ಖ್ಯಾತ ಕವಯಿತ್ರಿ ಮಮತಾ ಜಿ ಸಾಗರ ಅವರ ’ನಾನು ಎಂದರೆ…ʼ ಕವನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹೊತ್ತಲ್ಲೇ, ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ ತಾನೂ ಬದುಕಲೆಂದು ಕಾವ್ಯ ಬಂತು ಬೀದಿಗೆ ಎನ್ನುವಂತೆ ಹೆಣ್ಣಿನ ಮೇಲೆ ನಿಲ್ಲದ ಈ ಅತ್ಯಾಚಾರ, ಕೊಲೆಗಳನ್ನು ಕಂಡು ಮತ್ತು ಅದರ ಕಾರಣವನ್ನು ಕಾಣಿಸುವ, ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯಲು ಮಮತಾ ಸಾಗರ ಅವರ ಕವಿತೆ ಶೀಲ-ಆಶ್ಲೀಲಗಳ ಆವರಣವನ್ನು ಜಿಗಿದು ಬೀದಿಗೆ ಬಂದ ಕವಿತೆ ಎನ್ನುವುದನ್ನು ಸುಬಗ ಸಮಾಜ ಅರ್ಥಮಾಡಿಕೊಳ್ಳಲಿ ಎಂದು ಬರೆಯುತ್ತಾರೆ ಕವಿ, ಪತ್ರಕರ್ತ ರವಿಕುಮಾರ್ ಟೆಲೆಕ್ಸ್.
ಒಂದು ಕವಿತೆ ಸರ್ವಾಧಿಕಾರಿಗೆ ದೇಶದ್ರೋಹಿಯಂತೆ ಕಂಡರೆ, ಕವಿತೆಯೊಂದು ಸೋಕಾಲ್ಡ್ ಏಲೈಟ್ ಸೊಸೈಟಿಗೆ ಅಶ್ಲೀಲವಾಗಿಯೂ ಕಂಡರೆ, ಧರ್ಮಾಂಧರಿಗೆ ಕವಿತೆಯೊಂದು ದೇವನಿಂದನೆಯಂತೆಯೂ ಕಂಡು ಕವಿತೆಯನ್ನು ನಿಷೇಧಿಸುವ ಅಥವಾ ಅವುಗಳನ್ನು ಬರೆದ ಕವಿ ಮತ್ತು ಕವಿತೆಯನ್ನು ವಧಾಸ್ಥಾನಕ್ಕೆ ತಂದು ನಿಲ್ಲಿಸುವ ಬೌದ್ಧಿಕ ದಿವಾಳಿತನದ ಪರಂಪರೆ ಹೊಸತೇನಲ್ಲ.
ಮಮತಾ ಜಿ ಸಾಗರ ಅವರು ಬರೆದು ಇತ್ತೀಚೆಗೆ ವಾಚಿಸಿದ ’ನಾನು ಎಂದರೆ ಒಂದು ಜೊತೆ ಮೆತ್ತಗಿನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತಲ ಕೋಶ ನಾನು ಅಂದರೆ ನಾನು……’ಹೀಗೆ ಮುಂದುವರೆವ ಕವಿತೆಗೆ ಸ್ವಯಂ ಸಭ್ಯ ನಾಗರೀಕ ಸಮಾಜ ಬೆಚ್ಚಿ ಬಿದ್ದಿದೆ. ಹೆಣ್ಣಿನ ಅಂಗಗಳ ಬಗೆಗಿನ ಮತ್ತು ಹೆಣ್ಣಿಗೆಂದೆ ನಿರೂಪಿಸಲ್ಪಟ್ಟು ಹೇರಲಾದ ಗೌಪ್ಯತೆ, ಪಾವಿತ್ರ್ಯತೆ, ನೈತಿಕತೆ, ಲೈಂಗಿಕತೆ, ಶೀಲ..ಇತ್ಯಾದಿ ಸಿದ್ಧಮಾದರಿಯ ಕಟ್ಟುಪಾಡುಗಳನ್ನು ಈ ಕವಿತೆ ಉಲ್ಲಂಘಿಸಿದೆ ಎಂಬ ಅರೋಪದಲ್ಲಿ ಮಮತಾ ಜಿ ಸಾಗರ ಅವರ ಮೇಲೆ ಮುಗಿಬಿದ್ದಿದೆ.
