ಬೆಂಗಳೂರು ಏ.30: ಇಪ್ಪತ್ತೈದು ವರ್ಷದ ಹಿಂದೆ “ಮಾನಸ ಬಳಗ” ಎಂಬ ಸ್ತ್ರೀವಾದಿ ಪತ್ರಿಕೆಯಿಂದ ಗುರುತಿಸಿಕೊಂಡು ಚಳವಳಿಗಾಗಿ ದುಡಿಯುತ್ತಿದ್ದೇನೆ. ಇಂದಿನ ಬಹುತೇಕ ಯುವಜನಾಂಗಕ್ಕೆ ಆ ಪತ್ರಿಕೆಯ ಪರಿಚಯವೇ ಇಲ್ಲ ಎಂದು ಮಹಿಳಾ ಹೋರಾಟಗಾರ್ತಿ, ಲೇಖಕಿ ದು. ಸರಸ್ವತಿ ಹೇಳಿದರು.
ನಗರದ ಶೇಷಾದ್ರಿಪುರಂನಲ್ಲಿರುವ ಕರ್ನಾಟಕ ಜನಶಕ್ತಿ ಕಾರ್ಯಾಲಯದಲ್ಲಿ ಬುಧವಾರ ಜಾತಿ ಮತ್ತು ಲಿಂಗತ್ವ ಪುಸ್ತಕದ ಕುರಿತು ಮಹಿಳಾ ಮುನ್ನಡೆ ಸಂಘಟನೆಯ ವತಿಯಿಂದ ಏರ್ಪಡಿಸಲಾದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೌರಕಾರ್ಮಿಕರ ಪರ ಕೆಲಸ ಮಾಡಬೇಕೆಂಬ ತುಡಿತವಿತ್ತು. ಆಗ ಡಿಎಸ್‌ಎಸ್ ನಿಂದ ತುಂಬಾ ಕಲಿತಿದ್ದೇನೆ. ಸ್ತ್ರೀವಾದದ ನನ್ನ ಹುಡುಕಾಟಕ್ಕೆ ದಲಿತ ಚಳುವಳಿಯಲ್ಲಿಯೂ ನಿಖರ ಉತ್ತರ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮಹಿಳಾ ಅಧ್ಯಯನದ ವಿಚಾರವಾಗಿ ಬೇರೆ ಬೇರೆ ರೀತಿಯ ಸ್ತ್ರೀವಾದಿ ಪುಸ್ತಕಗಳನ್ನು ಓದಿದ್ದೇನೆ. ಆಗ ಇಂತಹದ್ದೊಂದು(ಜಾತಿ ಮತ್ತು ಲಿಂಗತ್ವ ಪುಸ್ತಕದ ಅನುವಾದ) ಪ್ರಯತ್ನ ಕರ್ನಾಟಕದಲ್ಲಿ ಮಾಡಬೇಕೆಂಬ ಆಲೋಚನೆ ಹೊಳೆದಿತ್ತು, ಈಗ ವಿಶ್ವವಿದ್ಯಾಲಯದ ಬಾಗಿಲುಗಳು ಮಹಿಳಾ ಅಧ್ಯಯನಕ್ಕೆ ಬಹುತೇಕ ಮುಚ್ಚುವ ಹಂತದಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಜಾತಿಗೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ನೇರ ಸಂಪರ್ಕ ಇದೆ. 1985-86 ರಲ್ಲಿ ಮಹಿಳಾ ಅಧ್ಯಯನ ಶುರುವಾಯಿತು ಎಂದು ಹೇಳಿದರು.
ನಾನು ಅಕಾಡೆಮಿಷಿಯನ್ ಅಲ್ಲ. ಆದರೆ ಎಲ್ಲರೂ ಈ ಪುಸ್ತಕ ಓದಲೇಬೇಕು, ಚರ್ಚಿಸಲೇಬೇಕು ಎಂದು ನನಗೆ ಅನಿಸತೊಡಗಿತು. ಎಂದೇ ಶಿಲುಬೆ ತರಹ ಈ ಪುಸ್ತಕ ಹೊತ್ತುಕೊಂಡಿದ್ದೆ. ಅನುವಾದ ಪೂರ್ಣಗೊಳಿಸದೆಯೇ ಸಾಯುತ್ತೇನೆ ಅಂದುಕೊಂಡಿದ್ದೆ. ಈಗ ಆ ಶಿಲುಬೆ ಇಳಿಸಿದ್ದೇನೆ ಎಂದ ಅವರು ನಾನು ಓದುವಾಗ ಅಂಬೇಡ್ಕರ್, ಮಹಾತ್ಮ ಜ್ಯೋತಿಭಾ ಫುಲೆ ಹೆಸರು ಕೇಳಿರಲೇ ಇಲ್ಲ ಎಂದರು.
