ಹರೇ ಕೃಷ್ಣ ದೇವಸ್ಥಾನ ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದ್ದು; ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

Most read

ಬೆಂಗಳೂರು: ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನ (ಇಸ್ಕಾನ್‌ ) ಮತ್ತು ಶೈಕ್ಷಣಿಕ ಸಂಕೀರ್ಣದ ಒಡೆತನ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್ ದೇಗುಲದ ಒಡೆತನ ಬೆಂಗಳೂರು ಇಸ್ಕಾನ್ ಸೊಸೈಟಿಗೆ ಸೇರಿದ್ದು ಎಂದು ಶುಕ್ರವಾರ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸೊಸೈಟಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ಬೆಂಗಳೂರು ಇಸ್ಕಾನ್ ಸೊಸೈಟಿ ಪರವಾಗಿ ತೀರ್ಪು ನೀಡಿದೆ. ಈ ಮೂಲಕ ಬೆಂಗಳೂರು ಇಸ್ಕಾನ್ ಮೇಲಿನ ಹಕ್ಕುಗಳು ಕೊನೆಗೊಂಡಂತಾಗಿದೆ.

ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್, 2009 ರ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು. ಅದು ದೇವಾಲಯದ ನಿಯಂತ್ರಣವನ್ನು ಇಸ್ಕಾನ್ ಬೆಂಗಳೂರಿಗೆ ನೀಡಿತ್ತು. ಅಲ್ಲದೇ ಮುಂಬೈ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ನೀಡಿತ್ತು. 2011 ರ ಮೇ 23 ರಂದು ಕರ್ನಾಟಕ ಹೈಕೋರ್ಟ್ ‘ಇಸ್ಕಾನ್ ಮುಂಬೈ’ ಪರವಾಗಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಬೆಂಗಳೂರು ಇಸ್ಕಾನ್ ಸೊಸೈಟಿ 2011 ರ ಜೂನ್ 2 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ, ಬೆಂಗಳೂರಿನ ಸ್ಥಳೀಯ ನ್ಯಾಯಾಲಯದ 2009 ರ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಲಾಗಿತ್ತು. ಬೆಂಗಳೂರು ಇಸ್ಕಾನ್ ಸೊಸೈಟಿ ಪ್ರತಿನಿಧಿ ಕೋದಂಡರಾಮ ದಾಸ ಅವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

ಕರ್ನಾಟಕದಲ್ಲಿ ನೋಂದಾಯಿತ ಬೆಂಗಳೂರು ಇಸ್ಕಾನ್ ಸೊಸೈಟಿ, ದಶಕಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಬೆಂಗಳೂರು ದೇವಾಲಯವನ್ನು ನಿರ್ವಹಿಸುತ್ತಿದೆ ಎಂದು ವಾದಿಸಿತ್ತು. ಮತ್ತೊಂದು ಕಡೆ ಇಸ್ಕಾನ್ ಬೆಂಗಳೂರು ತನ್ನ ಶಾಖೆಯಾಗಿದ್ದು ಅದರ ಆಸ್ತಿಯು ನ್ಯಾಯಸಮ್ಮತವಾಗಿ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಇಸ್ಕಾನ್ ಮುಂಬೈ ಪ್ರತಿಪಾದಿಸಿತ್ತು.

More articles

Latest article