ಮಂಗಳೂರು: ಕರಾವಳಿಯ ಅಭಿವೃದ್ದಿ ಮತ್ತು ಅದಕ್ಕೆ ಮಾರಕವಾಗಿರುವ ಕೋಮುವಾದವನ್ನು ಸಮರ್ಥವಾಗಿ ಹತ್ತಿಕ್ಕಬೇಕು ಎಂದು ನಾಡಿನ ಕರಾವಳಿಯ ಪ್ರಜ್ಞಾವಂತರು ಇಂದು ಮಂಗಳೂರಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಆಗ್ರಹಪಡಿಸಿದ್ದಾರೆ.
ಕೋಮುವಾದ ಹೆಚ್ಚುತ್ತಿರುವ ಕಾರಣಕ್ಕೆ ನಿರುದ್ಯೋಗ, ಉದ್ಯಮಗಳ ಕುಸಿತವಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ಇಲ್ಲಿನ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಶ್ರೀಮಂತರು ಮತ್ತು ಮಠಮಾನ್ಯಗಳ ಅಡಿಯಾಳಾಗಿದ್ದು, ಸರ್ಕಾರಿ ವ್ಯವಸ್ಥೆಯೊಳಗೆ ಶಿಕ್ಷಣ, ಆರೋಗ್ಯವನ್ನು ತರಲು ಹಿಂಜರಿಯುತ್ತಿರುವುದು ಧೀರ್ಘಕಾಲೀನವಾಗಿ ಕರಾವಳಿಗೆ ಬಹುದೊಡ್ಡ ಏಟು ನೀಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕರಾವಳಿಯ ಖಾಸಗಿ ಶಿಕ್ಷಣ, ಆರೋಗ್ಯ ಮಾಫಿಯಾವನ್ನು ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆ ಇದೆ. ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಅಸಮಾನತೆಯೂ ಕೋಮುವಾದಕ್ಕೆ ಕಾರಣಗಳಲ್ಲೊಂದು ಆಗಿರುವುದರಿಂದ ಕರಾವಳಿಯ ಈ ಸಮಸ್ಯೆಗೆ ಸರ್ಕಾರ ‘ನೀತಿ ರೂಪಣೆ’ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಾನಸಿಕ ಅಸ್ವಸ್ಥನಾಗಿದ್ದ ಕೇರಳದ ಅಶ್ರಫ್ ಎಂಬಾತನನ್ನು ಮುಸ್ಲೀಮನೆಂಬ ಕಾರಣಕ್ಕಾಗಿ ಯುವಕರ ಗುಂಪೊಂದು ಕೊಲೆ ಮಾಡುತ್ತದೆ. ಈ ಅಮಾನವೀಯ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಕ್ರೂರತೆಯನ್ನು ಪ್ರದರ್ಶಿಸುತ್ತಾರೆ. ಘಟನೆ ನಡೆದು 36 ಗಂಟೆ ಕಳೆದರೂ ಪೊಲೀಸ್ ಕಮೀಷನರ್ ಯಾವುದೇ ಕ್ರಮ ಜರುಗಿಸದೆ ಮೌನಕ್ಕೆ ಶರಣಾಗುತ್ತಾರೆ. ಓರ್ವ ಪೊಲೀಸ್ ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ಅಮಾನತ್ತು ಮಾಡಿ ಸರಕಾರ ತನ್ನ ಕರ್ತವ್ಯ ಮುಗಿಸಿದೆ. ಹಾಗಾಗಿ ಕಮಿಷನರ್ ದರ್ಜೆಯ ಅಧಿಕಾರಿಗಳನ್ನು ಮಾಬ್ ಲಿಂಚಿಂಗ್ ಗೆ ಹೊಣೆಗಾರರನ್ನಾಗಿ ಮಾಡಬೇಕು ಎಂದೂ ಆಗ್ರಹಪಡಿಸಿದ್ದಾರೆ.
ಸುಪ್ರಿಂ ಕೋರ್ಟ್ ತೀರ್ಪಿನ ಪ್ರಕಾರ ಒಂದು ತಿಂಗಳೊಳಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 357A ಗೆ ಅನುಗುಣವಾಗಿ ಗುಂಪು ಹತ್ಯೆಯ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು. ದ್ವೇಷ ಭಾಷಣ ತಡೆಯಬೇಕು. ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ಪ್ರತ್ಯೇಕವಾಗಿ ನೋಡೆಲ್ ಅಧಿಕಾರಿಯಾಗಿ ನೇಮಿಸಬೇಕು. ದ್ವೇಷ ಭಾಷಣವನ್ನು ತಡೆಯಲು ಪ್ರತ್ಯೇಕ ‘ವಿಶೇಷ ಕಾರ್ಯಪಡೆ’ಯನ್ನು ರಚಿಸಬೇಕು. ಗುಂಪು ಹತ್ಯೆ ಪ್ರಕರಣದ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸಬೇಕು ಮತ್ತು ಆರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು. ಆರೋಪಿಗಳನ್ನು ನಿರ್ಧಿಷ್ಟ ಅವಧಿಯಲ್ಲಿ ಬಂಧಿಸಿ ಆರೋಪ ಪಟ್ಟಿ ಸಲ್ಲಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಸಾಧ್ಯವಾದರೆ, ಸಶಕ್ತವಾದ ‘ಮಾಬ್ ಲಿಂಚಿಂಗ್ ತಡೆ ಕಾಯ್ದೆ’ಯನ್ನು ರೂಪಿಸಬೇಕು ಎಂದಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ಪ್ರತ್ಯೇಕ ‘ಕೋಮು ಹಿಂಸೆ ತಡೆ ಕಾರ್ಯಪಡೆ’ಯ ಬದಲು ಈಗಿರುವ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಬೇಕು. ಎಲ್ಲಾ ಧರ್ಮಕ್ಕೆ ಸೇರಿದ ಎಲ್ಲಾ ಸಕ್ರಿಯ ರೌಡಿಶೀಟರ್ ಗಳನ್ನು ಕರಾವಳಿಯಿಂದ ಗಡಿಪಾರು ಮಾಡಬೇಕು. 2023 ರಿಂದ 2024 ರ ಮಧ್ಯೆ 114 ಕೋಮು ಹಿಂಸೆ ಪ್ರಕರಣಗಳು ಕರಾವಳಿಯಲ್ಲಿ ನಡೆದಿದೆ. ಹಾಗಾಗಿ ರಾಜ್ಯ ಸರ್ಕಾರವು ಕರಾವಳಿಯ ಕೋಮು ಹಿಂಸೆಯನ್ನು ಒಂದು ಜಿಲ್ಲೆಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ಇದು ಇಡೀ ದೇಶದ ಸಂವಿಧಾನದ ಮೇಲೆ ನಡೆಯುತ್ತಿರುವ ದಾಳಿ ಎಂದು ಖಡಾಖಂಡಿತವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರೊ. ನರೇಂದ್ರ ನಾಯಕ್, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಡಾ. ಎನ್. ಇಸ್ಮಾಯಿಲ್, ವಾಸುದೇವ ಉಚ್ಚಿಲ, ಮುನೀರ್ ಕಾಟಿಪಳ್ಳ, ನವೀನ್ ಸೂರಿಂಜೆ, ಗುಲಾಬಿ ಬಿಳಿಮಲೆ, ಉದ್ಯಾವರ ನಾಗೇಶ ಕುಮಾರ್, ಶ್ರೀನಿವಾಸ ಕಾರ್ಕಳ ಮೊದಲಾದ ಪ್ರಜ್ಞಾವಂತರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.