ಸಂವಿಧಾನ ರಚನೆಯಲ್ಲಿ ಬಿ.ಆರ್.ಅಂಬೇಡ್ಕರ್ ಅವರಿಗಿಂತ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೊಡುಗೆ ದೊಡ್ಡದು ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ತಮ್ಮ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಕುಲಕರ್ಣಿ ಅವರ ಲೇಖನವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಲೇಖನದ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ‘ಕಾಂಗ್ರೆಸ್ ದಲಿತರು ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ’ ಎಂದು ಟೀಕಿಸಿ ನಂತರ ಪಿತ್ರೋಡಾ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.
ಕುಲಕರ್ಣಿ ಅವರ ಅಭಿಪ್ರಾಯವನ್ನು ಹಂಚಿಕೊಂಡ ಸ್ಯಾಮ್ ಪಿತ್ರೋಡಾ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ಅಂಬೇಡ್ಕರ್- ದಲಿತ ವಿರೋಧಿ ಡಿಎನ್ಎ ಹೊಂದಿದೆ. “ರಾಹುಲ್ ಗಾಂಧಿಯವರ ಚಿಕ್ಕಪ್ಪ (ಸ್ಯಾಮ್ ಪಿತ್ರೋಡಾ) ಅವರು ಸಂವಿಧಾನಕ್ಕೆ ಅಂಬೇಡ್ಕರ್ ಅವರ ಕೊಡುಗೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಈ ಮಾತುಗಳು ಸ್ಯಾಮ್ ಪಿತ್ರೋಡಾ ಅವರದ್ದಾಗಿರಬಹುದು, ಆದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಅಭಿಪ್ರಾಯವು ಅದೆ . ಕಾಂಗ್ರೆಸ್ ಎಂದಿಗೂ ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿ ವಿರೋಧಿ. ನೆಹರೂ ಅವರ ಆಡಳಿತಾವಧಿಯಲ್ಲಿ ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ಇದೇ ಕಾಂಗ್ರೆಸ್. ಇದೇ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ವಿಳಂಬ ಮಾಡಿತು ಎಂದು ಹೇಳಿದ್ದಾರೆ.
ಪಿತ್ರೋಡಾ ಅವರ ಪೋಸ್ಟ್ ಕುರಿತು ವಿರೋಧ ವ್ಯಕ್ತಪಡಿಸಿದ, ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್, ಸಂವಿಧಾನ ರಚನೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರ ವಹಿಸಿದ್ದರು ಎಂದು ಜಗತ್ತು ನಂಬಿದೆ. ಆದರೆ ಪಿತ್ರೋಡಾ ಅವರ ಹೇಳಿಕೆ ಅಂಬೇಡ್ಕರ್ ಅವರಿಗೆ ಅವಮಾನಿಸುವಂತಿದೆ ಎಂದು ಹೇಳಿದ್ದಾರೆ.
ಬಿಎಸ್ಪಿ ಸಂಸದ ಮಲೂಕ್ ನಗರ್ ಪ್ರತಿಕ್ರಿಯಿಸಿದ್ದು, ಭಾರತದ ಕಟ್ಟಕಡೆಯ ಸಮುದಾಯಗಳಿಗೆ ಆದರ್ಶವಾಗಿರುವ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಗುರಿಯಾಗಿಸಿ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ಗೆ ಏನಾಗಿದೆ ಎಂದು ನನಗೆ ಅರ್ಥವಾಗುತ್ತಿಲ್ಲ, ಒಂದು ಕಡೆ ಚುನಾವಣೆ ಬಂದಾಗ ಹಿಂದೂಗಳಾಗುತ್ತಾರೆ, ನಂತರ ಅವರನ್ನು ನಿರ್ಲಕ್ಷಿಸುತ್ತಾರೆ. ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ನಿರಾಕರಿಸಿದ ಕಾಂಗ್ರೆಸ್ ನಾಯಕತ್ವ ಕ್ಷಮೆಯಾಚಿಸಬೇಕು ಮತ್ತು ಸ್ಯಾಮ್ ಪಿತ್ರೋಡಾ ಅವರ ನಿಲುವು ವೈಯಕ್ತಿಕವೇ ಅಥವಾ ಕಾಂಗ್ರೆಸ್ ಪರವಾಗಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುಧೀಂದ್ರ ಕುಲಕರ್ಣಿ ಅವರು ಹೇಳಿದ್ದೇನು?
ಹಿಂದೂ ಸಮಾಜದಲ್ಲಿ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿದ ಡಾ.ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಅನೇಕ ಸಾಮಾಜಿಕ ಸುಧಾರಣೆಗಳಿಗೆ ನಾಂದಿ ಹಾಡಿದ್ದಾರೆ. ಸತ್ಯವನ್ನು ಆಧರಿಸಿ ಹೇಳುವುದಾದರೆ ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಕೊಡುಗೆಗಿಂತ ನೆಹರೂ ಅವರ ಕೊಡುಗೆ ಹೆಚ್ಚು. ಇತಿಹಾಸ ಓದಿದ ಯಾರಾದರೂ ಇದನ್ನು ಒಪ್ಪಿಕೊಳ್ಳುತ್ತಾರೆ. 1930 ರಲ್ಲಿ, ಜನವರಿ 26 ರಂದು ಕಾಂಗ್ರೆಸ್ ‘ಪೂರ್ಣ ಸ್ವರಾಜ್’ ನಿರ್ಣಯವನ್ನು ಅಂಗೀಕರಿಸಿತು, ಕಾಂಗ್ರೆಸ್ ಸಂವಿಧಾನವನ್ನು ಬರೆಯುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು, ಅಂದಿನಿಂದ ನೆಹರೂ ಜಿ ಅವರು ಸಂವಿಧಾನ ರಚನೆಯಲ್ಲಿ ಶ್ರಮಿಸಿದ್ದಾರೆ ಎಂದು ನಾನು ಲೇಖನ ಬರೆದಿದ್ದೇನೆ. ಆದರೆ ಇದನ್ನು ಯಾರು ರಾಜಕೀಯಕ್ಕಾಗಿ ದುರುಪಯೋಗಪಡಿಸಿಕೊಳ್ಳಬಾರದು. ಯಾಕೆಂದರೆ ಒಮ್ಮೆ ನಾನು ಬಿಜೆಪಿಯೊಂದಿಗೆ ಇದ್ದೆ, ಈಗ ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲ ಎಂದು ಹೇಳುತ್ತಾ, ಅಂಬೇಡ್ಕರ್ ಅವರೇ ಇದು ಅವರ ಸಂವಿಧಾನವಲ್ಲ ಎಂದು ಹೇಳಿದ್ದಾರೆ ಸುಧೀಂದ್ರ ಕುಲಕರ್ಣಿ ತಿಳಿಸಿದ್ದರು.