಬ್ಬಂದಿ ಸೇರಿದಂತೆ 175 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.