ಯುದ್ಧೋತ್ತರ….

Most read

ನಮ್ಮ ಜೊತೆಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಆತಂಕವಾದವನ್ನು ಸಮರ್ಥವಾಗಿ ಎದುರಿಸಿದರೆ ಮಾತ್ರ ಸಾಕಾಗುವುದಿಲ್ಲ. ಅದರ ವಿರಾಟ್ ಸ್ವರೂಪವನ್ನು ಜಗತ್ತಿನ ಮುಂದೆ ಹೆಚ್ಚು ಹೆಚ್ಚು ನಿಖರವಾಗಿ, ಕುರುಡರಿಗೂ ಸ್ಪಷ್ಟವಾಗಿ ಕಾಣುವಂತೆ, ಗಟ್ಟಿಯಾದ ಧ್ವನಿಯಲ್ಲಿ ಕೂಗಿ ಕೂಗಿ ಹೇಳಲೂ ಬೇಕಾಗುತ್ತದೆ. ಬಹುಶಃ ಇದರಲ್ಲಿ ನಾವು ಹಿಂದೆ ಬಿದ್ದಂತಿದೆ. ಮತ್ತು ವ್ಯವಹಾರವೂ ಸೇರಿದಂತೆ ಹಲವು ಮುಲಾಜುಗಳಿಗೆ ಒಳಗಾದಂತೆಯೂ ಅನಿಸುತ್ತಿದೆ – ವಿಜಯೇಂದ್ರ ಪಾಟೀಲ, ಬೆಟಗೇರಿ.

ಇದು ಯುದ್ಧ ಹೌದು-ಅಲ್ಲ ಎಂಬವರ ಮಾತನ್ನು ಬದಿಗಿರಿಸೋಣ.

ಆದರೆ ಬಹಳ ಜನರಿಗೆ ಇದು ಯುದ್ಧವೇ ಅನಿಸಿದ್ದು ಸುಳ್ಳಲ್ಲ. ಇದನ್ನು ಬೆಂಬಲಿಸುವಂತೆ ನಮ್ಮ ಪ್ರಧಾನಿಗಳು ಕೂಡ ‘ಭಯೋತ್ಪಾದನೆಯ ಕೃತ್ಯಗಳನ್ನು ಇನ್ನು ಮುಂದೆ ನಮ್ಮ ಮೇಲೆ ಹೇರಿದ ಯುದ್ಧವೆಂದೇ ಪರಿಗಣಿಸಲಾಗುವುದು’ ಎಂದೇ ಹೇಳಿದ್ದಾರೆ.

ಶಾಂತಚಿತ್ತದಿಂದ ಯೋಚಿಸುವ ಯಾರಿಗೂ ಯುದ್ಧವೆಂಬುದು ಸಕಲ ಪ್ರಾಣಿ-ಪಕ್ಷಿಗಳ, ಮನುಕುಲದ, ನಿಸರ್ಗದ, ವರ್ತಮಾನ- ಭವಿಷ್ಯಗಳ ಅತ್ಯಂತ ಕೆಟ್ಟ ವೈರಿ ಎಂಬುದರ ಅರಿವಾಗಿಯೇ ಆಗುತ್ತದೆ. ಹೀಗಾಗಿ, ಇನ್ನೇನು ತೀವ್ರಗತಿ ಪಡೆಯುತ್ತದೆ ಎಂದು ಆತಂಕಕ್ಕೊಳಗಾಗಿದ್ದ ಎಲ್ಲರಿಗು ಇದು ಇದ್ದಕ್ಕಿದ್ದ ಹಾಗೆ ನಿಂತು ಹೋದದ್ದರ ಬಗ್ಗೆ ದೊಡ್ಡ ಸಮಾಧಾನ ತಂದಿರುವುದು ಸಹಜವೇ ಆಗಿದೆ.ಗಡಿಯಲ್ಲಿ ಕೈಯ್ಯಲ್ಲಿ ಜೀವ ಹಿಡಿದು ಬದುಕು ಮಾಡುತ್ತಿದ್ದ ನಿಷ್ಪಾಪಿ ಜನರಿಗೆ, ಅವರಿಗಾಗಿ ಜೀವದ ಹಂಗು ತೊರೆದು ಹೋರಾಡುತ್ತಿದ್ದ ಸೈನಿಕರಿಗೆ ಯುದ್ಧದ ನಿಲುಗಡೆಯೊಂದು ದೊಡ್ಡ ರಿಲೀಫ್ ಎಂದೇ ಹೇಳಬೇಕು. ಅಪಾರ ಸಂಪತ್ತಿನ ನಾಶ ಕೂಡ ತಪ್ಪಿತು ಎಂಬ ನಿಶ್ಚಿಂತೆ ಜೊತೆಗಿರಬೇಕು. ಅಲ್ಲವೇ?

