ಡಿಸೆಂಬರ್, ಜನವರಿಯಲ್ಲಿ ಬೆಂಗಳೂರು ಹಬ್ಬ ಮತ್ತು ಐಫಾ ಪ್ರಶಸ್ತಿ ಪ್ರದಾನ ಸಮಾರಂಭ; ಡಿಕೆ ಶಿವಕುಮಾರ್‌

Most read

ಬೆಂಗಳೂರು: ಈ ವರ್ಷಾಂತ್ಯದ ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರು ಹಬ್ಬ ಮತ್ತು ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಆಶ್ರಯದಲ್ಲಿ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಸಂಬಂಧ IIFA ಪ್ರತಿನಿಧಿಗಳ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ಸಭೆ ನಡೆಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರು ಹಬ್ಬ ಹಾಗೂ ಐಫಾ ಪ್ರಶಸ್ತಿ ವಿತರಣೆ ಸಮಾರಂಭ ನಡೆಸುವ ಸಂಬಂಧ ಚರ್ಚೆ ನಡೆಸಲಾಗಿದೆ. ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬೆಂಗಳೂರಿನಲ್ಲಿ ಒಂದು ವಾರದ ಮಟ್ಟಿಗೆ ಹಬ್ಬದ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಆದ್ಯತೆಯಾಗಿದೆ. ಸಮಾರಂಭಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರತಿನಿಧಿಗಳಿಗೆ ಬೆಂಗಳೂರಿನ ಮಹತ್ವ ಕುಳಿತು ಅರಿವು ಮೂಡಿಸುವ ಉದ್ದೇಶವಿದೆ ಎಂದರು.

ಐಫಾ ಪ್ರಶಸ್ತಿ ಪ್ರಧಾನ ಸಮಾರಂಭ ಈ ಹಿಂದೆ ರಾಜಸ್ಥಾನದಲ್ಲಿ ನಡೆದಿತ್ತು. ತೆಲಂಗಾಣದಲ್ಲಿ ಸೌಂದರ್ಯ ಸ್ಪರ್ಧೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಗಿಂತ ನಮ್ಮ ಸ್ಯಾಂಡಲ್ ವುಡ್ ಎತ್ತರಕ್ಕೆ ಹೋಗಿದೆ. ಇದಕ್ಕೆ ಉತ್ತೇಜನ ಕೊಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅಕ್ಟೋಬರ್ ನಲ್ಲಿ ದಸರಾ ನಡೆಯಲಿದೆ. ಆದ್ದರಿಂದ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಸಬಹುದು ಎಂದು ತಿಳಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇದು ಉತ್ತಮ ವೇದಿಕೆಯಾಗಲಿದೆ. ಮುಂಬೈ ಬಿಟ್ಟರೆ ಬೆಂಗಳೂರು ಈ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತ ಎಂದು ಆಯೋಜಕರೇ ತಿಳಿಸಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

More articles

Latest article