ರಾಜ್ಯದ ಸರ್ವಜನರ ಅಭಿವೃದ್ದಿಗೆ ಬಜೆಟ್ ಪೂರಕ: ಸಚಿವ ಬೈರತಿ ಸುರೇಶ

Most read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಅನ್ನು ಇಂದು ಮಂಡಿಸುವ ಮೂಲಕ ತಮ್ಮ ದಾಖಲೆಯನ್ನು ತಾವೆ ಮುರಿದಿದ್ದಾರೆ. ಕಳೆದ ವರ್ಷ ರೂ. 3.71 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು, ಈ ಭಾರಿ ರೂ. 4.09 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರೆಂಟಿಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗಿದೆ. ಈ ಭಾರಿಯ ಬಜೆಟ್ನಲ್ಲಿಯೂ ಅದಕ್ಕಾಗಿ ಹಣವನ್ನು 51 ಸಾವಿರದ 340 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ನಮ್ಮದು ನುಡಿದಂತೆ ನಡೆದ ಹಾಗೂ ನಡೆಯುತ್ತಿರುವ ಸರ್ಕಾರ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ಎಸ್. ಸುರೇಶ್ ತಿಳಿಸಿದ್ದಾರೆ.

ನಗರಾಭಿವೃದ್ಧಿ ಮತ್ತು ವಸತಿ ಯೋಜನೆಗಳಿಗಾಗಿ 21,405 ಕೋಟಿ ರೂಪಾಯಿಗಳನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಮೀಸಲಿರಿಸಿದ್ದಾರೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0 ಅಡಿಯಲ್ಲಿ 2000 ಕೋಟಿ ರೂಪಾಯಿಗಳನ್ನು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಮೂಲಭೂತ ಸೌರ್ಕಯಗಳನ್ನು ಅಭಿವೃದ್ದಿಗೆ ಘೋಷಿಸಿದ್ದಲ್ಲದೆ. ನಗರಗಳ ಮೂಲ ಸೌಕರ್ಯಗಳ ಅಭಿವೃದ್ಧಿ ನಿಧಿಗೆ 600 ಕೋಟಿ ರೂಪಾಯಿಗಳ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ನಗರೋತ್ಥಾನ ಯೋಜನೆ 4ನೇ ಹಂತದಲ್ಲಿ 500 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ಮೀಸಲಿರಿಸಿರುವುದು ರಾಜ್ಯದ ಇತರೆ ನಗರಗಳ ಅಭಿವೃದ್ಧಿಗೆ ಗಮನ ಹರಿಸಿದಂತಾಗಿದೆ ಎಂದಿದ್ದಾರೆ.

ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳು, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ E-Governance ಮೂಲಕ E-Office ವ್ಯವಸ್ಥೆಯನ್ನು ಕಡ್ಡಾಯ ಪಡಿಸಿರುವುದು ಸ್ವಾಗತರ್ಹ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ರಾಮನಗರ ಮತ್ತು ಉಲ್ಲಾಳ ನಗರಗಳಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಾಗಿ 705 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಅಮೃತ 2.0 ಯೋಜನೆಯಡಿ 223 ಕುಡಿಯುವ ನೀರು ಯೋಜನೆಗಳನ್ನು ಸಕಾರಗೊಳಿಸಲು ನಮ್ಮ ಸರ್ಕಾರ ಬದ್ದವಾಗಿದ್ದು, ಶಿಕಾರಿಪುರ, ಸಾಗರ, ಐನಾಪುರ, ಎಂ.ಕೆ. ಹುಬ್ಬಳ್ಳಿ, ಕುಡಚಿ, ಬೈಲಹೊಂಗಲ, ಶಹಾಪೂರ ಮತ್ತು ಶ್ರೀರಂಗಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆಗಾಗಿ 142 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ದಿ ಯೋಜನೆಯಡಿ ರಾಜ್ಯದ 224 ಕ್ಷೇತ್ರಗಳಿಗೆ 8000 ಕೋಟಿ ರೂಪಾಯಿಗಳನ್ನು ಬಜೆಟ್ನಲ್ಲಿ ಘೋಷಿಸಿ ಮೀಸಲಿರಿಸಿರುವುದರಿಂದ ಎಲ್ಲಾ ಕ್ಷೇತ್ರಗಳ ರಸ್ತೆ, ನೀರಾವರಿ, ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಅನುಕೂಲವಾಗುತ್ತದೆ. ಇದರಿಂದಾಗಿಯೆ ತಿಳಿಯುತ್ತದೆ ನಮ್ಮ ಸರ್ಕಾರ ರಾಜ್ಯದ ಎಲ್ಲಾ ಕ್ಷೇತ್ರಗಳ ಅಭಿವೃದ್ದಿಗೆ ಬದ್ದವಾಗಿದೆ ಎಂದು ತಿಳಿಸಿದ್ದಾರೆ.

