ಸ್ಥಳೀಯ ಭಾಷೆ, ಸಂಸ್ಕೃತಿ ಉಳಿಸಿಕೊಂಡೇ ದೇಶದ ಐಕ್ಯತೆ ಸಾಧಿಸಲು ಜತೆಯಾಗಿ ಸಾಗೋಣ; ತಮಿಳುನಾಡು ಸಿಎಂ ಸ್ಟಾಲಿನ್‌ಗೆ ಕರವೇ ಪತ್ರ

Most read

ಬೆಂಗಳೂರು: ನಮ್ಮ ನಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡೇ ರಾಜ್ಯಗಳ ಜೊತೆಗೆ ದೇಶದ ಹಿತಾಸಕ್ತಿಯನ್ನು ರಕ್ಷಿಸಲು ಜತೆ ಜತೆಯಾಗಿ ಸಾಗೋಣ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಪತ್ರ ಬರೆದಿದ್ದಾರೆ.

ಭಾರತ ಸರ್ಕಾರ ಕಳೆದ 16 ವರ್ಷಗಳಿಂದ ಬಳಸುತ್ತಿರುವ ದೇವನಾಗರಿ ಲಿಪಿಯ ರೂಪಾಯಿ ಸಂಕೇತವನ್ನು ಕೈಬಿಟ್ಟು ಅದಕ್ಕೆ ಬದಲಾಗಿ ತಮಿಳು ಲಿಪಿಯ ರೂಪಾಯಿ ಸಂಕೇತವನ್ನು ಬಳಸುವ ಗಟ್ಟಿಯಾದ ತೀರ್ಮಾನ ಕೈಗೊಂಡ ಮುಖ್ಯಮಂತ್ರಿ ಸ್ಟಾಲಿನ್ ಅವರ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಕರವೇ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದ್ದಾರೆ.

ದೇಶದ ಏಕತೆ ಇರುವುದು ಭಾಷಾ, ಸಂಸ್ಕೃತಿ, ಧರ್ಮ, ಆಹಾರ ಪದ್ಧತಿಗಳ ವೈವಿಧ್ಯತೆಯನ್ನು ಸಂಭ್ರಮಿಸುವ ಮತ್ತು ಪೋಷಿಸುವ ಮೂಲಕವೇ ವಿವಿಧತೆಯಲ್ಲಿ ಏಕತೆ ಹೊಂದಿ ಭಾರತವನ್ನು ಶಕ್ತಿಶಾಲಿ ಒಕ್ಕೂಟವನ್ನಾಗಿ ರೂಪಿಸಲು ಬಿಗಿಮುಷ್ಠಿ ಮೇಲೆತ್ತಿ, ಹೆಗಲಿಗೆ ಹೆಗಲಾಗಿ ಸಾಗೋಣ ಎಂದು ಅವರು ಭರವಸೆ ನೀಡಿದ್ದಾರೆ.

ಉತ್ತರ ಭಾರತದವರ ʼಹಿಂದಿ ಹೇರಿಕೆʼಯ ನಿರಂತರ ಪ್ರಯತ್ನಗಳಿಗೆ ಸಾಂಕೇತಿಕವಾಗಿ ನೀವು ಒಡ್ಡಿರುವ ಈ ಪ್ರತಿರೋಧ ನಿಜಕ್ಕೂ ಶ್ಲಾಘನೀಯವಾದುದು., ಹಿಂದಿ ಭಾಷೆಯನ್ನು ʼರಾಷ್ಟ್ರಭಾಷೆʼಯಾಗಿಸಬೇಕೆಂಬ ನೆಪದಲ್ಲಿ ನಾನಾ ವಿಧದಲ್ಲಿ ಹೇರುವ ಇಲ್ಲವೇ ತೂರಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ತ್ರಿಭಾಷಾ ಸೂತ್ರವನ್ನು ಹೇರಿ ನಮ್ಮ ಸ್ಥಳೀಯ ಭಾಷೆಗಳ ಕತ್ತು ಹಿಚುಕುವ ಕೆಲಸವನ್ನೇ ಮಾಡಿಕೊಂಡು ಬರುತ್ತಿವೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೂಲಕವೂ ಹಿಂದಿ ಹೇರಿಕೆ ಕೆಲಸ ನಡೆಯುತ್ತಿದೆ. ರಾಜ್ಯಗಳ ಮೇಲೆ ಎನ್ ಇಪಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

