ಹೊಸಕೋಟೆ: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಕೋಟೆ ಸಮೀಪ ಇಂದು ಮುಂಜಾನೆ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಟ್ಟಿಪುರ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಕೇಶವಲುರೆಡ್ಡಿ (44),ತುಳಸಿ ಅಲಿಯಾಸ್ ತನು (21), ಹನ್ನೊಂದು ತಿಂಗಳ ಮಗು ಯತಿಕ್ ಮತ್ತು ತಿರುಪತಿಯ ಪ್ರಗತಿ (4) ಅಸುನೀಗಿದ್ದಾರೆ.
ಆಂಧ್ರಪ್ರದೇಶ ಸಾರಿಗೆ ಸಂಸ್ಥೆ ಬಸ್ ತಿರುಪತಿಯಿಂದ ರಾತ್ರಿ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಇಂದು ಮುಂಜಾನೆ 2 ಗಂಟೆ ವೇಳೆಗೆ ಗೊಟ್ಟಿಪುರ ಗೇಟ್ ಬಳಿ ಮುಂದೆ ತೆರಳುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕ ಬಸ್ ವೇಗವನ್ನು ಹೆಚ್ಚಿಸಿದ್ದಾನೆ. ಆಗ ಲಾರಿಗೆ ಹಿಂದಿನಿಂದ ಬಸ್ ಡಿಕ್ಕಿ ಹೊಡೆದಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಬಸ್ನಲ್ಲಿದ್ದ ಪ್ರಯಾಣಿಕರಲ್ಲಿ 16 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ನಾಗರಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆ ಪೊಲೀಸರು ಗಾಯಾಳುಗಳನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬಸ್ನೊಳಗೆ ಸಿಕ್ಕಿಕೊಂಡು ಮೃತಪಟ್ಟ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ ನ ಮುಂಭಾಗ ಹಾಗೂ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ರೀತಿ ನೋಡಿದರೆ ಚಾಲಕ ನಿದ್ರೆಯ ಮಂಪರಿನಲ್ಲಿ ಓವರ್ ಟೇಕ್ ಮಾಡಲು ಮುಂದಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೊಸಕೋಟೆ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.