ದಲಿತ, ಒಬಿಸಿ ಮತ್ತು ಬುಡಕಟ್ಟು ಜನರ ಭಯದಿಂದ ಪ್ರಧಾನಿ ಮೋದಿ ಜಾತಿ ಗಣತಿಗೆ ಒಪ್ಪಿದ್ದಾರೆ: ರಾಹುಲ್ ಗಾಂಧಿ

Most read

ಪಟನಾ: ದೇಶಾದ್ಯಂತ ಜಾತಿ ಗಣತಿ ನಡೆಯಬೇಕು ಎಂದು ಪ್ರತಿಪಕ್ಷಗಳು ಅವಕಾಶ ವಂಚಿತ ಸಮುದಾಯಗಳ ಪರವಾಗಿ ಧ್ವನಿ ಎತ್ತಿದ್ದರಿಂದಲೇ ಪ್ರಧಾನಿ ನರೇಂದ್ರ ಮೋದಿ ಭಯದಿಂದ ಜನಗಣತಿಯೊಂದಿಗೆ ಜಾತಿಗಣತಿ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬಿಹಾರದ ದರ್ಭಾಂಗಾ ಜಿಲ್ಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಾತನಾಡಿದರು.

ನನ್ನ ಕಾರನ್ನು ಮಿಥಿಲಾ ವಿಶ್ವವಿದ್ಯಾಲಯದ ಗೇಟ್‌ನಲ್ಲಿ ಪೊಲೀಸರು ತಡೆಯಲು ಪ್ರಯತ್ನಿಸಿದ್ದರು. ಆದರೆ, ನಾನು ಸುಮ್ಮನಾಗಲಿಲ್ಲ. ಕಾರಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲಿ ತೆರಳಿ ‘ಶಿಕ್ಷಾ ನ್ಯಾಯ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ’ ಎಂದು ರಾಹುಲ್ ಸಭೆಗೆ ತಿಳಿಸಿದರು.
ಬಿಹಾರ ಸರ್ಕಾರಕ್ಕೆ ನನ್ನನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂದರೆ ವಿದ್ಯಾರ್ಥಿಗಳು ಹೊಂದಿರುವ ಅಪಾರ ಶಕ್ತಿಯಿಂದಾಗಿ ನಾನು ಮುನ್ನಡೆಯುತ್ತಿದ್ದೇನೆ. ಆದೇ ರೀತಿ ಪ್ರಧಾನಿ ಮೋದಿ ಅವರು ತಲೆಬಾಗಬೇಕಾದ ಶಕ್ತಿಯೂ ನೀವೇ ಆಗಿದ್ದೀರಿ. ನೀವು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳಬೇಕು ಮತ್ತು ದೇಶದಾದ್ಯಂತ ಜಾತಿ ಜನಗಣತಿ ನಡೆಸಬೇಕು ಎಂದು ನಾವು ಮೋದಿ ಅವರಿಗೆ ಹೇಳಿದ್ದೆವು. ಅವರು ಹಾಗೆಯೇ ಮಾಡಿದ್ದಾರೆ. ಒಂದು ವೇಳೆ ಹಾಗೆ ಮಾಡದಿದ್ದರೆ ಯುವ ಜನತೆಯ ಆಕ್ರೋಶ ಎದುರಿಸಬೇಕಾದೀತು ಎಂಬ ಭಯದಿಂದಲೇ ಅವರು ನ್ಮಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇವಲ ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಸಮುದಾಯದ ಹಿತಾಸಕ್ತಿಗಳನ್ನು ಪೂರೈಸುತ್ತದೆ ಎನ್ನುವ ಸತ್ಯ ಎಲ್ಲರಿಗೂ ಅರ್ಥವಾಗಿದೆ. ಬಿಜೆಪಿ ಸರ್ಕಾರ ದಲಿತ, ಒಬಿಸಿ ಮತ್ತು ಬುಡಕಟ್ಟು ಜನಾಂಗ ಅಥವಾ ಮಧ್ಯಮ ವರ್ಗದವರಿಗೆ ಅನುಕೂಲ ಮಾಡುತ್ತದೆ ಎಂಬುದು ಅಪ್ಪಟ ಸುಳ್ಳು ಎಂದು ರಾಹುಲ್ ಕ್ರೋಶ ಹೊರಹಾಕಿದ್ದಾರೆ.

ಎನ್‌ಡಿಎ ಸರ್ಕಾರದಿಂದ ಇದಕ್ಕಿಂತ ಹೆಚ್ಚಿಗೆ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ, ನಾವು ಬಿಹಾರ ಅಥವಾ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಿಶ್ಚಿತವಾಗಿ ನಿಮ್ಮ ಹಿತಾಸಕ್ತಿಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮಿಥಿಲಾ ವಿಶ್ವವಿದ್ಯಾಲಯದ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಹುಲ್‌ ಮಾತನಾಡುತ್ತಿದ್ದರು. ಆದರೆ, ಅಲ್ಲಿ ಕಾರ್ಯಕ್ರಮವನ್ನು ನಡೆಸಲು ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿತ್ತು. ಆದರೆ, ಕಾರ್ಯಕ್ರಮವನ್ನು ಪರ್ಯಾಯ ಸ್ಥಳದಲ್ಲಿ ನಡೆಸಲು ಕಾಂಗ್ರೆಸ್‌ ನಿರಾಕರಿಸಿತ್ತು. ಇದರಿಂದಾಗಿ ಕೆಲಕಾಲ ಪೊಲೀಸರು ಮತ್ತು ಕಾಂಗ್ರೆಸ್‌ ನಾಯಕರ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ತಿಳಿದು ಬಂದಿದೆ.

More articles

Latest article