ಕರಾವಳಿ: ಕೋಮು ಹಿಂಸೆ ನಿಯಂತ್ರಣದಲ್ಲಿ ಕಾಂಗ್ರೆಸ್ ಮತ್ತೆ ಸೋತಿತೇ?

Most read

ಯಾವ ಜಿಲ್ಲೆಯಲ್ಲೂ ಇಲ್ಲದ ಹೊಂದಾಣಿಕೆ ಮತೀಯವಾದಿ  ನಾಯಕರ ನಡುವೆ ಮತ್ತು ಕಾಂಗ್ರೆಸ್, ಬಿಜೆಪಿ , ಎಸ್ ಡಿ ಪಿ ಐ ಪಕ್ಷದ  ನಡುವೆ ಇದೆ. ಅದೇ ರೀತಿ ಯಾವ ಜಿಲ್ಲೆಯಲ್ಲೂ ಕಾಣದ ಮತೀಯ ದ್ವೇಷ ಈ ಜಿಲ್ಲೆಯ ಯುವಕರಲ್ಲೂ ಇದೆ. ಅವರೇ ಕೊಲ್ಲುವುದು, ಅವರೇ ಸಾಯುವುದು. ನಾಯಕರು ಮಾತ್ರ ಸದಾ ವಿಜೃಂಭಿಸುವುದು – ಸಂಜೀವ ಪೂಜಾರಿ, ಮೂಡುಬಿದಿರೆ.

ಒಂದೆರಡು ವರ್ಷಗಳಲ್ಲಿ ತಕ್ಕಮಟ್ಟಿಗೆ  ಶಾಂತಿ ನೆಲೆಸಿದ್ದ ಕರಾವಳಿಯಲ್ಲಿ ಕೋಮು ಹಿಂಸೆ ಮತ್ತೆ ಬುಗಿಲೆದ್ದಿದೆ. ಸರಣಿ ಹತ್ಯೆ ನಡೆದಿದೆ. ವಾರದ ಹಿಂದೆ ಅಶ್ರಫ್‌ ಎಂಬ ಅಮಾಯಕ ಯುವಕ ಗುಂಪು ಥಳಿತಕ್ಕೆ ಬಲಿಯಾದ ಘಟನೆಯ ನೆನಪು ಇನ್ನೂ ಹಸಿರಾಗಿರುವಂತೆಯೇ ನಿನ್ನೆ ಬಜ್ಪೆ ಬಳಿ ರೌಡಿ ಶೀಟರ್‌ ಸುಹಾಸ್‌ ಶೆಟ್ಟಿಯನ್ನು ಬರ್ಬರವಾಗಿ ಕೊಂದು ಹಾಕಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಫಾಜಿಲ್‌ ಹತ್ಯೆ ನಡೆದಿದ್ದರೆ, ಫಾಜಿಲ್‌ ಹತ್ಯೆಯ ಪ್ರಮುಖ ಆರೋಪಿ ಸುಹಾಸ್‌ ಶೆಟ್ಟಿಯನ್ನು ಫಾಜಿಲ್‌ ಹತ್ಯೆಗೆ ಪ್ರತೀಕಾರವಾಗಿ ಕೊಲ್ಲಲಾಗಿದೆ ಎಂಬ ವದಂತಿಗಳೂ ಹರಡುತ್ತಿವೆ. ಇದು ಅಶ್ರಫ್‌ ಹತ್ಯೆಗೆ ಪ್ರತೀಕಾರವಾಗಿರಬಹುದೇ ಎಂದೂ ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉಡುಪಿ ಬಳಿಯಲ್ಲಿ ಇಬ್ಬರು ಯುವಕರು ಸುಹಾಸ್‌ ಹತ್ಯೆಗೆ ಪ್ರತೀಕಾರವಾಗಿ ಒಬ್ಬರನ್ನು ಕೊಲ್ಲಲು ಯತ್ನಿಸಿದರು ಎಂದೂ ಮಾಧ್ಯಮವೊಂದು ವರದಿ ಮಾಡಿದೆ. ಮಂಗಳೂರಿನ ಕುಂಟಿಕಾನದಲ್ಲಿ ಮೀನು ವ್ಯಾಪಾರಿಯೊಬ್ಬನ ಮೇಲೆ ಕಲ್ಲು ಹೊತ್ತು ಹಾಕಿ ಕೊಲ್ಲಲು ಯತ್ನಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿರುವುದಾಗಿ ವರದಿಯಾಗಿದೆ. ಇವನ್ನೆಲ್ಲ ನೋಡುವಾಗ ಕೊಲೆಗಳ ಸರಣಿ ಇನ್ನೂ ಮುಂದುವರಿಯಬಹುದೇ ಎಂಬ ಭಯ ಜನರನ್ನು ಕಾಡಲಾರಂಭಿಸಿದೆ. ಯಾಕೆ ಹೀಗಾಗುತ್ತಿದೆ?