2026 ರಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ದಕ್ಷಿಣ ಭಾರತದ ರಾಜ್ಯಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಲಿದೆ. ಒಂದೊಮ್ಮೆ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ ಉತ್ತರ ಭಾರತಕ್ಕೆ ಹೆಚ್ಚು ಲೋಕಸಭಾ ಕ್ಷೇತ್ರಗಳು ದೊರೆತು, ಜನಸಂಖ್ಯಾ ನಿಯಂತ್ರಣ ಸಾಧಿಸಿರುವ ದಕ್ಷಿಣದ ರಾಜ್ಯಗಳು ಕಡಿಮೆ ಕ್ಷೇತ್ರಗಳನ್ನು ಹೊಂದುವ ಅಪಾಯ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ನೇತೃತ್ವದ ಸರ್ಕಾರ ತೆಗೆದುಕೊಂಡಿರುವ ಮುಂತೊಡಗು (ಇನೀಶಿಯೇಟಿವ್) ಖಂಡಿತಾ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿಗಳು ಬಾಯಿ ಮಾತಿಗೆ ʼಸಬ್ ಕಾ ಸಾಥ್ ಸಬಕಾ ವಿಶ್ವಾಸ್ʼ ಎಂದು ಹೇಳುತ್ತಾ ತೆರಿಗೆ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ನಿರಂತರವಾಗಿ ಅನ್ಯಾಯವೆಸಗುತ್ತಲೇ ಬರಲಾಗಿದೆ ಎಂದಿರುವ ಅವರು ತಮಿಳುನಾಡು ಸರ್ಕಾರದ ಮಾದರಿಯಲ್ಲೇ ಕನ್ನಡ ಲಿಪಿಯ ರೂಪಾಯಿ ಚಿನ್ಹೆಯನ್ನು ಸಿದ್ಧಪಡಿಸಿ ಬಳಕೆಗೆ ತರಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಕಳೆದ 26 ವರ್ಷಗಳಿಂದ ಕನ್ನಡ ನಾಡಿನಲ್ಲಿ ಭಾಷಾಭಿಮಾನವನ್ನು ಬಡಿದೆಬ್ಬಿಸುವ ಕೆಲಸ ಮಾಡಿಕೊಂಡು ಬಂದಿದೆ. ಹಿಂದಿ ಹೇರಿಕೆಯ ವಿಚಾರದಲ್ಲಿ ಇದುವರೆಗೆ ನೂರಾರು ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಮೆಟ್ರೋ ರೈಲುಗಳಲ್ಲಿ ಹಿಂದಿ ನಾಮಫಲಕಗಳ ವಿರುದ್ಧ ಬೃಹತ್ ಆಂದೋಲನ ನಡೆಸಿ, ಅವುಗಳನ್ನು ರದ್ದುಗೊಳಿಸುವಂತೆ ಮಾಡಿದ ಯಶಸ್ವಿ ಹೋರಾಟ ಇತ್ತೀಚಿನ ಉದಾಹರಣೆ. ಒಕ್ಕೂಟ ಸರ್ಕಾರ ನಡೆಸುವ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಹಿಂದಿ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲೂ ಅವಕಾಶ ನೀಡಲು ಒತ್ತಾಯಿಸಿ ನಡೆಸಿದ ಹೋರಾಟಕ್ಕೆ ಯಶಸ್ಸು ಸಿಕ್ಕಿದೆ. ಹೀಗಾಗಿ, ದ್ರಾವಿಡ ಭಾಷೆಗಳ ಉಳಿವು ಅಳಿವಿನ ಈ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲರೂ ಒಂದುಗೂಡಿ ಹೋಗೋಣ ಎಂದು ಕರವೇ ಅಧ್ಯಕ್ಷರು ಭರವಸೆ ನೀಡಿದ್ದಾರೆ.

More articles

Latest article