ನಿಜ.ಈ ಸಮಾಧಾನಗಳೇನೊ ಇದ್ದಂತಿವೆ. ಆದರೆ ಯಾವುದೊ ನೋವಿದೆ. ಸಂಭ್ರಮವೆನಿಸುತ್ತಿಲ್ಲ. ಏನೊ ಕಳೆದುಕೊಂಡ, ಎಂಥದೊ ಅವಮಾನ ಆದಂಥ, ಸೋತು ಹೋದಂಥ ಅಸ್ಪಷ್ಟ, ಅಮೂರ್ತದ ಒಂದು ವಿಷಾದ ಭಾವ. ಯಾಕೆ ಹೀಗಾಗುತ್ತಿದೆ? ಯುದ್ಧ ನಿಂತಾಗ ಅಥವಾ ನಡೆಯದೆ ಹೋದಾಗ ಹೀಗಾಗಬಾರದಲ್ಲವೇ?

ಇದೀಗ ಅರವಿಂದ ಚೊಕ್ಕಾಡಿಯವರ ಒಂದು ಲೇಖನ ಓದುತ್ತಿದ್ದಾಗ ಈ ವಿಷಾದ ಭಾವಕ್ಕೆ ಪರಿಹಾರ ಕಾಣದಿದ್ದರೂ ಕಾರಣಗಳಂತೂ ಕಂಡಂತಾಗುತ್ತಿದೆ.

ಪ್ರಸ್ತುತದಲ್ಲಿ ಅತ್ಯಂತ ಹೆಚ್ಚಿನ ತರುಣ ಪ್ರತಿಭೆಗಳಿರುವ ದೊಡ್ಡ ದೇಶ ನಮ್ಮದು. ಭಾಷೆ, ಪ್ರಾದೇಶಿಕತೆಗಳ ವೈಶಿಷ್ಟ್ಯ; ನೈಸರ್ಗಿಕ ವೈವಿಧ್ಯ, ಆಹಾರ-ಸಂಸ್ಕೃತಿ, ಸಾಹಿತ್ಯ, ಕೃಷಿ, ಉದ್ದಿಮೆ, ಸಂಪತ್ತು, ಸೈನ್ಯ ಎಲ್ಲದರಲ್ಲೂ ನಾವು ಯಾರಿಗೂ ಕಡಿಮೆಯವರೇನಲ್ಲ. ನಮ್ಮ ಬಳಿ ಅಣ್ವಸ್ತ್ರ ಕೂಡ ಇದೆ. ಎಲ್ಲದರಲ್ಲೂ ನಾವು ಜಗತ್ತಿನಲ್ಲಿ ಮೂರನೆಯ ಅಥವಾ ನಾಲ್ಕನೆಯ ಸ್ಥಾನದಲ್ಲಿ ಇದ್ದೇವೆ. ಅಮೇರಿಕವೂ ಸೇರಿ ಭವಿಷ್ಯದ ದೇಶವೆಂದು ನಮ್ಮನ್ನು ಹೊಗಳುವವರು ಎಲ್ಲೆಡೆ ಇದ್ದಾರೆ. ನಮ್ಮ ಪ್ರಧಾನಿಗಳು ಹೋದಲ್ಲಿ-ಬಂದಲ್ಲಿ ಅದ್ಭುತ ಸ್ವಾಗತ ಅವರಿಗಾಗಿ ಕಾದಿರುತ್ತದೆ. ನಮ್ಮ ಬಗ್ಗೆಯೇ ನಮ್ಮನ್ನು ವಿಪರೀತವಾಗಿ ನಂಬಿಸಲಾಗುತ್ತಿದೆ. ನಮ್ಮ ಹೆಮ್ಮೆ ಆಕಾಶ ತಲುಪುವಂತೆ ಮಾಡಲಾಗುತ್ತದೆ.