ಶಿಕ್ಷಣದ ಮೂಲಕ ಬದಲಾವಣಗೆ ಮುನ್ನುಡಿ ಬರೆದಿರುವ ನಮ್ಮ ಸರ್ಕಾರ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಕಳೆದ ಭಾರಿ 3000 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿತ್ತು. ಈ ಭಾರಿ ಅದನ್ನು 7000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಸುಧಾರಿಸುವ ನಿಟ್ಟಿನಲ್ಲಿ ಸುರಂಗ ಮಾರ್ಗದ ಯೋಜನೆಗಾಗಿ 40 ಸಾವಿರ ಕೋಟಿ ರೂಪಾಯಿಗಳನ್ನು ಘೋಷಿಸುವುದರ ಜೊತೆಗೆ ಬೆಂಗಳೂರು ನಗರದಲ್ಲಿ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲು 40.5 ಕಿ.ಮೀ ಡಬ್ಬಲ್ ಡೆಕ್ಕರ್ ಮಾರ್ಗ ನಿರ್ಮಾಣ ಮಾಡುತ್ತಿರುವುದು ಬೆಂಗಳೂರಿನ ವಾಹನ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಬೆಂಗಳೂರು ಮೆಟ್ರೋ ರೈಲನ್ನು ದೇವನಹಳ್ಳಿಯವರೆಗೆ ವಿಸ್ತರಿಸಿರುವುದರಿಂದ ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದಿದ್ದಾರೆ.

ಕೃಷಿ, ತೋಟಗಾರಿಕೆ, ಶಿಕ್ಷಣ, ನೀರಾವರಿ, ಆರೋಗ್ಯ ಸೇರಿದಂತೆ ಸೇವಾಕ್ಷೇತ್ರಗಳಿಗೆ ನಮ್ಮ ಸರ್ಕಾರ ಹೆಚ್ಚು ಒತ್ತನ್ನು ನೀಡಿರುವುದಕ್ಕೆ ನಾನು ಸ್ವಾಗತಿಸುತ್ತೇನೆ. ಕೋಲಾರ ಜಿಲ್ಲೆಯ ಕೆ.ಜಿ.ಎಫ್ನಲ್ಲಿ ಆಧುನಿಕ ಎ.ಪಿ.ಎಂ.ಸಿ ಮಾರುಕಟ್ಟೆ ನಿರ್ಮಾಣ ಘೋಷಣೆ ಸ್ವಾಗತರ್ಹ ಅಲ್ಲದೇ ಕೋಲಾರ ತಾಲ್ಲೂಕಿನ ನರಸಪುರ ಕೈಗಾರಿಕ ವಲಯದಲ್ಲಿ 173 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಾಗೂ ತುಮಕೂರು ಕೈಗಾರಿಕ ವಲಯದ ಪ್ರದೇಶದಲ್ಲಿ 20 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಉದ್ಯೋಗಸ್ತ ಮಹಿಳೆಯರಿಗೆ ವಸತಿ ಯೋಜನೆ ಘೋಷಣೆ ಮಾಡಿರುವುದು ದುಡಿಯುವ ಮಹಿಳೆಯರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉತ್ತೇಜನ ನೀಡಿದಂತಾಗಿದೆ.

ಉತ್ಕೃಷ್ಟ ವೈದ್ಯಕೀಯ ಶಿಕ್ಷಣ ಸೌಲಭ್ಯ ನೀಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬಾಗಲಕೋಟೆಯಲ್ಲಿ ರಾಜೀವ್ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘಟಕ ವೈದ್ಯಕೀಯ ಕಾಲೇಜು, ಮಾಲೂರು ತಾಲ್ಲೂಕು ಆಸ್ಪತ್ರೆ ನವೀಕರಣ ಹಾಗೂ ಕೋಲಾರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮುಂದಾಗಿರುವುದು ಸ್ವಾಗತರ್ಹ. ಒಂದು ಟ್ರಿಲಿಯನ್ ಆರ್ಥಿಕ ರಾಜ್ಯವಾಗುವ ನಿಟ್ಟಿನ್ಲಲಿ ದಿಟ್ಟ ಹೆಜೆಯನ್ನು ಇರಿಸಿರುವ ನಮ್ಮ ಮುಖ್ಯಮಂತ್ರಿಗಳು ಸರ್ವಜನರ ಅಭಿವೃದ್ದಿಗಾಗಿ ಸಮ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂಕಲ್ಪ ತೊಟ್ಟಿದ್ದು, ಎಲ್ಲರಿಗೂ ಅನುಕುಲವಾಗುವಂತಹ ಸರ್ವಜನರ ಹಿತದೃಷ್ಟಿಯಿಂದ ಬಜೆಟನ್ನು ಮಂಡಿಸಿದ್ದಾರೆ ಸಚಿವ ಸುರೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More articles

Latest article