ವಿದೇಶಿಗರ ಮುಂದೆ ತಲೆಬಾಗುವುದೇ BJP, RSS ಸಂಸ್ಕೃತಿ: ಕೇಂದ್ರದ ವಿರುದ್ಧ ರಾಹುಲ್ ಆಕ್ರೋಶ

Most read

ನವದೆಹಲಿ: ಚೀನಾ ಅತಿಕ್ರಮಿಸಿರುವ ಭೂ ಪ್ರದೇಶವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹಾಗೂ ‘ಮಿತ್ರ’ ಅಮೆರಿಕ ವಿಧಿಸಿರುವ ಶೇ 27 ರಷ್ಟು ಸುಂಕದ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಕೇಸರಿ ಪಕ್ಷ (ಬಿಜೆಪಿ) ಹಾಗೂ ಆರ್‌ಎಸ್‌ಎಸ್, ಪ್ರತಿಯೊಬ್ಬ ವಿದೇಶಿಗನ ಎದುರು ತಲೆ ಬಾಗುತ್ತವೆ ಎಂದು ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಭಾರತದ 4,000 ಚದರ ಕಿ.ಮೀ. ಪ್ರದೇಶವನ್ನು ಚೀನಾ ಅತಿಕ್ರಮಿಸಿದೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಆದರೂ ವಿದೇಶಾಂಗ ಕಾರ್ಯದರ್ಶಿ ಅವರು ಚೀನಾದ ರಾಯಭಾರಿಯೊಂದಿಗೆ ಕೇಕ್ ಕತ್ತರಿಸಿದ್ದಾರೆ. ಇದು ಆಘಾತಕಾರಿ ಎಂದು ಕಳವಳ ವ್ಯಕತಪಡಿಸಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವೇಳೆ ಭಾರತದ 20 ಯೋಧರು ಹುತಾತ್ಮರಾದ ವಿಚಾರವನ್ನು ಸ್ಮರಿಸಿದ ಅವರು, ಕೇಂದ್ರ ಸರ್ಕಾರವು ಯೋಧರ ಬಲಿದಾನವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದೆ. ನಾವು ನೆರೆರಾಷ್ಟ್ರದೊಂದಿಗೆ ಸಹಜ ಸಂಬಂಧ ಕಾಪಾಡಿಕೊಳ್ಳುವುದನ್ನು ವಿರೋಧಿಸುವುದಿಲ್ಲ. ಆದರೆ, ಅದಕ್ಕೂ ಮೊದಲು ಭಾರತವು ಕಳೆದುಕೊಂಡಿರುವ ಭೂ ಭಾಗವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ವಿದೇಶಾಂಗ ನೀತಿ ಇರುವುದು ಬಾಹ್ಯ ಸಂಬಂಧಗಳ ನಿರ್ವಹಣೆಗಾಗಿ ಎಂದಿರುವ ಅವರು ನೀವು, 4,000 ಚದರ ಕಿ.ಮೀ. ಭೂಮಿಯನ್ನು ಚೀನಾಗೆ ಬಿಟ್ಟುಕೊಟ್ಟಿದ್ದೀರಿ. ಮತ್ತೊಂದೆಡೆ, ನಮ್ಮ ‘ಮಿತ್ರ’ (ಅಮೆರಿಕ) ಏಕಾಏಕಿ ಶೇ 26ರಷ್ಟು ಸುಂಕ ವಿಧಿಸುವ ನಿರ್ಧಾರ ಮಾಡಿದ್ದಾರೆ. ಇದು, ನಮ್ಮ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಲಿದೆ. ನಮ್ಮ ವಾಹನ ಕೈಗಾರಿಕಾ ಕ್ಷೇತ್ರ, ಔಷಧ ತಯಾರಿಕಾ ಕ್ಷೇತ್ರ ಹಾಗೂ ಕೃಷಿ ವಲಯದ ಮೇಲೂ ಪರಿಣಾಮ ಉಂಟಾಗಲಿದೆ’ ಎಂದು ಕಿಡಿ ಕಾರಿದ್ದಾರೆ.

ವಿದೇಶಾಂಗ ನೀತಿ ವಿಚಾರವಾಗಿ ನೀವು ಎಡ ಇಲ್ಲವೇ ಬಲದ ಪರ ನಿಲುವು ಹೊಂದಿದ್ದೀರಾ ಎಂಬ ಪ್ರಶ್ನೆಯನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೇಳಲಾಗಿತ್ತು. ಆಗ ಅವರು, ನಾನು ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ. ನೇರವಾಗಿದ್ದೇನೆ ಎಂದು ಉತ್ತರಿಸಿದ್ದರು ಎಂದು ರಾಹುಲ್ ನೆನಪಿಸಿಕೊಂಡಿದ್ದಾರೆ.

ಬಿಜೆಪಿ ಹಾಗೂ ಆರ್ಎಸ್ಎಸ್ ವಿಭಿನ್ನ ತತ್ವಗಳನ್ನು ಹೊಂದಿವೆ. ಎಡ ಅಥವಾ ಬಲದ ಪರವಾದ ನಿಲುವಿನ ಬಗ್ಗೆ ನೀವು ಅವರನ್ನು ಕೇಳಿದರೆ, ಅವರು, ತಾವು ವಿದೇಶಿಗರ ಎದುರು ತಲೆಬಾಗುವುದಾಗಿ ಹೇಳುತ್ತಾರೆ. ಇದು ಅವರ ಸಂಸ್ಕೃತಿ ಮತ್ತು ಇತಿಹಾಸದಲ್ಲೇ ಇದೆ. ಆದರೂ, ನಾವು ಕಳೆದುಕೊಂಡಿರುವ ಭೂಮಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಉತ್ತರ ಬಯಸುತ್ತಿದ್ದೇನೆ. ಅಮೆರಿಕ ನಮ್ಮ ಮೇಲೆ ವಿಧಿಸಿರುವ ತೆರಿಗೆಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಳ್ಳಲಿದ್ದೀರಿ? ಎಂದೂ ರಾಹುಲ್ ಪ್ರಶ್ನಿಸಿದ್ದಾರೆ.

More articles

Latest article