ಗಣಿಗಾರಿಕೆಗೆ ದಾರಿ: ರೈತನ ಮೇಲೆ ಗುಂಡು ಹಾರಿಸಿದ ಗಣಿ ಉದ್ಯಮಿ

Most read

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಿರಾಮನಹಳ್ಳಿ, ಕನಗಾನಕೊಪ್ಪ, ರಾಯನಕಲ್ಲು ಗ್ರಾಮಗಳ ಸಮೀಪದ ಬೆಟ್ಟಗುಡ್ಡಗಳಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಗಣಿಗಾರಿಕೆ ಲಾರಿಗಳ ಓಡಾಟಕ್ಕೆ ದಾರಿ ಕಲ್ಪಿಸುವ ಸಂಬಂಧ ಎರಡು ಗುಂಪುಗಳ ನಡುವೆ ಬುಧವಾರ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಗಣಿ ಮಾಲೀಕ ಸಕಲೇಶ್ ಎಂಬಾತ ಸ್ಥಳೀಯ ರೈತ ರವಿ ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ.

ಗಣಿಗಾರಿಕೆ ಲಾರಿಗಳ ಓಡಾಟ ಮತ್ತು ರಸ್ತೆ ನಿರ್ಮಾಣ ವಿರೋಧಿಸಿ ಫೆಬ್ರುವರಿಯಲ್ಲಿ ಮಂಚೇನಹಳ್ಳಿಯಲ್ಲಿ ರೈತ ಸಂಘ, ಮಂಚೇನಹಳ್ಳಿ ತಾಲ್ಲೂಕು ಪರಿಸರ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಬೆಟ್ಟದ ಕೆಳಗೆ ಮುನೇಶ್ವರ ಗುಡಿ, ತಿಮ್ಮರಾಯನಗುಡಿ ಇದೆ. ಸ್ವಚ್ಛಗಾಳಿ, ನೀರು, ಮೇವು ನೀಡುತ್ತಿರುವ ನಮ್ಮ ಊರಿನ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ಮಾಡಬಾರದು. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ದಾರಿ ಮಾಡುವ ಸಂಬಂಧ ಪೊಲೀಸ್ ಠಾಣೆಯಲ್ಲಿ ಹಲವು ಸುತ್ತಿನ ಮಾತುಕತೆ ನಡೆದಿತ್ತು.

ಬುಧವಾರ ಸಕಲೇಶ್ ಮತ್ತು ಆತನ ಚೇಲಾಗಳು ಜೆಸಿಬಿಗಳ ಮೂಲಕ ರಸ್ತೆ ನಿರ್ಮಿಸಲು ಮುಂದಾಗಿದ್ದರು. ಆಗ ಸ್ಥಳೀಯರು ಈ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಆಗ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಆ ಸಂದರ್ಭದಲ್ಲಿ ಸಕಲೇಶ್, ರಿವಾಲ್ವರ್ ಹಿಡಿದು ‘ಯಾರು ಬರುತ್ತಿರೊ ಬನ್ನಿ’ ಎಂದು ಕೂಗುತ್ತಾ ರವಿ ಮೇಲೆ ಗುಂಡು ಹಾರಿಸಿದ್ದಾನೆ. ರವಿ ತೊಡೆಗೆ ಗುಂಡು ತಗುಲಿದೆ. ಗಾಯಾಳು ರೈತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಂಚೇನಹಳ್ಳಿ ಮತ್ತು ಗೌರಿಬಿದನೂರು ಪೊಲೀಸರು ಭೇಟಿ ನೀಡಿ ಬಂದೋಬಸ್ತ್‌ ಕಲ್ಪಿಸಿದ್ದಾರೆ. ಆದರೂ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

More articles

Latest article