ಆದರೆ ವಾಸ್ತವ ಹಾಗಿಲ್ಲ ಎಂಬುದನ್ನು ಈ ಯುದ್ಧದ ನಿಲುಗಡೆಯಾದ ರೀತಿ ನಮಗೆ ಸೂಕ್ಷ್ಮವಾಗಿಯಾದರೂ ಸರಿ, ಸಾರಿ ಸಾರಿ ಹೇಳುತ್ತಿದೆ. ಅನ್ಯಾಯದಿಂದ ಯುದ್ಧ ನಮ್ಮ ಮೇಲೆ ಹೇರಲ್ಪಟ್ಟಿತು. ಅನಿವಾರ್ಯವಾಗಿ ನಾವು ಅದರಲ್ಲಿ ತೊಡಗಿಕೊಳ್ಳಬೇಕಾಯಿತು. ಆದರೆ ಈ ವಿದ್ಯಮಾನವನ್ನು ಜಗತ್ತು ಉದ್ದೇಶ ಪೂರ್ವಕವಾಗಿ ಸರಿಯಾಗಿ ಗ್ರಹಿಸಲಿಲ್ಲ. ಸ್ವಲ್ಪ ಮಟ್ಟಿಗೆ ರಷ್ಯಾ,ಇಸ್ರೇಲ್ ಸಹಾನುಭೂತಿ ತೋರಿಸಿದ್ದು ಬಿಟ್ಟರೆ ಬೇರೆ ಸಮಯದಲ್ಲಿ ನಮ್ಮೊಂದಿಗೆ ಚನ್ನಾಗಿಯೆ ಇರುವ ದೇಶಗಳು ನಮ್ಮ ಪರವಾಗಿ ಒಂದು ಮಾತು ಕೂಡ ಆಡಲಿಲ್ಲ. ವಿರುದ್ಧವಾಗಿ ನಿಂತ ದೇಶಗಳ ಸಂಖ್ಯೆ ಈ ಬಾರಿ ಸ್ಪಷ್ಟವಾಗಿ ಹೆಚ್ಚಿನದಿತ್ತು. ನಮ್ಮ ಪ್ರಧಾನಿಯವರ ಅತ್ಯಂತ ಆಪ್ತ ಗೆಳೆಯ ಮತ್ತು ಅದನ್ನು ಪ್ರತಿನಿಧಿಸುವ ಅಮೇರಿಕ ಈ ಸಾರಿ ಭಾರತದ ಮಾನವನ್ನೇ ಕಳೆದವೆಂದು ಅನಿಸುತ್ತಿದೆ. ಒಪ್ಪಂದದಲ್ಲಿ ಪಾಲುಗಾರನಾದ, ಹೆಚ್ಚಿನ ಶೋಷಣೆಗೆ ಒಳಗಾದ ನಮ್ಮನ್ನು ವಿಶೇಷ ಘನತೆಯಿಂದ ನೋಡಬೇಕಾಗಿತ್ತು ಮತ್ತು ನಡೆಸಿಕೊಳ್ಳಬೇಕಾಗಿತ್ತು. ಕಳ್ಳ ಮತ್ತು ಕಳ್ಳತನಕ್ಕೆ ಒಳಗಾದವರಿಬ್ಬರನ್ನೂ ಒಂದೇ ರೀತಿಯಲ್ಲಿ ನಡೆಸಿಕೊಳ್ಳಬಾರದು. ಆದರೆ ಆದದ್ದು ಮಾತ್ರ ಹಾಗೇ!

ಈ ಒಪ್ಪಂದ ಏರ್ಪಟ್ಟಿದ್ದನ್ನು ಘೋಷಿಸಲು ನಾವು ಅಮೇರಿಕಕ್ಕೆ ಬಿಡಬಾರದಿತ್ತು. ಪಾಕಿಸ್ತಾನದ ಮೇಲೆ ಕೆಲವು ಕರಾರುಗಳನ್ನಾದರೂ ಹೇರಬೇಕಿತ್ತು. ಅದು ಕೆಟ್ಟ ಉದ್ದೇಶಕ್ಕಾಗಿ ಬೇಡುವ ಸಾಲವನ್ನು ತಡೆಯಬೇಕಿತ್ತು. ಭವಿಷ್ಯದಲ್ಲಿ ನಡೆಯುವ ಭಯೋತ್ಪಾದನೆಗೆ ಜವಾಬ್ದಾರರನ್ನಾಗಿ ಮಾಡಬೇಕಾಗಿತ್ತು…

ಆದರೆ ಇವು ಯಾವುವೂ ಆಗಲಿಲ್ಲ.