ಬೇಲೂರು-ಹಳೇಬೀಡು ದೇಗುಲಗಳಲ್ಲಿ ಕೆತ್ತಲ್ಪಟ್ಟ ಶಿಲ್ಪಕೃತಿಗಳಲ್ಲಿ ಅಶ್ಲೀಲತೆ ಕಾಣದ ಸಮಾಜ ಮಮತಾ ಸಾಗರ ಅವರ ಕವಿತೆಯ ಪದಗಳಲ್ಲಿ ಕಂಡು ವ್ಯಗ್ರ ಗೊಂಡಿದ್ದಾರೆ. ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆಗಳಿಗೆ ಆಕೆ ಹೊಂದಿರುವ, ಮಮತಾ ಸಾಗರ ಅವರು ಕವಿತೆಯಲ್ಲಿ ಕಾಣಿಸುವ ಒಂದು ಜೊತೆ ಮೊಲೆ, ತೊಡೆಸಂದಲ್ಲಿ ಅಡಗಿದ ಕತ್ತಲ ಕೋಶವೇ ಗುರಿಯಾಗಿರುತ್ತದೆ ಅನ್ನೋದನ್ನು ಅರ್ಥಮಾಡಿಕೊಳ್ಳಲಾಗದ ಸಮಾಜ ಹೆಣ್ಣಿನ ಶೀಲ ಹರಣ ಎಂದು ಬೊಬ್ಬೆ ಹೊಡೆಯುತ್ತಿರುವುದು ಅತ್ಮವಂಚನೆಯ ನಡೆ.
ಹೆಣ್ಣಿನ ಮೊಲೆಗಳ ಸುತ್ತಳೆತೆಯ ಆಧರಿಸಿ ತೆರಿಗೆ ವಸೂಲಿ ಮಾಡುತ್ತಿದ್ದ ದುಷ್ಟ ಜಾತಿ ಸಮಾಜವನ್ನು ಎದುರಿಸಲು ನಂಗಲಿ ಎಂಬ ಹೆಣ್ಣುಮಗಳು ತನ್ನ ಎರಡು ಮೊಲೆಗಳನ್ನು ಕತ್ತರಿಸಿಕೊಂಡು ತೋರಿದ ಪ್ರತಿರೋಧ ಚಳವಳಿ, ದೇವರ ಹೆಸರಿನಲ್ಲಿ ದಮನಿತ ಹೆಣ್ಣು ಮಕ್ಕಳನ್ನು ಎಡೆಯಾಗಿ ತಿಂದ ಸನಾತನ ಇತಿಹಾಸ ಯಾವ ಕಾಲಕ್ಕೂ ಮರೆಯಲಾಗದು.
ಈ ದೇಶದಲ್ಲಿ ಈ ಕ್ಷಣದವರೆಗೂ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆಗಳು ಸಹಜಸೃಷ್ಟಿಯಿಂದ ಹೊಂದಿರಬಹುದಾದ ಅಂಗಾಗಂಗಗಳ ಮೇಲೆಯೇ ಆಗಿದೆ. ಇವುಗಳನ್ನು ಗುರಿಯಾಗಿಸಿಕೊಂಡೆ ಗಂಡು ಸಮಾಜ ಇಂತಹ ಕ್ರೌರ್ಯವನ್ನು ಮೆರೆಯುತ್ತಿದೆ. ಇದು ಅನಾಗರೀಕ ನಡೆ ಎಂಬುದನ್ನು ಅರ್ಥಮಾಡಿಕೊಳ್ಳದ ಮಂದಿ ಮಮತಾ ಸಾಗರ ಅವರ ಕವಿತೆಯ ಪದಗಳನ್ನು ಹಿಡಿದು ತಮ್ಮ ಸಜ್ಜನಶೀಲತೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದೆ.