ಕಾಂಗ್ರೆಸ್  ಆಡಳಿಕ್ಕೆ ಬಂದರೆ ಕೋಮು ನಿಗ್ರಹ ಪಡೆ ಮಾಡಲಾಗುವುದು ಎಂದು ಡಿ ಕೆ ಶಿವಕುಮಾರ್  ಘೋಷಣೆ  ಮಾಡಿದ್ದರು. ಅದು ಪೊಳ್ಳು  ಘೋಷಣೆಗಳ ಪಟ್ಟಿಗೆ ಸೇರಿದೆ.

ಜಿಲ್ಲಾ ಉಸ್ತುವಾರಿ  ಸಚಿವರಂತೂ ಜಿಲ್ಲಾ  ಪ್ರವಾಸ ಸಚಿವರಾಗಿ, ಆಗಾಗ ಬಂದು ಹೋಗುತ್ತಾರೆ.

ಇಲ್ಲಿನ ಕಾಂಗ್ರೆಸ್  ನಾಯಕತ್ವದ  ವೈಫಲ್ಯವೂ  ಕೋಮು ಹಿಂಸೆ ಬೆಳೆಯಲು ಕಾರಣವಾಗಿದೆ.

ಅಶೋಕ ರೈ , ಮಿಥುನ್ ರೈ ಇನಾಯತ್ ಅಲಿ ಅವರಿಗೆ ಬೇಕಾದ ಎಲ್ಲಾ ಕೆಲಸ ಡಿ ಕೆ ಶಿ ಕಡೆಯಿಂದ ಆಗುತ್ತದೆ. ಐವಾನ ರಿಗೆ ಸಿದ್ಧರಾಮಯ್ಯ, ಮಂಜುನಾಥ್  ಭಂಡಾರಿಗೆ  ಖರ್ಗೆ, ಹರೀಶ್ ಕುಮಾರ್‌ ಗೆ ವೇಣು ಗೋಪಾಲ  ಹೀಗೆ ಅವರವರ ಕೆಲಸ ಆಗುತ್ತಿರುತ್ತದೆ. ಸೀನಿಯರ್ ಕಾರ್ಪೋರೇಟರ್ ಗಳಿಗೆ  ವಿನಯರಾಜ್, ಪ್ರವೀಣ್  ಆಳ್ವಾ, ಭಾಸ್ಕರ  ಮೊಯಿಲಿ ಮತ್ತಿತರರಿಗೆ  ಜಿಲ್ಲಾ ಉಸ್ತುವಾರಿಗಳು ಕೆಲಸ ಮಾಡಿ ಕೊಡುತ್ತಾರೆ. ಡಾ ಇಫ್ತಿಕಾರ್ ಅನ್ನುವ ವ್ಯಕ್ತಿ  ಕಾಂಗ್ರೆಸ್ ನಲ್ಲಿ ಎಲ್ಲೂ ಕಾಣಿಸದೆ ಜಿಲ್ಲೆಯ ಅಧಿಕಾರ ನಿಯಂತ್ರಣ  ಮಾಡುತ್ತಾರೆ. ಅದಕ್ಕೆ  ಯಾವತ್ತೂ  ಖದರ್ ತೋರಿಸುವ ಜನರ ಕೃಪೆಯಿದೆ.

