ಡಿಜಿಟಲ್ Know-Your-Customer(ಕೆವೈಸಿ) ಮೂಲಕ ಆಸಿಡ್ ದಾಳಿ ಅಥವಾ ದೃಷ್ಟಿಹೀನತೆಯಿಂದ ಮುಖ ವಿರೂಪಗೊಂಡ ವ್ಯಕ್ತಿಗಳು ಬ್ಯಾಂಕಿಂಗ್ ಮತ್ತು ಇ-ಆಡಳಿತ ಸೇವೆಗಳನ್ನು ಪಡೆಯಲು ಅನುವು ಮಾಡಿಕೊಡಲು ಸುಪ್ರೀಂ ಕೋರ್ಟ್ ಮಾನದಂಡಗಳನ್ನು ಪರಿಷ್ಕರಿಸುವಂತೆ ಇಂದು ಆದೇಶಿಸಿದೆ.
ಡಿಜಿಟಲ್ ಸೇವೆಗಳನ್ನು ಪಡೆಯುವ ಹಕ್ಕನ್ನು ಸಂವಿಧಾನದ 21 ನೇ ವಿಧಿ ನೀಡಿದೆ. ಎಲ್ಲಾ ಸರ್ಕಾರಿ ಪೋರ್ಟಲ್‌ಗಳು, ಕಲಿಕಾ ವೇದಿಕೆಗಳು, ಹಣಕಾಸು ತಂತ್ರಜ್ಞಾನ ಸೇವೆಗಳು, ದುರ್ಬಲ ಹಾಗೂ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಸಾರ್ವತ್ರಿಕವಾಗಿ ದೊರಕುವಂತಿರಬೇಕು ಎಂದು ಹೇಳಿದೆ.
ವಿಶೇಷಚೇತನ ವ್ಯಕ್ತಿಗಳಿಗೆ e-KYC ಪ್ರಕ್ರಿಯೆಯು ಸುಲಭವಾಗಿ ದೊರೆಯುವಂತೆ ಸರ್ಕಾರಿ ಪೋರ್ಟಲ್‌ಗಳನ್ನು ರಾಜ್ಯವು ಖಚಿತಪಡಿಸಬೇಕು. ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು ಮತ್ತು ನೆರವಿನ ತಂತ್ರಜ್ಞಾನಗಳ ಕೊರತೆಯಿಂದಾಗಿ ವಿಕಲಚೇತನ ವ್ಯಕ್ತಿಗಳು ಆನ್‌ಲೈನ್ ಸೇವೆಗಳನ್ನು ಪಡೆಯುವಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಾರೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರ ಪೀಠವು, ಅಂಚಿನಲ್ಲಿರುವ ಮತ್ತು ವಿಕಲಚೇತನ ವ್ಯಕ್ತಿಗಳು ಸೇರಿದಂತೆ ಎಲ್ಲರಿಗೂ ಸುಲಭ ರೀತಿಯಲ್ಲಿ ಪ್ರವೇಶಿಸಲು ಸಮಗ್ರ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ವಿನ್ಯಾಸಗೊಳಿಸಬೇಕಾದುದು ರಾಜ್ಯದ ಆದ್ಯಕರ್ತವ್ಯವೆಂದು ತಿಳಿಸಿದ್ದಾರೆ.
ಡಿಜಿಟಲ್ ಮೂಲಸೌಕರ್ಯಗಳು, ವಿಶೇಷ ಕೌಶಲ್ಯಗಳು ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳು ಸಿಗುವಲ್ಲಿ, ಅಂಗವಿಕಲ ವ್ಯಕ್ತಿಗಳನ್ನು ಮಾತ್ರವಲ್ಲದೆ ಗ್ರಾಮೀಣ ಜನಸಂಖ್ಯೆ, ಹಿರಿಯ ನಾಗರಿಕರು, ಆರ್ಥಿಕವಾಗಿ ದುರ್ಬಲ ಸಮುದಾಯಗಳು ಜೊತೆಗೆ ಭಾಷಾ ಅಲ್ಪಸಂಖ್ಯಾತರನ್ನು ವ್ಯವಸ್ಥಿತವಾಗಿ ಹೊರಗಿಡಲಾಗಿದೆ.
ಅನೇಕ ಕಲ್ಯಾಣ ಯೋಜನೆಗಳು ಮತ್ತು ಸರ್ಕಾರಿ ಸೇವೆಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಒದಗಿಸಲಾಗುವುದರಿಂದ, ಉತ್ತಮ ಜೀವನವನ್ನು ನಡೆಸಲು ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ.