ಇಸ್ಲಾಮಾಬಾದ್: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ರೂ. 80 ಸಾವಿರ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಅಲ್ಲಿನ ವರದಿಗಳು ತಿಳಿಸಿವೆ.
ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ. 127 ಸ್ಥಳಗಳಲ್ಲಿನ ಮಾದರಿಯನ್ನು ಸಂಗ್ರಹಿಸಲಾಗಿ ಪರಿಶೀಲನೆ ನಡೆಸಿರುವ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಚಿನ್ನ ಇರುವುದನ್ನು ದೃಢಪಡಿಸಿದೆ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಾಜಿ ಗಣಿ ಸಚಿವ ಇಬ್ರಾಹಿಂ ಹಸನ್ ಮರಾದ್ ಈಚೆಗೆ ಹೇಳಿದ್ದರು. ಪಂಜಾಬ್ ಪ್ರಾಂತ್ಯದ ಸಿಂಧು ನದಿ ದಡದ 32 ಕಿ.ಮೀ. ದೂರದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಇದು ರಾಷ್ಟ್ರದ ಆರ್ಥಿಕ ಪ್ರಗತಿಗೆ ನೆರವಾಗಬಹುದು ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಎಂಜಿನಿಯರಿಂಗ್ ಸೇವೆಗಳ ಪಾಕಿಸ್ತಾನ (ಎನ್ ಇಎಸ್ ಪಿಎಕೆ), ಪಂಜಾಬ್ನ ಗಣಿ ಮತ್ತು ಖನಿಜಗಳ ಇಲಾಖೆ ಅಂದಾಜಿಸಿದೆ. ಹಿಮಾಲಯದಲ್ಲಿ ಹುಟ್ಟುವ ಸಿಂಧು ನದಿ ಭಾರತದ ಮೂಲಕ ಪಾಕಿಸ್ತಾನ ಪ್ರವೇಶಿಸುತ್ತದೆ. ಸಿಂಧೂ ನದಿ ಪ್ರವೇಶಿಸುವ ನಿರ್ಧಿಷ್ಟ ಸ್ಥಳದಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳಿದ್ದಾರೆ.
ಐತಿಹಾಸಿಕವಾಗಿ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಸಿಂಧೂ ಕಣಿವೆ ಪ್ರದೇಶದಲ್ಲಿ ಬಹಳ ಹಿಂದಿನಿಂದಲೂ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನವು ಈಚೆಗೆ ಚೀನಾ, ಯುಎಇ ಮತ್ತು ಸೌದಿ ಅರೇಬಿಯಾದಿಂದ ಹಣಕಾಸಿನ ನೆರವು ಕೇಳಿತ್ತು.