ಇವರಲ್ಲಿ ಬಹುತೇಕ ನಾಯಕರಿಗೆ  ಬಿಜೆಪಿ ನಾಯಕ ನಳಿನ್‌ ಕುಮಾರ್, ವೇದವ್ಯಾಸ  ಕಾಮತ್, ಭರತ್ ಶೆಟ್ಟಿ, ಡಾ ಕಲ್ಲಡ್ಕ , ಪುರಾಣಿಕ, ಶರಣ್ ಪಂಪ್ವೆಲ್ ಜೊತೆ ಒಳ್ಳೆಯ ಸ್ನೇಹವಿದೆ.

ಅವರು ಇವರ ಕೆಲಸ, ಇವರು ಅವರ ಕೆಲಸ ಮಾಡುತ್ತಾರೆ.  ಹಿಂದೂ  ಸಂಘಟನೆಯ  ಕಾರ್ಯಕರ್ತರು  ಸಾಯುವುದು ಮಾತ್ರ. ಬಿಜೆಪಿ ನಾಯಕರು ಆರಾಮವಾಗಿ ಕಾಂಗ್ರೆಸ್ ನಾಯಕರಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇನ್ನು ಪದ್ಮರಾಜ್‌ ಪೂಜಾರಿ ಯಾವುದೇ ಸ್ವಂತ ಸಾಮರ್ಥ್ಯ ಇಲ್ಲದೆ ಕೇವಲ ಬಿಲ್ಲವ ಅನ್ನುವ ಕಾರಣಕ್ಕೆ  ಉಳಿದಿದ್ದಾರೆ.

ಇದರಿಂದಾಗಿ ಇಲ್ಲಿ ಸಂಘಟಿತ ಕಾಂಗ್ರೆಸ್ ಇಲ್ಲ. ಸೈದ್ಧಾಂತಿಕತೆ ಅಂದರೆ ಏನು ಎಂದು ಕೇಳುವ ಕೈ ನಾಯಕರದೇ ದರ್ಬಾರ್ ಇರುವಾಗ ಕೋಮುವಾದ ನಿಯಂತ್ರಣ ಹೇಗೆ ಸಾಧ್ಯ?. ಒಳಗೊಳಗೆ ಮುಸ್ಲಿಂ ಮತ್ತು ಎಸ್ ಡಿ ಪಿ ಐ ಹಾಗೂ ಕಾಂಗ್ರೆಸ್  ನಾಯಕರ ಜೊತೆ ಚೆನ್ನಾಗಿರುವ ಬಿಜೆಪಿ ನಾಯಕರಿಗೆ ಭರ್ಜರಿ ಬಾಡೂಟ.

ಕರಾವಳಿಯ ಕಾಂಗ್ರೆಸ್‌ ನಾಯಕರು ಸಾಂದರ್ಭಿಕ ಚಿತ್ರ

ಈಗ ಇಫ್ತಿಖಾರ್, ಮಂಜುನಾಥ್  ಭಂಡಾರಿ ಎದುರು ಬಂದು ಹೋರಾಡುತ್ತಾರೋ ಇಲ್ಲ. ಇಫ್ತಿಖಾರ್  ಅವರ ಬಳಿ ಪತ್ರಕರ್ತರು ಏನಾದರೂ ಕೇಳಿದರೆ, ನಾನು ಕಾಂಗ್ರೆಸ್  ನಾಯಕ ಅಲ್ಲ ಅನ್ನುತ್ತಾರೆ. ಆದರೆ ಇಡೀ ಜಿಲ್ಲೆಯ ಅಧಿಕಾರಿ ವರ್ಗಾವಣೆ  ದಂಧೆ ಮಾಡುತ್ತಾರೆ ! ರಾತ್ರಿ ವೇದವ್ಯಾಸ  ಮತ್ತು ಭರತ್ ಶೆಟ್ಟಿಯವರ ಜೊತೆ ಕೆಲಸ ಮಾಡುತ್ತಾರೆ!