ಬೈಗುಳಗಳು ಹೆಣ್ಣು ಕೇಂದ್ರಿತವಾಗಿಯೇ ಗಂಡಿನ ಹಕ್ಕಿನಂತೆ ಬಳಕೆಯಾಗುತ್ತಿರುವುದನ್ನು ನಿರ್ಲಜ್ಜತನದಿಂದ ನೋಡಿಕೊಂಡೂ, ಅದೊಂದು ಸಮಾಜದ ಒಪ್ಪಿತ ಮೌಲ್ಯವೇನೋ ಎಂಬಂತೆ ಮುಂದುವರೆಸಿಕೊಂಡು ಬರುತ್ತಿರುವವರಲ್ಲಿ ಎಲ್ಲಾ ಬಗೆಯ ಸೈದ್ಧಾಂತಿಕವಾದಿಗಳೂ ಇದ್ದಾರೆ. ಪ್ರಗತಿಪರರಿಗೂ, ಸಂಪ್ರದಾಯವಾದಿಗಳಿಗೂ, ಸ್ತ್ರೀವಾದಿಗಳಿಗೂ ಈ ವಿಷಯದಲ್ಲಿ ಭಿನ್ನವಿಲ್ಲ ಎನ್ನುವಷ್ಟರ ಮಟ್ಟಿಗೆ ಮಮತಾ ಸಾಗರ ಅವರ ಕವಿತೆ ದಂಡನೆಗೊಳಗಾಗಿರುವುದು ವಿಪರ್ಯಾಸ. ಕವಿತೆಯೊಳಗಿನ ರೂಪಕಗಳನ್ನು ಸಾಹಿತ್ಯದ ನೆಲೆಯಲ್ಲಿ ಅರ್ಥೈಸಿಕೊಂಡಾಗ ಅಶ್ಲೀಲತೆ ಇಣುಕುವುದಿಲ್ಲ.
ಜನರು ಬೀದಿಯಲ್ಲಿದ್ದಾಗ ರಂಗಮಹಲುಗಳನ್ನೊದ್ದು, ಕನಸುಗಳ ಕೋಟೆಯನ್ನೊಡೆದು, ಭ್ರಮೆಯ ಲೋಕವ ದಾಟಿ ತಾನೂ ಬದುಕಲೆಂದು ಕಾವ್ಯ ಬಂತು ಬೀದಿಗೆ ಎನ್ನುವಂತೆ ಹೆಣ್ಣಿನ ಮೇಲೆ ನಿಲ್ಲದ ಈ ಅತ್ಯಾಚಾರ, ಕೊಲೆಗಳನ್ನು ಕಂಡು ಮತ್ತು ಅದರ ಕಾರಣವನ್ನು ಕಾಣಿಸುವ, ಗಂಡಾಳಿಕೆಯ ದುಷ್ಟತನವನ್ನು ತೀವ್ರವಾಗಿ ಹಣಿಯಲು ಮಮತಾ ಸಾಗರ್ ಅವರ ಕವಿತೆ ಶೀಲ-ಆಶ್ಲೀಲಗಳ ಆವರಣವನ್ನು ಜಿಗಿದು ಬೀದಿಗೆ ಬಂದ ಕವಿತೆ ಎನ್ನುವುದನ್ನು ಸುಬಗ ಸಮಾಜ ಅರ್ಥಮಾಡಿಕೊಳ್ಳಲಿ.
’ ಮೊಲೆ ಮುಡಿ ಬಂದಡೆ ಹೆಣ್ಣೆಂಬರು, ಗಡ್ಡ-ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿದಾಡುವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ … ಕಾಣಾ! ರಾಮಾನಾಥ ಎಂಬ ಶರಣರ ನುಡಿಯಲ್ಲಿ ಅಶ್ಲೀಲ ಕಂಡರೆ ಒಳಗಣ್ಣು ಕೊಳೆತು ಹೋಗಿದೆ ಎಂದರ್ಥ.
ರವಿಕುಮಾರ್ ಟೆಲೆಕ್ಸ್
ಕವಿ, ಪತ್ರಕರ್ತ
ಇದನ್ನೂ ಓದಿ- ಈ ಮೊಲೆಗಳೇ ಬೇಡ ಎಂಬ ಒಳಮನದ ತಳಮಳ