ನವದೆಹಲಿ: ಜನವರಿಯಿಂದ ಇದುವರೆಗೆ 682 ಭಾರತೀಯರನ್ನು ಅಮರಿಕದಿಂದ ಗಡೀಪಾರು ಮಾಡಲಾಗಿದೆ. ಆ ಪೈಕಿ ಬಹುತೇಕ ಮಂದಿ ಅಕ್ರಮವಾಗಿ ಅಮೆರಿಕ ಪ್ರವೇಶಕ್ಕೆ ಪ್ರಯತ್ನಿಸಿದವರೇ ಆಗಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ದಾಖಲೆ ರಹಿತವಾಗಿ ಅಮೆರಿಕ ಪ್ರವೇಶಕ್ಕೆ ಯತ್ನಿಸಿ ಗಡೀಪಾರಾದವರಿಗೆ ಕಾನೂನು ಸೇರಿದಂತೆ ಇತರೆ ನೆರವನ್ನು ನೀಡಲಾಗಿದೆ ಎಂದೂ ತಿಳಿಸಿದ್ದಾರೆ.
ಗಡೀಪಾರಾದ ಭಾರತೀಯರ ಪೈಕಿ ಬಹುತೇಕರು ಅಕ್ರಮವಾಗಿ ಅಮೆರಿಕ ಪ್ರವೇಶಕ್ಕೆ ಯತ್ನಿಸಿದವರೇ ಆಗಿದ್ದಾರೆ. ಅಮೆರಿಕ ಗಡಿಯಲ್ಲಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕಕ್ಕೆ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಸಂಚಾರವನ್ನು ಸುಗಮಗೊಳಿಸಲು ಹಾಗೂ ಅನುಕೂಲಕರ, ಸುರಕ್ಷಿತ ಚಲನಶೀಲತೆಯನ್ನು ಉತ್ತೇಜಿಸಲು ಸರ್ಕಾರವು ಅಮೆರಿಕದೊಂದಿಗೆ ತೊಡಗಿಸಿಕೊಂಡಿದೆ ಎಂದೂ ಹೇಳಿದ್ದಾರೆ.
ಅಕ್ರಮ ವಲಸೆ ಮತ್ತು ಮಾನವ ಕಳ್ಳಸಾಗಣೆಯ ಸಮಸ್ಯೆಗಳನ್ನು ಅಕ್ರಮ ಜಾಲಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಪರಿಹರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿರುವುದು, ಅಥವಾ ವೀಸಾ ಮಾನ್ಯತೆಯ ಅವಧಿ ಮೀರಿ ಉಳಿದಿರುವುದು, ಅಥವಾ ಯಾವುದೇ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವುದು ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿಗಳನ್ನು ಗಡೀಪಾರು ಮಾಡುವ ಎಲ್ಲ ಸಂದರ್ಭಗಳಲ್ಲಿ ಭಾರತ ಸರ್ಕಾರವು ಅಮೆರಿಕ ಸರ್ಕಾರದೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ ಎಂದು ಅವರು ಹೇಳಿದ್ದಾರೆ.