ಒಂದು ಸಲ ಹೆಣ್ಣು ಮಕ್ಕಳಿಗೆ ಅಕ್ಷರ, ಶಿಕ್ಷಣ ದೊರೆತರೆ ಅವರ ಬದಲಾವಣೆ ಹೇಗೆ ಆಗುತ್ತದೆ ಎಂದು ಗಮನಿಸಬೇಕು. ಅಸ್ಪೃಶ್ಯರ ಹೆಣ್ಣು ಮಕ್ಕಳಿಗೆ ಅಕ್ಷರ ದೊರೆತರೆ ಅವರು ಲೋಕವನ್ನು ಹೇಗೆ ನೋಡುತ್ತಾರೆ ಎಂಬುದು ಬಹುಮುಖ್ಯವಾಗುತ್ತದೆ. ಪಿತೃಪ್ರಧಾನ ವ್ಯವಸ್ಥೆ ಎಲ್ಲಾ ಶ್ರೇಣಿಗಳಲ್ಲಿ ಇದೆ. ಈ ಆತ್ಮಕಥೆಯಲ್ಲಿ ಆಯಾಕಾಲದ ರಾಜಕೀಯವೂ ಬರುತ್ತದೆ. ದಲಿತ ಆತ್ಮಕಥನಗಳು ಆಯಾಕಾಲದ ರಾಜಕೀಯ, ವ್ಯವಸ್ಥೆ, ಅನುಭವಗಳನ್ನು ಒಳಗೊಂಡಿರುತ್ತವೆ. ಅತ್ಯಂತ ಸುಭದ್ರ ಬ್ರಾಹ್ಮಣ ಹೆಣ್ಣು ಮಕ್ಕಳ ದೌರ್ಜನ್ಯದ ಬಗ್ಗೆಯೂ ಕೇಳಿದ್ದೇನೆ. ತಾತ್ವಿಕತೆಯನ್ನು ಕಟ್ಟುವುದು ಬಹುಮುಖ್ಯ ಎಂದು ಹೇಳಿದರು.
ಈ ಪುಸ್ತಕ(ಜಾತಿ ಮತ್ತು ಲಿಂಗತ್ವ) ಬರೆಯಲು ನಾನು ಬಹಳ ಕಷ್ಟ ಪಟ್ಟಿದ್ದೇನೆ, ಬೌದ್ಧಿಕ ಕಸರತ್ತು ನಡೆಸಿದ್ದೇನೆ. ಅನುವಾದದಲ್ಲಿ ಕನ್ನಡದ ಸೂಕ್ತ ಪದಗಳನ್ನು ಹುಡುಕಲು ಮಂಜುಳಾ, ಶೈಲಜಾ ತುಂಬಾ ಸಹಾಯ ಮಾಡಿದ್ದಾರೆ. ಅನುವಾದ ಮಾಡುವಾಗ ಇಕ್ಕಳ ಸುಟ್ಟು ಕೈಗೆ ಇಡುವಂತಹ ಪುರುಷ ದೌರ್ಜನ್ಯದ ಪ್ರಸಂಗಗಳನ್ನು ಓದಿ ನಿಜಕ್ಕೂ ಅತ್ತಿದ್ದೇನೆ. ಮಹಿಳಾ ಅಧ್ಯಯನ, ಚಳುವಳಿ ಮರುರೂಪುಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಚಳವಳಿ ಗಟ್ಟಿಯಾಗಬೇಕಿದೆ. ಮಹಿಳಾ ಚಳುವಳಿ ಕೊಟ್ಟ ಅದ್ಭುತ ಕೊಡುಗೆ ಅಂದರೆ ಸ್ತ್ರೀವಾದ ಮತ್ತು ದೇಹರಾಜಕಾರಣ. ಅಲೆಮಾರಿ ಮಹಿಳೆಯರ ರಾತ್ರಿ ಮತ್ತು ಹಗಲುಗಳು ಅಂದರೆ ಅನ್ನ ಮತ್ತು ಹಸಿವಿನ ಪ್ರಶ್ನೆಗಳಾಗಿರುತ್ತವೆ. ಎಲ್ಲಾ ಅತ್ಯಾಚಾರ, ದೌರ್ಜನ್ಯಗಳು 61% ಗೊತ್ತಿರುವವರಿಂದ, ಮನೆಯವರಿಂದಲೇ ಅದು ಮನೆಯೊಳಗೆಯೇ ಆಗುವುದು. ಹೆಣ್ಣು ಮಕ್ಕಳ ಬದುಕು ಸುಲಭ ಅಲ್ಲ. ಕೋಮುವಾದ, ಜಾಗತೀಕರಣ ಇಂದು ಮರೆಯುವಂತಿಲ್ಲ ಎಂದು ಸಂವಾದದಲ್ಲಿ ದು. ಸರಸ್ವತಿ ಒತ್ತುಕೊಟ್ಟು ಹೇಳಿದರು.
ಸಂವಾದದಲ್ಲಿ ಮಹಿಳಾ ಮುನ್ನಡೆಯ ಮಲ್ಲಿಗೆ ಸಿರಿಮನೆ, ಚಂಪಾವತಿ ಎಚ್. ಎಸ್, ಸಿರಿಗೌರಿ, ಕುಮಾರ ಸಮತಳ ವಕೀಲರಾದ ನಯನ, ನಾಗರಾಜ, ಮರಿಸ್ವಾಮಿ, ಶರಣು, ಅಜಿತ್ ಬೆಳ್ಳಿಬಟ್ಲು ಸೇರಿದಂತೆ ಕವಯಿತ್ರಿ ಎಡೆಯೂರು ಪಲ್ಲವಿ ಮುಂತಾದವರು ಪಾಲ್ಗೊಂಡಿದ್ದರು.
ವರದಿ : ಶಿವರಾಜ್ ಮೋತಿ
ನ್ಯಾಯವಾದಿಗಳು, ಬೆಂಗಳೂರು.
ಇದನ್ನೂ ಓದಿ- ಮೇ ದಿನದ ಪ್ರಸ್ತುತತೆ – ಎಡಪಕ್ಷಗಳ ಐಕ್ಯತೆಯ ತುರ್ತು