ಐವಾನ್, ಮಿಥುನ್ ತೋರಿಕೆಗೆ ಮಾತನಾಡಿದರೆ ಇನಾಯತ್ ಯಾರೋ ತೂಕ ಮಾಡಿ ಬರೆದು ಕೊಟ್ಟ ಹೇಳಿಕೆ ಕೊಟ್ಟು ಬೆಂಗಳೂರಿನ ವ್ಯಾಪಾರ ನಿಮಿತ್ತ  ತಮ್ಮ ಕಚೇರಿಗೆ ಹೋಗುತ್ತಾರೆ. ಅಶೋಕ ರೈ ಮಾತೂ ಆಡಲ್ಲ.

ಹಾಗಿದ್ದ ಮೇಲೆ ತಳ ಮಟ್ಟಕ್ಕಿಳಿದು ಹೋರಾಟ ಮಾಡುವವರು ಯಾರಿದ್ದಾರೆ?. ಹಿಂದೂ ಮುಸ್ಲಿಂ  ಕೋಮುವಾದ ಮುಗಿಯಬೇಕು ಅಂತಾದರೆ ಯಾರಾದರೂ ಕೆಲಸ ಮಾಡಬೇಕಲ್ಲವೇ? ಯೋಜನೆ ರೂಪಿಸಬೇಕಲ್ಲವೇ?  ಮುಗಿಸಲು ಬಿಜೆಪಿಗೆ ಆಸಕ್ತಿಯಿಲ್ಲ. ಕಾಂಗ್ರೆಸ್ ನವರಿಗೆ ಗೊತ್ತಿಲ್ಲ ಮತ್ತು ಬಿದ್ದು ಹೋಗಿಲ್ಲ. ಎರಡೂ ಕಡೆ ಹೆಣಗಳು ಮಾತ್ರ ಬೀಳುತ್ತವೆ.  ಕರಾವಳಿ ಕಾಂಗ್ರೆಸ್  ಮತ್ತು ಬಿಜೆಪಿಯ ಕೆಟ್ಟ ನಾಯಕರ ಕೈಯಲ್ಲಿ  ಸಾಯುತ್ತಿದೆ. ಇದು ಅತೀ ಕಹಿಯಾದ ಸತ್ಯ.

ಯಾವ ಜಿಲ್ಲೆಯಲ್ಲೂ ಇಲ್ಲದ ಹೊಂದಾಣಿಕೆ ಮತೀಯವಾದಿ  ನಾಯಕರ ನಡುವೆ ಮತ್ತು ಕಾಂಗ್ರೆಸ್, ಬಿಜೆಪಿ , ಎಸ್ ಡಿ ಪಿ ಐ ಪಕ್ಷದ  ನಡುವೆ ಇದೆ. ಅದೇ ರೀತಿ ಯಾವ ಜಿಲ್ಲೆಯಲ್ಲೂ ಕಾಣದ ಮತೀಯ ದ್ವೇಷ ಈ ಜಿಲ್ಲೆಯ ಯುವಕರಲ್ಲೂ ಇದೆ. ಅವರೇ ಕೊಲ್ಲುವುದು, ಅವರೇ ಸಾಯುವುದು. ನಾಯಕರು ಮಾತ್ರ ಸದಾ ವಿಜೃಂಭಿಸುವುದು. ಇದು ಕರಾವಳಿ.  

ರಾಜಕೀಯ ವಿಶ್ಲೇಷಕರು


ಇದನ್ನೂ ಓದಿ- ಉಸ್ತುವಾರಿ ಸಚಿವರ ಕಣ್ಣೆದುರೇ 114 ಕೋಮು ಪ್ರಕರಣಗಳು | ಸಚಿವ ದಿನೇಶ್ ಗುಂಡೂರಾವ್ ಗೆ ಶಿಕ್ಷೆಇಲ್ಲವೇ ?

More articles

Latest article