ಪಹಲ್ಗಾಮ್‌ ನಲ್ಲಿ ಉಗ್ರರ ದಾಳಿ: ಮತ್ತೆ ಮೂವರು ಶಂಕಿತ ಉಗ್ರರ ಮನೆಗಳು ನಾಶ

Most read

ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಉಗ್ರರ ಬೇಟೆಯಾಡುತ್ತಿರುವ ಭದ್ರತಾ ಪಡೆಗಳು, ಕಾಶ್ಮೀರದ ಕಣಿವೆಯಲ್ಲಿ ಮೂವರು ಶಂಕಿತ ಉಗ್ರರ ಮನೆಗಳನ್ನು ಇಂದು ಧ್ವಂಸಗೊಳಿಸಿವೆ. ಕಳೆದ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಪುಲ್ವಾಮಾ ಜಿಲ್ಲೆಯ ಮುರಾನ್ ಪ್ರದೇಶದಲ್ಲಿರುವ ಶಂಕಿತ ಉಗ್ರ ಅಹ್ಸಾನ್ ಉಲ್ ಹಕ್ ಶೇಖ್‌ ಗೆ ಸೇರಿದ ಮನೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2018ರಲ್ಲಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ ಈತ ಇತ್ತೀಚೆಗೆ ಕಾಶ್ಮೀರದ ಕಣಿವೆ ಪ್ರವೇಶಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.

ಶೋಪಿಯಾನ್ ಜಿಲ್ಲೆಯ ಚೋಟಿಪೋರಾದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಾಯಗೆ ಸೇರಿದ ಮನೆಯನ್ನು ನಾಶಗೊಳಿಸಲಾಗಿದೆ. ಹಲವು ವರ್ಷಗಳಿಂದ ಸಕ್ರಿಯನಾಗಿದ್ದ ಕುಟ್ಟಾಯ ಅನೇಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಶಂಕಿತ ಉಗ್ರ ಜಾಕಿರ್ ಅಹ್ಮದ್ ಗನಿಗೆ ಸೇರಿದ ಮನೆ ಧ್ವಂಸ:
2023ರಿಂದ ಸಕ್ರಿಯನಾಗಿರುವ ಉಗ್ರ ಜಾಕಿರ್ ಅಹ್ಮದ್ ಗೆ ಸೇರಿದ ಕುಲ್ಗಮ್ ಜಿಲ್ಲೆಯ ಮಾತಲ್ಹಾಮಾ ಪ್ರದೇಶದ ಮನೆಯನ್ನೂ ನಾಶಗೊಳಿಸಲಾಗಿದೆ. ಈತ ಹಲವಾರು ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಇದಕ್ಕೂ ಮುನ್ನ ಗುರುವಾರ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಲಷ್ಕರ್–ಎ–ತಯಬಾ ಸಂಘಟನೆಯ ಇಬ್ಬರು ಭಯೋತ್ಪಾದಕರ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಮನೆಗಳಲ್ಲಿ ತಪಾಸಣೆ ನಡೆಸಿದಾಗ ಸ್ಫೋಟಕಗಳು ಪತ್ತೆಯಾಗಿದ್ದವು. ಅವುಗಳನ್ನು ಸ್ಫೋಟಿಸಿದಾಗ ಮನೆಗಳು ಧ್ವಂಸವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article