ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್‌, ಮನೆ, ಅಪಾರ್ಟ್‌ ಮೆಂಟ್‌ಗಳ ಮೇಲೆ ಸಿಸಿಬಿ ದಾಳಿ

Most read



ಬೆಂಗಳೂರು: ಐಷಾರಾಮಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌, ಮನೆ ಹಾಗೂ ಅಪಾರ್ಟ್‌ ಮೆಂಟ್‌ಗಳ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ,  ಹೊರ ರಾಜ್ಯ ಹಾಗೂ ವಿದೇಶಗಳ ಯುವತಿಯರನ್ನು ರಕ್ಷಿಸಿದ್ದಾರೆ. ಈ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಮಾನವ ಕಳ್ಳ ಸಾಗಣೆ ಮೂಲಕ ಮಹಿಳೆಯರನ್ನು ಕರೆತಂದು ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಓರ್ವ ವಿದೇಶಿ ಮಹಿಳೆ ಹಾಗೂ ಹೊರ ರಾಜ್ಯದ ನಾಲ್ವರು ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಈ ಯುವತಿಯರನ್ನು ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಬೆಂಗಳೂರಿಗೆ ಕರೆತರುತ್ತಿದ್ದರು. ನಂತರ ಸಂಪಿಗೆಹಳ್ಳಿಯ ಅಪಾರ್ಟ್‌ ಮೆಂಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ಅಕ್ರಮ ಚಟುವಟಿಕೆಯ ಖಚಿತ ಮಾಹಿತಿ ಲಭ್ಯವಾದ ನಂತರ ದಾಳಿ ನಡೆಸಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಿದೇಶದ ಇಬ್ಬರು ಮಹಿಳೆಯರನ್ನು ಮಾನವ ಕಳ್ಳ ಸಾಗಣೆ ಮೂಲಕ ಕರೆತಂದು ರಾಮಮೂರ್ತಿನಗರ ಹಾಗೂ ಎಚ್‌ಎಎಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಮನೆಯಲ್ಲಿ ಕೂಡಿಹಾಕಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು. ಈ
ಇಬ್ಬರು ಮಹಿಳೆಯರು ಮತ್ತು ನಾಲ್ಕು ವರ್ಷದ ಮಗುವನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಮಹಿಳೆಯರನ್ನು ತುಮಕೂರಿನಲ್ಲಿರುವ ವಲಸಿಗರ ಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ಚೆನ್ನೈನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳ
ವಶಕ್ಕೆ ನೀಡಲಾಗಿತ್ತು. ಅಲ್ಲಿನ ಅಧಿಕಾರಿಗಳು ಮಹಿಳೆಯರನ್ನು ಅವರ ದೇಶಕ್ಕೆ ವಾಪಸ್‌ ಕಳುಹಿಸಿದ್ದಾರೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂರನೇ ಪ್ರಕರಣದಲ್ಲಿ ಶ್ರೀನಗರದ ಮನೆಯೊಂದರಲ್ಲಿ ವಿದೇಶಿ ಮಹಿಳೆಯನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು.  ಈ ಮನೆಯ ಮೇಲೆ ದಾಳಿ ನಡೆಸಿ ಓರ್ವ ವಿದೇಶಿ ಮಹಿಳೆಯನ್ನು ರಕ್ಷಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಈಕೆಗೆ ಹಣದ ಆಮಿಷವೊಡ್ಡಿ ಕರೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.




More articles

Latest article