ನಾವು ಹೀಗಿರಲಿಲ್ಲ.

ಬಡ ರಾಷ್ಟ್ರ ಎಂಬ ಹೆಸರಿದ್ದಾಗಲೂ ನಮ್ಮ ಅಂದಿನ ನಾಯಕರಿಗೆ ಜಾಗತಿಕ ಮಟ್ಟದಲ್ಲಿ ಮರ್ಯಾದೆ ಇತ್ತು. ಒತ್ತಡಗಳ ನಡುವೆಯೂ ಇಂದಿರಾ ಗಾಂಧಿ ಪಾಕಿಸ್ತಾನ ಹೋಳು ಮಾಡಿದರು. 93,000 ಪಾಕಿಸ್ತಾನಿ ಸೈನಿಕರು ಅಕ್ಷರಶಃ ಮಂಡಿಯೂರಿದರು. ವಾಜಪೇಯಿ ಅಮೇರಿಕದ ಬೆದರಿಕೆಯ ಹೊರತಾಗಿಯೂ ಪೋಖ್ರಾನ್ ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದರು.ಜಗತ್ತಿನ ಮನ್ನಣೆ ಗಳಿಸುವಂತೆ ಮಾಡಿದರು.

ದೇಶಕ್ಕೆ ಒಂದು ನೈತಿಕ ಶಕ್ತಿ ಇರುತ್ತದೆ. ಅದು ಆತ್ಮ ಶಕ್ತಿಯನ್ನು, ಸ್ಥೈರ್ಯವನ್ನು ಉದ್ದೀಪನಗೊಳಿಸುತ್ತದೆ. ಅದೇಕೊ ಇತ್ತೀಚೆಗೆ ನಮ್ಮ  ದೇಶದ ಆಂತರಿಕ ನೈತಿಕತೆ ದುರ್ಬಲವಾಗುವಂತೆ ಭಾಸವಾಗುತ್ತಿದೆ. ಅತಿಯಾದ ಧಾರ್ಮಿಕ ಆಚರಣೆ ಮತ್ತು ಅಸಹನೆಗಳು; ಜಾತಿವಾದ; ಪಂಥವಾದ; ಭ್ರಷ್ಟಾಚಾರದ ಬಗ್ಗೆ ಯಾರೂ ಮಾತನಾಡದಿರುವುದು; ವಿಪರೀತ ಪ್ರಚಾರ, ಮಾತು ಮತ್ತು ಆಡಂಬರ.. ಇವೆಲ್ಲ ದೇಶದ ಆತ್ಮಸ್ಥೈರ್ಯವನ್ನು ಹಾಳು ಮಾಡುತ್ತವೆ. ಮತ್ತು ಈ ದೌರ್ಬಲ್ಯವನ್ನು ಹೊರಗಿನ ಜಗತ್ತು ಬಲುಬೇಗ ಗುರುತಿಸಿ ತನ್ನ ಆಧೀನಕ್ಕೆ ಒಳಪಡಿಸಿಕೊಳ್ಳಲು ನೋಡುತ್ತದೆ…

ಇನ್ನು ಮುಂದಾದರೂ ನಾವು ಆಂತರಿಕವಾಗಿ ಮಾತ್ರವಲ್ಲ, ಕಾಣುವಂತೆಯೂ ಪ್ರಬಲರು ಎಂಬುದನ್ನು ಜಗತ್ತಿನ ಎದುರು ಬಿಂಬಿಸಬೇಕಾಗಿದೆ. ಅದಕ್ಕೂ ಮೊದಲು ನಾವು ಹಾಗಾಗಬೇಕಾಗಿದೆ…

ವಿಜಯೇಂದ್ರ ಪಾಟೀಲ, ಬೆಟಗೇರಿ

More articles

Latest article