ಮಂಗಳೂರು: ಮಂಗಳೂರಿನ ಬಂಟ್ವಾಳದಲ್ಲಿ ಇಬ್ಬರು ಯುವಕರ ಮೇಲೆ ನಡೆದ ಭೀಕರ ಹಲ್ಲೆಯಿಂದಾಗಿ ಒಬ್ಬನು ಮೃತನಾಗಿದ್ದು ಇನ್ನೊಬ್ಬ ಯುವಕ ತೀವ್ರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಕೋಮು ದ್ವೇಷದ ರಾಜಕಾರಣಕ್ಕೆ ಯುವಕರು ಬಲಿಯಾಗುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನವಾಗಿದೆ. APCR – ಕರ್ನಾಟಕವು ಈ ದ್ವೇಷದ ಕೊಲೆಯನ್ನು ಖಂಡಿಸುತ್ತದೆ. ಈ ಹೇಯ ಕೃತ್ಯ ನಡೆಸಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತೇವೆ.
ಇಲ್ಲಿ ಹೀಗೆ ಕೋಮು ದ್ವೇಷ ಪ್ರೇರಿತ ಕೊಲೆ ಹಲ್ಲೆಗಳು ಪುನರಾವರ್ತನೆಯಾಗುತ್ತಿರುವುದಕ್ಕೆ ಪ್ರಮುಖ ಕಾರಣ ಯುವಕರಲ್ಲಿ ಕೋಮು ದ್ವೇಷವನ್ನು ಪ್ರೇರೇಪಿಸುತ್ತಿರುವ ದ್ವೇಷ ಭಾಷಣಕಾರರು. ತಮ್ಮ ದ್ವೇಷಭಾಷಣಗಳಿಂದ ಯುವಕರನ್ನು ತಪ್ಪುದಾರಿಗೆ ತಳ್ಳುತ್ತಿರುವ ದ್ವೇಷಭಾಷಣಕಾರರನ್ನು ಪೊಲೀಸರು ಗುರುತಿಸಿ ತಕ್ಷಣ ಬಂಧಿಸಬೇಕು. ಇಂತಹ ಕೃತ್ಯ ಪುನಾರವರ್ತಿಸದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದ್ದರೂ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಖೇದಕರ. ಈ ಹಿಂದೆ ನಡೆದ ಮಾಬ್ ಲಿಂಚಿಂಗ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸದೇ ಇರುವುದು ಸಹ ಈ ಕ್ರಿಮಿನಲ್ ಕೆಲಸಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಗೃಹ ಸಚಿವರು ಮತ್ತು ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಅಮಾಯಕ ಯುವಕರ ಕುಟುಂಬಕ್ಕೆ ನ್ಯಾಯ ಸಿಗುವಂತೆ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ತಪಿತ್ತಸ್ಥರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಬೇಕು.
ಈ ಹಿಂದೆ ಕುಡುಪುವಿನಲ್ಲಿ ಮಾಡಿದಂತೆ ಬೇಜವಾಬ್ದಾರಿಯಾಗಿ ವರ್ತಿಸಿದ ಜಿಲ್ಲಾ ಪೋಲಿಸ್ ಕಮಿಷನರ್ ಅವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಸಂಪೂರ್ಣವಾಗಿ ವಿಫಲರಾಗಿರುವುದ ಈ ಹತ್ಯೆ ನಡೆಯಲು ಕಾರಣವಾಗಿದೆ. ಆದ್ದರಿಂದ ಪೋಲಿಸ್ ಆಯುಕ್ತನ್ನು ತಕ್ಷಣ ಬದಲಿಸಿ ಬೇರೆಯವರನ್ನು ನೇಮಿಸಬೇಕು. ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಲು ವಿಶೇಷ ತಂಡ ಹಾಗೂ ತನಿಖಾದಿಕಾರಿಯನ್ನು ನೇಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ( ಎಪಿಸಿಆರ್),ಕರ್ನಾಟಕ ರಾಜ್ಯ ಘಟಕ ಆಗ್ರಹಿಸುತ್ತದೆ.