ನಂದಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ; ಭರದಿಂದ ಸಾಗಿರುವ ರೋಪ್‌ ವೇ ಯೋಜನೆ

Most read

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಕ್ಕೆ ರೋಪ್ ವೇ ಯೋಜನೆ ಭರದಿಂದ ಸಾಗಿದ್ದು, ಕೆಲವೇ ತಿಂಗಳಲ್ಲಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ. ನಂದಿ ಬೆಟ್ಟದ ಮೇಲಿನ ಎರಡು ಎಕರೆ ಭೂಮಿಯನ್ನು ರೋಪ್‌ ವೇನ ಯುಟಿಪಿ (ಅಪ್ಪರ್ ಟರ್ಮಿನಲ್ ಪಾಯಿಂಟ್‌) ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂರಿಸಲು ತೋಟಗಾರಿಕಾ ಇಲಾಖೆ ಸಿದ್ದವಾಗಿದೆ. ಯುಟಿಪಿ ನಿರ್ಮಾಣ ಆರಂಭವಾದರೆ ಖಾಸಗಿ ವಾಹನಗಳ ಪಾರ್ಕಿಂಗ್‌ ಗೆ ಸ್ಥಳಾವಕಾಶ ಇಲ್ಲವಾಗುತ್ತದೆ.

ಒಮ್ಮೆ ಎರಡು ಎಕರೆ ಭೂಮಿ ಹಸ್ತಾಂತರವಾದರೆ ಪಾರ್ಕಿಂಗ್‌ ಸ್ಥಳಾವಕಾಶ ಮೂರನೇ ಒಂದು ಭಾಗಕ್ಕೆ ಕುಸಿಯುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಬೆಟ್ಟದ ಬುಡದಿಂದ ಕರೆತರಲು ಮತ್ತು ಬಿಡಲು ಬಸ್‌ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ.

ಇತ್ತೀಚೆಗೆ ಉನ್ನತ ಶಿಕ್ಷಣ ಸಚಿವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್‌ ನಂದಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾನು ಬೆಳಗ್ಗೆ 5.15 ಕ್ಕೆ ಭೇಟಿ ನೀಡಿದಾಗ ಸುಮಾರು 1,100 ದ್ವಿಚಕ್ರ ಮತ್ತು 500 ಕಾರುಗಳಿದ್ದವು. ಕೆಲವು ಪ್ರವಾಸಿಗರು ತಡರಾತ್ರಿ 2.30 ಕ್ಕೆ ಆಗಮಿಸಲು ಆರಂಭಿಸುತ್ತಾರೆ. ಚಳಿಗಾಲದಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ವಾಹನಗಳ ಪಾರ್ಕಿಂಗ್‌ ಗೆ ನಂದಿ ಬೆಟ್ಟದಿಂದ ನಾಲ್ಕು ಕಿಮೀ ದೂರದಲ್ಲಿ 20 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಈ ಭೂಮಿ ದೇವನಹಳ್ಳಿ ಮುಖ್ಯ ರಸ್ತೆಯಲ್ಲೇ ಇದೆ. ಅಲ್ಲಿ ವಾಹನಗಳನ್ನು ನಿಲ್ಲಿಸಿ ಬಸ್‌ ಗಳಲ್ಲಿ ಬೆಟ್ಟದ ಮೇಲಕ್ಕೆ ಬರಬಹುದು ಎಂದು ಸಚಿವರು ಹೇಳಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಶೀಘ್ರದಲ್ಲೇ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರವಾಸೋದ್ಯಮ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ನಂದಿ ಗಿರಿಧಾಮಕ್ಕೆ ರೂಪಿಸುತ್ತಿರುವ ರೋಪ್ ವೇ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದ ಅವರು ಎಲ್‌ಟಿಪಿ (ಲೋಯರ್ ಟರ್ಮಿನಲ್ ಪಾಯಿಂಟ್), ಯುಟಿಪಿ (ಅಪ್ಪರ್ ಟರ್ಮಿನಲ್ ಪಾಯಿಂಟ್‌) ಗಳ ಪ್ರಗತಿ ಕುರಿತು ಮಾಹಿತಿ ಪಡೆದರು.

ನಂದಿ ಬೆಟ್ಟಕ್ಕೆ ವಾಹನಗಳ ನಿಷೇಧ ಹೇರುತ್ತಿರುವುದು ಇದೇ ಮೊದಲೇನಲ್ಲ. ಹಲವು ವರ್ಷಗಳಿಂದ ವಿಶೇಷವಾಗಿ ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುತ್ತಾ ಬರಲಾಗಿದೆ. ಬೆಟ್ಟಕ್ಕೆ ಕೇಬಲ್‌ ಕಾರ್‌ ವ್ಯವಸ್ಥೆ ಕುರಿತೂ ಚಿಂತನೆ ನಡೆದಿತ್ತು. ಬೆಂಗಳೂರಿಗೆ ಕೇವಲ 60 ಕಿಮೀ ದೂರದಲ್ಲಿರುವ ಈ ಪ್ರವಾಸಿ ತಾಣಕ್ಕೆ ಸಹಜವಾಗಿಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ.

More articles

Latest article