ಬೆಂಗಳೂರು: ಕನ್ನಡ ನೆಲೆ-ಸಂಸ್ಕೃತಿ, ಕಲೆ- ಸಾಹಿತ್ಯಕ್ಕಿರುವ ಮೌಲ್ಯವನ್ನರಿಯದ ತುಚ್ಛ ಮನಸ್ಕ ಸೋನು ನಿಗಮ್ ಬಂಧಿತನಾಗಬೇಕು. ಅವರಿಗೆ ಕನ್ನಡದಲ್ಲಿ ಇನ್ನೆಂದೂ ಹಾಡದಿರುವಂತೆ ಗಡಿಪಾರು ಮಾಡಿ, ಕನ್ನಡದ ಮಹತ್ವವನ್ನು ಅರಿವಾಗುವಂತೆ ಮಾಡಿ, ಮನ ಪರಿವರ್ತನೆಗೊಳ್ಳುವವರೆಗೆ ಅವರನ್ನು ಜೈಲುವಾಸದಲ್ಲಿರಿಸಬೇಕು ಎನ್ನುವ ಧಿಕ್ಕಾರವನ್ನು ನಗರದ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಸೋನು ನಿಗಮ್ ವಿರುದ್ದ ತೀವ್ರತರ ಧಿಕ್ಕಾರದ ಘೋಷಣೆಗಳನ್ನು ಕೂಗಲಾಯಿತು. ಅವರ ಖಂಡನೀಯ ವರ್ತನೆಯನ್ನು ವಿರೋಧಿಸಿ, ಕನ್ನಡದ ಹಿರಿಮೆಯನ್ನು, ಜಾನಪದ ಸೊಗಸನ್ನು, ಗೀತೆಗಳನ್ನು ಹಾಡುವ ಮೂಲಕ ಕನ್ನಡತನವನ್ನು ಎಚ್ಚರಿಸಿಲಾಯಿತು. “ಅದು ಖಾಸಗಿ ಕಾರ್ಯಕ್ರಮವಾಗಿತ್ತು. ಅದರಲ್ಲೂ ವಿದ್ಯಾರ್ಥಿಗಳಿಂದ ಬಂದ ಕೋರಿಕೆಯಾಗಿತ್ತು. ಇದನ್ನು ಭಯೋತ್ಪಾದಕತೆಗೆ ಹೋಲಿಸಿ ಮಾತನಾಡುವ ಪರಿವೆ ಏನಿದೆ? ಬೇರಾವುದೇ ಭಾಷೆಗೆ ಅದರದೇ ರಾಜ್ಯಗಳಲ್ಲಿ ಇರುವ ಮಾನ್ಯತೆ ಕನ್ನಡಕ್ಕೆ ಯಾಕಿಲ್ಲ? ಎನ್ನುತ್ತಾ ಆಕ್ರೋಶವನ್ನು ವ್ಯಕ್ತಪಡಿಸಿದರು ನಿರೂಪಕಿ ದಿವ್ಯ ಆಲೂರು. ಸತ್ಪ್ರಜೆಗಳಾಗಿ, ಸತ್ತ ಪ್ರಜೆಗಳಾಗಬೇಡಿ” ಎಂದು ಕನ್ನಡಕ್ಕಿರುವ ಕಿಚ್ಚನ್ನು ತಮ್ಮ ಹಾಡಿನ ಮೂಲಕ ಪ್ರತಿಭಟಿಸಿದರು.
ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ಮಾತನಾಡಿ, “ಈಗಾಗಲೇ ಅವಲಹಳ್ಳಿಯಲ್ಲಿ ಮೊಕದ್ದಮೆ ದಾಖಲಾಗಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಶ್ಮೀರದ ಭಯೋತ್ಪಾದಕರಿಗೆ ಬೆಂಗಳೂರಿನ ಕಾರ್ಯಕ್ರಮದಲ್ಲಿದ್ದ ಕನ್ನಡಿಗರನ್ನು ಹೋಲಿಸಿ ಅವಮಾನಿಸಿರುವುದು ಕನ್ನಡಿಗರಿಗೆ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು. ಇವನಂತಹ ಅರೆಹುಚ್ಚನನ್ನು ಎಲ್ಲಿದ್ದರೂ ಈ ಕೂಡಲೇ ಬಂಧಿಸಬೇಕು.” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕರ್ನಾಟಕಕ್ಕೆ, ಕನ್ನಡಕ್ಕೆ ಗೌರವ ಕೊಡದವರನ್ನು ಧಿಕ್ಕರಿಸಬೇಕು. ಇಲ್ಲಿನ ಅವಕಾಶಗಳನ್ನು ಬಳಸಿಕೊಂಡು ಜನಪ್ರಿಯರಾಗಿಯೂ ಈ ದುರ್ನಡತೆ ತೋರಿರುವುದು ದ್ರೋಹವೇ ಸರಿ. 900 ಹಾಡು ಹಾಡಿರಲಿ, ಕನ್ನಡ ಹಾಡು, ಹಿಂದಿ ಹಾಡು ಯಾವುದೇ ಭಾಷೆಯಿರಲಿ ಅದನ್ನು ಗೌರವಿಸಬೇಕು. ಕನ್ನಡೇತರ ಗಾಯಕರು ಇದನ್ನರಿಯಬೇಕಾಗಿದೆ. ಕನ್ನಡಾಭಿಮಾನ ಹೊಟ್ಟೆಗೆ ಅನ್ನ, ಜನವಿಶ್ವಾಸ ಕೊಟ್ಟಿರುವಾಗ ಅದನ್ನು ದೋಷಣೆ ಮಾಡಿರುವುದು ತಪ್ಪು. ಈ ಮೂಲಕ ಸರ್ಕಾರಕ್ಕೆ ಮನವಿ ಏನಿದೆ ಅದನ್ನು ಸ್ವೀಕಾರ ಮಾಡಿ ಆತ ಶಿಕ್ಷಾರ್ಹನಾಗುವಂತೆ ಮಾಡಬೇಕು. ಫಿಲಂ ಚೇಂಬರ್ ನಿರ್ಮಾಪಕರ ನಿರ್ಧಾರಕ್ಕೆ ನಾನು ಬದ್ದ.” ಎಂದಾಗಿ ಹಿರಿಯ ಚಿತ್ರ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್ ಅವರು ಮಾತನಾಡಿದರು.
ವಾದ್ಯ ಕಲಾವಿದರಾದ ಮೋಹನ್ ಕೃಷ್ಣ ಅವರು ಮಾತನಾಡಿ, ಈ ಜಾಗದಲ್ಲಿ ರೆಕಾರ್ಡಿಂಗ್ ಕಂಪನಿಯವರು, ಸಂಗೀತ ನಿರ್ದೇಶಕರು, ಸ್ಥಳೀಯ ಗಾಯಕರು ಇಲ್ಲದಿರುವುದಕ್ಕೆ ನಾಚಿಕೆಯಾಗಬೇಕು. ಇವರು ಕನ್ನಡವನ್ನು ಆರಾಧಿಸಿದ ಎಸ್.ಪಿ.ಬಿ, ಡಾ. ರಾಜ್ ಕುಮಾರ್ ರಂಥ ಆದರ್ಶರಿರುವ ಕನ್ನಡದ ಗರಿಮೆಯನ್ನು ಹೆಚ್ಚಿಸಿದ ಪರಿಯನ್ನು ಸ್ಮರಿಸಿಕೊಳ್ಳಬೇಕು. ಸರ್ಕಾರ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸಂಗೀತ ನಿರ್ದೇಶಕರು, ನಿರ್ಮಾಪಕರು ಶ್ರಮಿಸಬೇಕೆಂದು ಕೇಳಿಕೊಳ್ಳುತ್ತೇವೆ. ಕರ್ನಾಟಕ ಸರ್ಕಾರವೂ ಇನ್ಯಾವುದೇ ಕಾರ್ಯಕ್ರಮಗಳಿಗೆ ಬೇರೆ ಭಾಷಿಕ ಹಾಡುಗಾರರಿಗೆ ಕೋಟಿ ಕೋಟಿ ಬೆಲೆ ನೀಡುವುದರ ಬದಲಾಗಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ಪ್ರೋತ್ಸಾಹಿಸಬೇಕು ಎಂದು ಮೋಹನ್ ಕೃಷ್ಣ ಅವರು ನುಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನೊಳಗೊಂಡಂತೆ ನಿರ್ಮಾಪಕ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಜನಪದ ಕಲಾವಿದರು ಕಡಬಗೆರೆ ಮುನಿರಾಜು, ಬೆಂಗಳೂರು ನಗರ ಮಹಿಳಾ ಘಟಕ ಅಧ್ಯಕ್ಷರು, ಕರವೇ ಶ್ವೇತ ಮೋಹನ್ ಗೌಡ, ಧರ್ಮರಾಜ್ ಬೆಂಗಳೂರು ನಗರ ಘಟಕ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.